ICC ತಂಡದಲ್ಲಿ ಚಾಂಪಿಯನ್ ಭಾರತದ ಆರು ಆಟಗಾರರು: ದಕ್ಷಿಣ ಆಫ್ರಿಕಾದ ಒಬ್ಬರೂ ಇಲ್ಲ
Team Udayavani, Jul 2, 2024, 6:45 AM IST
ದುಬಾೖ: ಸಂಪ್ರದಾಯದಂತೆ ಐಸಿಸಿ ತನ್ನ ಟಿ20 ವಿಶ್ವಕಪ್ ಸಾಧಕರ ತಂಡವನ್ನು ಅಂತಿಮಗೊಳಿಸಿದೆ. ನಿರೀಕ್ಷೆ ಯಂತೆ ಭಾರತಕ್ಕೆ ಇಲ್ಲಿ ಸಿಂಹಪಾಲು ಸಂದಿದೆ. ಚಾಂಪಿಯನ್ ಟೀಮ್ ಇಂಡಿ ಯಾದ 6 ಕ್ರಿಕೆಟಿಗರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಸ್ಟಾರ್ ಬ್ಯಾಟರ್. ಫೈನಲ್‌ನ ಪಂದ್ಯಶ್ರೇಷ್ಠ ಆಟ ಗಾರ ಕೊಹ್ಲಿಗೆ ಇಲ್ಲಿ ಜಾಗ ಲಭಿಸಿಲ್ಲ.
ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡದ ಯಾವ ಕ್ರಿಕೆಟಿಗರಿಗೂ ಇಲ್ಲಿ ಸ್ಥಾನ ಲಭಿಸದಿದ್ದುದು ಬಹು ದೊಡ್ಡ ಅಚ್ಚರಿ. ವೇಗಿ ಆ್ಯನ್ರಿಚ್ ನೋರ್ಜೆ 12ನೇ ಆಟಗಾರನಾಗಿ ಆಯ್ಕೆಯಾದದ್ದಷ್ಟೇ ದಕ್ಷಿಣ ಆಫ್ರಿಕಾಕ್ಕೆ ಸಂದ ಗೌರವ.
ಈ ಪಂದ್ಯಾವಳಿಯಲ್ಲಿ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ, ವಿಶ್ವಕಪ್ ಇತಿಹಾಸದಲ್ಲೇ ಮೊದಲ ಸಲ ಸೆಮಿಫೈನಲ್ ಪ್ರವೇಶಿಸಿದ ಅಫ್ಘಾನಿಸ್ಥಾನದ ಮೂವರು ಐಸಿಸಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯ ಮತ್ತು ವೆಸ್ಟ್ ಇಂಡೀಸ್‌ನ ತಲಾ ಒಬ್ಬರು ಹನ್ನೊಂದರ ಬಳಗದಲ್ಲಿದ್ದಾರೆ. ಸೆಮಿಫೈನಲಿಸ್ಟ್ ಇಂಗ್ಲೆಂಡ್ ಕ್ರಿಕೆಟಿಗರೂ ಜಾಗ ಪಡೆದಿಲ್ಲ.
ಭಾರತದ ಹೀರೋಗಳು
ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಚಾಂಪಿಯನ್ ಭಾರತ ತಂಡದ ಆಟಗಾರರೆಂದರೆ ನಾಯಕ ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷ ದೀಪ್ ಸಿಂಗ್. ಇವರಲ್ಲಿ ರೋಹಿತ್ ನಾಯಕರಾಗಿ ನೇಮಕಗೊಂಡಿದ್ದಾರೆ.
ಅಫ್ಘಾನಿಸ್ಥಾನದ ಮೂವರು ಕ್ರಿಕೆಟಿ ಗರಿಗೆ ಅದೃಷ್ಟ ಖುಲಾಯಿಸಿತು. ಇವರೆಂದರೆ ನಾಯಕ ರಶೀದ್ ಖಾನ್, ಪಂದ್ಯಾವಳಿಯಲ್ಲೇ ಅತ್ಯಧಿಕ 281 ರನ್ ಬಾರಿಸಿದ ರೆಹಮಾನುಲ್ಲ ಗುರ್ಬಜ್ ಹಾಗೂ ವಿಕೆಟ್ ಸಾಧನೆಯಲ್ಲಿ ಜಂಟಿ ಅಗ್ರಸ್ಥಾನ ಪಡೆದ ಎಡಗೈ ಸ್ಪಿನ್ನರ್ ಫಜಲ್ ಹಕ್ ಫಾರೂಖಿ.
ಉಳಿದಿಬ್ಬರೆಂದರೆ ಆಸ್ಟ್ರೇಲಿಯದ ಮಾರ್ಕಸ್ ಸ್ಟೋಯಿನಿಸ್ ಮತ್ತು ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರಣ್. 12ನೇ ಆಟಗಾರನಾದ ಆ್ಯನ್ರಿಚ್ ನೋರ್ಜೆ ಶ್ರೀಲಂಕಾ ವಿರುದ್ಧ 7 ರನ್ನಿಗೆ 4 ವಿಕೆಟ್ ಉಡಾಯಿಸಿದ್ದರು. ಫೈನಲ್‌ನಲ್ಲಿ ಇವರ ಸಾಧನೆ 26ಕ್ಕೆ 2 ವಿಕೆಟ್.
ಐಸಿಸಿ ಇಲೆವೆನ್
ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್ (ಭಾರತ); ರೆಹಮಾನುಲ್ಲ ಗುರ್ಬಜ್ (ವಿಕೆಟ್ ಕೀಪರ್), ರಶೀದ್ ಖಾನ್, ಫಜಲ್ ಹಕ್ ಫಾರೂಖೀ (ಅಫ್ಘಾನಿಸ್ಥಾನ); ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯ); ನಿಕೋಲಸ್ ಪೂರಣ್ (ವೆಸ್ಟ್ ಇಂಡೀಸ್). 12ನೇ ಆಟಗಾರ: ಆ್ಯನ್ರಿಚ್ ನೋರ್ಜೆ (ದಕ್ಷಿಣ ಆಫ್ರಿಕಾ).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.