ಆಫ್ರಿಕಾ ಸಫಾರಿ: ಭಾರತ ಕಂಡೀತೇ ಯಶಸ್ಸಿನ ದಾರಿ?
Team Udayavani, Jan 5, 2018, 8:26 AM IST
ಕೇಪ್‌ಟೌನ್: ಟೀಮ್ ಇಂಡಿಯಾಕ್ಕೆ ಅಗ್ನಿಪರೀಕ್ಷೆಯ ಅವಧಿ ಎದುರಾಗಿದೆ. ಕಳೆದ ವರ್ಷವಿಡೀ ತವರಿನಲ್ಲಿ ಹಾಗೂ ಏಶ್ಯದ ನೆಲದಲ್ಲೇ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನಾಡಿ, ಗೆಲುವಿನ ತೋರಣ ಕಟ್ಟುತ್ತ ಹೋದ ಭಾರತ ತಂಡಕ್ಕೀಗ ದಕ್ಷಿಣ ಆಫ್ರಿಕಾದಲ್ಲಿ ಕಠಿನ ಸವಾಲು ಕಾದು ಕುಳಿತಿದೆ. ಶುಕ್ರವಾರದಿಂದ ಕೇಪ್‌ಟೌನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದ್ದು, ಇಲ್ಲಿನ ವೇಗದ ಹಾಗೂ ಬೌನ್ಸಿ ಟ್ರ್ಯಾಕ್‌ಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಕೊಹ್ಲಿ ಪಡೆಗೆ ಇದೆಯೇ ಎಂಬುದು ಕ್ರಿಕೆಟ್ ಅಭಿಮಾನಿಗಳನ್ನು ಕಾಡುವ ದೊಡ್ಡ ಪ್ರಶ್ನೆ.
ಈ ಸರಣಿಯ 3 ಟೆಸ್ಟ್ ಪಂದ್ಯಗಳ ಸಹಿತ, 2018-19ರ ಋತುವಿನಲ್ಲಿ ಸತತ 12 ಟೆಸ್ಟ್‌ಗಳನ್ನು ಭಾರತ ವಿದೇಶಗಳಲ್ಲಿ ಆಡಬೇಕಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಕ್ಕೂ ಪ್ರವಾಸ ಹೋಗಲಿದೆ. ಹೀಗಾಗಿ ದಕ್ಷಿಣ ಆಫ್ರಿಕಾದಲ್ಲಿನ ನಿರ್ವಹಣೆ ಭಾರತದ ಪಾಲಿಗೆ ನಿರ್ಣಾಯಕ.
ಆಫ್ರಿಕಾದಲ್ಲಿ ಕಳಪೆ ಆಟ: ದಕ್ಷಿಣ ಆಫ್ರಿಕಾ ಪ್ರವಾಸ ಎಂಬುದು ಭಾರತದ ಪಾಲಿಗೆ ಯಾವತ್ತೂ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಈವರೆಗಿನ 6 ಟೆಸ್ಟ್ ಸರಣಿಗಳಲ್ಲಿ ಐದನ್ನು ಕಳೆದು ಕೊಂಡಿದೆ. ಒಂದನ್ನು ಡ್ರಾ ಮಾಡಿದ್ದೇ ದೊಡ್ಡ ಸಾಧನೆ.
ಒಟ್ಟು ಟೆಸ್ಟ್ ಲೆಕ್ಕಾಚಾರದಲ್ಲೂ ಭಾರತದ್ದು ನಿರಾಶಾದಾಯಕ ಆಟ. ಹರಿಣಗಳ ನಾಡಿನಲ್ಲಿ ಆಡಿದ 17 ಟೆಸ್ಟ್‌ಗಳಲ್ಲಿ ಎಂಟನ್ನು ಸೋತಿದೆ. ಏಳನ್ನು ಡ್ರಾ ಮಾಡಿಕೊಂಡಿದೆ. ಗೆದ್ದದ್ದು ಎರಡರಲ್ಲಿ ಮಾತ್ರ. 2006ರಲ್ಲಿ ಮೊದಲ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದರೂ ಉಳಿದೆರಡರಲ್ಲಿ ಸೋತು ದುರದೃಷ್ಟವನ್ನು ತೆರೆದಿರಿಸಿತು. ಹಾಗೆಯೇ 2010-11ರಲ್ಲಿ 1-1 ಸಮಬಲ ಸಾಧಿಸಿದ ಬಳಿಕ ಅಂತಿಮ ಟೆಸ್ಟ್‌ನಲ್ಲಿ ಮುಗ್ಗರಿಸಿ ಸರಣಿ ಕಳೆದುಕೊಂಡಿತು. ಈ ಎರಡು ಸರಣಿ ವೇಳೆ ದ್ರಾವಿಡ್ ಹಾಗೂ ಧೋನಿ ನೇತೃತ್ವ ಭಾರತಕ್ಕಿತ್ತು. ಕೇಪ್‌ಟೌನ್‌ನ “ನ್ಯೂಲ್ಯಾಂಡ್ಸ್’ ಅಂಗಳದಲ್ಲಿ 4 ಟೆಸ್ಟ್ ಆಡಿರುವ ಭಾರತ, ಎರಡನ್ನು ಸೋತಿದೆ. ಉಳಿದೆರಡನ್ನು ಡ್ರಾ ಮಾಡಿಕೊಂಡಿದೆ.
ಭಾರತ 2013ರಲ್ಲಿ ಕೊನೆಯ ಸಲ ದಕ್ಷಿಣ ಆಫ್ರಿಕಾಕ್ಕೆ ತೆರಳಿದಾಗ 2 ಟೆಸ್ಟ್‌ಗಳನ್ನಾಡಿ, ಸರಣಿಯನ್ನು 1-0 ಅಂತರದಿಂದ ಸೋತಿತ್ತು. 5 ವರ್ಷಗಳ ಬಳಿಕ ಟೀಮ್ ಇಂಡಿಯಾ “ಆಫ್ರಿಕಾ ಸಫಾರಿ’ ಮಾಡುತ್ತಿದ್ದು, ಹೊಸ ಭರವಸೆ, ನಿರೀಕ್ಷೆ ಮೂಡಿಸೀತೇ ಎಂಬುದೊಂದು ಕುತೂಹಲ.
ನಿಂತು ಆಡಿದರೆ ಲಾಭ: ಭಾರತದ ಬ್ಯಾಟಿಂಗ್ ಲೈನ್‌ಅಪ್ ಉತ್ತಮ ಮಟ್ಟದಲ್ಲೇ ಇದೆ. ಆದರೆ ಎಲ್ಲರೂ ನಿಂತು ಆಡುವುದು ಮುಖ್ಯ. ಹಾಗೆಯೇ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 350 ರನ್ ಪೇರಿಸುವುದು ಅಗತ್ಯ. ಆದರೆ ಈ 350 ರನ್ನನ್ನು ಒಂದೇ ದಿನದಲ್ಲಿ ರಾಶಿ ಹಾಕುವ ಬದಲು ಒಂದೂವರೆ-ಒಂದು ಮುಕ್ಕಾಲು ದಿನದ ಅವಧಿಯಲ್ಲಿ ಪೇರಿಸಿದರೆ ಲಾಭ ಹೆಚ್ಚು. ಅರ್ಥಾತ್, ರನ್ ಗಳಿಸುವುದರ ಜತೆಗೆ ಕ್ರೀಸನ್ನೂ ಆಕ್ರಮಿಸಿಕೊಂಡರೆ ಆಗ ಆಫ್ರಿಕಾ ದಾಳಿಯನ್ನು ಮೆಟ್ಟಿನಿಲ್ಲಬಲ್ಲ ಆತ್ಮವಿಶ್ವಾಸ ಮೂಡಲಿದೆ.
ಧವನ್ ಫಿಟ್ ಆದುದರಿಂದ ವಿಜಯ್ ಜತೆ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಭಾರೀ ನಿರೀಕ್ಷೆಯಲ್ಲಿದ್ದ ರಾಹುಲ್ ನಿರಾಸೆ ಅನುಭವಿಸಬೇಕಾಗಿದೆ. ಪೂಜಾರ, ಕೊಹ್ಲಿ, ರಹಾನೆ, ರೋಹಿತ್ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿದ್ದಾರೆ. ಕಳಪೆ ಫಾರ್ಮ್ ನಲ್ಲಿರುವ ರಹಾನೆಗೆ ಜಾಗ ಸಿಕ್ಕೀತೇ ಎಂಬುದೊಂದು ಪ್ರಶ್ನೆ.
