ಮುಗುರುಜಾ ಔಟ್; ಕೆರ್ಬರ್-ಶರಪೋವಾ ಫೈಟ್
Team Udayavani, Jan 19, 2018, 12:18 PM IST
ಮೆಲ್ಬರ್ನ್: ವಿಂಬಲ್ಡನ್ ಚಾಂಪಿಯನ್ ಗಾರ್ಬಿನ್ ಮುಗುರುಜಾ ಅವರ ಆಸ್ಟ್ರೇಲಿಯನ್ ಓಪನ್ ಗೆಲುವಿನ ಕನಸು ದ್ವಿತೀಯ ಸುತ್ತಿನಲ್ಲೇ ಛಿದ್ರಗೊಂಡಿದೆ. ಗುರುವಾರದ ಮೇಲಾಟದಲ್ಲಿ ಥೈವಾನಿನ ಶೀ ಸು ವೀ 7-6 (7-1), 6-4 ನೇರ ಸೆಟ್‌ಗಳಿಂದ ಮುಗುರುಜಾ ಆಟಕ್ಕೆ ತೆರೆ ಎಳೆದರು. ಶೀ ಸು ವೀ ಜತೆಗೆ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಸಿಮೋನಾ ಹಾಲೆಪ್, ಮಾಜಿ ಚಾಂಪಿಯನ್‌ಗಳಾದ ಆ್ಯಂಜೆಲಿಕ್ ಕೆರ್ಬರ್ ಮತ್ತು ಮರಿಯಾ ಶರಪೋವಾ ವನಿತಾ ಸಿಂಗಲ್ಸ್ ವಿಭಾಗದಿಂದ ಮೂರನೇ ಸುತ್ತಿಗೇರಿದ್ದಾರೆ.
32ರ ಹರೆಯದ ಶೀ ಸು ವೀ ಒಂದು ಗಂಟೆ, 59 ನಿಮಿಷಗಳ ಕಾದಾಟದ ಬಳಿಕ ತಮ್ಮ ಟೆನಿಸ್ ಬಾಳ್ವೆಯ ಮಹಾನ್ ವಿಜಯವೊಂದನ್ನು ಸಾಧಿಸಿದರು. ಅವರಿನ್ನು ಪೋಲೆಂಡಿನ ಅಗ್ನಿàಸ್ಕಾ ರಾದ್ವಂಸ್ಕಾ ಸವಾಲನ್ನು ಎದುರಿಸಬೇಕಿದೆ. ಇಲ್ಲಿ ಗೆದ್ದರೆ ಈ ಥಾಯ್ ಆಟಗಾರ್ತಿ 2ನೇ ಸಲ ಆಸ್ಟ್ರೇಲಿಯನ್ ಓಪನ್ 4ನೇ ಸುತ್ತು ಪ್ರವೇಶಿಸಿದಂತಾಗುತ್ತದೆ. ಸರಿಯಾಗಿ 10 ವರ್ಷಗಳ ಹಿಂದೆ ಅವರಿಲ್ಲಿ 4ನೇ ಸುತ್ತಿಗೆ ಬಂದಿದ್ದರು. ಇದು ಸು ವೀ ಅವರ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್ ಸಾಧನೆಯಾಗಿ ಉಳಿದಿದೆ. ರಾದ್ವಂಸ್ಕಾ 2-6, 7-5, 6-3 ಅಂತರದಿಂದ ಉಕ್ರೇನಿನ ಲೆಸಿಯಾ ಸುರೆಂಕೊ ಅವರಿಗೆ ಸೋಲುಣಿಸಿದರು.
ಉಳಿದದ್ದು ಇಬ್ಬರೇ ಮಾಜಿಗಳು!
ಇದೇ ವೇಳೆ ಮಾಜಿ ಚಾಂಪಿಯನ್‌ಗಳಾದ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಮತ್ತು ರಷ್ಯಾದ ಮರಿಯಾ ಶರಪೋವಾ 3ನೇ ಸುತ್ತಿನಲ್ಲಿ ಪರಸ್ಪರ ಸೆಣಸಲಿದ್ದಾರೆ. ಕೆರ್ಬರ್ 2 ವರ್ಷಗಳ ಹಿಂದೆ ಮೆಲ್ಬರ್ನ್ನಲ್ಲಿ ಕಿರೀಟ ಏರಿಸಿಕೊಂಡಿದ್ದರು. ಶರಪೋವಾ ಒಂದು ದಶಕದ ಹಿಂದೆ (2008) ಪ್ರಶಸ್ತಿಗೆ ಭಾಜನರಾಗಿದ್ದರು. ಸದ್ಯ ಈ ಕೂಟದಲ್ಲಿ ಉಳಿದಿರುವ ಆಸ್ಟ್ರೇಲಿಯನ್ ಓಪನ್ ಮಾಜಿ ಚಾಂಪಿಯನ್‌ಗಳೆಂದರೆ ಇವರಿಬ್ಬರು ಮಾತ್ರ. ಕೆರ್ಬರ್ 2016ರ ಮೆಲ್ಬರ್ನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಆಘಾತವಿಕ್ಕಿ, ಸ್ಟೆಫಿ ಗ್ರಾಫ್ ಬಳಿಕ (1999) ಬಳಿಕ ಆಸ್ಟ್ರೇಲಿಯನ್ ಓಪನ್ ಗೆದ್ದ ಜರ್ಮನಿಯ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಜರ್ಮನಿಯ 21ನೇ ಶ್ರೇಯಾಂಕಿತ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು 6-4, 6-1 ಅಂತರದಿಂದ ಮಣಿಸಿದರು. ಶರಪೋವಾ 14ನೇ ಶ್ರೇಯಾಂಕದ ಲಾತ್ವಿಯನ್ ಆಟಗಾರ್ತಿ ಅನಾಸ್ತಾಸಿಜಾ ಸೆವಸ್ತೋವಾ ವಿರುದ್ಧ 6-1, 7-6 (7-4) ಅಂತರದ ಜಯ ಸಾಧಿಸಿದರು.
