ಅಶಕ್ತ ಯಕ್ಷಗಾನ ಕಲಾವಿದರ ಆಶಾಕಿರಣ “ಪಟ್ಲ ಫೌಂಡೇಷನ್ ಟ್ರಸ್ಟ್’
Team Udayavani, Aug 11, 2017, 3:44 PM IST
ತೆಂಕುತಿಟ್ಟಿನ ಯಕ್ಷಗಾನದ ಇತಿಹಾಸದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿ, ಇಂದಿನ ಪಾಶ್ಚಾತ್ಯ ಶೈಲಿಯ ಅನುಕರಣೆಯಿಂದ ಯಕ್ಷಗಾನದಿಂದ ವಿಮುಖರಾಗುತ್ತಿದ್ದ ಯುವ ಪೀಳಿಗೆಯನ್ನು ಆಯಸ್ಕಾಂತದಂತೆ ಸೆಳೆದವರು ಸತೀಶ್ ಶೆಟ್ಟಿ ಪಟ್ಲರು. ತೆಂಕು ಭಾಗವತರ ಕಂಪು ಬಡಗಲ್ಲೂ ಅಷ್ಟೇ ಸುಮಧುರವಾಗಿ ಪಸರಿಸಲು ಮೂಲ ಕಾರಣ ಪಟ್ಲರು. ಕಾಳಿಂಗ ನಾವಡರ ನಂತರ ಅವರದೇ ದಾರಿಯಲ್ಲಿ ಕೀರ್ತಿ ಪ್ರತಿಷ್ಠೆಯಿಂದಾಗಿ, ತಮ್ಮದೇ ಆದ ವಿಶಿಷ್ಟವಾದ “ಪಟ್ಲ ಶೈಲಿ’ಯಿಂದಾಗಿ ತೆಂಕು-ಬಡಗು ಎರಡೂ ವಿಭಾಗಗಳಲ್ಲೂ ಸಮಾನ ಅಭಿಮಾನಿಗಳನ್ನು ಹೊಂದಿರುವ ಏಕೈಕ ಭಾಗವತ ‘ಅಮೂಲ್ಯ ರತ್ನ’ವಿದು ಎಂದು ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಹೇಳುತ್ತಾರೆ.
ನಮ್ಮ ಪಟ್ಲೆರ್ ಉಲ್ಲೇರಾ…?
(ನಮ್ಮ ಪಟ್ಲರು ಇದ್ದಾರಾ..?)…
ಯಕ್ಷಗಾನದಲ್ಲಿ ಕ್ರಾಂತಿಯೆಬ್ಬಿಸಿ “ಪಟ್ಲ ಶೈಲಿ’ಯನ್ನು ಹುಟ್ಟುಹಾಕಿದ ಪಟ್ಲರು ಪ್ರಸ್ತುತ ದೇಶ-ವಿದೇಶಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರು ಹಾಡಿದ ಕೆಲವು ಪ್ರಸಿದ್ಧ ಪದ್ಯಗಳ ಮೊದಲ ಸಾಲುಗಳು ಹಲವರ ಮೊಬೈಲ್ ರಿಂಗ್ ಟೋನ್‌ಗಳಾಗಿವೆ… ಅವರ ಫೋಟೋಗಳು ಅದೆಷ್ಟೋ ಅಭಿಮಾನಿಗಳ ವಾಟ್ಸಾಪ್, ಫೇಸ್‌ಬುಕ್‌ನ ಡಿ. ಪಿ. ಗಳಲ್ಲಿ ರಾರಾಜಿಸುತ್ತಿವೆ… ಕೆಲವರ ವಾಟ್ಸಾಪ್ ಸ್ಟೇಟಸ್‌ಗಳಂತೂ ಪಟ್ಲರ ಹಾಡುಗಳು… ಅವರು ಭಾಗವತಿಕೆ ಮಾಡುವ ವಿವಿಧ ಭಂಗಿಗಳ ಭಾವ ಚಿತ್ರಗಳಿಂದ ಕೂಡಿವೆ… ಹತ್ತಾರು ಅಭಿಮಾನಿ ಬಳಗದ ಗ್ರೂಪ್‌ಗ್ಳು ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ನಿರ್ಮಾಣವಾಗಿವೆ… ಎಲ್ಲಿಯವರೆ ಅಂದರೆ “ಯಾರೊಬ್ಬರನ್ನು ಯಕ್ಷಗಾನಕ್ಕೆ ಬರುತ್ತೀರಾ’ ಎಂದು ಕರೆದರೆ, ನಮ್ಮ ಪಟ್ಲೆàರ್ ಉಲ್ಲೇರಾ…? ಅನ್ನುವವರೆಗೆ ಅವರ ಪ್ರಸಿದ್ಧಿ ಪಸರಿಸಿದೆ. ಅಂತಹ ಪಟ್ಲರು ಕಳೆದ ಒಂದು ವಾರದಿಂದ ಮುಂಬಯಿಯಲ್ಲಿ ನೆಲೆಸಿ ಅಶಕ್ತ ಕಲಾವಿದರ ಆಶಾಕಿರಣವಾಗಿರುವ “ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್’ನ ಬೃಹತ್ ಯೋಜನೆ “ಪಟ್ಲಾಶ್ರಯ’ದ ಯಶಸ್ಸಿಗೆ ಸಹೃದಯ ದಾನಿಗಳ ಸಹಕಾರವನ್ನು ಬಯಸುತ್ತಿದ್ದು, ಅವರನ್ನು ಕಲಾಭಿಮಾನಿಗಳ ಒತ್ತಾಯದ ಮೇರೆಗೆ ಮಾತಿಗೆಳೆದಾಗ…
“ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು…’
ಎಳವೆಯಿಂದಲೇ ಯಕ್ಷಗಾನ ರಂಗದ ಸಹಕಲಾವಿದರ ಕಷ್ಟ ಕಾರ್ಪಣ್ಯ, ಬದುಕು- ಭವಣೆಯನ್ನು ಕಣ್ಣಾರೆ ಕಂಡ ಸತೀಶ್ ಪಟ್ಲರಿಗೆ ಇಂತಹ ಕಲಾವಿದರ ಬಾಳಿಗೆ ಬೆಳಕು ಮೂಡಿಸುವ ಛಲವೊಂದು ಆಗಲೇ ಹುಟ್ಟಿತ್ತು. ಆದರೆ ಅದನ್ನು ಒಮ್ಮಿಂದೊಮ್ಮೆಲೆ ಕಾರ್ಯಗತಗೊಳಿಸುವ ತಾಕತ್ತು ಅವರಲ್ಲಿರಲಿಲ್ಲ. ಕಟೀಲು ಶ್ರೀ ಭ್ರಮರಾಂಭಿಕೆಯ ಅನುಗ್ರಹದ ಫಲವಾಗಿ ಸತತ ಪ್ರಯತ್ನ, ಶ್ರದ್ಧೆ, ಪರಿಶ್ರಮ, ಹಿರಿಯ ಕಲಾವಿದರ, ಹೆತ್ತವರು, ಗುರುಗಳ ಆಶೀರ್ವಾದ, ಅಣ್ಣನ ಪ್ರೋತ್ಸಾಹ ಅವರ ಸಾಧನೆಗೆ ಆಸರೆಯಾಗಿ ನಿಂತವು. ತನ್ನದೆ ಆದ ‘ಪಟ್ಲಶೈಲಿ’ಯ ಹಾಡಿನಿಂದ ಲಕ್ಷಾಂತರ ಮಂದಿ ಅಭಿಮಾನಿಗಳ ಹೃದಯ ಸಿಂಹಾಸನವನ್ನು ಏರಿದರೂ ಕೂಡಾ, ಹೃದಯವನ್ನು ಪದೇ ಪದೇ ತಟ್ಟುತ್ತಿದ್ದ ಆಶಕ್ತರ ಬಾಳಿನ ಕರಿ ನೆರಳಿನ ಛಾಯೆಗೆ ಭರವಸೆಯ ಪನ್ನೀರು ಮೂಡಿಸುವ ಸಮಯ ಬಂದದ್ದು ಮಾತ್ರ ಒಂದೂವರೆ ವರ್ಷದ ಹಿಂದೆ. ತನ್ನ ಮುಂಬೈಯ ಆತ್ಮೀಯ ಮಿತ್ರರಾದ ಉದ್ಯಮಿ ಅಶೋಕ್ ಶೆಟ್ಟಿ ಪೆರ್ಮುದೆ ಅವರು ಪಟ್ಲರ ಈ ಕನಸಿನ ಕೂಸಿಗೆ ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್’r ಎಂದು ನಾಮಕರಣ ಮಾಡಿಯೇ ಬಿಟ್ಟರು.