ಅಗ್ರಮಾನ್ಯ ತಂಡಗಳ ಕದನ
2 ಅಗ್ರಮಾನ್ಯ ಟೆಸ್ಟ್ ತಂಡಗಳ ನಡುವಿನ ಈ ಕದನ ಕೌತುಕ ಇಡೀ ವಿಶ್ವದ ಗಮನ ಸೆಳೆಯುವುದರಲ್ಲಿ ಅನುಮಾನವಿಲ್ಲ. ಅಕಸ್ಮಾತ್ ಈ ಸರಣಿಯನ್ನು 3-0 ಅಂತರದಿಂದ ಸೋತರೂ ಭಾರತದ ಅಗ್ರಸ್ಥಾನವೇನೂ ಕೈಜಾರದು. ಆದರೆ ಪ್ರಶ್ನೆ ಅದಲ್ಲ. ಇಲ್ಲಿ ರ್‍ಯಾಂಕಿಂಗಿಂತಲೂ ಮಿಗಿಲಾದದ್ದು ಗೆಲುವಿನ ಸಾಧನೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿ ಇತಿಹಾಸ ನಿರ್ಮಿಸಿದರೆ ಇದಕ್ಕಿಂತ ಮಿಗಿಲಾದ ಸಂಭ್ರಮ ಬೇರೆ ಯಾವುದಿದೆ?!
ಭಾರತದ ಯಶಸ್ಸಿನಲ್ಲಿ ಬ್ಯಾಟ್ಸ್‌ಮನ್‌ಗಳ ಪಾತ್ರವೇ ನಿರ್ಣಾಯಕ ಎಂಬುದರಲ್ಲಿ ಎರಡು ಮಾತಿಲ್ಲ. ಆಫ್ರಿಕಾದ ಘಾತಕ ವೇಗಿಗಳಿಗೆ ಎದೆಯೊಡ್ಡಿ ನಿಲ್ಲುವ ಧೈರ್ಯವನ್ನು ಇವರು ತೋರಿದ್ದೇ ಆದರೆ ಉಳಿದುದನ್ನು ಬೌಲರ್‌ಗಳು ಸಾಧಿಸಬಲ್ಲರು ಎಂಬುದೊಂದು ಲೆಕ್ಕಾಚಾರ. ಕಾರಣ, ಆಫ್ರಿಕಾ ಟ್ರ್ಯಾಕ್‌ಗಳಿಗೆ “ಸೂಟ್’ ಆಗಬಲ್ಲ ವೇಗಿಗಳ ಪಡೆ ಭಾರತದ ಬಳಿ ಇದೆ. ಭುವನೇಶ್ವರ್, ಶಮಿ, ಇಶಾಂತ್, ಯಾದವ್ ಜತೆಗೆ ಬುಮ್ರಾ ಮೇಲೆ ಭಾರೀ ಭರವಸೆ ಇಡಲಾಗಿದೆ. ಇವರಲ್ಲಿ ಬುಮ್ರಾ ಮಾತ್ರ ಈವರೆಗೆ ಟೆಸ್ಟ್ ಆಡಿಲ್ಲ. ಆಫ್ರಿಕಾ ಪಿಚ್‌ಗಳಿಗೆ ಇವರ ಬೌಲಿಂಗ್ ಶೈಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆಂಬ ಕಾರಣಕ್ಕಾಗಿ ಬುಮ್ರಾ ಈ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಶುಕ್ರವಾರ ಟೆಸ್ಟ್ ಕ್ಯಾಪ್ ಧರಿಸಿದರೂ ಅಚ್ಚರಿ ಇಲ್ಲ.
ಹಾರ್ಡ್ ಹಿಟ್ಟಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೂಡ ಅರ್ಹ ಆಯ್ಕೆ. ಆದರೆ ಅವರು ಬೌಲಿಂಗಿನಲ್ಲಿ ಹೆಚ್ಚಿನ ಯಶಸ್ಸು ಸಾಧಿಸಬೇಕಾದುದು ಮುಖ್ಯ. ಸ್ಪಿನ್ನಿಗೆ ಒಂದು ಅವಕಾಶ ಮೀಸಲಿರಿಸಿದರೆ ಅದು ಅಶ್ವಿನ್ ಪಾಲಾಗಲಿದೆ.
