Copa America ಫುಟ್‌ಬಾಲ್: ಇಂದು ಆರ್ಜೆಂಟೀನಾ-ಕೊಲಂಬಿಯ ಫೈನಲ್
Team Udayavani, Jul 15, 2024, 7:30 AM IST
ಫ್ಲೋರಿಡಾ: ಇಲ್ಲಿನ ಹಾರ್ಡ್‌ರಾಕ್ ಮೈದಾನದಲ್ಲಿ ಸೋಮವಾರ ಬೆಳಗ್ಗೆ ನಡೆಯುವ ಕೊಪಾ ಅಮೆರಿಕ ಫುಟ್‌ಬಾಲ್ ಪ್ರಶಸ್ತಿ ಸುತ್ತಿನ ಕದನದಲ್ಲಿ ಹಾಲಿ ಚಾಂಪಿಯನ್ಸ್ ಆರ್ಜೆಂಟೀನಾ ಮತ್ತು ಕೊಲಂಬಿಯ ತಂಡಗಳು ಸೆಣಸಾಡಲಿವೆ.
ಲಿಯೋನೆಲ್ ಮೆಸ್ಸಿ ನೇತೃತ್ವದ ಬಲಿಷ್ಠ ಆರ್ಜೆಂಟೀನಾ 30ನೇ ಬಾರಿ ಫೈನಲ್‌ಗೆ ಪ್ರವೇಶಿಸಿದ್ದರೆ, ಕೊಲಂಬಿಯಾಕ್ಕೆ ಇದು 2ನೇ ಫೈನಲ್. ಆರ್ಜೆಂಟೀನಾ ಬರೋಬ್ಬರಿ 15 ಪ್ರಶಸ್ತಿಗಳನ್ನು ಗೆದ್ದು, ಯಶಸ್ವಿ ತಂಡಗಳ ಸಾಲಿನಲ್ಲಿ ಉರುಗ್ವೆಯೊಂದಿಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಕೆನಡಾ ವಿರುದ್ಧ ಆರ್ಜೆಂಟೀನಾ 2-0 ಅಂತರದಿಂದ ಗೆದ್ದಿತ್ತು. ಇನ್ನೊಂದು ಪಂದ್ಯದಲ್ಲಿ ಉರುಗ್ವೆ ವಿರುದ್ಧ ಕೊಲಂಬಿಯ 1-0 ಅಂತರದಿಂದ ಜಯಿಸಿತ್ತು.
ಕೊಪಾ ಅಮೆರಿಕ ಟೂರ್ನಿಯಲ್ಲಿ ಆರ್ಜೆಂಟೀನಾ- ಕೊಲಂಬಿಯ ಒಟ್ಟು 43 ಬಾರಿ ಮುಖಾಮುಖೀಯಾಗಿವೆ. ಇದರಲ್ಲಿ ಆರ್ಜೆಂಟೀನಾ 26ರಲ್ಲಿ, ಕೊಲಂಬಿಯ 9ರಲ್ಲಿ ಗೆದ್ದಿವೆ. 8 ಪಂದ್ಯಗಳು ಡ್ರಾದೊಂದಿಗೆ ಅಂತ್ಯ ಕಂಡಿವೆ.
ಉರುಗ್ವೆಗೆ ಮೂರನೇ ಸ್ಥಾನ
ಚಾರ್ಲೋಟ್ (ನಾರ್ತ್ ಕ್ಯಾರೋಲಿನಾ): ಕೆನಡಾ ವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಮಣಿಸಿದ ಉರುಗ್ವೆ “ಕೊಪಾ ಅಮೆರಿಕ ಫುಟ್‌ಬಾಲ್’ ಪಂದ್ಯಾವಳಿಯಲ್ಲಿ 3ನೇ ಸ್ಥಾನವನ್ನು ಅಲಂಕರಿಸಿತು.
ನಿಗದಿತ ಅವಧಿಯಲ್ಲಿ ಪಂದ್ಯ 2-2 ಗೋಲುಗಳಿಂದ ಸಮನಾಗಿತ್ತು. ಉರುಗ್ವೆ ಪರ ರೋಡ್ರಿಗೊ ಬೆಂಟಾಂಕುರ್ 8ನೇ ನಿಮಿಷದಲ್ಲೇ ಖಾತೆ ತೆರೆದು ಮುನ್ನಡೆ ತಂದಿತ್ತರು. ಬಳಿಕ ಕೆನಡಾ ಇಸ್ಮಾಯಿಲ್ ಕೋನೆ (22ನೇ ನಿಮಿಷ) ಮತ್ತು ಜೊನಾಥನ್ ಡೇವಿಡ್ (80ನೇ ನಿಮಿಷ) ಸಾಹಸದಿಂದ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ಆದರೆ 90 ಪ್ಲಸ್ 2ನೇ ನಿಮಿಷದಲ್ಲಿ ಲೂಯಿಸ್ ಸೂರೆಜ್ ಅವರ ಗೋಲು ಪರಾಕ್ರಮದಿಂದ ಉರುಗ್ವೆ ಪಂದ್ಯವನ್ನು ಸಮಬಲಕ್ಕೆ ತಂದಿತು.
ಆರ್ಜೆಂಟೀನಾ-ಕೊಲಂಬಿಯಾ ನಡುವೆ ಫೈನಲ್ ನಡೆಯಲಿದ್ದು, ಈ ಪಂದ್ಯ ಭಾರತೀಯ ಕಾಲಮಾನದಂತೆ ಸೋಮವಾರ ಬೆಳಗ್ಗೆ 5.30ಕ್ಕೆ ಆರಂಭವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.