ಮೂರಕ್ಕೇರಿದ ಹಾಲೆಪ್
ಈ ಕೂಟದ ನೆಚ್ಚಿನ ಆಟಗಾರ್ತಿಯಾಗಿರುವ ರೊಮೇ ನಿಯಾದ ಸಿಮೋನಾ ಹಾಲೆಪ್ 6-2, 6-2ರಿಂದ ಕೆನಡಾದ ಯುಗೇನಿ ಬೌಶಾರ್ಡ್ ಅವರನ್ನು ಹಿಮ್ಮೆಟ್ಟಿಸಿದರು. ಇದರೊಂದಿಗೆ 4 ವರ್ಷಗಳ ಹಿಂದಿನ ವಿಂಬಲ್ಡನ್ ಸೆಮಿಫೈನಲ್ ಪಂದ್ಯದ ಸೋಲಿಗೆ ಹಾಲೆಪ್ ಸೇಡು ತೀರಿಸಿಕೊಂಡರು. ಅಂದಿನ ಪಂದ್ಯವನ್ನು ಬೌಶಾರ್ಡ್ 7-6 (7-5), 6-2 ಅಂತರದಿಂದ ಗೆದ್ದಿದ್ದರು. ಹಾಲೆಪ್ ಅವರ 3ನೇ ಸುತ್ತಿನ ಎದುರಾಳಿ ಅಮೆರಿಕದ ಲಾರೆನ್ ಡೇವಿಸ್. ಅವರು ಜರ್ಮನಿಯ ಆ್ಯಂಡ್ರಿಯಾ ಪೆಟ್ರೋವಿಕ್ ವಿರುದ್ಧ ಮೊದಲ ಸೆಟ್ ಕಳೆದುಕೊಂಡೂ, ಬಳಿಕ ಒಂದೂ ಅಂಕ ನೀಡದೆ ಗೆದ್ದು ಬಂದರು. ಲಾರೆನ್ ಗೆಲುವಿನ ಅಂತರ 4-6, 6-0, 6-0.
ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಇಟೆಲಿಯ ಕ್ಯಾಮಿಲಾ ಜಾರ್ಜಿ ಅವರನ್ನು 5-7, 6-4, 6-1ರಿಂದ; ಅಮೆರಿಕದ ಮ್ಯಾಡಿಸನ್ ಕೇಯ್ಸ ರಷ್ಯಾದ ಎಕತೆರಿನಾ ಅಲೆಕ್ಸಾಂಡ್ರೋವ್ ಅವರನ್ನು 6-0, 6-1 ಅಂತರದಿಂದ; ಅಮೆರಿಕದ ಬರ್ನಾರ್ಡ ಪೆರಾ ತಮ್ಮದೇ ನಾಡಿನ ಜೊಹಾನ್ನಾ ಕೊಂಟಾ ಅವರನ್ನು 6-4, 7-5ರಿಂದ; ಜಪಾನಿನ ನವೋಮಿ ಒಸಾಕಾ ರಷ್ಯಾದ ಎಲಿನಾ ವೆಸ್ನಿನಾ ಅವರನ್ನು 7-6 (7-4), 6-2 ಅಂತರದಿಂದ ಸೋಲಿಸಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಜೆಕ್ ಆಟಗಾರ್ತಿ ಕ್ಯಾರೋಲಿನ್ ಪ್ಲಿಸ್ಕೋವಾ ಬ್ರಝಿಲ್‌ನ ಬಿಟ್ರಿಜ್ ಹದ್ದಾದ್ ವಿರುದ್ಧ ಸುಲಭ ಜಯ ಸಾಧಿಸಿದರು (6-1, 6-1).
