ಏಷ್ಯಾ ಕಪ್ ಹಾಕಿ: ಭಾರತಕ್ಕೆ ಕಂಚಿನ ಪದಕ; ದಕ್ಷಿಣ ಕೊರಿಯಾ ಚಾಂಪಿಯನ್
Team Udayavani, Jun 1, 2022, 11:59 PM IST
ಜಕಾರ್ತಾ: ಜಪಾನ್ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್ ಭಾರತ, ಈ ಬಾರಿಯ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ.
ದಕ್ಷಿಣ ಕೊರಿಯಾ ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ಮಲೇಷ್ಯಾವನ್ನು ಪರಾ ಭವಗೊಳಿಸಿತು.
ದಕ್ಷಿಣ ಕೊರಿಯಾ ಎದುರಿನ ಸೂಪರ್-4 ಹಂತದ ನಿರ್ಣಾಯಕ ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾದ ಭಾರತ ಫೈನಲ್ ಪ್ರವೇಶದಿಂದ ವಂಚಿತವಾಗಿತ್ತು.
ಬುಧವಾರದ ಪ್ಲೇ ಆಫ್ ಪಂದ್ಯದಲ್ಲಿ ಜಪಾನ್‌ಗೆ ಆಘಾತವಿಕ್ಕಿತು.
ಇದು ಪ್ರಸಕ್ತ ಕೂಟದಲ್ಲಿ ಜಪಾನ್ ವಿರುದ್ಧ ಭಾರತಕ್ಕೆ ಒಲಿದ ಸತತ ಎರಡನೇ ಗೆಲುವು. ಲೀಗ್ ಹಂತದಲ್ಲಿ ಜಪಾನ್ ಭಾರತವನ್ನು ಮಣಿಸಿತ್ತು.
ರಾಜ್‌ಕುಮಾರ್ ಗೋಲ್
ಪಂದ್ಯದ 7ನೇ ನಿಮಿಷದಲ್ಲಿ ರಾಜ್‌ಕುಮಾರ್ ಫೀಲ್ಡ್‌ಗೋಲ್ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದರು. ಉತ್ತಮ್ ಕುಮಾರ್ ಅವರಿಂದ ಪಾಸ್ ಪಡೆದ ರಾಜ್‌ಕುಮಾರ್, ಜಪಾನಿ ಗೋಲ್‌ಕೀಪರ್ ತಕಾಶಿ ಯೊಶಿಕಾವ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಈ ಮುನ್ನಡೆಯನ್ನು ಭಾರತ ಕೊನೆಯ ತನಕವೂ ಕಾಯ್ದುಕೊಂಡು ಬಂತು.
ರಾಜ್‌ಕುಮಾರ್ ಗೋಲು ಬಾರಿಸಿದ ಮೂರೇ ನಿಮಿಷದಲ್ಲಿ ಭಾರತಕ್ಕೆ 2 ಪೆನಾಲ್ಟಿ ಕಾರ್ನರ್ ಅವಕಾಶ ಸಿಕ್ಕಿತು. ಆದರೆ ಇದನ್ನು ಗೋಲಾಗಿಸುವಲ್ಲಿ ವಿಫಲವಾಯಿತು.
ಗೋಲ್ ಆಘಾತಕ್ಕೆ ಸಿಲುಕಿದ ಬಳಿಕ ಜಪಾನ್ ಹೆಚ್ಚು ಆಕ್ರಮಣಕಾರಿ ಪ್ರದರ್ಶನ ನೀಡಿತು. 20ನೇ ನಿಮಿಷದಲ್ಲಿ ಅವರಿಗೂ 2 ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಗೋಲಾಗಿಸಲು ಸಾಧ್ಯವಾಗಲಿಲ್ಲ.ವಿರಾಮದ ಬಳಿಕ ಜಪಾನ್ ಪಡೆ ಭಾರತದ ಮೇಲೆ ಸತತವಾಗಿ ಒತ್ತಡ ಹೇರುತ್ತ ಹೋಯಿತು.
ಪಂದ್ಯವನ್ನು ಸಮಬಲಕ್ಕೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಭಾರತದ ರಕ್ಷಣಾ ವಿಭಾಗ ಬಲಿಷ್ಠವಾಗಿ ಗೋಚರಿಸಿತು. ಬೀರೇಂದ್ರ ಲಾಕ್ರಾ ಬಂಡೆಯಂತೆ ನಿಂತು ಭಾರತವನ್ನು ರಕ್ಷಿಸಿದರು. ಇದೇ ರೀತಿ 51ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವನ್ನೂ ತಡೆದು ನಿಲ್ಲಿಸಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.