ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ
Team Udayavani, Mar 11, 2019, 1:54 AM IST
ಮುಂಬಯಿ: ವಿಶ್ವದಾದ್ಯಂತ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಇಂದು ಮಹಿಳೆಯರು ಪುರುಷರಷ್ಟೇ ಸಮಾನರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿದ್ದಾರೆ. ಮಾತೃ ಸ್ವರೂಪಿಣಿಯಾದ ಹೆಣ್ಣು ತಾನು ಅಬಲೆಯಲ್ಲ ಸಬಲೆ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾಳೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ನುಡಿದರು.
ಮಾ. 8ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘದ ಮಹಿಳಾ ವಿಭಾಗ ಆಯೋಜಿಸಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆಣ್ಣು ನಮ್ಮ ದೇಶದ ಕಣ್ಣು. ತ್ಯಾಗದ ಮನೋಭಾವನೆ ಹೊಂದಿರುವ ಮಧುರ ಸ್ವರೂಪಿ.ಇಡೀ ವಿಶ್ವದ ಅಧಿದೇವತೆ ಎಂದರೆ ತಪ್ಪಾಗಲಾರದು. ಅವಳನ್ನು ಗೌರವಿಸುವುದು ಪ್ರತಿಯೋಬ್ಬನ ಕರ್ತವ್ಯವಾಗಿದೆ. ಬಂಟ ಸಮಾಜದಲ್ಲಿ ಮಹಿಳೆಯರಿಗೆ ಅಪಾರ ಗೌರವವಿದೆ. ಪುರುಷರು- ಮಹಿಳೆಯರು ಸಮಾನ ದೃಷ್ಟಿಯನ್ನಿಟ್ಟುಕೊಂಡು ಸಮಾಜ ಸೇವೆ ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಸಂಘದ ಮಹಿಳಾ ವಿಭಾಗವು ಸಂಘದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ. ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮತ್ತವರ ತಂಡದ ಕಾರ್ಯಯೋಜನೆ, ಜೀವನೋತ್ಸಾಹ, ಪರಿಶ್ರಮ, ಮುಂದಿನ ಪೀಳಿಗೆಗೆ ಪ್ರೇರಣೆಯಾಗಿರಲಿ ಎಂದು ನುಡಿದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಾಲಿವುಡ್ ನಟಿ, ನಿರ್ಮಾಪಕಿ ದಿಯಾ ಮಿರ್ಜಾ ಅವರು ಮಾತನಾಡಿ, ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರೂ ಪುರುಷರಷ್ಟೇ ಸಮಾನವಾದ ಸಾಧನೆಯನ್ನು, ಗೌರವವನ್ನು ಪಡೆದಾಗ ಮಾತ್ರ ಮಹಿಳಾ ಸಶಸ್ತಿಕರಣ ಸಾಧ್ಯ. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಪಾಲಕರು ಸಮಾನತೆಯ ಚಿಂತನೆಯನ್ನು ಬೆಳೆಸಬೇಕು. ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಬೇಕು. ಪರಿಸರದ ಸಂರಕ್ಷಣೆ ನಮ್ಮ ಮೊದಲ ಕರ್ತವ್ಯವಾಗಬೇಕು. ಕುಟುಂಬದ ರಕ್ಷಣೆ ನಮ್ಮದಾಗಬೇಕು. ಅಡುಗೆ ಮನೆಯಲ್ಲಿ ಸಂಗ್ರಹವಾಗುವ ತ್ಯಾಜ್ಯ ವಸ್ತುಗಳನ್ನು ನಾಶಮಾಡುವ ಸಂದರ್ಭದಲ್ಲಿ ಜಾಗ್ರತೆ ವಹಿಸಬೇಕು. ಬಂಟರ ಸಂಘದ ಮಹಿಳಾ ವಿಭಾಗವು ಹೆಚ್ಚು ಶಕ್ತಿಯುತವಾಗಿದೆ ಎಂಬುದಕ್ಕೆ ಇಂದು ಕಿಕ್ಕಿರಿದು ಸೇರಿದ ಮಹಿಳೆ ಯರೇ ಸಾಕ್ಷಿಯಾಗಿದ್ದಾರೆ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಅವರು ನನ್ನ ಅತ್ಯಂತ ನಿಕಟವರ್ತಿ ಮತ್ತು ಆತ್ಮೀಯ ಸ್ನೇಹಿತೆ. ಇಲ್ಲಿಯ ಮಹಿಳೆಯರ ಅದಮ್ಯ ಉತ್ಸಾಹ ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿರಲಿ ಎಂದು ಹಾರೈಸಿದರು.
