Davis Cup ಟೆನಿಸ್: ಪಾಕಿಸ್ಥಾನ ನೆಲದಲ್ಲಿ ಭಾರತದ ಆಟ
Team Udayavani, Feb 3, 2024, 6:20 AM IST
ಇಸ್ಲಾಮಾಬಾದ್: ಸರಿಯಾಗಿ 60 ವರ್ಷಗಳ ಸುದೀರ್ಘ ಅವಧಿಯ ಬಳಿಕ ಭಾರತದ ಟೆನಿಸ್ ತಂಡ ಪಾಕಿಸ್ಥಾನದಲ್ಲಿ ಡೇವಿಸ್ ಕಪ್ ಪಂದ್ಯಾವಳಿಯನ್ನು ಆಡಲಿಳಿಯಲಿದೆ. ಫೆ. 3 ಮತ್ತು 4ರಂದು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ವರ್ಲ್ಡ್ ಗ್ರೂಪ್ 1 ಪ್ಲೇ-ಆಫ್ ಸ್ಪರ್ಧೆ ಏರ್ಪಡಲಿದೆ.
ಡೇವಿಸ್ ಕಪ್ ಇತಿಹಾಸದಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಈವರೆಗೆ ಸೋಲನ್ನೇ ಕಂಡಿಲ್ಲ. ಆಡಿದ ಏಳೂ ಪಂದ್ಯಾವಳಿಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಬಾರಿ ಅಗ್ರ ಕ್ರಮಾಂಕದ ಆಟಗಾರರ ಗೈರಲ್ಲಿ ಭಾರತ ಆಡಲಿಳಿಯುತ್ತಿದೆ. ಅತ್ತ ಪಾಕ್ ತಂಡದಲ್ಲಿ 43 ವರ್ಷದ ಐಸಮ್ ಉಲ್ ಹಕ್ ಖುರೇಶಿ, ಅಖೀಲ್ ಖಾನ್ ಮೊದಲಾದ ಪ್ರಮುಖ ಆಟಗಾರರಿದ್ದಾರೆ.
ಇಸ್ಲಾಮಾಬಾದ್‌ನ ಹುಲ್ಲಿನ ಅಂಕಣ ಫಾಸ್ಟ್ ಮತ್ತು ಲೋ ಬೌನ್ಸ್ ಹೊಂದಿದೆ. ಹೀಗಾಗಿ ಮೂಲತಃ ಡಬಲ್ಸ್ ಆಟಗಾರನಾಗಿರುವ ಎನ್. ಶ್ರೀರಾಮ್ ಬಾಲಾಜಿ ಸಿಂಗಲ್ಸ್ ಆಡಲು ಇಳಿಯಲಿದ್ದಾರೆ. ರಾಮ್‌ಕುಮಾರ್ ರಾಮನಾಥನ್ ಭಾರತದ ಮತ್ತೋರ್ವ ಸಿಂಗಲ್ಸ್ ಆಟಗಾರ.
ಬಾಲಾಜಿಗಿಂತ ಹೆಚ್ಚು ಎತ್ತರದ ಆಟಗಾರನಾಗಿರುವ ನಿಕಿ ಪೂಣಚ್ಚ ಕೂಡ ತಂಡದಲ್ಲಿದ್ದಾರೆ. ಆದರೆ ಲೋ ಬೌನ್ಸ್ ಹೊಂದಿರುವ ಹುಲ್ಲಿನ ಅಂಕಣದಲ್ಲಿ ನೀಳಕಾಯದ ಆಟಗಾರರು ಹೆಚ್ಚು ಪರದಾಡುತ್ತಾರೆಂಬ ಕಾರಣಕ್ಕೆ ಪೂಣಚ್ಚ ಬದಲು ಬಾಲಾಜಿ ಅವರನ್ನು ಸಿಂಗಲ್ಸ್ ಸ್ಪರ್ಧೆಗೆ ಆರಿಸಲಾಗಿದೆ. ಅಲ್ಲದೇ ಬಾಲಾಜಿ ಅನುಭವಿ ಆಟಗಾರನೂ ಆಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲೂ ಆಡಿದ್ದರು.
