ಆಸ್ಟ್ರೇಲಿಯನ್ ಓಪನ್ ಟೆನಿಸ್: ದಿಗ್ಗಜರಿಗೆ ಲಭಿಸಿತು ನಿರೀಕ್ಷಿತ ಜಯ
Team Udayavani, Jan 17, 2019, 12:30 AM IST
ಮೆಲ್ಬರ್ನ್: “ಆಸ್ಟ್ರೇಲಿಯನ್ ಓಪನ್ ಟೆನಿಸ್ ಗ್ರ್ಯಾನ್‌ಸ್ಲಾಮ್’ ನ ಬುಧವಾರದ ಪಂದ್ಯಗಳಲ್ಲಿ ಹಲವು ಮಹತ್ವದ ಫಲಿತಾಂಶ ದಾಖಲಾಗಿವೆ. ಪುರುಷರ ಸಿಂಗಲ್ಸ್‌ನಲ್ಲಿ ಕೆವಿನ್ ಆ್ಯಂಡರ್ಸನ್ ಒಬ್ಬರನ್ನು ಹೊರತುಪಡಿಸಿ, ಬಹುತೇಕ ಪ್ರಮುಖ ಆಟಗಾರರು ಗೆದ್ದು ಮುಂದಿನ ಸುತ್ತಿಗೇರಿದ್ದಾರೆ. ರೋಜರ್ ಫೆಡರರ್, ರಫೆಲ್ ನಡಾಲ್, ಮರಿಯಾ ಶರಪೋವಾ, ಆ್ಯಂಜೆಲಿಕ್ ಕೆರ್ಬರ್, ಪೆಟ್ರಾ ಕ್ವಿಟೋವಾ, ಕ್ಯಾರೋಲಿನ್ ವೋಜ್ನಿಯಾಕಿ ಜಯಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.
ದಿಗ್ಗಜರಿಗೆ ಜಯ
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗ್ರ್ಯಾನ್‌ಸ್ಲಾಮ್ ಇತಿಹಾಸದಲ್ಲಿ 20 ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿರುವ ಸ್ವಿಟ್ಸರ್‌ಲ್ಯಾಂಡ್‌ನ ರೋಜರ್ ಫೆಡರರ್ ಇಂಗ್ಲೆಂಡಿನ ಡ್ಯಾನ್ ಇವಾನ್ಸ್ ಅವ ರನ್ನು 7-6 (7-5), 7-6(7-3), 6-3 ಸೆಟ್‌ಗಳಿಂದ ಸೋಲಿಸಿದರು.
ಮೊದಲೆರಡು ಸೆಟ್‌ಗಳು ನಿಗದಿತ ಅಂಕಗಳಲ್ಲಿ ಮುಗಿಯದೆ ಟೈಬ್ರೇಕರ್‌ನತ್ತ ಸಾಗಿದವು. ಟೈಬ್ರೇಕರ್‌ನಲ್ಲಿ ಫೆಡರರ್ ಪ್ರಯಾಸದಿಂದಲೇ ಗೆಲುವು ದಾಖಲಿಸಿದರು. ಆರಂಭಿಕ ಎರಡು ಸೆಟ್‌ಗಳಲ್ಲಿನ ದೀರ್ಘ ಹೋರಾಟದಿಂದಾಗಿ ಸುಸ್ತಾಗಿದ್ದ ಇವಾನ್ಸ್ 3ನೇ ಸೆಟ್‌ನಲ್ಲಿ ಫೆಡರರ್‌ಗೆ ಪೈಪೋಟಿ ನೀಡಲಾಗದೆ ಸುಲಭವಾಗಿ ಶರಣಾಗಿ ಸೋಲನುಭವಿಸಿದರು.
ಸ್ಪೇನಿನ ರಫೆಲ್ ನಡಾಲ್ ಅವರು ಎದುರಾಳಿ ಆಸ್ಟ್ರೇಲಿಯದ ಮ್ಯಾಥ್ಯೂ ಎಬೆxನ್‌ರನ್ನು ಸುಲಭವಾಗಿ ಹೊರದಬ್ಬಿದರು.ಅವರು 6-3, 6-2, 6-2 ಅಂಕಗಳಿಂದ ಗೆದ್ದರು. ನಡಾಲ್ ಕೂಡ ನೇರ ಸೆಟ್‌ಗಳ ಜಯ ಸಾಧಿಸಿದ್ದು ಗಮನಾರ್ಹ.
