ಬ್ಯಾಟಿಂಗ್ ವೈಫಲ್ಯದಿಂದ ಸೋಲು: ಫ್ಲೆಮಿಂಗ್
Team Udayavani, May 20, 2018, 11:46 AM IST
ಹೊಸದಿಲ್ಲಿ: ಡ್ವೇನ್ ಬ್ರಾವೊ ಅವರ ಬೌಲಿಂಗನ್ನು ಸಮರ್ಥಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಡೆಲ್ಲಿ ವಿರುದ್ಧ 34 ರನ್ನುಗಳ ಅನಿರೀಕ್ಷಿತ ಸೋಲಿಗೆ ಬ್ಯಾಟ್ಸ್‌ಮೆನ್ ಕಾರಣವೆಂದು ದೂರಿದ್ದಾರೆ.
ಆಲ್‌ರೌಂಡರ್ ಬ್ರಾವೊ ಡೆಲ್ಲಿ ಇನ್ನಿಂಗ್ಸ್‌ನ ಅಂತಿಮ ಓವರಿನಲ್ಲಿ 26 ರನ್ ಬಿಟ್ಟುಕೊಟ್ಟಿ ದ್ದರು. ಇದರಿಂದ ಡೆಲ್ಲಿ ತಂಡ 5 ವಿಕೆಟಿಗೆ 162 ರನ್ ಗಳಿಸುವಂತಾಯಿತು. ಡೆಲ್ಲಿ ಆ ಬಳಿಕ ಬಿಗುದಾಳಿ ಸಂಘಟಿಸಿದ್ದರಿಂದ ಚೆನ್ನೈ 6 ವಿಕೆಟಿಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು.
ಧೋನಿ, ರೈನಾ ವಿಫಲ
ಬ್ಯಾಟಿಂಗ್ ವೈಫಲ್ಯದಿಂದ ನಾವು ಸೋಲು ಕಂಡೆವು. ಸಮರ್ಥವಾದ ಜತೆಯಾಟ ಕಟ್ಟಿ ಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ನಿಧಾನ ಗತಿಯ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಠಿನವಾಗಿತ್ತು ಎಂದವರು ಅಭಿಪ್ರಾಯ ಪಟ್ಟರು. ಅಂಬಾಟಿ ರಾಯುಡು (29 ಎಸೆತಗಳಲ್ಲಿ 50 ರನ್) ಉತ್ತಮ ಅಡಿಪಾಯ ಹಾಕಿಕೊಟ್ಟ ಬಳಿಕ ನಾಯಕ ಧೋನಿ (17) ಮತ್ತು ಸುರೇಶ್ ರೈನಾ (15) ತಂಡವನ್ನು ಆಧರಿಸಲು ಅಸಮರ್ಥರಾದರು.
ಚೇಸ್ ವೇಳೆ ಏನೆಲ್ಲ ತಪ್ಪುಗಳಾದವು ಎಂಬ ಪ್ರಶ್ನೆಗೆ ಉತ್ತರಿಸಿದ ಫ್ಲೆಮಿಂಗ್ ರೈನಾ ಔಟಾದ ಬಳಿಕ ನಾವು ಸ್ವಲ್ಪಮಟ್ಟಿಗೆ ಬಿರುಸಿನ ಆಟವಾಡಿದ್ದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆಯಿತ್ತು. ಆದರೆ ಡೆಲ್ಲಿ ಆಟಗಾರರು ಉತ್ತಮ ಫೀಲ್ಡಿಂಗ್ ಮಾಡುವ ಮೂಲಕ ನಮ್ಮೆ ಮೇಲೇ ಒತ್ತಡ ಹೇರಿದರು. ಇದೊಂದು ನಿಕಟ ಪಂದ್ಯವಾಗಿತ್ತು. ಆದರೆ ಪ್ರಮುಖ ಹಂತದಲ್ಲಿ ಕೆಲವು ವಿಕೆಟ್ ಕಳೆದುಕೊಂಡಿರುವುದು ಸೋಲಿಗೆ ಕಾರಣವಾಯಿತು ಎಂದರು.
ಡೆತ್ ಓವರ್‌ಗಳಲ್ಲಿ ಹೆಚ್ಚಿನೆಲ್ಲ ತಂಡಗಳು ಸಮಸ್ಯೆ ಎದುರಿಸುತ್ತಿವೆ. ಬ್ರಾವೊ ಈ ಹಿಂದಿನ ಪಂದ್ಯದಲ್ಲಿ ಎದುರಾಳಿಯ ಮೊತ್ತವನ್ನು 180 ರನ್ನಿಗೆ ನಿಯಂತ್ರಿಸಲು ನೆರವಾಗಿದ್ದರು. ಇದು ಪಂದ್ಯದ ಒಂದು ಭಾಗ. ಈ ಕೂಟದಲ್ಲಿ ಅವರು ಒಳ್ಳೆಯ ದಿನಗಳನ್ನು ಕಂಡಿದ್ದಾರೆ. ಆದರೆ ಇವತ್ತು ಒಳ್ಳೆಯ ದಿನವಾಗಿರಲಿಲ್ಲ. ಸಮಗ್ರವಾಗಿ ಹೇಳುವುದಾದರೆ ಬೌಲಿಂಗ್ ಪ್ರಯತ್ನ ಉತ್ತಮವಾಗಿತ್ತು.
– ಸ್ಟೀಫನ್ ಫ್ಲೆಮಿಂಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.