“26 ಘಟಕ’ಗಳನ್ನು ಹೊಂದಿರುವುದು ಟ್ರಸ್ಟ್‌ನ ಹೆಗ್ಗಳಿಕೆ…
ಟ್ರಸ್ಟ್ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸಿದ್ಧ ವೈದ್ಯರು, ಪ್ರೊಫೇಸರ್‌ಗಳು, ಸಿಎ ಅಧಿಕಾರಿಗಳು, ವಿವಿಧ ಕ್ಷೇತ್ರಗಳ ಸಾಧಕರು ಟ್ರಸ್ಟ್ ನಲ್ಲಿ ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಗೈಯುತ್ತಿದ್ದಾರೆ. ಈಗಾಗಲೇ ದೇಶ- ವಿದೇಶಗಳಲ್ಲಿ 26 ಘಟಕಗಳನ್ನು ಹೊಂದಿರುವ ಟ್ರಸ್ಟ್ ಕಳೆದ ಒಂದೂವರೆ ವರ್ಷಗಳಲ್ಲಿ ಒಂದು ಸರಕಾರದ ಮಾಡದೇ ಇರುವ ಕೆಲಸವನ್ನು ಯಾವುದೇ ಜಾತಿ, ಮತ, ಧರ್ಮವನ್ನು ಮರೆತು ಮಾಡಿ ತೋರಿಸಿದೆ. ಅಶಕ್ತ ಕಲಾವಿದರಿಗೆ ಆರ್ಥಿಕ ನೆರವು, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಉಚಿತ ವೈದ್ಯಕೀಯ ಶಿಬಿರ, ವೈದ್ಯಕೀಯ ನೆರವು, ಸಾಧಕ ಕಲಾವಿದರಿಗೆ ಬೃಹತ್ ನಿಧಿಯೊಂದಿಗೆ ಗೌರವಾರ್ಪಣೆ ಇತ್ಯಾದಿಗಳಿಗಾಗಿ ಇಲ್ಲಿಯವರೆಗೆ ಒಂದೂವರೆ ಕೋ. ರೂ. ಗಳಿಗಿಂತಲೂ ಅಧಿಕ ನಿಧಿಯನ್ನು ಹಂಚಿದ ಹೆಗ್ಗಳಿಕೆಯನ್ನು ಟ್ರಸ್ಟ್ ಹೊಂದಿದೆ.
ಆಶಕ್ತ ಕಲಾವಿದರ ಕಷ್ಟಕ್ಕೆ ಸ್ಪಂದಿಸುವುದು ಧ್ಯೇಯ
ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ತನ್ನತನವನ್ನು ಮರೆಯದ ಪಟ್ಲರ ಗುಣ ಎಲ್ಲರಿಗೂ ಅಚ್ಚುಮೆಚ್ಚು. ಮೇಳದ ಕಲಾವಿದರು ಹೇಳುವಂತೆ ಅಪರೂಪದಲ್ಲಿ ಅಪರೂಪದ ವ್ಯಕ್ತಿ ಇವರು, ಸರಳ-ಸಜ್ಜನರು. ಕಷ್ಟದಲ್ಲಿರುವವರಿಗೆ ಸದಾ ದಾರಿ ದೀಪವಾಗಿರುವ ಇವರು ಕಷ್ಟ ಎಂದು ಬಂದ ಕಲಾವಿದರನ್ನು ಕೈಬಿಟ್ಟವರಲ್ಲ. ತನಗೆ ಮಿಕ್ಕಿದ ಹಣ ತನ್ನದೇ ಆದರೂ ಪರರ ಸೇವೆಗದು ದೊರೆತದ್ದು ಎಂದು ಭಾವಿಸುವವರು. ದೇವರು ತನಗೆ ಬೇಕಾದಷ್ಟು ಹೆಸರು, ಸಂಪತ್ತು ನೀಡಿದರು ಕೂಡಾ ಪ್ರತಿಕ್ಷಣ, ಪ್ರತಿದಿನ ಅಶಕ್ತ ಕಲಾವಿದರ ಕಷ್ಟಗಳಿಗೆ ಮರುಗುತ್ತಿರುತ್ತಾರೆ. ಮಳೆ, ಗಾಳಿ, ಬಿಸಿಲು ಯಾವುದನ್ನು ಲೆಕ್ಕಿಸದೆ ಟ್ರಸ್ಟ್‌ನ ‘ಪಟ್ಲಾಶ್ರಯ’ ಬೃಹತ್ ಯೋಜನೆಯ ಯಶಸ್ಸಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ತುಳು-ಕನ್ನಡಿಗ ದಾನಿಗಳು, ಅಭಿಮಾನಿಗಳು ಎಲ್ಲೆಲ್ಲಿದ್ದಾರೆ ಅಲ್ಲೆಲ್ಲ ತಿರುಗಿ ಆಶಕ್ತ ಕಲಾವಿದರ ಬಾಳಿಕೆ ನೆರವಾಗುವಂತೆ ವಿನಂತಿಸುತ್ತಿದ್ದಾರೆ.
