ಅಮೆರಿಕಾದ ಮಿಷಿಗನ್ ನಲ್ಲಿ ಯಕ್ಷ ಪ್ರಿಯರ ಮನಸೆಳೆದ ಶ್ರೀ ದೇವಿ ಮಹಾತ್ಮೆ – ಭೀಷ್ಮ ಪರ್ವ
Team Udayavani, Oct 16, 2019, 3:55 PM IST
‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಯು.ಎಸ್.ಎ. ಇದರ ಆಶ್ರಯದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವು ಮಿಷಿಗನ್ ನ ಡೆಟ್ರಾಯಿಟ್ ಸಮೀಪದ ಟ್ರಾಯ್ ನಗರದಲ್ಲಿರುವ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಈ ಭಾಗದಲ್ಲಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ತುಳು ಭಾಷಿಗರ ಸಂಘ ಮಿಷಿಗನ್ ತುಳುವಾಸ್’ ಹಾಗೂ ‘ಪಂಪ ಕನ್ನಡ ಕೂಟ’ದ ಸಹಯೋಗದೊಂದಿಗೆ ಈ ಅಪೂರ್ವ ಯಕ್ಷಗಾನ ಕಾರ್ಯಕ್ರಮವನ್ನು ಮೊದಲ ಬಾರಿಗೆ ಈ ಭಾಗದಲ್ಲಿ ಆಯೋಜಿಸಲಾಗಿತ್ತು.
ಆದಿಮಾಯೆ ಮತ್ತು ತ್ರಿಮೂರ್ತಿಗಳ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನ ಸಮರ್ಥ ಹಿಮ್ಮೆಳ ಮತ್ತು ಮುಮ್ಮೇಳಗಳ ಪ್ರಸ್ತುತಿಯೊಂದಿಗೆ ಪ್ರಸಂಗದ ಅಂತ್ಯದವರೆಗೆ ಯಕ್ಷಪ್ರಿಯರ ಮನಸ್ಸನ್ನು ಸೆಳೆದಿಡುವಲ್ಲಿ ಯಶಸ್ವಿಯಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಶ್ರೀ ಸತೀಶ್ ಶೆಟ್ಟಿಯವರ ಕಂಚಿನ ಕಂಠಸಿರಿ ಪ್ರಸಂಗಕ್ಕೆ ಇನ್ನಷ್ಟು ಮೆರುಗನ್ನು ತಂದುಕೊಟ್ಟಿತು. ಮದ್ದಳೆಯಲ್ಲಿ ಜಯರಾಮ ಭಟ್ ಹಾಗೂ ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯರು ಸಮರ್ಥ ಹಿಮ್ಮೇಳ ಸಾಥ್ ಗೆ ಕಾರಣರಾದರು. ಚಕ್ರತಾಳದಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ಸಹಕರಿಸಿದರು.
ಮಹಾವಿಷ್ಣುವಿನ ವೇಷಧಾರಿಯಾಗಿ ಖ್ಯಾತ ಯಕ್ಷಗಾನ ಕಲೋಪಾಸಕ ಶ್ರೀ ಎಂ. ಎಲ್. ಸಾಮಗರು ಅಪ್ರತಿಮ ಮಾತುಗಾರಿಕೆಯಿಂದ ಸಭಿಕರ ಗಮನ ಸೆಳೆದರು. ಸ್ಥಳೀಯ ಕಲಾವಿದರಾದ ಪುರುಷೋತ್ತಮ ಮರಕಡ ಬ್ರಹ್ಮನಾಗಿಯೂ, ಪ್ರಶಾಂತ ಕುಮಾರ್ ಈಶ್ವರನಾಗಿಯೂ ಮತ್ತು ವೆಂಕಟೇಶ ಪೊಳಲಿ ಆದಿಮಾಯೆಯಾಗಿಯೂ ಪಾತ್ರೋಚಿತ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾದರು.
ಪಾರಂಪರಿಕ ಶೈಲಿಯ ವೇಷದಲ್ಲಿ ಮಿಂಚುತ್ತಿದ್ದ ಮಹಿಷಾಸುರನ ಒಡ್ಡೋಲಗವು ಸಭೆಯ ಮಧ್ಯದಿಂದ ಮೊದಲ್ಗೊಂಡು ಪ್ರೇಕ್ಷಕರ ಸುತ್ತ ಉದ್ದಗಲಕ್ಕೂ ದೀರ್ಘವಾಗಿ ಸಾಗಿತು. ಮಹಿಷಾಸುರನ ವೇಷಧಾರಿ ಚಂದ್ರಶೇಖರ ಪೂಜಾರಿಯವರ ಅಬ್ಬರದ ಮಹಿಷ ಪ್ರಸಂಗಕ್ಕೊಂದು ಗಂಭೀರತೆಯ ಮೆರುಗನ್ನು ನೀಡುವಲ್ಲಿ ಯಶಸ್ವಿಯಾಯಿತು.