ದಕ್ಷಿಣ ಆಫ್ರಿಕಾ ಬಲಿಷ್ಠ ಪಡೆ
ಈ ಸರಣಿಗಾಗಿ ಕಳೆದೆರಡು ವರ್ಷಗಳಲ್ಲೇ ಅತ್ಯಂತ ಬಲಿಷ್ಠ ತಂಡವೊಂದನ್ನು ದಕ್ಷಿಣ ಆಫ್ರಿಕಾ ಆಯ್ಕೆ ಮಾಡಿದೆ. ಭಾರತದ ಸವಾಲನ್ನು ಅದು ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಇದು ಸಾಕ್ಷಿ. ವೇಗಿ ಸ್ಟೇನ್ ಬಹಳ ಸಮಯದ ಬಳಿಕ ಕಾಣಿಸಿಕೊಂಡಿದ್ದಾರೆ. ಅವರು ಈಗಲೂ ಮೊದಲಿನಷ್ಟು ಘಾತಕರಾಗಿರುವರೇ ಎಂಬ ಪ್ರಶ್ನೆ ಸಹಜ. ಉಳಿದಂತೆ ಮಾರ್ಕೆಲ್, ರಬಾಡ, ಫಿಲಾಂಡರ್ ವೇಗಿಗಳ ಪಡೆಯಲ್ಲಿದ್ದಾರೆ. ಇವರಲ್ಲಿ ರಬಾಡ ಹೆಚ್ಚು ಅಪಾಯಕಾರಿಯಾದಾರು. ಸ್ಪಿನ್ನರ್ ಮಹಾರಾಜ್ ಈ ವೇಗಿಗಳ ಮಧ್ಯೆ ಸ್ಪರ್ಧಿಸಬೇಕಿದೆ.
ಆಮ್ಲ, ಎಲ್ಗರ್, ಎಬಿಡಿ, ಡು ಪ್ಲೆಸಿಸ್, ಡಿ ಕಾಕ್, ಮಾರ್ಕ್‌ರಮ್, ಬವುಮ ಅವರನ್ನೊಳಗೊಂಡ ಶಕ್ತಿಶಾಲಿ ಬ್ಯಾಟಿಂಗ್ ಪಡೆ ಆಫ್ರಿಕಾ ಬಳಿ ಇದೆ. ಹೀಗಾಗಿ ಅಂತಿಮ ಹನ್ನೊಂದರ ಆಯ್ಕೆ ಆತಿಥೇಯರಿಗೆ ತುಸು ಜಟಿಲ ವಾದೀತು.
ಬೆಳ್ಳಿ ಹಬ್ಬದ ಸರಣಿ
ಭಾರತ-ದಕ್ಷಿಣ ಆಫ್ರಿಕಾ ಸರಣಿಗೆ ಈಗ ಬೆಳ್ಳಿಹಬ್ಬದ ಸಂಭ್ರಮ ಎಂಬುದನ್ನು ಮರೆಯುವಂತಿಲ್ಲ. ಕ್ರಿಕೆಟ್ ನಿಷೇಧದಿಂದ ಮುಕ್ತಗೊಂಡ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಟೆಸ್ಟ್ ಪಂದ್ಯವನ್ನು 1992ರ ಅಂತ್ಯದಲ್ಲಿ ಡರ್ಬನ್‌ನಲ್ಲಿ ಆಡಿತ್ತು. ಈ ಪಂದ್ಯ ನಡೆದು ಸರಿಯಾಗಿ 25 ವರ್ಷಗಳು ಉರುಳಿವೆ. ಟೀಮ್ ಇಂಡಿಯಾ ಈ ಬೆಳ್ಳಿಹಬ್ಬವನ್ನು ಸ್ಮರಣೀಯವಾಗಿ ಆಚರಿಸಲಿ ಎಂಬುದು ಅಭಿಮಾನಿಗಳ ಹಾರೈಕೆ.
ಸ್ನಾನದ ಅವಧಿ ಎರಡೇ ನಿಮಿಷ !