ಉಳಿದಂತೆ ಥಾಮಸ್ ಬೆರ್ಡಿಚ್ 6-1, 6-3, 6-3ರಿಂದ ರಾಬಿನ್ ಹಾಸೆ ಅವರನ್ನು ಸೋಲಿಸಿ ತೃತೀಯ ಸುತ್ತಿಗೆ ಪ್ರವೇಶಿಸಿದರೆ, ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಅಮೆರಿಕದ ಫ್ರಾನ್ಸೆಸ್ ಟಿಯಾಫೊ ವಿರುದ್ಧ 6-4, 4-6, 4-6, 5-7 ಸೆಟ್‌ಗಳಿಂದ ಸೋಲನುಭವಿ ನಿರಾಸೆ ಮೂಡಿಸಿದರು.
ಶರಪೋವಾ, ಕ್ವಿಟೋವಾಗೆ ಗೆಲುವು
ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ರಶ್ಯದ ಮರಿಯಾ ಶರಪೋವಾ 6-2, 6-1 ಸೆಟ್‌ಗಳಿಂದ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್ ವಿರುದ್ಧ ಗೆಲುವಿನ ನಗೆ ಬೀರಿದರು. ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ಬ್ರಝಿಲ್‌ನ ಬೀಟ್ರಿಜ್ ಹಡ್ಡಡ್ ಮೈಯಾರನ್ನು 6-2, 6-3 ಸೆಟ್‌ಗಳಿಂದ ಸೋಲಿಸಿದರೆ, ಪೆಟ್ರಾ ಕ್ವಿಟೋವಾ 6-1, 6-3ಗಳಿಂದ ರೊಮೇನಿಯಾದ ಇರಿನಾ ಬೆಗು ಅವರನ್ನು ಉರುಳಿಸಿದರು. ಕ್ಯಾರೋಲಿನ್ ವೋಜ್ನಿಯಾಕಿ ವಿರುದ್ಧ 6-1, 6-3 ಸೆಟ್‌ಗಳಿಂದ ಸ್ವೀಡನ್‌ನ ಜೊಹಾನಾ ಲಾರ್ಸನ್ ಪರಾಭವಗೊಂಡರು.
ಪುರುಷರ ಡಬಲ್ಸ್; ಭಾರತದ ಸವಾಲು ಅಂತ್ಯ
ಪುರುಷರ ಡಬಲ್ಸ್‌ನಲ್ಲಿ ಭಾರತದ ಜೋಡಿ ಸೋಲು ವುದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ.
ಭಾರತ-ಮೆಕ್ಸಿಕೊ ಜೋಡಿ ಲಿಯಾಂಡರ್ ಪೇಸ್-ರೆಯೆಸ್ ವರೆಲಾ ಅವರು ಅಮೆರಿಕ-ನ್ಯೂಜಿಲ್ಯಾಂಡ್ ಜೋಡಿಯಾದ ಆಸ್ಟಿನ್ ಕ್ರಾಜಿಸೆಕ್-ಅರ್ಟೆಮ್ ಸಿಟಾಕ್ ವಿರುದ್ಧ 5-7, 6-7 (4-7) ಅಂತರದಿಂದ ಸೋತಿತು. ಮೊದಲ ಸೆಟ್ ಅನ್ನು ಸುಲಭವಾಗಿ ಕಳೆದುಕೊಂಡರೂ 2ನೇ ಸೆಟ್‌ನಲ್ಲಿ ಪೇಸ್-ವರೆಲಾ ನಿಕಟ ಪೈಪೋಟಿ ನೀಡಿದರು. ಆದ್ದರಿಂದ ಪಂದ್ಯ ಟೈಬ್ರೇಕರ್‌ಗೆ ಹೋಯಿತು. ಅಲ್ಲಿ 7-4ರಿಂದ ಎದುರಾಳಿ ತಂಡ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ರೋಹನ್ ಬೋಪಣ್ಣ-ದಿವಿಜ್ ಶರಣ್ 1-6, 6-4, 5-7 ಸೆಟ್‌ಗಳಿಂದ ಸ್ಪೇನ್‌ನ ಕ್ಯಾರೆನೊ ಬುಸ್ಟಾ-ಗಾರ್ಸಿಯಾ ಲೊಪೆಜ್ ವಿರುದ್ಧ ಸೋಲನುಭವಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.