Team India; ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ…: ಟಿ20 ವಿಶ್ವಕಪ್ ತಂಡದ ಬಗ್ಗೆ ರೋಹಿತ್
Team Udayavani, Jan 18, 2024, 11:01 AM IST
ಬೆಂಗಳೂರು: ಡಬಲ್ ಸೂಪರ್ ಓವರ್ ಗೆ ಕಾರಣವಾದ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಮತ್ತು ಅಂತಿಮ ಟಿ20 ಪಂದ್ಯವನ್ನು ಭಾರತ ಗೆದ್ದುಕೊಂಡಿದೆ. ಈ ಮೂಲಕ ರೋಹಿತ್ ಬಳಗ 3-0 ಅಂತರದಿಂದ ಸರಣಿ ಜಯಿಸಿತು.
ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಮುಂದಿನ ಟಿ20 ವಿಶ್ವಕಪ್ ಬಗ್ಗೆಯೂ ಮಾತನಾಡಿದರು. ವಿಶ್ವಕಪ್ ಗೆ ತಂಡದ ಆಯ್ಕೆಯ ಬಗ್ಗೆ ಮಾತನಾಡಿ, ಎಲ್ಲರನ್ನೂ ಖುಷಿಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
“ನಾವು ಇದುವರೆಗೂ 15 ಜನರ ತಂಡವನ್ನು ಅಂತಿಮಗೊಳಿಸಿಲ್ಲ. ಆದರೆ 8ರಿಂದ 10 ಆಟಗಾರರು ನಮ್ಮ ಮನಸಿನಲ್ಲಿದ್ದಾರೆ. ಹೀಗಾಗಿ ನಾವು ಪರಿಸ್ಥಿತಿಗಳನ್ನು ಅನುಸರಿಸಿ ತಂಡದ ಸಂಯೋಜನೆ ಮಾಡುತ್ತೇವೆ. ವೆಸ್ಟ್ ಇಂಡೀಸ್ ನಲ್ಲಿ ಪಿಚ್ ನಿಧಾನ ಇರುತ್ತದೆ. ಇದಕ್ಕೆ ಅನುಗುಣವಾಗಿ ನಾವು ತಂಡವನ್ನು ಆಯ್ಕೆ ಮಾಡಬೇಕಿದೆ. ನಾನು ಮತ್ತು ರಾಹುಲ್ ದ್ರಾವಿಡ್ ಅವರು ಒಂದು ಸ್ಪಷ್ಟತೆಯನ್ನು ಕಾಯ್ದುಕೊಳ್ಳಲು ಬಯಸುತ್ತೇವೆ. ನಾವು ಪ್ರತಿ ಆಟಗಾರರಿಗೆ ಯಾಕೆ ಅಯ್ಕೆಯಾಗಿದ್ದೀರಿ ಮತ್ತು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಯಾಕೆ ಆಯ್ಕೆಯಾಗಿಲ್ಲ ಎಂದು ಮನವರಿಕೆ ಮಾಡಲು ಯತ್ನಿಸುತ್ತೇವೆ” ಎಂದು ರೋಹಿತ್ ಹೇಳಿದರು.
“ನೀವು ಎಲ್ಲರನ್ನೂ ಸಂತೋಷವಾಗಿಡಲು ಸಾಧ್ಯವಿಲ್ಲವೆಂದು ನಾನು ನಾಯಕನಾಗಿ ಕಲಿತಿದ್ದೇನೆ. ನೀವು ತಂಡಕ್ಕೆ ಆಯ್ಕೆ ಮಾಡಿ 15 ಆಟಗಾರರನ್ನು ಸಂತೋಷವಾಗಿರಿಸಿ ಕೊಳ್ಳಬಹುದು. ಆಗಲೂ 11 ಮಂದಿ ಮಾತ್ರ ಸಂತೋಷವಾಗಿದ್ದಾರೆ. ಬೆಂಚ್ ಮೇಲೆ ಕುಳಿತಿರುವ ನಾಲ್ವರು ಆಟಗಾರರು ಯಾಕೆ ಆಡುತ್ತಿಲ್ಲ ಎಂದು ಕೇಳುತ್ತಾರೆ. ನೀವು ಎಲ್ಲರನ್ನು ಸಂತೋಷವಾಗಿಡಲು ಸಾಧ್ಯವಿಲ್ಲ ಎಂದು ನಾನು ಕಲಿತಿದ್ದೇನೆ. ತಂಡದ ಗುರಿಯತ್ತ ಗಮನ ಹರಿಸಬೇಕು ಎಂದು ರೋಹಿತ್ ಹೇಳಿದರು.
2024ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿದೆ. ಭಾರತದ ಅಭಿಯಾನವು ಜೂನ್ 5ರಿಂದ ಆರಂಭವಾಗಲಿದೆ. ಭಾರತವು ಐರ್ಲೆಂಡ್, ಪಾಕಿಸ್ತಾನ, ಯುಎಸ್ಎ ಮತ್ತು ಕೆನಡಾಗಳೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.