ಆಳ್ವಾಸ್ ಪ್ರಥಮ, ಉಜಿರೆ ಎಸ್‌ಡಿಎಂ ದ್ವಿತೀಯ
Team Udayavani, Mar 28, 2018, 7:30 AM IST
ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ 2017-18ನೇ ಸಾಲಿನ ಅಂತರ್ ಕಾಲೇಜು ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಮೂಡಬಿದಿರೆಯ ಆಳ್ವಾಸ್ ಕಾಲೇಜು ಪಡೆದುಕೊಂಡರೆ, ದ್ವಿತೀಯ ಸ್ಥಾನ ವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಕಾಲೇಜು ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಆಳ್ವಾಸ್ ದೈಹಿಕ ಶಿಕ್ಷಣ ಸಂಸ್ಥೆ ಪಡೆದುಕೊಂಡಿದೆ.
ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ನಡೆದ 2017-18 ನೇ ಸಾಲಿನಲ್ಲಿ ಅಂತರ್ ಕಾಲೇಜು ಕ್ರೀಡಾಕೂಟ ಹಾಗೂ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸುವ “ದರ್ಪಣ-2018′ ಕಾರ್ಯಕ್ರಮದಲ್ಲಿ ವಿಜೇತ ಕಾಲೇಜು ತಂಡಗಳನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಳ್ವಾಸ್ ಕಾಲೇಜು ಮೂಡಬಿದಿರೆ 571 ಅಂಕಗಳನ್ನು ಪಡೆದುಕೊಂಡರೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು 430 ಅಂಕಗಳನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ಸಂಸ್ಥೆ 333 ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮಂಗಳೂರು ವಿವಿ ಕುಲಪತಿ ಪ್ರೊ| ಕೆ. ಭೈರಪ್ಪ ಕಾರ್ಯಕ್ರಮ ಉದ್ಘಾಟಿಸಿ “ದಿ ನ್ಪೋರ್ಟಿಂಗ್ ಸ್ಪಿರಿಟ್’ ಪುಸ್ತಕವನ್ನು ಬಿಡುಗೊಡೆಗೊಳಿಸಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾಲಯವು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಕ್ರೀಡಾ ನೀತಿಯೊಂದಿಗೆ ಗ್ರೇಸ್ ಮಾರ್ಕ್ಸ್, ಪುನರ್ ಪರೀಕ್ಷೆ ಸೇರಿದಂತೆ ಅಂತರ್ ಕಾಲೇಜು ಹಾಗೂ ಅಂತರ್ ವಿವಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆಗೈದವರಿಗೆ ನಗದು ಪುರಸ್ಕಾರಗಳನ್ನು ಕೂಡ ನೀಡಿ ಗೌರವಿಸುತ್ತಿದ್ದು, ಇದರಿಂದಾಗಿ ಈ ಬಾರಿ ಹಲವು ಮಂದಿ ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ವಿವಿಯ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಅರ್ಜುನ ಪ್ರಶಸ್ತಿ ಪುರಸ್ಕೃತ ವೈಟ್‌ಲಿಫ್ಟರ್ ಸತೀಶ್ ರೈ ಸಮ್ಮಾನ ಸ್ವೀಕರಿಸಿ ಮಾತನಾಡಿ ಹಿಂದೆ ಕ್ರೀಡಾ ಸಾಧಕರಿಗೆ ಶಿಕ್ಷಣ ಸಂಸ್ಥೆಗಳ ಬೆಂಬಲದ ಕೊರತೆಯಿಂದ ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಕಷ್ಟಕರವಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವಿವಿಗಳು ಬೆಂಬಲ ನೀಡುವುದರಿಂದ ವಿದ್ಯಾರ್ಥಿಗಳು ಕ್ರೀಡೆಯೊಂದಿಗೆ ಶಿಕ್ಷಣವನ್ನು ಪೂರ್ತಿಗೊಳಿಸಿದರೆ ಉತ್ತಮ ಉದ್ಯೋಗವಕಾಶ ಪಡೆಯಲು ಸಾಧ್ಯ ಎಂದರು.
ಆ್ಯತ್ಲೆಟಿಕ್ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತ ಎಸ್.ಡಿ. ಇಶಾನ್ ಮಾತನಾಡಿ ಕ್ರೀಡಾ ಸಾಧನೆ ಮಾಡುವ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೆ ಕಡಿಮೆ ಅಂಕವಾದರೂ ಪದವಿಯನ್ನು ಪೂರ್ತಿಗೊಳಿಸಲು ಪ್ರಯತ್ನಿಸಬೇಕು. ಕ್ರೀಡೆಯೊಂದಿಗೆ ಪದವಿ ಇದ್ದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದರು.
