Asian Games ನಲ್ಲಿ ಕ್ರಿಕೆಟ್ : ಮೊದಲ ಬಾರಿ ಭಾರತ ತಂಡ
ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್ ಸೇರ್ಪಡೆ ಸಾಧ್ಯತೆ
Team Udayavani, Aug 20, 2023, 6:30 AM IST
ಮುಂದಿನ ತಿಂಗಳು ಚೀನದ ಹ್ಯಾಂಗ್‌ಝೂನಲ್ಲಿ 19ನೇ ಏಷ್ಯನ್ ಗೇಮ್ಸ್ ನಡೆಯುತ್ತಿದೆಯಾದರೂ ಕ್ರಿಕೆಟ್ ಸ್ಪರ್ಧೆ ಇಂತಹ ಕೂಟಗಳಲ್ಲಿ ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್ ತಂಡ ಮೊದಲ ಬಾರಿ ಆಡುತ್ತಿದೆ. ವಿಶ್ವಖ್ಯಾತಿಯ ಕ್ರಿಕೆಟಿಗರು ಕ್ರಿಕೆಟ್ ಜನಪ್ರಿಯತೆಯನ್ನು ಗೇಮ್ಸ್‌ಗೂ ವಿಸ್ತರಿಸಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ.
ಏಷ್ಯನ್ ಗೇಮ್ಸ್ ಎನ್ನುವುದು ಏಷ್ಯಾ ಖಂಡದ ಬೃಹತ್ ಕೂಟ ಗಳಲ್ಲಿ ಒಂದಾಗಿದೆ. 1951ರಲ್ಲಿ ಹೊಸದಿಲ್ಲಿಯಲ್ಲಿ ಮೊದಲ ಬಾರಿ ಆರಂಭವಾಗಿದ್ದು ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತಿದೆ. 40ಕ್ಕಿಂತಲೂ ಹೆಚ್ಚಿನ ಕ್ರೀಡಾ ಸ್ಪರ್ಧೆಗಳಲ್ಲಿ ಕ್ರೀಡಾಪಟುಗಳು ಪದಕಕ್ಕಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.
ಆರಂಭದಲ್ಲಿ ಏಷ್ಯಾದ್ ಎಂದು ಕರೆಯಲಾಗುತ್ತಿದ್ದ ಈ ಕ್ರೀಡಾಕೂಟವನ್ನು 1982ರಿಂದ ಏಷ್ಯನ್ ಗೇಮ್ಸ್ ಎಂದು ಬದಲಾಯಿಸಲಾಗಿದೆ. ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ)ದಡಿ ಈ ಗೇಮ್ಸ್ ಆಯೋಜಿಸಲಾಗುತ್ತಿದೆ. ಈ ಬಾರಿಯ 19ನೇ ಏಷ್ಯನ್ ಗೇಮ್ಸ್ ಸೆ. 23ರಿಂದ ಅ. 8ರ ವರೆಗೆ ಚೀನದ ಹ್ಯಾಂಗ್‌ಝೂನಲ್ಲಿ ನಡೆಯಲಿದೆ.
ಭಾರತ ಸಹಿತ ಏಷ್ಯಾದ ಪ್ರಮುಖ ದೇಶಗಳಲ್ಲಿ ಕ್ರಿಕೆಟ್ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಕ್ರೀಡೆ. ಮೂರು ಮಾದರಿಯ (ಟೆಸ್ಟ್, ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಭಾರತ ತಂಡದಲ್ಲಿ ವಿಶ್ವ ಖ್ಯಾತಿಯ ಹಲವು ಕ್ರಿಕೆಟಿಗರಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಡಿ ವಿವಿಧ ರೀತಿಯಲ್ಲಿ ಕ್ರಿಕೆಟ್ ಕೂಟ, ಸರಣಿಗಳು ಆಯೋಜಿಸಲ್ಪಡುತ್ತಿದೆ. ದೇಶದಲ್ಲೆಡೆ ಇರುವ ಅಸಂಖ್ಯಾತ ಅಭಿಮಾನಿಗಳಿಂದಾಗಿ ಬಿಸಿಸಿಐ ಹಲವು ಆಯಾಮ ಗಳಿಂದ ಭಾರೀ ಲಾಭಗಳಿಸುತ್ತ ಶ್ರೀಮಂತವಾಗುತ್ತಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್ ಸ್ಪರ್ಧೆ ನಡೆದಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್)ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ನಡೆದಿದ್ದು ಅನುಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನಕ್ಕೆ ಕೊರಳೊಡ್ಡಿದರೆ, ವನಿತೆಯರ ವಿಭಾಗದಲ್ಲಿ ಪಾಕಿಸ್ಥಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿದೆ.