ಮಳೆಗಾಲದಲ್ಲಿ ವಿದೇಶಗಳಲ್ಲಿ “ಕಲಾರಾಧನೆ’ ಮಾಡುವವರು…!
ಪ್ರತಿ ವರ್ಷ ದುಬೈ, ಕುವೈಟ…, ಮಸ್ಕತ್, ಅಮೆರಿಕ, ಸಿಂಗಾಪುರ, ಲಂಡನ್ ಹೀಗೆ ಹತ್ತು- ಹಲವು ದೇಶಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸಲು ಹೋಗುತ್ತಿದ್ದ ಸತೀಶ್ ಪಟ್ಲರು ಈ ಬಾರಿ ವಿದೇಶಿ ಕಾರ್ಯಕ್ರಮಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ ಅಶಕ್ತ ಕಲಾವಿದರಿಗಾಗಿ ಟ್ರಸ್ಟ್ ಮುಖಾಂತರ ದೇಣಿಗೆ ಸಂಗ್ರಹ ಮಾಡುವ ಕಾಯಕದಲ್ಲಿ ಸ್ವತಃ ತೊಡಗಿದ್ದಾರೆ. ಅವರೋರ್ವ ಕಲಾವಿದರಾಗಿ ಇತರ ಕಲಾವಿದರ ಕಷ್ಟ-ಕಾರ್ಪಣ್ಯಗಳನ್ನು ಸಮೀಪದಿಂದ ಬಲ್ಲವರಾಗಿದ್ದಾರೆ. ಕಲಾವಿದರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಂತೋಷವಾಗುತ್ತಿದೆ. ಟ್ರಸ್ಟ್‌ನ “ಪಟ್ಲಾಶ್ರಯ’ ಯೋಜನೆಯನ್ನು ಸಂಪೂರ್ಣಗೊಳಿಸುವುದು ನನ್ನ ಮೂಲ ಉದ್ದೇಶವಾಗಿದೆ. ಇದೆಲ್ಲಾ ಕಟೀಲು ಶ್ರೀ ದುರ್ಗಾಪರಮೇಶ್ವರಿ ನನ್ನ ಕೈಯಿಂದ ಮಾಡಿಸುತ್ತಿದ್ದಾಳೆ ಎಂದು ಅವರು ವಿನಮ್ರವಾಗಿ ಹೇಳುತ್ತಾರೆ.
ಕಲಾರಾಧನೆಯಲ್ಲಿ “ತ್ರಿಕರಣ ಶುದ್ಧಿ’ ಬಹಳ ಮುಖ್ಯ
ನಮ್ಮ ನಡೆ-ನುಡಿಯಲ್ಲಿ ಮನಸ್ಸು ಮಹತ್ವದ ಪಾತ್ರ ವಹಿಸುತ್ತದೆ. ಮಾತು ಮನಸ್ಸಿನ ಪ್ರತಿಬಿಂಬ ಎನ್ನುವಂತೆ ಎರಡನ್ನೂ ಪ್ರಚೋದಿಸುವಂತದ್ದು ಮನಸ್ಸು. ಆದ್ದರಿಂದ ಮನಸ್ಸು, ಮಾತು ಕೃತಿ ಇವು ಮೂರು ಶುದ್ದಿಯಾಗಿದ್ದರೆ ಅದುವೇ ‘ತ್ರಿಕರಣ ಶುದ್ಧಿ’. ಅದರಂತೆ ಪರಿಶುದ್ಧವಾದ ದಾರಿಯಲ್ಲಿ ನಡೆದು ಕಲಾರಾಧನೆಯನ್ನು ಮಾಡಬೇಕು. ‘ಬೀಗುವುದು ಬದುಕಲ್ಲ, ಬಾಗುವುದು ಬದುಕು’ ಎಂಬ ಮಾತಿನಂತೆ ತನ್ನನ್ನು ತಾನು ಮೀರುವುದಕ್ಕಾಗಿ ಹಾಡಬೇಕು. ಇನ್ನೊಬ್ಬರನ್ನು ಮೀರಿಸಲು ಮತ್ತು ಮೆಚ್ಚಿಸಲು ಹಾಡುವುದು ಅದು ಚಪಲ. ಆದರಿಂದ ತನ್ನತವನ್ನು ದಾಟಲು ಎಂದಿಗೂ ಸಾಧ್ಯವಿಲ್ಲ.