ದರ್ಪಣಕ್ಕೆ ತಾರಾ ಮೆರುಗು : ಕ್ರೀಡಾ ಪುರಸ್ಕಾರ ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಸ್ಕೃತಿಕ ರಾಯಭಾರಿಗಳು ಭಾಗವಹಿಸುವ ಮೂಲಕ ದರ್ಪಣ -2018 ಕಾರ್ಯಕ್ರಮ ವಿಶೇಷ ಮೆರುಗು ಕಂಡಿತು. ಯಕ್ಷಗಾನ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ, ಪ್ರಶಸ್ತಿ ಪುರಸ್ಕೃತ ತುಳು ಚಿತ್ರನಟ ಪ್ರಥ್ವಿ ಅಂಬರ್ ಸೇರಿದಂತೆ ತುಳು ಚಿತ್ರದ ನಟ ನಟಿಯರು, ನಿರ್ದೇಶಕರು, ತಂತ್ರಜ್ಞರು ಭಾಗವಹಿಸುವ ಮೂಲಕ ಕಾರ್ಯಕ್ರಮದಲ್ಲಿ ಕ್ರೀಡಾ ಸಾಧಕರ ಮತ್ತು ಕಲಾವಿದರ ಸಮ್ಮಿಲನ ನಡೆಯಿತು.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ| ಕಿಶೋರ್ ಕುಮಾರ್ ಸಿ.ಕೆ., ಅಧ್ಯಕ್ಷ ಡಾ| ಜೆರಾಲ್ಡ್ ಡಿ’ಸೋಜಾ, ಅಂತಾ ರಾಷ್ಟ್ರೀಯ ಖ್ಯಾತಿಯ ಯುವ ವೈದ್ಯೆ, ಶಿಕ್ಷಣ ತಜ್ಞೆ ಹಾಗೂ ಸಂಗೀತ ವಿದುಷಿ ಡಾ| ರಮ್ಯಾ ಮೋಹನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ಸಹಾಯಕ ನಿರ್ದೇಶಕರಾದ ಹರಿದಾಸ್ ಕೂಳೂರು, ರಮೇಶ್, ಪ್ರಸನ್ನ ಮೊದಲಾದವರು ಉಪಸ್ಥಿತರಿದ್ದರು.
ಮಂಗಳೂರು ವಿವಿ ಕುಲಸಚಿವ ಪ್ರೊ| ಬಿ.ಎಸ್. ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು. ಅಜ್ಜರಕಾಡು ಸರಕಾರಿ ಮಹಿಳಾ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ಕ್ರೀಡಾ ಸಾಧಕರ ವಿವರ ನೀಡಿದರು.
ಕ್ರೀಡಾ ಸಾಧಕರಿಗೆ 14.84 ಲಕ್ಷ ರೂ.ನಗದು ಪುರಸ್ಕಾರ
ಮಂಗಳೂರು ವಿವಿಯ ಈ ಬಾರಿ ದರ್ಪಣ -2018 ಕಾರ್ಯಕ್ರಮದಲ್ಲಿ ಅಂತರ್ ಕಾಲೇಜು ಮತ್ತು ಅಂತರ್ ವಿವಿ ಸಾಧನೆ ಮಾಡಿದ ಕ್ರೀಡಾ ಸಾಧಕರಿಗೆ ಒಂದು ಸಾವಿರ ನಗದು ಪ್ರಶಸ್ತಿಯಿಂದ ಹಿಡಿದು 1.10 ಲಕ್ಷ ರೂ. ವೈಯಕ್ತಿಕ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರುಷರ ವಿಭಾಗದಲ್ಲಿ ಇಲಕ್ಕಿಯಾ ದಾಸನ್ ಅವರು ಕ್ರೀಡಾ ಸಾಧನೆಗೆ 1.10 ಲಕ್ಷ ರೂ. ನಗದು, ರಂಜಿತ್ ಪಟೇಲ್ 80 ಸಾವಿರ ರೂ. ನಗದು, ಮಹಿಳಾ ವಿಭಾಗದಲ್ಲಿ ಅಂಜೇಲ್ ದೇವಸ್ಯ ಅವರನ್ನು 55 ಸಾವಿರ ರೂ. ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಈ ಮೂವರು ಆಳ್ವಾಸ್ ಕಾಲೇಜಿನ ಕ್ರೀಡಾ ಸಾಧಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.