Health ಮಾಹಿತಿ ಹಂಚಿಕೊಂಡ ಅಗರ್ವಾಲ್: ನಾನೀಗ ಚೇತರಿಸಿಕೊಳ್ಳುತ್ತಿದ್ದೇನೆ…
Team Udayavani, Feb 1, 2024, 12:20 AM IST
ಅಗರ್ತಲಾ: “ನಾನೀಗ ಆರೋಗ್ಯವಾಗಿದ್ದೇನೆ’ ಎಂಬುದಾಗಿ ಮಾಯಾಂಕ್ ಅಗರ್ವಾಲ್ ತಮ್ಮ “ಎಕ್ಸ್’ ಖಾತೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಕರ್ನಾಟಕ ಕ್ರಿಕೆಟ್ ತಂಡದ ನಾಯಕನ ಆರೋಗ್ಯದ ಬಗೆಗಿನ ಕಳವಳ, ಆತಂಕ ದೂರಾಗಿದೆ.
“ನನ್ನ ಆರೋಗ್ಯದಲ್ಲಿ ಚೇತರಿಕೆ ಆಗುತ್ತಿದೆ. ಮರಳಲು ಸಜ್ಜಾಗುತ್ತಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು’ ಎಂಬುದಾಗಿ ಅಗರ್ವಾಲ್ ಬರದು ಕೊಂಡಿದ್ದಾರೆ. ಜತೆಗೆ ಆಸ್ಪತ್ರೆ ಯಲ್ಲಿ ರುವ ತಮ್ಮ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.
ಬುಧವಾರ ಅಗರ್ತಲಾದ ಐಎಲ್‌ಎಸ್ ಆಸ್ಪತ್ರೆಯಿಂದ ಬಿಡುಗಡೆಗೊಂಡ ಮಾಯಾಂಕ್ ಅಗರ್ವಾಲ್ ಸಂಜೆ 6.40ರ ನೇರ ವಿಮಾನದಲ್ಲಿ ಬೆಂಗಳೂರಿಗೆ ಪಯಣಿಸಿದರು. ಅವರಿಗೆ ಮಾತಾಡಲು ಸಾಧ್ಯವಾಗುತ್ತಿಲ್ಲ, ದ್ರವ ಪದಾರ್ಥವನ್ನಷ್ಟೇ ಸೇವಿಸುತ್ತಿದ್ದಾರೆ. ಪೂರ್ತಿ ಚೇತರಿಕೆಗೆ ಇನ್ನೂ ಕೆಲವು ದಿನ ಬೇಕಾಗುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಅವರಿಗೆ ಇನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತದೆ.
ವಿಮಾನದಲ್ಲಿ ಘಟನೆ
ಮಂಗಳವಾರ ಅಗರ್ತಲಾದಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಾಯಾಂಕ್ ಅಗರ್ವಾಲ್ ದಿಢೀರ್ ಅಸ್ವಸ್ಥರಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದದ್ದೇ ಈ ದುರಂತಕ್ಕೆ ಕಾರಣ. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು ಎನ್ನಲಾಗುತ್ತಿದೆ. ವಿಮಾನ ಟೇಕ್ ಆಫ್ ಆಗದ ಕಾರಣ ಅಗರ್ವಾಲ್ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು.
ಮ್ಯಾನೇಜರ್ ಹೇಳಿಕೆ
“ನಾವು ಕರ್ನಾಟಕ ಮತ್ತು ತ್ರಿಪುರ ಕ್ರಿಕೆಟ್ ಮಂಡಳಿಗೆ ಕೃತಜ್ಞರಾಗಿದ್ದೇವೆ. ಐಎಲ್‌ಎಸ್ ಆಸ್ಪತ್ರೆಯಲ್ಲಿ ಮಾಯಾಂಕ್ ಅಗರ್ವಾಲ್ ಅವರ ತುರ್ತು ಚಿಕಿತ್ಸೆಗೆ ಮಂಡಳಿಗಳು ಅಮೋಘ ಸಹಕಾರ ನೀಡಿವೆ. ಕನಿಷ್ಠ ಎರಡು-ಮೂರು ದಿನ ಅಗರ್ವಾಲ್ ಆಸ್ಪತ್ರೆಯಲ್ಲಿ ಇರಬೇಕಾದೀತು ಎಂದು ಭಾವಿಸಿದ್ದೆವು. ಆದರೆ ಕೇವಲ 24 ಗಂಟೆಗಳಲ್ಲಿ ಅವರು ಚೇತರಿಸಿಕೊಂಡು ಬಿಡುಗಡೆಯಾದರು’ ಎಂಬುದಾಗಿ ಕರ್ನಾಟಕ ಕ್ರಿಕೆಟ್ ತಂಡದ ಮ್ಯಾನೇಜರ್ ರಮೇಶ್ ರಾವ್ ಮಾಧ್ಯಮದವರಿಗೆ ತಿಳಿಸಿದರು.
ದೂರು ದಾಖಲು
ಘಟನೆಗೆ ಸಂಬಂಧಿಸಿದಂತೆ ಅಗರ್ವಾಲ್ ತಮ್ಮ ಮ್ಯಾನೇ ಜರ್ ಮೂಲಕ ಎನ್‌ಸಿಸಿಪಿಎಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ನಾವು ತನಿಖೆ ಕೈಗೆತ್ತಿ ಕೊಳ್ಳ ಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್‌ಪಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ನಿಕಿನ್ ಜೋಸ್ ನಾಯಕ
ಕರ್ನಾಟಕ ತನ್ನ ಮುಂದಿನ ರಣಜಿ ಪಂದ್ಯವನ್ನು ರೈಲ್ವೇಸ್ ವಿರುದ್ಧ ಸೂರತ್‌ನಲ್ಲಿ ಆಡಲಿದೆ. ಫೆ. 2ರಂದು ಆರಂಭವಾಗುವ ಈ ಪಂದ್ಯದಿಂದ ಮಾಯಾಂಕ್ ಅಗರ್ವಾಲ್ ಹೊರಗುಳಿಯಲಿದ್ದು, ಉಪನಾಯಕ ನಿಕಿನ್ ಜೋಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.