ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ : ಹಿಂದೆ ಸರಿದ ದೀಪಕ್ ಬೆಳ್ಳಿಗೆ ತೃಪ್ತಿ: ಅವಾರೆಗೆ ಕಂಚು
Team Udayavani, Sep 23, 2019, 5:54 AM IST
ನುರ್ ಸುಲ್ತಾನ್ (ಕಜಾಕ್‌ಸ್ಥಾನ): ಭಾರತದ ಯುವ ಕುಸ್ತಿಪಟು, ಜೂನಿಯರ್ ವಿಶ್ವ ಚಾಂಪಿಯನ್ ಖ್ಯಾತಿಯ ದೀಪಕ್ ಪೂನಿಯಾಗೆ ಸೀನಿಯರ್ ವಿಭಾಗದಲ್ಲೂ ಕಿರೀಟ ಏರಿಸಿಕೊಳ್ಳುವ ಕನಸು ನನಸಾಗದೇ ಹೋಗಿದೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ರವಿವಾರ ಇರಾನಿನ ಖ್ಯಾತ ರೆಸ್ಲರ್ ಹಸನ್ ಯದಾನಿ ವಿರುದ್ಧ 86 ಕೆಜಿ ವಿಭಾಗದಲ್ಲಿ ಸೆಣಸಬೇಕಿದ್ದ ದೀಪಕ್, ಎಡ ಪಾದದ ನೋವಿನಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು.
ಇದರಿಂದ ಹಸನ್ ಯದಾನಿ ಕಣಕ್ಕಿಳಿಯದೇ ಚಿನ್ನದ ಪದಕ ಸಂಪಾದಿಸಿದರೆ, ದೀಪಕ್ ಪೂನಿಯಾ ಬೆಳ್ಳಿ ಪದಕಕ್ಕೆ ತೃಪ್ತರಾದರು. ಅನಂತರ ನಡೆದ 61 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ರಾಹುಲ್ ಅವಾರೆ ಭಾರತಕ್ಕೆ ಕಂಚಿನ ಪದಕ ತಂದಿತ್ತರು.
20ರ ಹರೆಯದ ದೀಪಕ್ ಪೂನಿಯಾ ಇದೇ ಮೊದಲ ಸಲ ಸೀನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧೆಗೆ ಇಳಿದು ಭರ್ಜರಿ ಪ್ರದರ್ಶನ ನೀಡಿದ್ದರು. ಎಲ್ಲರೂ ಭಜರಂಗ್ ಪೂನಿಯಾ ಮೇಲೆ ಭಾರೀ ನಿರೀಕ್ಷೆ ಇರಿಸಿದ ವೇಳೆಯಲ್ಲೇ ದೀಪಕ್ ಕನಸಿನ ಓಟ ಆರಂಭಿಸಿದ್ದರು. ಇನ್ನೇನು ಮೊದಲ ಪ್ರಯತ್ನದಲ್ಲೇ ಇತಿಹಾಸ ನಿರ್ಮಿಸಬಹುದೆಂಬ ನಿರೀಕ್ಷೆ ದಟ್ಟವಾಗಿರುವಾಗಲೇ ಗಾಯದ ಸಮಸ್ಯೆ ಎದುರಾಯಿತು. ಭಾರತದ ಕ್ರೀಡಾಭಿಮಾನಿಗಳ ಹಾರೈಕೆ ಸಾಕಾರಗೊಳ್ಳದೇ ಹೋಯಿತು.
