ಜ್ವೆರೇವ್‌ಗೆ ಸೋಲು ಫೆಡರರ್ ಅಂತಿಮ ನಾಲ್ಕರ ಸುತ್ತಿಗೆ
Team Udayavani, Nov 16, 2017, 6:20 AM IST
ಲಂಡನ್: ಯುವ ಪ್ರತಿಸ್ಪರ್ಧಿ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಮೂರು ಸೆಟ್‌ಗಳ ಸೆಣಸಾಟದಲ್ಲಿ ಮಣಿಸಿದ ರೋಜರ್ ಫೆಡರರ್ ಎಟಿಪಿ ಫೈನಲ್ಸ್‌ನ ಅಂತಿಮ ನಾಲ್ಕರ ಸುತ್ತಿಗೇರಿದ್ದಾರೆ. ಈ ಮೂಲಕ ವರ್ಷಾಂತ್ಯದ ಏಳನೇ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಂಡಿದ್ದಾರೆ.
ವಿಶ್ವದ ಎರಡನೇ ರ್‍ಯಾಂಕಿನ ಫೆಡರರ್ ಅವರು ಜರ್ಮನಿಯ ಜ್ವೆರೇವ್ ಅವರನ್ನು 7-6 (8-6), 5-7, 6-1 ಸೆಟ್‌ಗಳಿಂದ ಉರುಳಿಸಿ ಅಂತಿಮ ನಾಲ್ಕರ ಸುತ್ತಿಗೇರಿದ್ದಾರೆ.
ಇದೊಂದು ಅತ್ಯುತ್ತಮ ಹೋರಾಟವಾಗಿತ್ತು ಮತ್ತು ಇಲ್ಲಿನ ಸುಂದರ ಮೈದಾನದಲ್ಲಿ ಅಭಿಮಾನಿಗಳ ಭರ್ಜರಿ ಬೆಂಬಲದಿಂದ ನಾನು ಈ ಪಂದ್ಯವನ್ನು ಆನಂದಿಸಿ ಆಡಿದೆ ಎಂದು ಫೆಡರರ್ ಹೇಳಿದರು. ಅವರು 14ನೇ ಬಾರಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಮರಿನ್ ಸಿಲಿಕ್ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಇನ್ನೊಂದು ಬಣದಲ್ಲಿ ಜ್ಯಾಕ್ ಸಾಕ್ ಅವರು ವಿಂಬಲ್ಡನ್ ಫೈನಲಿಸ್ಟ್ ಮರಿನ್ ಸಿಲಿಕ್ ಅವರನ್ನು 5-7, 6-2, 7-6 (7-4 ) ಸೆಟ್‌ಗಳಿಂದ ಕೆಡಹಿ ಸುದ್ದಿ ಮಾಡಿದ್ದಾರೆ.ಪ್ರತಿ ಬಣದ ಇಬ್ಬರು ಆಟಗಾರರು ಸೆಮಿಫೈನಲ್ ತಲುಪಲಿದ್ದಾರೆ. ಗಾಯದ ಸಮಸ್ಯೆಯಿಂದ ರಫೆಲ್ ನಡಾಲ್ ಈ ಕೂಟದಿಂದ ಹಿಂದೆ ಸರಿದಿದ್ದರೆ ನೋವಾಕ್ ಜೋಕೋವಿಕ್, ಆ್ಯಂಡಿ ಮರ್ರೆ ಮತ್ತು ಸ್ಟಾನ್ ವಾವ್ರಿಂಕ ಈ ಕೂಟದಲ್ಲಿ ಆಡುತ್ತಿಲ್ಲ.