ನ್ಯೂಜಿಲ್ಯಾಂಡಿನ ಮಾಜಿ ನಾಯಕ ಕಾಂಗ್ಡನ್ ನಿಧನ
Team Udayavani, Feb 11, 2018, 6:25 AM IST
ಆಕ್ಲೆಂಡ್: ನ್ಯೂಜಿಲ್ಯಾಂಡ್ ಕ್ರಿಕೆಟಿನ ಪ್ರಥಮ ಆಲ್‌ರೌಂಡರ್, ಆಸ್ಟ್ರೇಲಿಯ ವಿರುದ್ಧ ನ್ಯೂಜಿಲ್ಯಾಂಡಿಗೆ ಮೊದಲ ಟೆಸ್ಟ್ ಜಯವನ್ನು ತಂದಿತ್ತ ನಾಯಕನೆಂಬ ಖ್ಯಾತಿಯ ಮಾಜಿ ಕ್ರಿಕೆಟಿಗ ಬೆವನ್ ಕಾಂಗ್ಡನ್ ತಮ್ಮ 80ನೇ ಜನ್ಮದಿನದ ಮುನ್ನಾ ದಿನವಾದ ಶನಿವಾರ ಆಕ್ಲೆಂಡ್‌ನಲ್ಲಿ ನಿಧನರಾದರು.
1965ರಲ್ಲಿ ಪ್ರವಾಸಿ ಪಾಕಿಸ್ಥಾನ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ಬೆವನ್ ಕಾಂಗ್ಡನ್ 1978ರ ತನಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. 61 ಟೆಸ್ಟ್‌ಗಳಿಂದ 32.22ರ ಸರಾಸರಿಯಲ್ಲಿ 3,448 ರನ್ ಪೇರಿಸಿದ್ದು ಈ ವನ್‌ಡೌನ್ ಬ್ಯಾಟ್ಸ್‌ಮನ್‌ನ ಸಾಧನೆ. ಇದರಲ್ಲಿ 7 ಶತಕ ಹಾಗೂ 19 ಅರ್ಧ ಶತಕಗಳು ಸೇರಿವೆ. 176 ರನ್ ಸರ್ವಾಧಿಕ ಗಳಿಕೆ. 59 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. 11 ಏಕದಿನ ಪಂದ್ಯಗಳನ್ನಾಡಿದ್ದು, 338 ರನ್ ಹಾಗೂ 7 ವಿಕೆಟ್ ಸಂಪಾದಿಸಿದ್ದಾರೆ.
ಕಾಂಗ್ಡನ್ 17 ಟೆಸ್ಟ್‌ಗಳಲ್ಲಿ ನ್ಯೂಜಿಲ್ಯಾಂಡನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಗೆಲುವು ಒಲಿದದ್ದು ಒಂದರಲ್ಲಿ ಮಾತ್ರ. ಆದರೆ ಇದೊಂದು ಸ್ಮರಣೀಯ ಜಯವಾಗಿತ್ತು. ನ್ಯೂಜಿಲ್ಯಾಂಡಿಗೆ ಆಸ್ಟ್ರೇಲಿಯ ವಿರುದ್ಧ ಒಲಿದ ಪ್ರಪ್ರಥಮ ಟೆಸ್ಟ್ ಗೆಲುವು ಇದೆಂಬುದು ಉಲ್ಲೇಖನೀಯ. ಇದಕ್ಕೆ ಸಾಕ್ಷಿಯಾದದ್ದು 1974ರ ಈ ಕ್ರೈಸ್ಟ್‌ಚರ್ಚ್ ಟೆಸ್ಟ್ ಪಂದ್ಯ. ಕಿವೀಸ್ ಜಯದ ಅಂತರ 5 ವಿಕೆಟ್.
“ನ್ಯೂಜಿಲ್ಯಾಂಡ್ ಕ್ರಿಕೆಟನ್ನು ವಿಶ್ವ ಕಣ್ಣೆತ್ತಿ ನೋಡುವಂತೆ ಮಾಡಿದ ಹೆಗ್ಗಳಿಕೆ ಬೆವನ್ ಕಾಂಗ್ಡನ್ ಅವರಿಗೆ ಸಲ್ಲುತ್ತದೆ. ಶ್ರೇಷ್ಠ ಆಲ್‌ರೌಂಡರ್ ಮತ್ತು ಯಶಸ್ವೀ ನಾಯಕತ್ವಕ್ಕೆ ಅವರೊಂದು ಅತ್ಯುತ್ತಮ ಉದಾಹರಣೆಯಾಗಿದ್ದರು’ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್ ವೈಟ್ ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
ಪತ್ನಿ ಶಿರ್ಲಿ, ಪುತ್ತಿಯರಾದ ಅಲಿ, ಸ್ಯಾಂಡಿ, ಮೊಮ್ಮಕ್ಕಳಾದ ಮ್ಯಾಥ್ಯೂ, ಜೋಶುವಾ, ಲಿಲ್ಲಿ ಮತ್ತು ರೀವ್ಸ್ ಅವರನ್ನು ಕಾಂಗ್ಡನ್ ಅಗಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.