Archery World Cup: ಭಾರತದ ರಿಕರ್ವ್ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ
Team Udayavani, Apr 29, 2024, 12:20 AM IST
ಶಾಂಘೈ: ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿದ ಭಾರತದ ಪುರುಷರ ರಿಕರ್ವ್ ತಂಡ ಐತಿಹಾಸಿಕ ಸಾಧನೆಗೈದಿದೆ. 14 ವರ್ಷಗಳ ಬಳಿಕ ಆರ್ಚರಿ ವಿಶ್ವಕಪ್ ಸ್ಟೇಜ್ ಒಂದರ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದೆ.
ರವಿವಾರದ ಫೈನಲ್‌ನಲ್ಲಿ ಧೀರಜ್ ಬೊಮ್ಮದೇವರ, ತರುಣ್‌ದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಆವರನ್ನೊಳಗೊಂಡ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 5-1 ಅಂತರದ ಗೆಲುವು ಸಾಧಿಸಿತು.
ಭಾರತದ ಪುರುಷರ ರಿಕರ್ವ್ ತಂಡ ಕೊನೆಯ ಸಲ ಸ್ವರ್ಣ ಸಾಧನೆಗೈದದ್ದು 2010ರಲ್ಲಿ. ಅಂದಿನ ವಿಶ್ವಕಪ್ ಸ್ಟೇಜ್ 4 ಹಂತದ ಫೈನಲ್‌ನಲ್ಲಿ ಜಪಾನ್ ವಿರುದ್ಧ ಜಯ ಸಾಧಿಸಿತ್ತು. ವಿಶೇಷವೆಂದರೆ, 40 ವರ್ಷದ ಆರ್ಮಿಮ್ಯಾನ್ ತರುಣ್‌ದೀಪ್ ರಾಯ್ ಅಂದಿನ ವಿಜೇತ ತಂಡದಲ್ಲೂ ಇದ್ದರು! ಭಾರತದ 2010ರ ಸ್ವರ್ಣವಿಜೇತ ತಂಡದ ಇತರ ಸದಸ್ಯರೆಂದರೆ ರಾಹುಲ್ ಬ್ಯಾನರ್ಜಿ ಮತ್ತ ಜಯಂತ್.
ರಿಕರ್ವ್ ಮಿಶ್ರ ತಂಡ ವಿಭಾಗದಲ್ಲೂ ಭಾರತಕ್ಕೆ ಯಶಸ್ಸು ಒಲಿಯಿತು. ಅಂಕಿತಾ ಭಕತ್-ಧೀರಜ್ ಸೇರಿಕೊಂಡು ಮೆಕ್ಸಿಕೋದ ಅಲೆಕ್ಸಾಂಡ್ರಾ ವಲೆನ್ಸಿಯಾ-ಮಥಿಯಾಸ್ ಗ್ರಾಂಡೆ ಜೋಡಿಗೆ 6-0 ಅಂತರದ ಸೋಲುಣಿಸಿದರು.
ದೀಪಿಕಾಗೆ ಬೆಳ್ಳಿ
ವನಿತೆಯರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ದೀಪಿಕಾ ಕುಮಾರಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. 2022ರ ಡಿಸೆಂಬರ್‌ನಲ್ಲಿ ತಾಯಿಯಾದ ದೀಪಿಕಾ ಕುಮಾರಿ 2023ರಲ್ಲಿ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ಇದೀಗ ಪದಕ ಬೇಟೆಯನ್ನು ಪುನರಾರಂಭಿಸಿದ್ದಾರೆ. ಫೈನಲ್‌ನಲ್ಲಿ ದೀಪಿಕಾ ಹ್ಯಾಂಗ್‌ಝೂ ಏಷ್ಯಾಡ್ ಚಾಂಪಿಯನ್ ಲಿಮ್ ಸಿಯೋನ್ ವಿರುದ್ಧ ಪರಾಭವಗೊಂಡರು.
ಈ ಸಾಧನೆಯೊಂದಿಗೆ ಭಾರತ ಒಟ್ಟು 8 ಪದಕಗಳನ್ನು ಗೆದ್ದಂತಾಯಿತು. ಇದರಲ್ಲಿ 5 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚು ಸೇರಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.