ವಿನೇಶ್ ವಿಕ್ರಮ ಸ್ವರ್ಣ ಸಂಭ್ರಮ
Team Udayavani, Aug 21, 2018, 6:00 AM IST
ಜಕಾರ್ತಾ: ಹರ್ಯಾಣದ 23ರ ಹರೆಯದ ಕುಸ್ತಿಪಟು ವಿನೇಶ್ ಪೋಗಟ್ ನೂತನ ಇತಿಹಾಸ ಬರೆದಿದ್ದಾರೆ. ಏಶ್ಯಾಡ್ ವನಿತಾ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಸಾಧಕಿಯಾಗಿ ಮೂಡಿಬಂದಿದ್ದಾರೆ. ಸೋಮವಾರ ನಡೆದ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯ ಫೈನಲ್‌ನಲ್ಲಿ ಅವರು ಜಪಾನಿನ ಯುಕಿ ಐರಿ ವಿರುದ್ಧ 6-2 ಅಂತರದ ಜಯಭೇರಿ ಮೊಳಗಿಸಿದರು.
ಇದರೊಂದಿಗೆ ಜಕಾರ್ತಾ ಏಶ್ಯಾಡ್‌ನಲ್ಲಿ ಭಾರತದ ಈವರೆಗಿನ ಎರಡೂ ಸ್ವರ್ಣ ಪದಕಗಳು ಕುಸ್ತಿ ಸ್ಪರ್ಧೆಯಲ್ಲೇ ಲಭಿಸಿದಂತಾಯಿತು. ರವಿವಾರ ಭಜರಂಗ್ ಪೂನಿಯ ಬಂಗಾರದೊಂದಿಗೆ ಮಿನುಗಿದ್ದರು.
ವಿನೇಶ್ ಪ್ರಚಂಡ ಆರಂಭ
ವಿನೇಶ್ ಪೋಗಟ್ ಅವರ ಶ್ರೇಷ್ಠ ಸಾಧನೆ ದಾಖಲಾದದ್ದು ಸೆಮಿಫೈನಲ್‌ನಲ್ಲಿ. ಉಜ್ಬೆಕಿಸ್ಥಾನದ ದೌಲೆತ್‌ಬಿಕೆ ಯಕ್ಷಿಮುರತೋವಾ ವಿರುದ್ಧದ ಈ ಪಂದ್ಯವನ್ನು ವಿನೇಶ್ ಕೇವಲ 75 ಸೆಕೆಂಡ್‌ಗಳಲ್ಲಿ ಗೆದ್ದರು.
ಚೀನದ ಯಾನನ್ ಸುನ್ ಅವರನ್ನು 8-2 ಅಂತರದಿಂದ ಮಣಿಸುವ ಮೂಲಕ ವಿನೇಶ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. 2 ವರ್ಷಗಳ ಹಿಂದಿನ ರಿಯೋ ಒಲಿಂಪಿಕ್ಸ್‌ನಲ್ಲಿ ಸುನ್ ವಿರುದ್ಧವೇ ವಿನೇಶ್ ಆಘಾತಕಾರಿ ಸೋಲನುಭವಿಸಿದ್ದರು. ಪಂದ್ಯದ ವೇಳೆ ಕಾಲಿನ ಗಂಭೀರ ನೋವಿಗೆ ಸಿಲುಕಿ ಸುದೀರ್ಘ ವಿಶ್ರಾಂತಿ ಪಡೆಯುವಂತಾಗಿತ್ತು. ಈ ಎಲ್ಲ ನೋವನ್ನು ಸೋಮವಾರದ ಗೆಲುವಿನ ಮೂಲಕ ಮರೆತರು. ಕ್ವಾರ್ಟರ್ ಫೈನಲ್‌ನಲ್ಲಿ ವಿನೇಶ್ ದಕ್ಷಿಣ ಕೊರಿಯಾದ ಹ್ಯುಂಗ್‌ಜೂ ಕಿಮ್ ಅವರನ್ನು 11-0 ಅಂತರದಿಂದ ಬಗ್ಗುಬಡಿದರು.
ಇದು ಜಾಗತಿಕ ಸ್ಪರ್ಧೆಗಳಲ್ಲಿ ವಿನೇಶ್ ಜಯಿಸಿದ 3ನೇ ಸ್ವರ್ಣ ಪದಕ. ಕಳೆದೆರಡೂ ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಅವರು ಬಂಗಾರದೊಂದಿಗೆ ಸಿಂಗಾರಗೊಂಡಿದ್ದರು (48 ಕೆಜಿ ಹಾಗೂ 50 ಕೆಜಿ ವಿಭಾಗ).
ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 4 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದ ಹಿರಿಮೆಯೂ ವಿನೇಶ್ ಅವರದ್ದಾಗಿದೆ.
ಸಾಕ್ಷಿ, ಪಿಂಕಿ, ಪೂಜಾ ವಿಫಲ
ವನಿತಾ ಕುಸ್ತಿಯಲ್ಲಿ ಭಾರತದ ಉಳಿದ ಸ್ಪರ್ಧಿಗಳು ನಿರಾಸೆ ಮೂಡಿಸಿದರು. 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪಿಂಕಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು. ಪೂಜಾ ಧಂಡಾ (57 ಕೆಜಿ) ಸೆಮಿಯಲ್ಲಿ ಸೋತು ಕಂಚಿನ ಸ್ಪರ್ಧೆಯಲ್ಲೂ ಎಡವಿದರು. ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಸಾಕ್ಷಿ ಮಲಿಕ್ (62 ಕೆಜಿ) ಕಂಚಿನ ಸ್ಪರ್ಧೆಯಲ್ಲಿ ಉ. ಕೊರಿಯಾದ ರಿಮ್ ಜಾಂಗ್ ಸಿಮ್ ವಿರುದ್ಧ 12-2 ಆಘಾತಕಾರಿ ಸೋಲುಂಡರು.
ಸುಮಿತ್ ಮಲಿಕ್ ಪರಾಭವ
ಪುರುಷರ ವಿಭಾಗದ ಕೊನೆಯ ಫ್ರೀಸ್ಟೈಲ್ ಸ್ಪರ್ಧಿಯಾಗಿದ್ದ ಸುಮಿತ್ ಮಲಿಕ್ ಮೊದಲ ಸುತ್ತಿನಲ್ಲೇ ಇರಾನಿನ ಪರ್ವಿಜ್ ಹದಿಬಸ್ಮಾಂಜ್ ವಿರುದ್ಧ ಸೋತು ಹೊರಬಿದ್ದರು.
“ದಂಗಲ್’ ಚಿತ್ರದ ಮುಖ್ಯ ಭೂಮಿಕೆ ಯಲ್ಲಿದ್ದ “ಪೋಗಟ್ ಕುಟುಂಬ’ದ ಸದಸ್ಯೆಯಾದ ವಿನೇಶ್ ಪೋಗಟ್, ಸತತ 2 ಏಶ್ಯನ್ ಗೇಮ್ಸ್‌ಗಳಲ್ಲಿ 2 ಪದಕ ಗೆದ್ದ ಭಾರತದ ಮೊದಲ ವನಿತಾ ಕುಸ್ತಿಪಟು ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. 2014ರ ಏಶ್ಯಾಡ್‌ನ 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿನೇಶ್ ಕಂಚು ಜಯಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.