ಗೌರವ ಅತಿಥಿಯಾಗಿ ಆಗಮಿಸಿದ ಕಸ್ಟಮ್ ಹಾಗೂ ಜಿಎಸ್‌ಟಿ ವಿಭಾಗದ ಎಡಿಷನಲ್ ಕಮಿಷನರ್ ರೀನಾ ಶೆಟ್ಟಿ ಐಆರ್‌ಎಸ್ ಅವರು ಮಾತನಾಡಿ, ಮಹಿಳೆಯರು ಸಾಮಾನ್ಯವಾಗಿ ಜನತಾ ಸೇವೆಯಲ್ಲಿ ಸಮಾನತೆ ತಂದುಕೊಳ್ಳುವಲ್ಲಿ ಅದರಲ್ಲೂ ಇಡಿ ವಿಶ್ವದ ರಾಜಕಾರಣಕ್ಕೆ ಕೊಡುಗೆ ನೀಡಿದ್ದಾರೆ. ಇಂದಿನ ಮಹಿಳೆಯರು ವಿಜ್ಞಾನ, ಟೆಕ್ನಾಲಜಿ, ಎಂಜಿನೀಯರಿಂಗ್ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ತಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಮಹಿಳೆಯರು ಮೀನಿನಂತೆ ಈಜಲು ಕಲಿತಿದ್ದಾರೆ. ಹಕ್ಕಿಯಂತೆ ಹಾರಲು ಕಲಿತಿದ್ದಾರೆ. ಮಹಿಳೆಯರು ತಮ್ಮ ಸಮಯವನ್ನು ಸಮಾಜಮುಖೀ ಅಭಿವೃದ್ದಿ ಚಟುವ ಟಿಕೆಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೌರವ ಅತಿಥಿ ಕೀರೈಡ್ ಹೊಟೇಲ್ ಗೋವಾ ಇದರ ನಿರ್ದೇಶಕಿ ಶಕಿಲಾ ಪಿ. ಶೆಟ್ಟಿ ಇವರು ಮಾತನಾಡಿ, ಇಂದಿನ ಮಹಿಳೆ ಆರೋಗ್ಯ, ಶಿಕ್ಷಣ, ಸುರಕ್ಷೆ ಮೊದಲಾದ ವಿಷಯಗಳಲ್ಲಿ ಹಲವಾರು ಸವಾಲುಗಳನ್ನು ಎದುರಿಸಿ ಬದುಕುತ್ತಿದ್ದು, ಕಾನೂನಿನ ಬಗ್ಗೆ ಅಧ್ಯಯನ ಮಾಡಿ ಇದರಿಂದ ಹೊರಬರಲು ಪ್ರಯತ್ನಿಸಬೇಕು. ನಾನು ಮಾನವೀಯ ಮೌಲ್ಯವನ್ನು ಹೆಚ್ಚು ಪ್ರೀತಿಸುವವಳು. ಸದಾ ನಾವು ಒಳ್ಳೆಯದನ್ನೇ ಬಯಸಬೇಕು. ಪಾರದರ್ಶಕ ಚಿಂತನೆ ನಮ್ಮಲ್ಲಿರಬೇಕು. ಹಾಗಾದಾಗ ಮಾತ್ರ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಮಹಿಳಾ ಸಾಧಕಿ ಡಾ| ಲತಾ ಶೆಟ್ಟಿ ಅವರಿಗೆ ಸಂಘದ ಪ್ರತಿಷ್ಠಿತ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸ್ಮರಣಾರ್ಥ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು. ಶ್ರೀಮತಿ ರಾಧಾಬಾಯಿ ಭಂಡಾರಿ ಕುಟುಂಬದ ಲತಾ ಪಿ. ಭಂಡಾರಿ, ದೀಪಾ ಪಿ. ಭಂಡಾರಿ, ಪ್ರಶಸ್ತಿ ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ ಎಂ. ಡಿ. ಶೆಟ್ಟಿ, ಸಲಹಾ ಸಮಿತಿಯ ಡಾ| ಸುನೀತಾ ಎಂ. ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ| ಲತಾ ಪಿ. ಶೆಟ್ಟಿ ಅವರ ಅಭಿನಂದನಾ ಪತ್ರವನ್ನು ಸಂಘದ ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ ವಾಚಿಸಿದರು. ಆರಂಭದಲ್ಲಿ ಸರೋಜಾ ಬಿ. ಶೆಟ್ಟಿ ಪ್ರಾರ್ಥನೆಗೈದರು. ಬಂಟ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಇತ್ತೀಚೆಗೆ ಕಾಶ್ಮೀರದಲ್ಲಿ ಭಯೋತ್ಪಾದಕರ ಪೈಶಾಚಿಕ ಕೃತಕ್ಕೆ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಗೌರವಿಸಿದರು. ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಫಲಪುಷ್ಪ, ಸಮ್ಮಾನ ಪತ್ರ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾ ಯಿತು. ಸಮ್ಮಾನಿತರನ್ನು ನಿರೂಪಕಿ ಡಾ| ವಿಜೇತಾ ಶೆಟ್ಟಿ, ಮಹಿಳಾ ವಿಭಾಗದ ಗೌರವ ಕೋಶಾಧಿಕಾರಿ ಆಶಾ ವಿ. ರೈ, ಉಪ ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಪರಿಚಯಿಸಿದರು. ಗೌರವ ಕಾರ್ಯದರ್ಶಿ ಚಿತ್ರಾ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಮನೋರಮಾ ಎಸ್. ಶೆಟ್ಟಿ ಅವರು ವಿವಿಧ ಬಂಟರ ಸಂಘಗಳ ಪದಾಧಿಕಾರಿಗಳು, ಸಂಘದ ಪದಾಧಿಕಾರಿಗಳು, ವಿಶ್ವಸ್ತರು, ಮಾಜಿ ಅಧ್ಯಕ್ಷರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಹೆಸರು ವಾಚಿಸಿ ಗೌರವಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ| ಪೂರ್ಣಿಮಾ ಎಸ್. ಶೆಟ್ಟಿ ನಿರ್ವಹಿಸಿದರು. ಸಭಾ ಕಾರ್ಯಕ್ರಮವನ್ನು ಡಾ| ವಿಜೇತಾ ಎಸ್. ಶೆಟ್ಟಿ ನಿರ್ವಹಿಸಿದರು. ಮಹಿಳಾ ವಿಭಾಗದ ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ ವಂದಿಸಿದರು. ಸಂಘದ 9 ಪ್ರಾದೇಶಿಕ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗದವರಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.