ಇತರ ಕಲಾವಿದರೂ ಬೆಳೆಯಬೇಕು…
ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳವನ್ನು ಸಂಪೂರ್ಣವಾಗಿ ಅರಿಯಲು ಸೂಕ್ಷ್ಮತೆ ಬೇಕು. ಮುಖ್ಯವಾಗಿ ಕಲಾವಿದನೋರ್ವ ಇನ್ನೋರ್ವ ಕಲಾವಿದನ ನೋವು-ನಲಿವುಗಳಿಗೆ ಸ್ಪಂದಿಸುವ ಮಾನವೀಯ ಗುಣವನ್ನು ಬೆಳೆಸಿಕೊಂಡಾಗ ಮಾತ್ರ ಅವನೋರ್ವ ಪರಿಪೂರ್ಣ ಕಲಾವಿದನಾಗಲು ಸಾಧ್ಯ. ಇದು ಕಲಾವಿದನನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುತ್ತದೆ. ಕಲಾಭಿಮಾನಿಗಳು ತನ್ನಂತೆ ಇತರ ಕಲಾವಿದರುಗಳನ್ನು ಪ್ರೀತಿಸಿ, ಗೌರವಿಸಬೇಕು ಎಂಬ ಉಧಾತ್ತ ಭಾವನೆಯನ್ನು ಹೊಂದಿರುವ ಅವರ ಕಾರ್ಯಕ್ರಮದ ಡೇಟ… ಸಿಗುವುದೆ ಕೆಲವರಿಗೆ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ತನಗೆ ಬರಲು ಸಾಧ್ಯವಾಗದಿದ್ದರೂ ಸಹ ಕಲಾವಿದರ ಹೆಸರನ್ನು ಹೇಳಿ ತಾನೋರ್ವ ಬೆಳೆದರೆ ಸಾಲದು, ಇತರ ಕಲಾವಿದರು ಬೆಳೆಯಬೇಕು ಎಂದು ತಿಳಿಸುವ ಅವರ ಔದಾರ್ಯತೆ ಮೆಚ್ಚುವಂತದ್ದು.
ಪಟ್ಲರಿಗೆ “ಪಟ್ಲರೆ ಸಾಟಿ…!’
ನನ್ನ ಸಾಧನೆಗೆ ನನ್ನ ಯಕ್ಷಗಾನ ಗುರುಗಳು, ಸಂಗೀತ ಗುರುಗಳ ಪ್ರೋತ್ಸಾಹವೇ ಪ್ರಮುಖ ಕಾರಣವಾಗಿದೆ. ಯಕ್ಷಗಾನ ಕ್ಷೇತ್ರದಲ್ಲಿ ನಾನಿನ್ನು ಕಲಿಯಲು ಬಹಳಷ್ಟಿದೆ. ನಾನಿನ್ನೂ ವಿದ್ಯಾರ್ಥಿಯಾಗಿದ್ದೇನೆ. ಕಲಾಭಿಮಾನಿಗಳ ಪ್ರೀತಿ, ಗೌರವ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದು ವಿನಮ್ರವಾಗಿ ಹೇಳುವ ಪಟ್ಲರಿಗೆ ಹಲವಾರು ಪ್ರಶಸ್ತಿಗಳು, ಬಿರುದುಗಳು ತಾವಾಗೇ ಅರಸಿಕೊಂಡು ಬಂದಿವೆ.
ಪ್ರಶಸ್ತಿ, ಸಮ್ಮಾನಗಳನ್ನು ಉಲ್ಲೇಖೀಸಲು ಹೊರಟರೆ ಅದು ಸಾಗರಕ್ಕೆ ಕಲ್ಲೆಸೆದಂತಾಗುತ್ತದೆ. ಇದ್ಯಾವ ಪ್ರಶಸ್ತಿಗಳನ್ನು ತೆಗೆದುಕೊಳ್ಳುವ ಮಟ್ಟಿಗೆ ನಾ ಬೆಳೆದಿಲ್ಲವೆನ್ನುತ್ತರಾದರೂ ಅಭಿಮಾನಿಗಳ ಪ್ರೀತಿಯ ಮುಂದೆ ನಿರುತ್ತರರಾಗುತ್ತಾರೆ…ಆದರೆ ತನ್ನ ಗುರುಗಳಾದ ಛಂದಸ್ಸಿನ ಹರಿಕಾರ ಡಾ| ಶಿಮಂತೂರು ನಾರಾಯಣ ಶೆಟ್ಟಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇಲ್ಲಿಯವರೆಗೆ ಸಿಗದಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾರೆ. ಮುಂಬಯಿ ಘಟಕದ ಗೌರವಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐಕಳ ಹರೀಶ್ ಶೆಟ್ಟಿ ಮತ್ತು ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ ಅವರಂತಹ ದಕ್ಷ ಸಂಘಟಕರು ನನ್ನ ಪಾಲಿಗೆ ಒದಗಿರುವುದು ನನ್ನ ಪುಣ್ಯದ ಫಲವಾಗಿದೆ ಎಂದು ಭಾವುಕರಾಗಿ ನುಡಿಯುತ್ತಾರೆ.