ಸೆಮಿಫೈನಲ್‌ನಲ್ಲಿ ಎದುರಾದ ಸಮಸ್ಯೆ
ಶನಿವಾರ ಸ್ವಿಜರ್‌ಲ್ಯಾಂಡಿನ ಸ್ಟೀಫನ್ ರಿಶ್ಮತ್ ವಿರುದ್ಧದ ಸೆಮಿಫೈನಲ್ ಪಂದ್ಯದ ವೇಳೆ ದೀಪಕ್ ಪೂನಿಯಾ ಪಾದದ ಸಮಸ್ಯೆಗೆ ಸಿಲುಕಿದ್ದರು. ಗೆದ್ದರೂ ಅಖಾಡ ಬಿಡುವಾಗ ಕುಂಟುತ್ತಲೇ ಹೋಗಿದ್ದರು. ಜತೆಗೆ ತೀವ್ರವಾದ ಏಟಿನಿಂದ ಬಲಗಣ್ಣಿನ ಭಾಗದಲ್ಲಿ ಊತವೂ ಕಂಡುಬಂದಿತ್ತು. ರವಿವಾರ ಕಾಲಿನ ಸಮಸ್ಯೆ ತೀವ್ರಗೊಂಡಿದ್ದರಿಂದ ದೀಪಕ್ ಫೈನಲ್ ಸ್ಪರ್ಧೆಯನ್ನು ತ್ಯಜಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದರು.
“ನನ್ನ ಎಡಗಾಲು ಭಾರ ಸಹಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಹೋರಾಡುವುದು ಬಹಳ ಕಷ್ಟ. ಯದಾನಿ ವಿರುದ್ಧ ಸೆಣಸುವ ಅಮೋಘ ಅವಕಾಶ ನನಗೆ ಲಭಿಸಿತ್ತು. ಆದರೆ ನಾನು ಅಸಹಾಯಕ…’ ಎಂದು ದೀಪಕ್ ಪೂನಿಯಾ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಕೂಟದಲ್ಲಿ ಕೊಲಂಬಿಯಾದ ಕಾರ್ಲೋಸ್ ಅರ್ಟುರೊ ಮೆಂಡೆಜ್, ಕಜಾಕ್‌ಸ್ಥಾನದ ಅದಿಲೆಟ್ ದವುÉಂಬಯೇವ್ ಹಾಗೂ ಸ್ಟೀಫನ್ ರಿಶ್ಮತ್ ವಿರುದ್ಧ ಜಯ ಸಾಧಿಸುವ ಮೂಲಕ ದೀಪಕ್ ಫೈನಲ್‌ಗೆ ಲಗ್ಗೆ ಇರಿಸಿದ್ದರು.
ಸೀನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ 2ನೇ ಚಿನ್ನದ ಪದಕ ತರುವ ಅವಕಾಶದಿಂದ ದೀಪಕ್ ಪೂನಿಯಾ ವಂಚಿತರಾದರು. ಭಾರತದ ಈವರೆಗಿನ ಏಕೈಕ ಸ್ವರ್ಣ ಸಾಧಕನೆಂದರೆ ಸುಶೀಲ್ ಕುಮಾರ್. ಮಾಸ್ಕೋದಲ್ಲಿ ನಡೆದ 2010ರ ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಸುಶೀಲ್ ಈ ಸಾಧನೆ ಮಾಡಿದ್ದರು.
ಕಂಚು ಗೆದ್ದ ರಾಹುಲ್; ಭಾರತಕ್ಕೆ ಗರಿಷ್ಠ ಪದಕ
61 ಕೆಜಿ ವಿಭಾಗದಲ್ಲಿ ರಾಹುಲ್ ಅವಾರೆ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗರಿಷ್ಠ ಪದಕಗಳ ಸಾಧನೆಯೊಂದಿಗೆ ಹೋರಾಟ ಮುಗಿಸಿತು.
ರವಿವಾರದ ಪ್ಲೇ-ಆಫ್ ಸ್ಪರ್ಧೆಯಲ್ಲಿ ರಾಹುಲ್ ಅವಾರೆ ಅಮೆರಿಕದ ಟಯ್ಲರ್ ಲೀ ಗ್ರಾಫ್ ಅವರನ್ನು 11-4 ಅಂತರದಿಂದ ಮಣಿಸಿದರು. ಗ್ರಾಫ್ 2017ರ ಪಾನ್ ಅಮೆರಿಕನ್ ಚಾಂಪಿಯನ್ ಆಗಿದ್ದಾರೆ.