ಟೆನ್ನಿಸ್‌ಗೆ ಶರಣಾದ ವಾವ್ರಿಂಕ!
2014ರ ಚಾಂಪಿಯನ್, 9ನೇ ಶ್ರೇಯಾಂಕದ ಸ್ಟಾನಿಸ್ಲಾಸ್ ವಾವ್ರಿಂಕ “ಟೆನ್ನಿಸ್’ಗೆ ಸೋತು ಆಸ್ಟ್ರೇಲಿಯನ್ ಓಪನ್ ಕೂಟದಿಂದ ನಿರ್ಗಮಿಸಿದ್ದಾರೆ. ಅಂದಹಾಗೆ ಈ ಟೆನ್ನಿಸ್ ಯಾರು ಅಂತೀರಾ? ವಿಶ್ವದ 97ನೇ ರ್‍ಯಾಂಕಿಂಗ್ ಆಟಗಾರ, ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗೆನ್. ಈ ಪಂದ್ಯವನ್ನು ಸ್ಯಾಂಡ್‌ಗೆನ್ 6-2, 6-1, 6-4 ಅಂತರದಿಂದ ಗೆದ್ದು 3ನೇ ಸುತ್ತಿಗೆ ಮುನ್ನಡೆದರು. ಎಡ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಾವ್ರಿಂಕ, ವಿಂಬಲ್ಡನ್ ಬಳಿಕ ಆಡುತ್ತಿರುವ ಮೊದಲ ಪಂದ್ಯಾವಳಿ ಇದಾಗಿದೆ. 2014ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರಫೆಲ್ ನಡಾಲ್ ಅವರನ್ನು ಸೋಲಿಸುವ ಮೂಲಕ ವಾವ್ರಿಂಕ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಬೆಲ್ಜಿಯಂನ 7ನೇ ಶ್ರೇಯಾಂಕಿತ ಆಟಗಾರ ಡೇವಿಡ್ ಗೊಫಿನ್ ಕೂಡ 2ನೇ ಸುತ್ತಿನಲ್ಲಿ ಎಡವಿದ್ದಾರೆ. ಅವರನ್ನು ಫ್ರಾನ್ಸ್‌ನ ಜೂಲಿಯನ್ ಬೆನೆಟು 1-6, 7-6 (7-5), 6-1, 7-6 (7-4)ರಿಂದ ಹಿಮ್ಮೆಟ್ಟಿಸಿದರು.
ಫೆಡರರ್, ಜೊಕೋ ಜಯ
6 ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಅವರೆದುರು ಮೊದಲ ಸೆಟ್ ಕಳೆದುಕೊಂಡ ಬಳಿಕ ಲಯ ಸಾಧಿಸಿ 4-6, 6-3, 6-1, 6-3 ಅಂತರದಿಂದ ಜಯ ಸಾಧಿಸಿದರು. 3ನೇ ಸುತ್ತಿನಲ್ಲಿ ಜೊಕೋ ಫ್ರಾನ್ಸ್‌ನ ಮತ್ತೂಬ್ಬ ಆಟಗಾರ ಆಲ್ಬರ್ಟ್ ರಮೋಸ್ ವಿನೊಲಾಸ್ ವಿರುದ್ಧ ಆಡಲಿದ್ದಾರೆ. ರೋಜರ್ ಫೆಡರರ್ ಜರ್ಮನಿಯ ಜಾನ್ ಲೆನಾರ್ಡ್ ಸ್ಟ್ರಫ್ ಅವರನ್ನು 6-4, 6-4, 7-6 (7-4) ಅಂತರದಿಂದ ಸೋಲಿಸಿ ಓಟ ಮುಂದುವರಿಸಿದರು.
ಆಲ್ ಜರ್ಮನ್ ಹೋರಾಟವೊಂದರಲ್ಲಿ ಅಲೆಕ್ಸಾಂಡರ್ ಜ್ವೆರೇವ್ 6-1, 6-3, 4-6, 6-3 ಅಂತರದಿಂದ ಪೀಟರ್ ಗೊಜೋವಿಕ್ ಅವರನ್ನು ಮಣಿಸಿದರು. ಆರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ರಷ್ಯಾದ ಯುವ ಆಟಗಾರ ಕರೆನ್ ಕಶನೋವ್ ಅವರನ್ನು ಭಾರೀ ಹೋರಾಟದ ಬಳಿಕ 6-4, 7-6 (7-4), 6-7 (0-7), 6-4 ಅಂತರದಿಂದ ಸೋಲಿಸಿ 3ನೇ ಸುತ್ತು ಪ್ರವೇಶಿಸಿದರು. ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅಮೆರಿಕದ ಡೆನ್ನಿಸ್ ಕುಡ್ಲ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ ಬಂದರು. ಥೀಮ್ ಅವರ ಜಯದ ಅಂತರ 6-7 (6-8), 3-6, 6-3, 6-2, 6-3.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.