ಏನಿದು…? “ಪಟ್ಲ ಯಕ್ಷಾಶ್ರಯ’ ಯೋಜನೆ…
ಕಲಾವಿದರು ರಂಗದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆದರೆ ಕೆಲವು ಕಲಾವಿದರ ರಂಗದ ಹಿಂದಿನ ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಕಲಾವಿದರು ಸೂರಿಲ್ಲದೆ ಜೀವನ ನಡೆಸುತ್ತಿದ್ದಾರೆ. ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಕಲಾವಿದರ ಕುಟುಂಬವನ್ನು ಪಟ್ಲರು ಕಣ್ಣಾರೆ ಕಂಡು ಮರುಗುತ್ತಿದ್ದಾರೆ. ಇಂತಹ ಅಶಕ್ತ ಕಲಾವಿದರಿಗೆ ಸೂರಿನ ಭಾಗ್ಯವನ್ನು ಒದಗಿಸುವ ಬೃಹತ್ ಯೋಜನೆ ಈ ಪಟ್ಲ ಯಕ್ಷಾಶ್ರಯ ಯೋಜನೆ.
ಈ ಬೃಹತ್ ಯೋಜನೆಗಾಗಿ ಜಾಗವು ಶೀಘ್ರದಲ್ಲಿ ಮಂಜೂರುಗೊಳ್ಳುವ ನೀರಿಕ್ಷೆಯಿದೆ. ಒಂದೊಂದು ಮನೆಗೆ ತಲಾ ಐದು ಲಕ್ಷ ರೂ. ಗಳನ್ನು ವಿನಿಯೋಗಿಸಿ, ಸುಮಾರು 100 ಮನೆಗಳನ್ನು ನಿರ್ಮಿಸುವ
ಉದ್ದೇಶ ಟ್ರಸ್ಟ್‌ನದ್ದಾಗಿದೆ. ದಾನಿಗಳು ಒಂದು ಮನೆಯ ಸಂಪೂರ್ಣ ವೆಚ್ಚವನ್ನು ನೀಡಿದರೆ, ಆ ಮನೆಗೆ ದಾನಿಗಳ ಹೆಸರನ್ನು ನೀಡಲಾಗುವುದು. ವಿಶೇಷವಾಗಿ ಕಾನೂನು ತಜ್ಞರ ಸಲಹೆಯನ್ನು ಪಡೆದು ಈ ಯೋಜನೆಗೆ ಮುಂದಡಿಯಿಡಲಾಗಿದೆ.
ಅಶಕ್ತ ಕಲಾವಿದರಿಗಾಗಿ ತಾವು ಬೇಡುವುದು ಸರಿಯೇ
ಪಟ್ಲ ಅವರಿಗೆ ಪ್ರಸ್ತುತ ದಿನಗಳಲ್ಲಿ ಹೆಸರು, ಶ್ರೀಮಂತಿಕೆ ಎಲ್ಲವೂ ಇದೆ. ಅವರು ತಾನಾಯ್ತು…ತನ್ನ ಕಲಾರಾಧನೆ ಆಯ್ತು… ಎಂದು ಆರಾಮವಾಗಿರಬಹುದು. ಆದರೆ ಅವರು ಮನುಷ್ಯನಿಗೆ ಹೆಸರು, ಹಣ, ಆಸ್ತಿ ಎಲ್ಲವೂ ಬೇಕು. ಆದರೆ ಇವುಗಳಿಂದ ಮಾನವನ ಬಾಳು ಪೂರ್ಣವಾಗುವುದಿಲ್ಲ, ಇವುಗಳಿಂದ ಪ್ರೇಯಸ್ಸು ದೊರೆಯಬಹುದೇ ಹೊರತು