ಹೊಸ ಆರಂಭದ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ ಪಡೆ
ಇಂದು ಧರ್ಮಶಾಲಾದಲ್ಲಿ ಭಾರತ-ದ.ಆಫ್ರಿಕಾ ಮೊದಲ ಏಕದಿನ ಮುಖಾಮುಖಿ
Team Udayavani, Mar 12, 2020, 6:00 AM IST
ಧರ್ಮಶಾಲಾ: ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ತೀರಾ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿರುವ ಭಾರತ ತಂಡವೀಗ ಚಿಗುರಿಕೊಂಡಿರುವ ದಕ್ಷಿಣ ಆಫ್ರಿಕಾ ವಿರುದ್ಧ ತವರಿನ ಏಕದಿನ ಸರಣಿಗೆ ಅಣಿಯಾಗಿದೆ. ಗುರುವಾರ ಧರ್ಮಶಾಲಾದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಕೊಹ್ಲಿ ಪಡೆ “ಹೊಸ ಆರಂಭ’ದ ನಿರೀಕ್ಷೆಯಲ್ಲಿದೆ.
ಈ ಸರಣಿಗೂ ವೈಟ್‌ವಾಶ್‌ಗೂ ಹತ್ತಿರದ ನಂಟಿರುವುದು ವಿಶೇಷ. ಭಾರತ ತಂಡ ನ್ಯೂಜಿಲ್ಯಾಂಡ್‌ನಲ್ಲಿ ಆಡಲಾದ ಮೂರೂ ಏಕದಿನ ಪಂದ್ಯಗಳನ್ನು ಸೋತು ಅಪರೂಪದ ವೈಟ್‌ವಾಶ್ ಅನುಭವಿಸಿದ ಸಂಕಟದಲ್ಲಿದೆ; ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಪಡೆ ತವರಲ್ಲಿ ಆಸ್ಟ್ರೇಲಿಯಕ್ಕೆ 3-0 ವೈಟ್‌ವಾಶ್ ಮಾಡಿದ ಹುರುಪಿನಲ್ಲಿದೆ. ಹೀಗಾಗಿ ಹರಿಣಗಳ ಮನೋಸ್ಥೈರ್ಯ ತುಸು ಮೇಲ್ಮಟ್ಟದಲ್ಲಿದೆ ಎನ್ನಬಹುದು.
ಭಾರತಕ್ಕೆ ಈಗ ಪಾಂಡ್ಯ ಬಲ
ನ್ಯೂಜಿಲ್ಯಾಂಡ್‌ನಲ್ಲಿ ವೈಫಲ್ಯ ಅನುಭವಿಸಿದ ಬಹುತೇಕ ಕ್ರಿಕೆಟಿಗರನ್ನು ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ಕೈಬಿಟ್ಟಿದೆ. ನಾನಾ ದೈಹಿಕ ಸಮಸ್ಯೆಗಳಿಂದ ಚೇತರಿಸಿಕೊಂಡ ಆಟಗಾರರನ್ನು ಮರಳಿ ತಂಡಕ್ಕೆ ಸೇರಿಸಿಕೊಂಡಿದೆ. ಇವರಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಆರಂಭಕಾರ ಶಿಖರ್ ಧವನ್ ಮತ್ತು ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಪ್ರಮುಖರು.
ಬಿಗ್ ಹಿಟ್ಟರ್ ಖ್ಯಾತಿಯ ಹಾರ್ದಿಕ್ ಪಾಂಡ್ಯ ಮರಳಿರುವುದರಿಂದ ತಂಡವೀಗ ಹೆಚ್ಚು ಸಮತೋಲನದಿಂದ ಕೂಡಿದೆ. ಬೌಲಿಂಗ್ ಹಾಗೂ ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಬಲ ಬಂದಿದೆ.
ನ್ಯೂಜಿಲ್ಯಾಂಡ್ ಎದುರಿನ ವಿಶ್ವಕಪ್ ಸೆಮಿ ಫೈನಲ್ ಬಳಿಕ ಪಾಂಡ್ಯ ಏಕದಿನ ಪಂದ್ಯವನ್ನು ಆಡಿಲ್ಲ. ಆಫ್ರಿಕಾ ವಿರುದ್ಧವೇ ಸೆಪ್ಟಂಬರ್‌ನಲ್ಲಿ ಕೊನೆಯ ಟಿ20 ಪಂದ್ಯ ಆಡಿದ್ದರು. ಇತ್ತೀಚೆಗೆ ಮುಂಬಯಿಯ ಡಿ.ವೈ. ಪಾಟೀಲ್ ಕಾರ್ಪೋರೇಟ್ ಕಪ್ ಪಂದ್ಯಾವಳಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು.
