Cricketer: ವಯಸ್ಸು ತಿರುಚಿದ್ದನ್ನು ಒಪ್ಪಿದ ಅಮಿತ್ ಮಿಶ್ರಾ
Team Udayavani, Jul 17, 2024, 6:17 AM IST
ಹೊಸದಿಲ್ಲಿ: 2003ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆಗ ಅವರಿಗೆ 22 ವರ್ಷ. ಆದರೆ ದಾಖಲೆಯಲ್ಲಿ 21 ವರ್ಷ ಎಂದು ತೋರಿಸಲಾಗಿತ್ತು. ನನ್ನ ಕೋಚ್ ಒಂದು ವರ್ಷ ಕಡಿಮೆ ಮಾಡಲು ನನ್ನನ್ನು ಒಪ್ಪಿಸಿದರು ಎಂದು ಸ್ವತಃ ಮಿಶ್ರಾ ಒಪ್ಪಿಕೊಂಡಿದ್ದಾರೆ.
“ನನ್ನ ವಯಸ್ಸಿನಲ್ಲಿ ಒಂದು ವರ್ಷ ವ್ಯತ್ಯಾಸವಾಗಿದೆ. ಇದಕ್ಕೆ ಸಹಾಯ ಮಾಡಿದ್ದು ನನ್ನ ಕೋಚ್. ಅವರು ನನ್ನನ್ನು ತಮ್ಮ ಮನೆಗೆ ಕರೆದು, ನಿನಗೆ ಇನ್ನೊಂದು ಹೆಚ್ಚುವರಿ ವರ್ಷ ಸಿಗುತ್ತದೆ ಎಂದರು. ನನಗೆ ಅಚ್ಚರಿಯಾಗಿ, ಹೇಗೆ ಎಂದು ಕೇಳಿದೆ. ಇವತ್ತಿನಿಂದ ಒಂದು ವರ್ಷ ಕಿರಿಯನಾಗುತ್ತಿ ಎಂದರು. ಇದಕ್ಕೆ ನಾನು ಒಪ್ಪಿದೆ, ಅದೊಂದು ಭಾವನಾತ್ಮಕ ಕತೆ’ ಎಂದು ಮಿಶ್ರಾ ಸತ್ಯ ಬಿಚ್ಚಿಟ್ಟಿದ್ದಾರೆ.
ಇದಕ್ಕೆ ಕಾರಣವಾಗಿದ್ದು 2024ರ ಲಕ್ನೋ-ಮುಂಬೈ ನಡುವಿನ ಐಪಿಎಲ್ ಪಂದ್ಯ. ಆ ವೇಳೆ ರೋಹಿತ್ ಶರ್ಮ, “ಮಿಶ್ರಾ, ನಿಮಗೆ ನಿಜಕ್ಕೂ 41 ವರ್ಷವೇ?’ ಎಂದು ಕೇಳಿದ್ದರು. ಆಗ ಇಬ್ಬರ ನಡುವೆ ತಮಾಷೆಯ ಮಾತುಕತೆಯಾಗಿತ್ತು. ಈ ವಿಚಾರವನ್ನು ಪ್ರಸ್ತಾವಿಸುವಾಗ ಮಿಶ್ರಾ ತಮ್ಮ ವಯಸ್ಸಿನ ಕತೆಯನ್ನು ಹೇಳಿಕೊಂಡರು.
ಗಂಭೀರ್-ಕೊಹ್ಲಿ ಜಟಾಪಟಿ
2023ರ ಐಪಿಎಲ್‌ನಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಗಲಾಟೆ ಸುದ್ದಿಯಾಗಿತ್ತು. ಈ ಬಗ್ಗೆಯೂ ಅಮಿತ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
“ಇವೆಲ್ಲ ಶುರುವಾಗಿದ್ದು ಲಕ್ನೋ-ಆರ್‌ಸಿಬಿ ನಡುವಿನ ಬೆಂಗಳೂರು ಪಂದ್ಯದ ವೇಳೆ. ಲಕ್ನೋ ಗೆದ್ದಿತ್ತು, ಪ್ರೇಕ್ಷಕರು ಬಹಳ ಗಲಾಟೆ ಮಾಡುತ್ತಿದ್ದರು. ಆಗ ಲಕ್ನೋ ಮೆಂಟರ್ ಗಂಭೀರ್ ಬಾಯಿ ಮೇಲೆ ಬೆರಳಿಟ್ಟು, ಪ್ರೇಕ್ಷಕರಿಗೆ ಸುಮ್ಮನಿರುವಂತೆ ಸೂಚಿಸಿದರು. ಆದರೆ ಅದನ್ನು ಕೊಹ್ಲಿ ಗಂಭೀರವಾಗಿ ತೆಗೆದುಕೊಂಡರು. ಮುಂದೆ ಲಕ್ನೋದಲ್ಲಿ ಎರಡೂ ತಂಡಗಳ ನಡುವೆ ಪಂದ್ಯ ನಡೆದಾಗ, ಕೊಹ್ಲಿ ಲಕ್ನೋದ ಆಟಗಾರರಿಗೆಲ್ಲ ಬೈಯಲು ಆರಂಭಿಸಿದರು. ನಾನು ಕೊಹ್ಲಿಗೆ ಸುಮ್ಮನಿರುವಂತೆ ತಿಳಿಹೇಳಿದರೂ ಕೇಳಲಿಲ್ಲ. ಅಫ್ಘಾನಿಸ್ಥಾನದ ವೇಗಿ ನವೀನ್ ಉಲ್ ಹಕ್ ಅವರಿಗೂ ವಿಪರೀತ ಬೈದರು. ಇದರಿಂದ ಸಿಟ್ಟಾದ ಗಂಭೀರ್ ಮಧ್ಯಪ್ರವೇಶಿಸಿ ಕೊಹ್ಲಿಯನ್ನು ಪ್ರಶ್ನಿಸಿದರು’ ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.