Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team Udayavani, Nov 17, 2024, 11:30 AM IST
ಅರ್ಲಿಂಗ್ಟನ್: 27 ವರ್ಷದ ಜೇಕ್ ಪೌಲ್ ಮತ್ತು 58 ವರ್ಷದ ದಂತಕಥೆ ಮೈಕ್ ಟೈಸನ್ (Mike Tyson) ನಡುವೆ ಅಮೆರಿಕದ ಟೆಕ್ಸಾಸ್‌ನಲ್ಲಿ ಶನಿವಾರ (ನ.16) ಬೆಳಗ್ಗೆ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ಟೈಸನ್ ಸೋತುಹೋದರು. ಇದಾದ ಬಳಿಕ ಲೆಜೆಂಡರಿ ಬಾಕ್ಸರ್ ಮೈಕ್ ಟೈಸನ್ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ಅನಾರೋಗ್ಯದ ವಿಚಾರದ ಬಗ್ಗೆ ಟೈಸನ್ ಮಾತನಾಡಿದ್ದಾರೆ. ಈ ಮೊದಲು ಜುಲೈ 20 ರಂದು ಟೈಸನ್ ಮತ್ತು ಪಾಲ್ ಪಂದ್ಯ ನಡೆಯಬೇಕಿತ್ತು. ಆದರೆ 58 ವರ್ಷ ವಯಸ್ಸಿನ ಹುಣ್ಣು ಉಲ್ಬಣಗೊಂಡ ಕಾರಣ ಪಂದ್ಯವನ್ನು ಮುಂದೂಡಲಾಗಿತ್ತು. ಜೇಕ್ ಪಾಲ್ ವಿರುದ್ಧದ ಶನಿವಾರದ ಮುಖಾಮುಖಿಯ ನಂತರ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿದ ಟೈಸನ್, ಕಳೆದ ಜೂನ್ ನಲ್ಲಿ ತಾನು ಸಾಯುವ ಹಂತಕ್ಕೆ ತಲುಪಿದ್ದೆ ಎಂದಿದ್ದಾರೆ.
ಮೇ ತಿಂಗಳಲ್ಲಿ ತಾನು ಸರಿಯಾದ ದೈಹಿಕ ಆಕಾರದಲ್ಲಿದ್ದೆ. ಆದರೆ ಅನೇಕ ರಕ್ತ ವರ್ಗಾವಣೆಯ ಕಾರಣದಿಂದ ಎಲ್ಲವನ್ನೂ ಕಳೆದುಕೊಳ್ಳಬೇಕಾಯಿತು ಎಂದು ಟೈಸನ್ ಬಹಿರಂಗಪಡಿಸಿದರು. ತಾನು ಶೂನ್ಯದಿಂದಲೇ ತನ್ನ ತರಬೇತಿಯನ್ನು ಪ್ರಾರಂಭಿಸಬೇಕಾಗಿತ್ತು ಮತ್ತು ಈ ಪ್ರಕ್ರಿಯೆಯಲ್ಲಿ ತಾನು ಸಾಧಿಸಿದ್ದೆಲ್ಲದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿದರು.
ಟೈಸನ್ ಅವರು ಶನಿವಾರದ ಪಂದ್ಯದ ನಂತರದ ಸಂದರ್ಶನದಲ್ಲಿ ಸರಿಯಾದ ಸಂದರ್ಭಗಳಲ್ಲಿ ಭವಿಷ್ಯದಲ್ಲಿ ಹೋರಾಡುವುದಾಗಿ ಹೇಳಿದ್ದರೂ ಸಹ, ರಿಂಗ್ ಗೆ ಹಿಂತಿರುಗುವುದಿಲ್ಲ ಎಂದು ಸುಳಿವು ನೀಡಿದರು.
“ಇದು ಸೋತರೂ ಗೆದ್ದ ಸಂದರ್ಭಗಳಲ್ಲಿ ಒಂದು. ಕಳೆದ ರಾತ್ರಿಗೆ ನಾನು ಕೃತಜ್ಞನಾಗಿದ್ದೇನೆ. ಕೊನೆಯ ಬಾರಿಗೆ ಸ್ಪರ್ಧಿಸಿದ ಬಗ್ಗೆ ವಿಷಾದವಿಲ್ಲ. ನಾನು ಜೂನ್‌ನಲ್ಲಿ ಬಹುತೇಕ ಸತ್ತಿದ್ದೆ. ಎಂಟು ಬಾರಿ ರಕ್ತ ವರ್ಗಾವಣೆ ಮಾಡಿದ್ದೇನೆ. ನನ್ನ ಅರ್ಧದಷ್ಟು ರಕ್ತ ಮತ್ತು 25 ಪೌಂಡುಗಳನ್ನು ಕಳೆದುಕೊಂಡೆ. ನನ್ನ ಅರ್ಧ ಪ್ರಾಯದ ಎದುರಾಳಿಗಳೊಂದಿಗೆ ಹೋರಾಡಿ ಎಂಟು ಸುತ್ತು ಬಂದಿದ್ದಕ್ಕೆ ಸಂತಸವಿದೆ” ಎಂದು ಪಂದ್ಯದ ನಂತರ ಮೈಕ್ ಟೈಸನ್ ಬರೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.