ಕೇಪ್‌ಟೌನ್ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿರುವ ಭಾರತೀಯ ಕ್ರಿಕೆಟಿಗರಿಗೆ ವಿಶೇಷ ಸೂಚನೆಯೊಂದನ್ನು ನೀಡಲಾಗಿದೆ. ಎರಡೇ ನಿಮಿಷದಲ್ಲಿ ಸ್ನಾನವನ್ನು ಪೂರೈಸಲು ಸೂಚಿಸಲಾಗಿದೆ! ಇದಕ್ಕೆ ಕಾರಣ, ಕಳೆದ ಕೆಲವು ಸಮಯದಿಂದ ಕೇಪ್‌ಟೌನ್ ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆ. ನೀರಿನ ಬರಗಾಲದಿಂದ ನ್ಯೂಲ್ಯಾಂಡ್ಸ್ ಪಿಚ್ ನಿರ್ಮಾಣಕ್ಕೂ ಸಮಸ್ಯೆ ಎದುರಾಗಿತ್ತು. ಕಡಿಮೆ ಪ್ರಮಾಣದಲ್ಲಿ ನೀರನ್ನು ಬಳಸಿದ್ದರಿಂದ ಪಿಚ್ ಮೇಲೆ ಹಸಿರು ಹುಲ್ಲನ್ನು ಬೆಳೆಸುವುದು ಕಠಿನವಾಗಿ ಪರಿಣಮಿಸಿತು ಎಂದು ಕ್ಯುರೇಟರ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ತಲೆಕೆಳಗಾದ ತ್ರಿವರ್ಣ ಧ್ವಜ !
ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಬುಧವಾರ ದೊಡ್ಡ ಎಡವಟ್ಟೊಂದು ಕಂಡುಬಂತು. ಇಲ್ಲಿ ಭಾರತದ ತ್ರಿವರ್ಣ ಧ್ವಜ ತಲೆಕೆಳಗಾಗಿ ಹಾರಾಡುತ್ತಿತ್ತು! ಕ್ರಿಕೆಟಿಗರ ಅಭ್ಯಾಸದ ವೇಳೆ ಆತಿಥೇಯ ಅಂಗಳದಲ್ಲಿ ಎರಡೂ ರಾಷ್ಟ್ರಗಳ ಹಾಗೂ ಆತಿಥೇಯ ಕ್ರಿಕೆಟ್ ಮಂಡಳಿಯ ಧ್ವಜವನ್ನು ಹಾರಿಸುವುದೊಂದು ಸಂಪ್ರ ದಾಯ. ಆದರೆ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ಮೈದಾನದ ಸಿಬಂದಿಯೊಬ್ಬರು ಇದನ್ನು ಗಮನಕ್ಕೆ ತಂದೊಡನೆಯೆ ತಪ್ಪನ್ನು ಸರಿಪಡಿಸಲಾಯಿತು.
ತಂಡಗಳು
ಭಾರತ: ವಿರಾಟ್ ಕೊಹ್ಲಿ (ನಾಯಕ). ಶಿಖರ್ ಧವನ್, ಮುರಳಿ ವಿಜಯ್, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ವೃದ್ಧಿಮಾನ್ ಸಾಹಾ, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ಇಶಾಂತ್ ಶರ್ಮ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಪಾರ್ಥಿವ್ ಪಟೇಲ್.
ದಕ್ಷಿಣ ಆಫ್ರಿಕಾ: ಫಾ ಡು ಪ್ಲೆಸಿಸ್ (ನಾಯಕ), ಡೀನ್ ಎಲ್ಗರ್, ಐಡನ್ ಮಾರ್ಕ್‌ರಮ್, ಹಾಶಿಮ್ ಆಮ್ಲ, ಟೆಂಬ ಬವುಮ, ಥಿಯುನಿಸ್ ಡಿ ಬ್ರುಯಿನ್, ಕ್ವಿಂಟನ್ ಡಿ ಕಾಕ್, ಕೇಶವ್ ಮಹಾರಾಜ್, ಮಾರ್ನೆ ಮಾರ್ಕೆಲ್, ಡೇಲ್ ಸ್ಟೇನ್, ಕ್ರಿಸ್ ಮಾರಿಸ್, ವೆರ್ನನ್ ಫಿಲಾಂಡರ್, ಕಾಗಿಸೊ ರಬಾಡ,
ಆ್ಯಂಡಿಲ್ ಫೆಲುಕ್ವಾಯೊ.
ಆರಂಭ: ಮಧ್ಯಾಹ್ನ 2.00
ಪ್ರಸಾರ: ಸೋನಿ ಟೆನ್ 1, ಸೋನಿ ಟೆನ್ 3
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.