ICC Under 19 World Cup; ಈ ಸಲ ಹಿರಿಯರಂತೆ ಕಿರಿಯರಿಗೂ ಕಪ್ ಭಾಗ್ಯವಿಲ್ಲ
ಪ್ರಾಬಲ್ಯ ಮೆರೆದ ಆಸ್ಟ್ರೇಲಿಯ... 6ನೇ ಬಾರಿ ಕಪ್ ಗೆಲ್ಲಬೇಕೆಂಬ ಕನಸು ನುಚ್ಚುನೂರು
Team Udayavani, Feb 11, 2024, 8:56 PM IST
ಬೆನೋನಿ (ದಕ್ಷಿಣ ಆಫ್ರಿಕಾ): ಇಲ್ಲಿ ರವಿವಾರ ನಡೆದ ಆಂಡರ್-19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಸೋಲಿನ ಶಾಕ್ ನೀಡಿದ ಆಸ್ಟ್ರೇಲಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಅಮೋಘ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿದ ಆಸೀಸ್ ಆಟಗಾರರು 79 ರನ್ ಗಳ ಅಮೋಘ ಜಯ ಸಾಧಿಸಿ 4 ನೇ ಬಾರಿ ಆಂಡರ್-19 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡರು. ಅಜೇಯ ಯಾತ್ರೆಯ ಮೂಲಕ ಫೈನಲ್ ಗೆ ಬಂದಿದ್ದ ಕಿರಿಯರ 6ನೇ ಬಾರಿ ಕಪ್ ಗೆಲ್ಲಬೇಕೆಂಬ ಕನಸು ನುಚ್ಚುನೂರಾಯಿತು.
ಭಾರತದ ಹಿರಿಯರ ತಂಡ ಆಸ್ಟ್ರೇಲಿಯ ವಿರುದ್ಧ ಆಡಿದ ಕಳೆದೆರಡೂ ಐಸಿಸಿ ಕೂಟದ ಫೈನಲ್ ಪಂದ್ಯಗಳಲ್ಲಿ ಆಘಾತಕಾರಿ ಸೋಲನುಭವಿಸಿ ಮುಖಭಂಗ ಅನುಭವಿಸಿದಂತೆ ಇಂದೂ ಭಾರತೀಯರಿಗೆ ನಿರಾಸೆ ಅನುಭವಿಸಬೇಕಾಯಿತು.
ಆಸ್ಟ್ರೇಲಿಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.50 ಓವರ್ ಗಳಲ್ಲಿ7 ವಿಕೆಟ್ ಗಳನ್ನು ಕಳೆದುಕೊಂಡು 253 ರನ್ ಗಳಿಸಿತು. ಆರಂಭಿಕ ಆಟಾಗಾರ ಸ್ಯಾಮ್ ಕಾನ್ಸ್ಟಾಸ್ ಶೂನ್ಯಕ್ಕೆ ಔಟಾದರು. ಆಬಳಿಕ ಉತ್ತಮ ಆಟವಾಡಿದ ಹ್ಯಾರಿ ಡಿಕ್ಸನ್ 42ರನ್, ನಾಯಕ ಹಗ್ ವೈಬ್ಜೆನ್ 48 ರನ್ ಗಳಿಸಿ ಔಟಾದರು. ಹರ್ಜಸ್ ಸಿಂಗ್ 55 , ರಯಾನ್ ಹಿಕ್ಸ್ 20, ಆಲಿವರ್ ಪೀಕ್ ಔಟಾಗದೆ 46 ರನ್, ರಾಫ್ ಮ್ಯಾಕ್‌ಮಿಲನ್ 2, ಚಾರ್ಲಿ ಆಂಡರ್ಸನ್ 13, ಟಾಮ್ ಸ್ಟ್ರೇಕರ್ ಔಟಾಗದೆ 8 ರನ್ ಗಳಿಸಿದರು. ರಾಜ್ ಲಿಂಬಾನಿ 3 ವಿಕೆಟ್, ನಮನ್ ತಿವಾರಿ 2 ವಿಕೆಟ್, ಸೌಮಿ ಪಾಂಡೆ ಮತ್ತು ಮುಶೀರ್ ಖಾನ್ ತಲಾ ಒಂದು ವಿಕೆಟ್ ಪಡೆದರು.
254 ರನ್ ಗುರಿ ಬೆನ್ನಟ್ಟಿದ ಭಾರತ ಆಸೀಸ್ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ 43.5 ಓವರ್ ಗಳಲ್ಲಿ 174 ರನ್ ಗಳಿಗೆ ಆಲೌಟಾಯಿತು. 3 ರನ್ ಆಗುವಷ್ಟರಲ್ಲಿ ಅರ್ಶಿನ್ ಕುಲಕರ್ಣಿ ಅವರ ವಿಕೆಟ್ ಕಳೆದುಕೊಂಡಿತು. ತಾಳ್ಮೆಯ ಆಟವಾಡಿದ ಆದರ್ಶ್ ಸಿಂಗ್ 47 ರನ್ ಗಳಿಸಿದ್ದ ವೇಳೆ ಔಟಾದರು. ಭರವಸೆ ಮೂಡಿಸಿದ್ದ ಮುಶೀರ್ ಖಾನ್ 22 ರನ್ ಗಳಿಗೆ ನಿರ್ಗಮಿಸಿದರು. ನಾಯಕ ಉದಯ್ ಸಹರಣ್ 8, ಸಚಿನ್ ದಾಸ್ 9, ಪ್ರಿಯಾಂಶು ಮೊಲಿಯಾ 9 ಹೀಗೆ ಒಬ್ಬರಾದ ಮೇಲೆ ಒಬ್ಬರ ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿ ಪರದಾಡಿತು. ಕೊನೆಯಲ್ಲಿ ಮುರುಗನ್ ಅಭಿಷೇಕ್ 42 ರನ್ ಗಳಿಸಿ ಔಟಾದರು. ನಿರೀಕ್ಷೆ ಮೀರಿದ ಆಟವಾಡಿದ ಅವರು ಸೋಲಿನ ಅಂತರ ತಗ್ಗಿಸಿದರು.ನಮನ್ ತಿವಾರಿ ಔಟಾಗದೆ 14 ರನ್ ಗಳಿಸಿದರು.
ಆಸೀಸ್ ಪರ ಬಿಗಿ ದಾಳಿ ನಡೆಸಿದ ಮಾಹ್ಲಿ ಬಿಯರ್ಡ್ಮನ್ 3 , ಮ್ಯಾಕ್‌ಮಿಲನ್ 3, ಕ್ಯಾಲಮ್ ವಿಡ್ಲರ್ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.