ವಿದೇಶ ಪ್ರವಾಸಕ್ಕೆ ತೆರಳುವ ಬಿಸಿಸಿಐ ಅಧಿಕಾರಿಗಳ ದಿನಭತ್ಯೆ 48 ಸಾವಿರ!
Team Udayavani, May 18, 2017, 3:45 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರ ವೇತನವಾಗಲೀ, ಅವರ ಜಾಹೀರಾತು ಮೊತ್ತವಾಗಲೀ ವಿಶ್ವದ ಹೆಸರಾಂತ ಕ್ರೀಡಾಪಟುಗಳಿಗೆ ಸಮನಾಗಿದೆ. ಆದರೆ ಭಾರತ ತಂಡದ ವಿದೇಶ ಪ್ರವಾಸವನ್ನಷ್ಟೇ ಗಮನದಲ್ಲಿಟ್ಟುಕೊಂಡರೆ ಈ ಕ್ರಿಕೆಟಿಗರಿಗಿಂತ ಬಿಸಿಸಿಐ ಪದಾಧಿಕಾರಿಗಳೇ ಹೆಚ್ಚು ಶ್ರೀಮಂತರು! ಹೇಗೆ ಎನ್ನುತ್ತೀರಾ? ಇಲ್ಲಿರುವ ಲೆಕ್ಕಾಚಾರವನ್ನು ಓದಿ, ನಿಮಗೆ ಆಶ್ಚರ್ಯವಾಗದಿದ್ದರೆ ಕೇಳಿ…
ವಿದೇಶ ಪ್ರವಾಸದ ತಂಡದ ಜೊತೆ ತೆರಳುವ ಬಿಸಿಸಿಐ ಅಧಿಕಾರಿಗಳಿಗೆ ಕೊಡುವ ದಿನಭತ್ಯೆ 48,000 ರೂ., ಅದೇ ಕ್ರಿಕೆಟಿಗರಿಗೆ ಬರೀ 8 ಸಾವಿರ ರೂ.! ಅದೂ ಪದಾಧಿಕಾರಿಗಳಿಗೆ ಬೇಕಾದ ವಿಮಾನ ಟಿಕೆಟ್, ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ, ಊಟ, ಓಡಾಟಕ್ಕಾಗಿ ವಾಹನ ಈ ಎಲ್ಲ ವ್ಯವಸ್ಥೆಗಳನ್ನು ಮಾಡಿಯೂ ಬಿಸಿಸಿಐ ಹೆಚ್ಚುವರಿಯಾಗಿ 48000 ರೂ. ನೀಡುತ್ತದೆ.
ಇದು ಭಾರತ ಕ್ರಿಕೆಟ್ ತಂಡದ ಕಥೆಯಾದರೆ ರಾಜ್ಯ ತಂಡಗಳ ಪದಾಧಿಕಾರಿಗಳ ದಿನ ಭತ್ಯೆಯೇನು ಕಡಿಮೆಯಿಲ್ಲ. ತಂಡದೊಂದಿಗೆ ತೆರಳುವ ಒಬ್ಬ ಪದಾಧಿಕಾರಿಗೆ 32,000 ರೂ. ನೀಡಲಾಗುತ್ತದೆ. ಆಟಗಾರನಿಗೆ ಸಿಗುವ ಮೊತ್ತ 6000 ರೂ. ಮಾತ್ರ. ಈ ವ್ಯತ್ಯಾಸವೇಕೆ ಎಂಬ ಪ್ರಶ್ನೆಗೆ ಉತ್ತರ, ಕ್ರಿಕೆಟಿಗರಿಗೆ ಪಂದ್ಯಶುಲ್ಕ ರೂಪದಲ್ಲಿ ಭರ್ಜರಿ ಹಣ ಸಿಗುತ್ತದೆ, ಆದರೆ ಪದಾಧಿಕಾರಿಗಳಿಗೆ ಅಂತಹ ಅವಕಾಶವಿಲ್ಲದಿರುವುದರಿಂದ ಅವರ ದಿನಭತ್ಯೆ ಹೆಚ್ಚಿಸಲಾಗಿದೆ!
ಇದನ್ನು ಬಿಸಿಸಿಐನೊಳಗಿನ ಕೆಲವರು ಪ್ರಶ್ನಿಸಿದ್ದು, ಅಷ್ಟೇಕೆ ಬೇಕು, ಕಡಿಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಪರಿಣಾಮ ಜೂ.1ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡದೊಂದಿಗೆ ತೆರಳುವ ಪದಾಧಿಕಾರಿಗಳಿಗೆ ಹಣದ ಮೊತ್ತದಲ್ಲಿ ಅಲ್ಪ ಕಡಿತ ಮಾಡಿ 32,000 ರೂ.ಗಿಳಿಸುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.