“ನಾನು ಡಬಲ್ಸ್‌ನಿಂದ ಸಿಂಗಲ್ಸ್‌ನತ್ತ ಮುಖ ಮಾಡಿದ್ದೇನೆ. ಅಂದಮಾತ್ರಕ್ಕೆ ಡಬಲ್ಸ್ ಆಡುವುದಿಲ್ಲ ಎಂದರ್ಥವಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಸಿಂಗಲ್ಸ್ ಅಭ್ಯಾಸ ನಡೆಸುತ್ತೇನೆ. ಪಾಕಿಸ್ಥಾನ ವಿರುದ್ಧ ಆಡಲು ಕಾತರನಾಗಿದ್ದೇನೆ’ ಎಂಬುದಾಗಿ ಬಾಲಾಜಿ ಹೇಳಿದ್ದಾರೆ.
ಡಬಲ್ಸ್‌ನಲ್ಲಿ ಯುಕಿ ಭಾಂಬ್ರಿ- ಸಾಕೇತ್ ಮೈನೇನಿ ಕಣಕ್ಕಿಳಿಯಲಿದ್ದಾರೆ.
ತೀವ್ರ ಸ್ಪರ್ಧೆ ಸಾಧ್ಯತೆ
ಭಾರತ ತಂಡದ ಆಡದ ನಾಯಕ ಜೀಶನ್ ಅಲಿ ಪ್ರಕಾರ ಇದೊಂದು ತೀವ್ರ ಸ್ಪರ್ಧೆಯ ಪಂದ್ಯಾವಳಿ ಆಗಲಿದೆ. ಆದರೆ ಭಾರತದ ಕ್ರಿಕೆಟ್ ತಂಡವಾಗಲಿ, ಇತರ ಕ್ರೀಡಾಪಟುಗಳಾಗಲಿ ಪಾಕಿಸ್ಥಾನದಲ್ಲಿ ಏಕೆ ಆಡುತ್ತಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅಲಿ ಪ್ರತಿಕ್ರಿಯಿಸಲಿಲ್ಲ.
“ನಾವಿಲ್ಲಿ ಟೆನಿಸ್ ಆಡಲು ಬಂದಿದ್ದೇವೆ. ಕೆಲವೊಂದು ನಿರ್ಧಾರಗಳನ್ನು ನಮ್ಮ ಸರಕಾರ ತೆಗೆದುಕೊಳ್ಳುತ್ತದೆಯೇ ಹೊರತು ಇದರಲ್ಲಿ ನಮ್ಮ ಪಾತ್ರವೇನೂ ಇರದು’ ಎಂದರು.
ಕೇವಲ 500 ಮಂದಿ
ಇಸ್ಲಾಮಾಬಾದ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಈ ಪಂದ್ಯಕ್ಕೆ ಕೇವಲ 500 ಮಂದಿ ಅಧಿಕಾರಿಗಳು ಹಾಗೂ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿದೆ.
ಶುಕ್ರವಾರ 2 ಸಿಂಗಲ್ಸ್ ಸ್ಪರ್ಧೆ ನಡೆಯಲಿದೆ. ಇದು 1-1 ಫಲಿತಾಂಶ ದಾಖಲಿಸಿದರೆ ಡಬಲ್ಸ್ ಪಂದ್ಯ ಕೂಡ ಶುಕ್ರವಾರವೇ ನಡೆಯುವ ಸಾಧ್ಯತೆ ಇದೆ.
ಡೇವಿಸ್ ಕಪ್ ಡ್ರಾ
ಸಿಂಗಲ್ಸ್ (ಫೆ. 3)
1. ರಾಮ್‌ಕುಮಾರ್ ರಾಮನಾಥನ್-ಐಸಮ್ ಉಲ್ ಹಕ್ ಖುರೇಶಿ.
2. ಶ್ರೀರಾಮ್ ಬಾಲಾಜಿ-ಅಖೀಲ್ ಖಾನ್.
ಡಬಲ್ಸ್ (ಫೆ. 4)
ಯುಕಿ ಭಾಂಬ್ರಿ-ಸಾಕೇತ್ ಮೈನೇನಿ, ಬರ್ಕತುಲ್ಲ-ಮುಜಮ್ಮಿಲ್ ಮುರ್ತಜ
ರಿವರ್ಸ್ ಸಿಂಗಲ್ಸ್ (ಫೆ. 4)
1. ರಾಮ್‌ಕುಮಾರ್ ರಾಮನಾಥನ್-ಅಖೀಲ್ ಖಾನ್
2. ಶ್ರೀರಾಮ್ ಬಾಲಾಜಿ-ಐಸಮ್ ಉಲ್ ಹಕ್ ಖುರೇಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.