ಶ್ರೇಯಸ್ಸು ಲಭಿಸಲಾರದು ಎಂಬ ಧ್ಯೇಯವನ್ನು ಹೊಂದಿದವರು. ಪಟ್ಲರಿಗೂ ಅವರದೇ ಆದ ಕುಟುಂಬವಿದೆ. ತನ್ನ ಬಿಡುವಿಲ್ಲದ ಸಮಯದಲ್ಲೂ ಸ್ವಲ್ಪ ಸಮಯ ಉಳಿದರು ಕೂಡಾ ಅವರಿಗೆ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಆ ಸಮಯದಲ್ಲಿ ತನ್ನ ಆರೋಗ್ಯವನ್ನು ಲೆಕ್ಕಿಸದೆ, ತನ್ನ ಜನಪ್ರಿಯತೆಯನ್ನು ಬಳಸಿಕೊಂಡು ಅಶಕ್ತ ಕಲಾವಿದರ ಶ್ರೇಯೋಭಿವೃದ್ದಿಗಾಗಿ ಹಗಲಿರುಳು ಸುತ್ತುತ್ತಿರುತ್ತಾರೆ. “ನಾನು ನನಗಾಗಿ ಬೇಡುತ್ತಿಲ್ಲ, ಅಶಕ್ತ ಕಲಾವಿದರ ಕಲ್ಯಾಣಕ್ಕಾಗಿ ಬೇಡುತ್ತಿದ್ದೇನೆ’ ಎಂಬ ಅವರ ಹೃದಯವಂತಿಕೆಯ ಎದುರು ಅಶಕ್ತ ಕಲಾವಿದರಿಗೆ ತಾನು ಬೇಡುವುದು ತಪ್ಪಲ್ಲ ಎಂಬ ಬಲವಾದ ನಂಬಿಕೆಯಿದೆ.
ಹೃದಯವಂತಿಕೆ ಮೆಚ್ಚುವಂತಹದ್ದು
ಯಕ್ಷಗಾನ ರಂಗದ ಆಶಕ್ತ ಕಲಾವಿದರಿಗೆ ಸಹಕರಿಸಲು ಹೊರಟಿರುವ ಪಟ್ಲ ಸತೀಶ್ ಶೆಟ್ಟಿ ಅವರ ಹೃದಯವಂತಿಕೆ ಮೆಚ್ಚುವಂತಹದ್ದು. ಒಂದು ಒಳ್ಳೆಯ ಸಂಕಲ್ಪ, ಒಂದು ಒಳ್ಳೆಯ ಸದಾಶಯ ಇರುವಾಗ ಜನರಿಂದ ಬೆಂಬಲ, ಅಭಿಮಾನ ಹೇಗೆ ಹರಿದು ಬರುತ್ತದೆ ಎನ್ನು ವುದಕ್ಕೆ ಪಟ್ಲ ಫೌಂಡೇಷನ್ ಟ್ರಸ್ಟ್ ಸಾಕ್ಷಿ. ಯಾರೋ ಒಬ್ಬ ಒಟ್ಟು ಕಲಾವಿದರ ಸಮೂಹಕ್ಕೆ ಒಳ್ಳೆದು ಮಾಡುತ್ತಾನೆ ಎಂಬ ವಿಶ್ವಾಸ ಜನರಲ್ಲಿ ಮೂಡಿದಾಗ ಜನರು ಉದಾರಿಗಳಾಗಲು ಹಿಂದೆ ಬೀಳುವುದಿಲ್ಲ. ಸಮಾಜದ ಕಾಳಜಿಯ ಬಗ್ಗೆ ಒಂದು ಭರವಸೆ ಮೂಡಿಸುವ ಕಾರ್ಯ ವಾಗಿದೆ. ಎಲ್ಲ ಸಮುದಾಯಗಳ ಪ್ರೀತಿ, ಗೌರವ, ಅಭಿಮಾನ ಈ ಟ್ರಸ್ಟ್‌ನ ಮೇಲಿರಲಿ
– ಡಾ| ಎಂ. ಪ್ರಭಾಕರ ಜೋಶಿ (ಪ್ರಸಿದ್ಧ ಯಕ್ಷಗಾನ ವಿದ್ವಾಂಸರು, ವಿಮರ್ಶಕರು, ಅರ್ಥದಾರಿಗಳು).