ಮಾಲಿನಿಯ ಪಾತ್ರದಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿಯವರು ತಮ್ಮ ಒನಪು ವೈಯಾರದ ವೇಷದಿಂದ ಗಮನ ಸೆಳೆದರೆ ದೇವೇಂದ್ರನ ಪಾತ್ರದಲ್ಲಿ ಶ್ರೀ ಮೋಹನ ಬೆಳ್ಳಿಪಾಡಿಯವರು ಮಿಂಚಿದರು. ಮಹೇಶ ಮಣಿಯಾಣಿಯವರ ಹಾಸ್ಯ ಸಭೆಯನ್ನು ನಡಗಡಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ಸ್ಥಳೀಯ ಬಾಲಕಿ ಕು. ಅಭೀಷ್ಟ ಹೆಬ್ಬಾರ್ ಅಗ್ನಿಯ ವೇಷದಲ್ಲಿ ಪ್ರಶಂಸಾರ್ಹ ಅಭಿನಯವನ್ನು ನೀಡಿದಳು. ಇನ್ನು ಈ ಪ್ರಸಂಗದ ಪ್ರಮುಖ ಆಕರ್ಷಣೆಯ ಅಷ್ಟಭುಜೆ ಶ್ರೀ ದೇವಿಯ ಪಾತ್ರದಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಭಕ್ತಿ ರಸಪೂರ್ಣವಾಗಿ ಅಭಿನಯಿಸಿ ಯಕ್ಷಪ್ರೇಮಿಗಳ ಕರಾಡತನದ ಮೆಚ್ಚುಗೆಗೆ ಪಾತ್ರರಾದರು.
ಯಕ್ಷಗಾನ ಕಾರ್ಯಕ್ರಮದ ದಿನದಂದು ಇದೇ ತಂಡದ ಕಲಾವಿದರಿಂದ ‘ಭೀಷ್ಮ ಪರ್ವ’ ಎಂಬ ಪೌರಾಣಿಕ ತಾಳಮದ್ದಳೆ ಪ್ರಸಂಗ ಇಲ್ಲಿನ ನೋವೈಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಯಿತು. ಭೀಷ್ಮಾಚಾರ್ಯರಾಗಿ ಹಿರಿಯ ಕಲಾವಿದ ಎಂ. ಎಲ್. ಸಾಮಗರು ತಮ್ಮ ವಿದ್ವತ್ ಪೂರ್ಣ ಮಾತಿನಿಂದ ಕೇಳುಗರ ಗಮನ ಸೆಳೆದರು. ಪ್ರಸ್ತುತ ಅಮೇರಿಕಾ ಪ್ರವಾಸದಲ್ಲಿರುವ ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಕಾರಂತರು ಶ್ರೀ ಕೃಷ್ಣನ ಪಾತ್ರ ವಹಿಸಿ ಭೀಷ್ಮನ ಮಾರ್ಮಿಕ ಪ್ರಶ್ನೆಗಳಿಗೆ ಸಮಯೋಚಿತ ಪ್ರತಿಕ್ರಿಯೆ ನೀಡುವ ಮೂಲಕ ಗಮನ ಸೆಳೆದರು.
ದುರ್ಯೋಧನನಾಗಿ ಶ್ರೀ ಮೋಹನ ಬೆಳ್ಳಿಪಾಡಿ, ಅರ್ಜುನನಾಗಿ ಶ್ರೀ ಚಂದ್ರಶೇಖರ ಪೂಜಾರಿಯವರು ತಮ್ಮ ಪಾತ್ರನಿರ್ವಹಣೆಯ ಮೂಲಕ ಸಭಿಕರ ಗಮನಸೆಳೆದರು. ಹಿಮ್ಮೆಳದಲ್ಲಿ ದೇವಿ ಮಹಾತ್ಮೆ ಪ್ರಸಂಗದ ಕಲಾವಿದರೇ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿ ಪ್ರಸಂಗಕ್ಕೊಂದು ವಿಶೇಷ ಮೆರುಗನ್ನು ನೀಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಥಳೀಯ ಕಲಾವಿದ ಅನಿರುದ್ಧ ರಾವ್ ತಬಲಾವನ್ನು ಹಿಮ್ಮೇಳದೊಂದಿಗೆ ನುಡಿಸಿ ನವೀನಾನುಭವ ನೀಡಿದರು.
– ಅರುಣ್ ರಾವ್ ಆರೂರು, ಮಿಷಿಗನ್, ಯು.ಎಸ್.ಎ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ
Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ
ಕ್ಲೀವ್ ಲ್ಯಾಂಡ್: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ
ಮೊಗವೀರ್ಸ್ ಬಹ್ರೈನ್ ಪ್ರೊ ಕಬಡ್ಡಿ;ತುಳುನಾಡ್ ತಂಡ ಪ್ರಥಮ,ಪುನಿತ್ ಬೆಸ್ಟ್ All ರೌಂಡರ್
ಕ್ಯಾಲಿಫೋರ್ನಿಯ: ನಾಡೋತ್ಸವದಲ್ಲಿ ಚಿಣ್ಣರ ಚಿಲಿಪಿಲಿ, ಸಾಂಸ್ಕೃತಿಕ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.