ಕೊಹ್ಲಿ ಬ್ಯಾಟ್ ಮಾತಾಡೀತೇ?
ನ್ಯೂಜಿಲ್ಯಾಂಡ್‌ನಲ್ಲಿ ಭಾರತದ ವೈಫಲ್ಯಕ್ಕೆ ಅನೇಕ ಕಾರಣಗಳಿದ್ದವು. ಓಪನರ್‌ಗಳ ವೈಫಲ್ಯ, ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬರಗಾಲ, ಪ್ರಧಾನ ಬೌಲರ್ ಬುಮ್ರಾ ವಿಕೆಟ್ ಕೀಳಲು ಮರೆತದ್ದೆಲ್ಲ ಟೀಮ್ ಇಂಡಿಯಾವನ್ನು ತಲೆ ಎತ್ತದಂತೆ ಮಾಡಿದ್ದವು. ಕೊಹ್ಲಿ ಬ್ಯಾಟ್ ಬೀಸಿದ್ದರೆ ಸರಣಿಯ ಚಿತ್ರಣವೇ ಬದಲಾಗುವ ಸಾಧ್ಯತೆ ಇತ್ತು. ಹೀಗಾಗಿ ಬ್ಯಾಟಿಂಗ್ ಬರಗಾಲದಿಂದ ಮುಕ್ತರಾಗಲು ಕೊಹ್ಲಿಗೆ ಇದೊಂದು ಅತ್ಯುತ್ತಮ ಅವಕಾಶ.
ಧವನ್ ಮರಳಿರುವುದರಿಂದ ಭಾರತದ ಓಪನಿಂಗ್ ಮೇಲೆ ಭರವಸೆ ಇಡಬಹುದಾಗಿದೆ. ಇವರೊಂದಿಗೆ ಪೃಥ್ವಿ ಶಾ ಕಣಕ್ಕಿಳಿಯುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕ ಅಯ್ಯರ್, ರಾಹುಲ್, ಪಾಂಡ್ಯ ಅವರನ್ನು ನಂಬಿಕೊಂಡಿದೆ. ರಾಹುಲ್ ಮತ್ತೆ ಕೀಪರ್ ಆಗಿ ಮುಂದುವರಿಯುವುದು ಬಹುತೇಕ ಖಚಿತ. ಅಕಸ್ಮಾತ್ ಶಾ ಬದಲು ರಾಹುಲ್ ಆರಂಭಿಕನಾದರೆ ಆಗಷ್ಟೇ ಪಂತ್ ತಂಡದಲ್ಲಿ ಕಾಣಿಸಿಕೊಳ್ಳಬಹುದು.ಧರ್ಮಶಾಲಾ ಪಿಚ್ ಸೀಮರ್-ಫ್ರೆಂಡ್ಲಿ ಆಗಿದ್ದರೂ ಜಡೇಜ ಜತೆಗೆ ಲೆಗ್‌ಸ್ಪಿನ್ನರ್ ಚಹಲ್ ಕೂಡ ಆಡುವ ಸಾಧ್ಯತೆ ಇದೆ. ಕಾರಣ, ಆಫ್ರಿಕನ್ನರು ಸ್ಪಿನ್ನರ್‌ಗಳನ್ನು ನಿಭಾಯಿಸುವಲ್ಲಿ ಹಿಂದಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಭುವನೇಶ್ವರ್, ಬುಮ್ರಾ ಮತ್ತು ಸೈನಿ ನೋಡಿಕೊಳ್ಳಲಿದ್ದಾರೆ.