ಜಕಾರ್ತಾದಲ್ಲಿ 2018ರಲ್ಲಿ ನಡೆದ ಗೇಮ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿಲ್ಲ. ಆದರೆ ಈ ಬಾರಿಯ ಹ್ಯಾಂಗ್‌ಝೂ ಗೇಮ್ಸ್ ನಲ್ಲಿ ಕ್ರಿಕೆಟ್ ಪದಕ ಸ್ಪರ್ಧೆಯಾಗಿದ್ದು ಟಿ20 ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಭಾರತೀಯ ಪುರುಷರ ದ್ವಿತೀಯ ಹಾಗೂ ವನಿತೆಯರ ಪೂರ್ಣ ಪ್ರಮಾಣದ ತಂಡ ಮೊದಲ ಬಾರಿ ಗೇಮ್ಸ್‌ನಲ್ಲಿ ಆಡಲಿದೆ.
ಅಂತಾರಾಷ್ಟ್ರೀಯ ಬದ್ಧತೆಗಳಿಗಾಗಿ ಬಿಸಿಸಿಐ ಈ ಬಾರಿಯ ಗೇಮ್ಸ್‌ಗೆ ತಂಡಗಳನ್ನು ಕಳುಹಿಸದಿರಲು ಆರಂಭದಲ್ಲಿ ನಿರ್ಧರಿಸಿತ್ತು. ಆದರೆ ಭಾರತ ಸರಕಾರದ ಸ್ಪಷ್ಟ ನಿರ್ದೇಶದಂತೆ ಇದೀಗ ತಂಡಗಳನ್ನು ಕಳುಹಿಸುವುದಾಗಿ ಪ್ರಕಟಿಸಿದೆ. ಏಷ್ಯನ್ ಗೇಮ್ಸ್‌ನಂತಹ ಬೃಹತ್ ಕೂಟಗಳಲ್ಲಿ ಸ್ಪರ್ಧಿಸಲು ಕ್ರೀಡಾಪಟು ಗಳು ತುದಿಗಾಲಲ್ಲಿ ನಿಂತಿರುವಾಗ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಮಂಡಳಿ ಹಿಂದೇಟು ಹಾಕುತ್ತಿರುವುದು ಆಲೋಚಿಸಬೇಕಾದ ವಿಷಯವಾಗಿದೆ. ದೇಶವನ್ನು ಪ್ರತಿನಿಧಿಸುವ, ಪದಕ ಗೆದ್ದು ಸಂಭ್ರಮಿಸುವ ಉತ್ಸಾಹ (ಸಾಧ್ಯವಿದ್ದರೂ) ಕ್ರಿಕೆಟಿಗರಲ್ಲಿ ಅಥವಾ ಮಂಡಳಿಯಲ್ಲಿ ಇಲ್ಲದಿರುವುದು ದುರದೃಷ್ಟಕರ. ಅಂತಾರಾಷ್ಟ್ರೀಯ ಬದ್ಧತೆಯೆಂಬ ಕಾರಣ ನೀಡಿ ಗೇಮ್ಸ್‌ನಿಂದ ಹಿಂದೆ ಸರಿಯುವ ಬಿಸಿಸಿಐಯ ನಡೆ ಆಶ್ಚರ್ಯ ತರುತ್ತಿದೆ. ಇವರಿಗೆ ದೇಶಪ್ರೇಮ ಇದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಏಷ್ಯನ್ ಗೇಮ್ಸ್ ಸಹಿತ ಇತರ ಕೂಟಗಳಲ್ಲಿ ಕ್ರಿಕೆಟ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಬಿಸಿಸಿಐ ಪ್ರಯತ್ನ ಮಾಡದಿರುವುದು ಸೋಜಿಗದ ವಿಷಯ. ಗೇಮ್ಸ್‌ನಲ್ಲಿ ಪಾಲ್ಗೊಂಡರೆ ಸಮಯ, ಹಣ, ನಷ್ಟವೆಂಬ ಧೋರಣೆ ಮಂಡಳಿಗೆ ಇರಬಹುದು. ಕೆಲವು ಪಂದ್ಯಗಳನ್ನಾಡಿ ಗೆದ್ದರೆ ಮಾತ್ರ ಪದಕ, ಇಲ್ಲದಿದ್ದರೆ ಬರಿಗೈಲಿ ವಾಪಸಾಗಬೇಕೆಂಬ ಆಲೋಚನೆಯಿಂದಾಗಿ ಮಂಡಳಿ ಇಂತಹ ಕೂಟಗಳಿಗೆ ಹಿಂದೇಟು ಹಾಕಲು ಕಾರಣ ಎನ್ನಬಹುದು.
