ಕೊನೆರು ಹಂಪಿ ವಿಶ್ವ ರ್ಯಾಪಿಡ್ ಚಾಂಪಿಯನ್
Team Udayavani, Dec 29, 2019, 11:09 PM IST
ಹೊಸದಿಲ್ಲಿ: ಭಾರತದ ಚೆಸ್ ಗ್ರ್ಯಾನ್‌ಮಾಸ್ಟರ್ ಕೊನೆರು ಹಂಪಿ ಈಗ ವನಿತಾ “ವರ್ಲ್ಡ್ ರ್ಯಾಪಿಡ್ ಚಾಂಪಿಯನ್’ ಗೌರವಕ್ಕೆ ಪಾತ್ರರಾಗಿದ್ದಾರೆ. ಮಾಸ್ಕೋದಲ್ಲಿ ನಡೆದ ಪಂದ್ಯದಲ್ಲಿ ಅವರು ಚೀನದ ಲೀ ಟಿಂಗ್‌ಜಿ ಅವರನ್ನು “ಟೈ ಬ್ರೇಕರ್’ನಲ್ಲಿ ಮಣಿಸುವ ಮೂಲಕ ಈ ಹಿರಿಮೆಯನ್ನು ಒಲಿಸಿಕೊಂಡರು. ಪುರುಷರ ವಿಭಾಗದ ಪ್ರಶಸ್ತಿ ನಾರ್ವೆಯ ಮ್ಯಾಗ್ನಸ್ ಕಾರ್ಲ್ ಸೆನ್ ಪಾಲಾಯಿತು.
ಕೊನೆರು ಹಂಪಿ ಚೀನದ ಮತ್ತೋರ್ವ ಸ್ಪರ್ಧಿ ಟಾಂಗ್ ಜೊಂಗ್‌ಯಿ ವಿರುದ್ಧ 12ನೇ ಹಾಗೂ ಅಂತಿಮ ಸುತ್ತಿನ ಪಂದ್ಯವನ್ನು ಗೆಲ್ಲುವ ಮೂಲಕ ಲೀ ಟಿಂಗ್‌ಜಿ ಅವರೊಂದಿಗೆ 9 ಅಂಕಗಳ ಸಮಬಲ ಸಾಧಿಸಿದರು.
“ಮೂರನೇ ದಿನ ಮೊದಲ ಪಂದ್ಯವನ್ನು ಆರಂಭಿಸಿದಾಗ ನಾನು ಅಗ್ರಸ್ಥಾನ ಅಲಂಕರಿಸುತ್ತೇನೆಂದು ಭಾವಿಸಿರಲೇ ಇಲ್ಲ. ಮೂರರೊಳಗಿನ ಸ್ಥಾನ ನನ್ನ ಗುರಿಯಾಗಿತ್ತು. ಟೈ ಬ್ರೇಕರ್ ಸ್ಪರ್ಧೆ ಎದುರಾಗುತ್ತದೆ, ಇದರಲ್ಲಿ ನಾನು ಗೆಲ್ಲುತ್ತೇನೆ ಎಂಬ ಕಲ್ಪನೆಯೇ ಇರಲಿಲ್ಲ. ಅಲ್ಲದೇ ರ್ಯಾಪಿಡ್ ಮತ್ತು ಬ್ಲಿಟ್ಜ್ ನನ್ನ ಆಟವಾಗಿರಲಿಲ್ಲ’ ಎಂದು ಕೊನೆರು ಹಂಪಿ “ಫಿಡೆ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ತಂದೆ ಹಾಗೂ ಕೋಚ್ ಕೂಡ ಆಗಿರುವ ಕೊನೆರು ಅಶೋಕ್ ತುಂಬಿದ ಸ್ಫೂರ್ತಿಯಿಂದ ಹಂಪಿ ಗೆಲುವು ಸಾಧಿಸುವಂತಾಯಿತು.
ಟೈ ಬ್ರೇಕರ್ ಫೈಟ್
ಟೈ ಬ್ರೇಕರ್‌ನಲ್ಲಿ ಟಿಂಗ್‌ಜಿ ವಿರುದ್ಧ ಮೊದಲ ಪಂದ್ಯವನ್ನು ಸೋತ ಹಂಪಿ, ಮುಂದಿನ ಪಂದ್ಯವನ್ನು ಗೆದ್ದು ಹೋರಾಟವನ್ನು ಜಾರಿಯಲ್ಲಿರಿಸಿದರು. ಇದೊಂದು ಗ್ಯಾಂಬ್ಲಿಂಗ್ ಗೇಮ್ ಆಗಿತ್ತು. ಆದರಿಲ್ಲಿ ಹಂಪಿ ಜಯ ಸಾಧಿಸಿದರು. 3ನೇ ಗೇಮ್‌ನಲ್ಲಿ ಆರಂಭದಿಂದಲೇ ಹಿಡಿತ ಸಾಧಿಸಿದ ಹಂಪಿ ಗೆಲುವಿನ ನಗು ಹೊಮ್ಮಿಸಿದರು.
ಸ್ಮರಣೀಯ ವರ್ಷ
32ರ ಹರೆಯದ ಕೊನೆರು ಹಂಪಿ ಪಾಲಿಗೆ 2019 ಸ್ಮರಣೀಯ ವರ್ಷವಾಗಿ ದಾಖಲಾಯಿತು. ಈ ತಿಂಗಳ ಆರಂಭದಲ್ಲಿ ಫಿಡೆ ವನಿತಾ ಗ್ರ್ಯಾನ್‌ಪ್ರಿ ಸೀರಿಸ್ ಪ್ರಶಸ್ತಿ ಜಯಿಸಿದ್ದರು. 30 ಇಎಲ್‌ಒ ಅಂಕಗಳೊಂದಿಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಿಯಾದರು. ಇದೀಗ ವಿಶ್ವ ಚಾಂಪಿಯನ್‌ಶಿಪ್ ಕಿರೀಟ. ತಾಯಿಯಾದ ಕಾರಣ 2 ವರ್ಷಗಳ ಬ್ರೇಕ್ ಪಡೆದಿದ್ದ ಹಂಪಿ, ಈಗ ಭರ್ಜರಿ ಪುನರಾಗಮನ ಸಾರಿದಂತಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.