ಅತ್ತಪಟ್ಟು ಶತಕಕ್ಕೆ ಲ್ಯಾನಿಂಗ್ ಪೆಟ್ಟು
Team Udayavani, Jul 1, 2017, 3:45 AM IST
ಬ್ರಿಸ್ಟಲ್: ಶ್ರೀಲಂಕಾದ ಚಾಮರಿ ಅತ್ತಪಟ್ಟು ಬಾರಿಸಿದ ಅಜೇಯ 178 ರನ್ ವ್ಯರ್ಥವಾಗಿದೆ. ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 152 ರನ್ ಸಾಹಸದ ಮೂಲಕ ಶ್ರೀಲಂಕಾ ಮೊತ್ತವನ್ನು ಹಿಂದಿಕ್ಕಿ 8 ವಿಕೆಟ್ ಅಂತರದ ಭರ್ಜರಿ ಜಯಭೇರಿಗೆ ಕಾರಣರಾಗಿದ್ದಾರೆ. ಹೀಗೆ ಇವರಿಬ್ಬರ ಮೇಲಾಟಕ್ಕೆ ಕಾರಣವಾದದ್ದು ಬ್ರಿಸ್ಟಲ್‌ನಲ್ಲಿ ಗುರುವಾರ ನಡೆದ ವನಿತಾ ವಿಶ್ವಕಪ್ ಕ್ರಿಕೆಟ್ ಮುಖಾಮುಖೀ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಚಾಮರಿ ಅತ್ತಪಟ್ಟು ಅವರ ಏಕಾಂಗಿ ಹೋರಾಟದ ಫಲದಿಂದ 9 ವಿಕೆಟಿಗೆ 257 ರನ್ ಬಾರಿಸಿ ಸವಾಲೊಡ್ಡಿತು. ಆದರೆ ಬಲಿಷ್ಠ ಆಸ್ಟ್ರೇಲಿಯಕ್ಕೆ ಇದೊಂದು ಸವಾಲೇ ಎನಿಸಲಿಲ್ಲ. ಅದು 43.5 ಓವರ್‌ಗಳಲ್ಲಿ ಕೇವಲ ಎರಡೇ ವಿಕೆಟಿಗೆ 262 ರನ್ ಬಾರಿಸಿ ಗೆದ್ದು ಬಂದಿತು.
ಇದು ಶ್ರೀಲಂಕಾ ಏಕದಿನ ಕ್ರಿಕೆಟಿನ 2ನೇ ಸರ್ವಾಧಿಕ ಗಳಿಕೆ. 2013ರ ವಿಶ್ವಕಪ್ ಪಂದ್ಯಾವಳಿಯ ಮುಂಬಯಿ ಮುಖಾಮುಖೀಯಲ್ಲಿ ಭಾರತದ ವಿರುದ್ಧ 5ಕ್ಕೆ 282 ರನ್ ಬಾರಿಸಿದ್ದು ಲಂಕೆಯ ದಾಖಲೆಯಾಗಿದೆ. ಹಾಗೆಯೇ 1973ರ ಬಳಿಕ ವನಿತಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ತಂಡವೊಂದು ಪೇರಿಸಿದ ಅತ್ಯಧಿಕ ಮೊತ್ತವೂ ಇದಾಗಿದೆ. ಅಂದು ಎಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ 3ಕ್ಕೆ 279 ರನ್ ಬಾರಿಸಿತ್ತು.
ದಾಖಲೆಗಳ ಸರಮಾಲೆ
ಚಾಮರಿ ಮತ್ತು ಲ್ಯಾನಿಂಗ್ ಅವರ ಬ್ಯಾಟಿಂಗ್ ಮೇಲಾಟಕ್ಕೆ ಕಾರಣವಾದ ಈ ಪಂದ್ಯ ಅನೇಕ ದಾಖಲೆಗಳನ್ನು ಸೃಷ್ಟಿಸಿತು. ಇದರಲ್ಲಿ ಪ್ರಮುಖವಾದುದೆಂದರೆ, 1,062 ಪಂದ್ಯಗಳ ವನಿತಾ ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡೂ ತಂಡಗಳ ಆಟಗಾರ್ತಿಯರು 150 ಪ್ಲಸ್ ರನ್ ಬಾರಿಸಿದ್ದು. ಚಾಮರಿ ಇನ್ನಿಂಗ್ಸ್ 143 ಎಸೆತಗಳಿಂದ ದಾಖಲಾಯಿತು. ಸಿಡಿಸಿದ್ದು 22 ಬೌಂಡರಿ ಹಾಗೂ 6 ಸಿಕ್ಸರ್. ಲ್ಯಾನಿಂಗ್ 135 ಎಸೆತ ನಿಭಾಯಿಸಿ 152 ರನ್ ಬಾರಿಸಿದರು. ಇದರಲ್ಲಿ 19 ಬೌಂಡರಿ, ಒಂದು ಸಿಕ್ಸರ್ ಸೇರಿತ್ತು.
