ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ
Team Udayavani, Feb 9, 2023, 9:06 AM IST
ನಾಗ್ಪುರ: ಬಹುನಿರೀಕ್ಷಿತ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗುರುವಾರ ಆರಂಭವಾಗಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಆರು ವರ್ಷಗಳ ಬಳಿಕ ಭಾರತದ ನೆಲದಲ್ಲಿ ಬಾರ್ಡರ್ ಗಾವಸ್ಕರ್ ಟ್ರೋಫಿ ಕೂಟ ನಡೆಯುತ್ತಿದೆ. ಕಾಂಗರೂ ನೆಲದಲ್ಲಿ ನಡೆದ ಕಳೆದೆರಡು ಸರಣಿ ಗೆದ್ದು ಭಾರತ, ಆಸೀಸ್ ಗೆ ಸಡ್ಡು ಹೊಡೆದಿತ್ತು. ಹೀಗಾಗಿ ಭಾರತದ ನೆಲದಲ್ಲಿ ಸರಣಿ ಗೆದ್ದು ಸೇಡು ತೀರಿಸಲು ಕಮಿನ್ಸ್ ಪಡೆ ಸಜ್ಜಾಗಿದ್ದರೆ, ಸರಣಿ ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಲು ಭಾರತ ಪ್ರಯತ್ನಿಸುತ್ತಿದೆ.
ನಾಗ್ಪುರದ “ವಿಸಿಎ ಸ್ಟೇಡಿಯಂ’ನಲ್ಲಿ ಭಾರತ ಈವರೆಗೆ 6 ಟೆಸ್ಟ್ ಪಂದ್ಯಗಳನ್ನಾಡಿದ್ದು, ನಾಲ್ಕನ್ನು ಗೆದ್ದಿದೆ. ಒಂದರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾಗೊಂಡಿದೆ. ಇಲ್ಲಿ ಮೊದಲ ಟೆಸ್ಟ್ ನಡೆದದ್ದೇ ಆಸ್ಟ್ರೇಲಿಯ ವಿರುದ್ಧ. ಅದು 2008ರ ಸರಣಿಯ 4ನೇ ಹಾಗೂ ಅಂತಿಮ ಪಂದ್ಯವಾಗಿತ್ತು. ಧೋನಿ ಮತ್ತು ಪಾಂಟಿಂಗ್ ನಾಯಕರಾಗಿದ್ದರು. ಭಾರತ 172 ರನ್ನುಗಳ ಭಾರೀ ಅಂತರದಿಂದ ಜಯಿಸಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿತು.
ಭಾರತ ಪರ ಸಚಿನ್ ತೆಂಡುಲ್ಕರ್ (109), ಆಸ್ಟ್ರೇಲಿಯ ಪರ ಸೈಮನ್ ಕ್ಯಾಟಿಚ್ (102) ಶತಕ ಬಾರಿಸಿದ್ದರು. ಸೆಹವಾಗ್, ಲಕ್ಷ್ಮಣ್, ಗಂಗೂಲಿ, ಧೋನಿ, ಹರ್ಭಜನ್, ಮೈಕಲ್ ಹಸ್ಸಿಅವರಿಂದ ಅರ್ಧ ಶತಕ ದಾಖಲಾಗಿತ್ತು. ಜೇಸನ್ ಕ್ರೇಝ 8 ಪ್ಲಸ್ 4 ವಿಕೆಟ್ ಉಡಾಯಿಸಿ ಬೌಲಿಂಗ್ ಹೀರೋ ಆಗಿ ಮೆರೆದುದನ್ನು ಮರೆಯುವಂತಿಲ್ಲ. ಹರ್ಭಜನ್, ಅಮಿತ್ ಮಿಶ್ರಾ ಭಾರತದ ಯಶಸ್ವಿ ಬೌಲರ್‌ಗಳಾಗಿದ್ದರು. 15 ವರ್ಷಗಳ ಬಳಿಕ ಭಾರತ – ಆಸ್ಟ್ರೇಲಿಯ ನಾಗ್ಪುರದಲ್ಲಿ ಮುಖಾಮುಖೀ ಆಗುತ್ತಿವೆ.
ಇಬ್ಬರು ಪದಾರ್ಪಣೆ: ಭಾರತ ತಂಡಕ್ಕೆ ಇಂದು ಇಬ್ಬರು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಕೀಪರ್ ರಿಷಭ್ ಪಂತ್ ಬದಲಿಗೆ ಕೋನ ಭರತ್ ಅವರು ಮೊದಲ ಬಾರಿಗೆ ಟೀಂ ಇಂಡಿಯಾ ಕ್ಯಾಪ್ ಪಡೆದಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸ್ಥಾನದಲ್ಲಿ ಆಡಲು ಸೂರ್ಯ ಕುಮಾರ್ ಯಾದವ್ ಅವರು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಲಿದ್ದಾರೆ.
ತಂಡಗಳು:
ಭಾರತ: ರೋಹಿತ್ ಶರ್ಮಾ (ನಾ), ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೀಕರ್ ಭರತ್ (ವಿ.ಕೀ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮ್ಮಿನ್ಸ್ (ನಾ), ನಾಥನ್ ಲಿಯಾನ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.