ಅವಾರೆ ಸಾಧನೆಯೊಂದಿಗೆ ಈ ಕೂಟದಲ್ಲಿ ಭಾರತ ಒಟ್ಟು 5 ಪದಕಗಳನ್ನು ಗೆದ್ದಿತು. ಇದು ವಿಶ್ವ ಕುಸ್ತಿ ಕೂಟವೊಂದರಲ್ಲಿ ಭಾರತ ಜಯಿಸಿದ ಅತ್ಯಧಿಕ ಸಂಖ್ಯೆಯ ಪದಕವಾಗಿದೆ. 2013ರಲ್ಲಿ 3 ಪದಕ ಜಯಿಸಿದ್ದು ಈವರೆಗಿನ ಅತ್ಯುತ್ತಮ ಸಾಧನೆಯಾಗಿತ್ತು. ಅಂದು ಅಮಿರ್ ದಹಿಯಾ ಬೆಳ್ಳಿ, ಭಜರಂಗ್ ಪೂನಿಯಾ ಮತ್ತು ಸಂದೀಪ್ ತುಳಸಿ ಯಾದವ್ ಕಂಚು ಜಯಿಸಿದ್ದರು.
ಮಹಾರಾಷ್ಟ್ರದವರಾದ ರಾಹುಲ್ ಅವಾರೆ 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 2 ಕಂಚಿನ ಪದಕ ಜಯಿಸಿದ್ದಾರೆ (2009, 2011).
ರವಿವಾರ “ಡಬಲ್ ಲೆಗ್’ ಆಕ್ರಮಣದ ಮೂಲಕ ಅವಾರೆ ಅಮೆರಿಕನ್ ಸ್ಪರ್ಧಿಯನ್ನು ಅಚ್ಚರಿಯಲ್ಲಿ ಕೆಡವಿದರು.
“ಒಲಿಂಪಿಕ್ಸ್ ನನ್ನ ಕನಸು’
“ವಿಶ್ವ ಚಾಂಪಿಯನ್‌ಶಿಪ್‌ಗಾಗಿ ನಾನು ಕಠಿನ ಅಭ್ಯಾಸ ನಡೆಸಿದ್ದೆ. ಇದೊಂದು ಕಠಿನ ಹೋರಾಟದ ಕೂಟ. ನನಗೆ ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇತ್ತು. ಫೈನಲ್‌ನಲ್ಲಿ ಕಣಕ್ಕಿಳಿಯಲಾಗಲಿಲ್ಲ. ಅಲ್ಲಿಯ ತನಕ ನನ್ನ ಪ್ರದರ್ಶನ ಉತ್ತಮ ಮಟ್ಟದಲ್ಲಿಯೇ ಇತ್ತು. ನನ್ನ ಮುಂದಿನ ಕನಸು ಟೋಕಿಯೊ ಒಲಿಂಪಿಕ್ಸ್’ ಎಂಬುದಾಗಿ ದೀಪಕ್ ಪೂನಿಯಾ ಹೇಳಿದರು.
“ಎಲ್ಲರಂತೆ ನನ್ನ ಪಾಲಿಗೂ ಒಲಿಂಪಿಕ್ಸ್ ಸಾಧನೆಯೇ ಪ್ರಮುಖ ಗುರಿ. ಇದೊಂದು ಕನಸು. ಇಲ್ಲಿ ಚಿನ್ನ ಗೆಲ್ಲುವುದೇ ನನ್ನ ಯೋಜನೆ. ಆದರೆ ಟೋಕಿಯೋದಲ್ಲಿ ಪ್ರತಿಯೊಂದು ಸ್ಪರ್ಧೆಯೂ ಅತ್ಯಂತ ಕಠಿನವಾಗಿರುತ್ತದೆ. ಒಲಿಂಪಿಕ್ಸ್‌ಗೂ ಮುನ್ನ ವಿದೇಶದಲ್ಲಿ ತರಬೇತಿ ಪಡೆಯಲಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.