ಚಾಮರಿ ಅತ್ತಪಟ್ಟು ವನಿತಾ ಏಕದಿನದಲ್ಲಿ 3ನೇ ಹಾಗೂ ವಿಶ್ವಕಪ್‌ನಲ್ಲಿ 2ನೇ ಗರಿಷ್ಠ ಮೊತ್ತ ದಾಖಲಿಸಿದರು. ಡೆನ್ಮಾರ್ಕ್ ಎದುರಿನ 1997ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಬೆಲಿಂಡಾ ಕ್ಲಾರ್ಕ್ 229 ರನ್ ಬಾರಿಸಿದ್ದು ವಿಶ್ವದಾಖಲೆ. ಕಳೆದ ತಿಂಗಳು ಅಯರ್‌ಲ್ಯಾಂಡ್ ವಿರುದ್ಧ 188 ರನ್ ಸೂರೆಗೈದ ಭಾರತದ ದೀಪ್ತಿ ಶರ್ಮ ಅವರಿಗೆ ದ್ವಿತೀಯ ಸ್ಥಾನ.
ಚಾಮರಿ ಅತ್ತಪಟ್ಟು ತಂಡದ ಒಟ್ಟು ಮೊತ್ತದ ಶೇ. 69.26ರಷ್ಟು ರನ್ನನ್ನು ಒಬ್ಬರೇ ಗಳಿಸುವ ಮೂಲಕ ದಾಖಲೆ ಬರೆದರು. ಭಾರತದೆದುರಿನ 1982ರ ಪಂದ್ಯದಲ್ಲಿ ಇಂಟರ್‌ನ್ಯಾಶನಲ್ ಇಲೆವೆನ್ ತಂಡದ ಲಿನ್ನೆ ಥಾಮಸ್ ಶೇ. 61.94ರಷ್ಟು ರನ್ ಗಳಿಸಿದ ದಾಖಲೆ ಪತನಗೊಂಡಿತು.
ಚಾಮರಿ ಅತ್ತಪಟ್ಟು 124 ರನ್ನುಗಳನ್ನು ಬೌಂಡರಿ/ಸಿಕ್ಸರ್ ಹೊಡೆತಗಳ ಮೂಲಕವೇ ಸೂರೆಗೈದರು. ಇದು ಕೂಡ ದಾಖಲೆಯಾಗಿದೆ. ಅಯರ್‌ಲ್ಯಾಂಡ್ ವಿರುದ್ಧ ದೀಪ್ತಿ ಶರ್ಮ 188 ರನ್ ದಾಖಲಿಸುವ ವೇಳೆ 120 ರನ್ನುಗಳನ್ನು ಬೌಂಡರಿ/ಸಿಕ್ಸರ್ ಹೊಡೆತಗಳ ಮೂಲಕ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.
ಇದು ಚಾಮರಿ ಅತ್ತಪಟ್ಟು ಬಾರಿಸಿದ 3ನೇ ಶತಕ. ಉಳಿದಂತೆ ಶ್ರೀಲಂಕಾದ ಆಟಗಾರ್ತಿಯರ್ಯಾರೂ ಈವರೆಗೆ ಏಕದಿನದಲ್ಲಿ ಶತಕ ಹೊಡೆದಿಲ್ಲ. ಚಾಮರಿ ಒಮ್ಮೆ 99 ರನ್ ಕೂಡ ಮಾಡಿದ್ದರು.
ಶುಕ್ರವಾರ ಮತ್ತು ಶನಿವಾರ ವನಿತಾ ವಿಶ್ವಕಪ್ ಪಂದ್ಯಾವಳಿಗೆ ವಿರಾಮ. ರವಿವಾರದಂದು ಒಮ್ಮೆಲೇ 4 ಪಂದ್ಯಗಳು ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
INDvsENG: ಯುಜಿ ಚಾಹಲ್ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಅರ್ಶದೀಪ್ ಸಿಂಗ್
Ranaji Trophy: ಇಂದಿನಿಂದ ಕರ್ನಾಟಕ-ಪಂಜಾಬ್ ರಣಜಿ
Champions Trophy: ಜೆರ್ಸಿಯಲ್ಲಿ ಪಾಕ್ ಹೆಸರು ಹಾಕಲು ಬಿಸಿಸಿಐ ಒಪ್ಪಿಗೆ
Australian Open: ಸಿನ್ನರ್‌ಗೆ ಬೆನ್ ಶೆಲ್ಟನ್ ಸವಾಲು
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