ಮಹತ್ವದ ಧ್ಯೇಯ ಹೊಂದಿದೆ
ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದರನ್ನು ಗುರುತಿಸುವುದು ಮತ್ತು ಅವರ ಕಷ್ಟ- ಸುಖಗಳಿಗೆ ಸ್ಪಂದಿಸುವ ಗುಣ ಹಿಂದೆ ಇರಲಿಲ್ಲ. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಕಲಾವಿದರಿಗೂ ಒಂದು ಬದುಕಿದೆ, ಅವರು ಅಭಿಮಾನದಿಂದ ಬದುಕಬೇಕು ಎಂಬ ಮಹತ್ವದ ಧ್ಯೇಯವನ್ನು ಹೊಂದಿ ಕಾರ್ಯಪ್ರವೃತ್ತವಾಗಿದೆ. ಹಿಂದಿನ ಕಾಲದಲ್ಲಿ ಮೇಳದ ಕಲಾವಿದನೋರ್ವ ಮೇಳಬಿಟ್ಟು ಮನೆಗೆ ಬರುವಾಗ ಮುಂದಿನ ದಿನಗಳ ಗತಿ ಏನು ಎಂದು ಯೋಚಿಸಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದಿನ ಬದಲಾವಣೆಯ ಯುಗದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರೊಂದಿಗೆ ಹೃದಯವಂತರ ಕೂಟವೊಂದು ಯಕ್ಷಧ್ರುವ ಪಟ್ಲ ಫೌಂಡೇಷನ್‌ನಲ್ಲಿ ಕೂಡಿಕೊಂಡು ಪವಿತ್ರ, ಸಮರ್ಪಕ, ಆವಶ್ಯಕ ಕೆಲಸ ಮಾಡುತ್ತಿರು ವುದು ಅಭಿಮಾನ ವೆನಿಸುತ್ತಿದೆ. ನನಗೆ ಟ್ರಸ್ಟ್‌ನ ಕಾರ್ಯಕ್ರಮಗಳು, ಮುಂದಿನ ಯೋಜನೆಗಳನ್ನು ಕಂಡು ಬಹಳ ಸಂತೋಷವಾಗುತ್ತಿದೆ
– ಕುಂಬ್ಳೆ ಸುಂದರ್ ರಾವ್ (ಖ್ಯಾತ ಯಕ್ಷಗಾನ ಅರ್ಥದಾರಿ, ವಿದ್ವಾಂಸರು).
ಈ ದೇಶದ ಹೆಮ್ಮೆ
ಒಂದು ನಿರ್ದಿಷ್ಟ ಪ್ರಕಾರದ ರಂಗಭೂಮಿ ಯಿಂದ ಮೈಯೊಡೆದ ಇಂತಹ ವಿದ್ಯಮಾನ ಇನ್ನೊಂದಿದೆಯೇ.. ನಾನು ಕಂಡು ಕೇಳರಿಯೆ!, “ನನ್ನದು ನನಗೇ ಇರಲಿ…ಸಿಕ್ಕಿ ದರೆ ನಿಮ್ಮದೂ ಒಟ್ಟಿಗಿರಲಿ’ ಎನ್ನುವ ಕಾಲ ಮಾನದಲ್ಲಿ, ತನಗೆ ದೈವಾನುಗ್ರಹ ಮತ್ತು ಪ್ರತಿಭೆಗಳಿಂದ ಪ್ರಾಪ್ತಿಸಿದ ಅದ್ಭುತ ಜನ ಪ್ರೀತಿಯನ್ನು, ತಾನಾಯ್ದ ಯಕ್ಷಗಾನದ ಕ್ಷೇತ್ರದ ಸಂತ್ರಸ್ತರ ಕಣ್ಣೀರೊರೆಸಲು ಬಳಸಿಕೊಂಡ ಪಟ್ಲ ಸತೀಶರ ಈ ವಿಸ್ಮಯಕಾರಕ ನಡವಳಿಕೆ ರಂಗಭೂಮಿಯೊಂದರ ದಾಖಲೆ. ನಾಳೆಗೆ ಅಧ್ಯಯನ, ಅನುಸರಣ ಯೋಗ್ಯ ಮಹಾ ಘಟನೆ !. ಕೆರೆಯ ನೀರನು ಕೆರೆಗೇ ಚೆಲ್ಲಿದ್ದಲ್ಲ…ಇದು ಕೈಂಕರ್ಯ ಸಮುದ್ರದಿಂದ ಸೇವಾ ಜಲ ಮೊಗೆದು ಬತ್ತಿದ ಕೆರೆ ತುಂಬಿಸಿದ ಪರೋಪಕೃತಿಯೊಂದರ ಉಜ್ವಲ…ತಾಜಾ…ಸಸಾಕ್ಷಿಕ ದೃಷ್ಟಾಂತ! . ಯಕ್ಷದ್ರುವ ಪಟ್ಲ ಫೌಂಡೇಶನ್ ಈ ದೇಶದ ಹೆಮ್ಮೆ
– ಜಬ್ಟಾರ್ ಸಮೋ (ಪ್ರಸಿದ್ಧ ಅರ್ಥದಾರಿಗಳು).
ಡಾ| ದಿನೇಶ್ ಶೆಟ್ಟಿ ರೆಂಜಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.