ಏಷ್ಯಾ ಕಪ್ ಚಾಂಪಿಯನ್‌ಶಿಪ್‌ಗಾಗಿ ಹೋರಾಡುವ ಏಷ್ಯಾದ ತಂಡಗಳು ಇದೇ ಸ್ಫೂರ್ತಿ ಹಾಗೂ ಉತ್ಸಾಹದಲ್ಲಿ ಏಷ್ಯನ್ ಗೇಮ್ಸ್ ನಲ್ಲೂ ಸ್ಪರ್ಧೆಗೆ ಇಳಿಯಬೇಕು. ದುಡ್ಡಿನಂತೆ ಪದಕದ ಬೆಲೆಯೂ ಅಮೂಲ್ಯ ಎಂದು ನಮ್ಮ ಕ್ರಿಕೆಟ್ ಮಂಡಳಿಗಳು, ಆಟಗಾರರು ಅರಿತುಕೊಳ್ಳುವುದು ಮುಖ್ಯ.
ಈ ಬಾರಿಯ ಗೇಮ್ಸ್‌ನಲ್ಲಿ ಭಾರತೀಯ ತಂಡ
ಪುರುಷರು: ರುತುರಾಜ್ ಗಾಯಕ್ವಾಡ್ (ನಾಯಕ), ಮುಕೇಶ್ ಕುಮಾರ್, ಶಿವಂ ಮವಿ, ಶಿವಂ ದುಬೆ, ಪ್ರಭ್‌ಸಿಮ್ರಾನ್ ಸಿಂಗ್, ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಆವೇಶ್ ಖಾನ್, ಅರ್ಷದೀಪ್ ಸಿಂಗ್.
ವನಿತೆಯರು: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂದನಾ, ರಾಜೇಶ್ವರಿ ಗಾಯಕ್ವಾಡ್, ಮಿನ್ನು ಮಣಿ, ಕನಿಕಾ ಅಹುಜಾ. ಉಮಾ ಚೇತ್ರಿ, ಅನುಷಾ ಬಾರೆಡ್ಡಿ, ಶಫಾಲಿ ವರ್ಮ, ಜೆಮೀಮಾ ರಾಡ್ರಿಗಸ್, ದೀಪ್ತಿ ಶರ್ಮ, ರಿಚಾ ಘೋಷ್, ಅಮನ್‌ಜೋತ್ ಕೌರ್, ದೇವಿಕಾ ವೈದ್ಯ, ಅಂಜಲಿ ಸರ್ವಾಣಿ, ಟಿಟಸ್ ಸಾಧು.
ಮೀಸಲು ಆಟಗಾರರು: ಯಶ್ ಥಾಕುರ್, ಸಾಯಿ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ಸಾಯಿ ಸುದರ್ಶನ್.
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್
ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿದೆ. ಮುಂಬರುವ 2028ರ ಗೇಮ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಆಗುವ ಸಾಧ್ಯತೆಯಿದೆ. 1896ರ ಉದ್ಘಾಟನ ಏಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್ ಚಿನ್ನ ಜಯಿಸಿತ್ತು.
ಸೈಂಟ್ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್ ಸ್ಪರ್ಧೆ ನಡೆದಿಲ್ಲ. ಇದೀಗ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಯತ್ನ ನಡೆಸುತ್ತಿದೆ.
ಶಂಕರನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
T20 series: ಪಾಕಿಸ್ಥಾನಕ್ಕೆ ವೈಟ್‌ವಾಶ್ ಟಿ20: ಆಸ್ಟ್ರೇಲಿಯ 3-0 ಜಯಭೇರಿ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
BGT Series: ವಿರಾಟ್ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್ ಜಾನ್ಸನ್
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.