ಹರಿಣಗಳ ಬ್ಯಾಟಿಂಗ್ ಬಲಿಷ್ಠ
ಆಸ್ಟ್ರೇಲಿಯ ಸರಣಿಗೂ ಮುನ್ನ ತೀವ್ರ ಸಂಕಟದಲ್ಲಿದ್ದ ದಕ್ಷಿಣ ಆಫ್ರಿಕಾ ಈಗ ಸಶಕ್ತ ತಂಡವಾಗುವ ನಿಟ್ಟಿನಲ್ಲಿ ಮುನ್ನಡೆದಿದೆ. ಕ್ಲಾಸೆನ್, ವೆರೇನ್, ಬವುಮ, ಸ್ಮಟ್ಸ್, ಮಲನ್, ಡುಸೆನ್ ಅವರೆಲ್ಲ ಜಬರ್ದಸ್ತ್ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಜತೆಗೆ ಅನುಭವಿಗಳಾದ ಡಿ ಕಾಕ್, ಡು ಪ್ಲೆಸಿಸ್, ಮಿಲ್ಲರ್ ಅವರ ಬೆಂಬಲವಿದೆ. ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿ ಸಹಜವಾಗಿಯೇ ಪೈಪೋಟಿ ತೀವ್ರಗೊಂಡಿದೆ.
ಆದರೆ ಎನ್‌ಗಿಡಿ, ಫೆಲುಕ್ವಾಯೊ, ನೋರ್ಜೆ, ಹೆಂಡ್ರಿಕ್ಸ್, ಕೇಶವ್ ಮಹಾರಾಜ್ ಅವರನ್ನು ಒಳಗೊಂಡ ಹರಿಣಗಳ ಬೌಲಿಂಗ್ ವಿಭಾಗ ಘಾತಕವೇನಲ್ಲ.
ಕ್ರಿಕೆಟಿಗರಿಗೆ ಮಾರ್ಗಸೂಚಿ
ಆಟಗಾರರು ಹೊರಗಡೆ ಊಟ-ತಿಂಡಿ ಸೇವಿಸಬಾರದು.ಸೆಲ್ಫಿಗಾಗಿ ಮುಗಿಬೀಳುವ ಅಭಿಮಾನಿಗಳ ಜತೆಗೆ ಬೆರೆಯಬಾರದು.
ಅನ್ಯರ ಮೊಬೈಲ್ ಫೋನ್ ಬಳಸಬಾರದು. ಅಪರಿಚಿತ ವ್ಯಕ್ತಿಗಳ ಜತೆಗೆ ನಿಕಟ ಸಂಪರ್ಕ ಹೊಂದಬಾರದು, ಹಸ್ತಲಾಘವ ನೀಡಬಾರದು.
ಕ್ರಿಕೆಟ್ ತಂಡ ಪಯಣಿಸುವ ವಿಮಾನ, ತಂಗುವ ಹೊಟೇಲ್, ರಾಜ್ಯಗಳ ಅಸೋಸಿಯೇಶನ್‌ನ ಸ್ಥಾಪನೆಗಳನ್ನು ಬಳಕೆಗೆ ಮೊದಲು ವೈದ್ಯಕೀಯ ತಂಡ ರೋಗಾಣು ಮುಕ್ತ (ಸ್ಯಾನಿಟೈಸ್) ಮಾಡಬೇಕು.
ಸ್ಟೇಡಿಯಂನಲ್ಲಿರುವ ಎಲ್ಲ ಶೌಚಾಲಯಗಳಲ್ಲಿ ಹ್ಯಾಂಡ್‌ವಾಶ್ ದ್ರಾವಣವನ್ನು ಕಡ್ಡಾಯವಾಗಿ ಇಡಬೇಕು ಮತ್ತು ಶೌಚಾಲಯಗಳನ್ನು ಕೂಡ ರೋಗಾಣು ಮುಕ್ತ ಮಾಡಬೇಕು. ಸ್ಟೇಡಿಯಂನ ವೈದ್ಯಕೀಯ ಸಿಬಂದಿ ಮತ್ತು ಪ್ರಥಮ ಚಿಕಿತ್ಸೆ ನೀಡುವವರು, ಕೊರೊನಾ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಎಲ್ಲ ವ್ಯಕ್ತಿಗಳ ದಾಖಲೆಗಳನ್ನು ಪಡೆಯಬೇಕು.
ಚೆಂಡಿಗೆ ಎಂಜಲು ಬಳಸುವಂತಿಲ್ಲ
ಕ್ರಿಕೆಟ್ ಪಂದ್ಯಗಳ ವೇಳೆ ಚೆಂಡನ್ನು ಹೆಚ್ಚು ಹೊಳಪಾಗಿಸಲು ಆಟಗಾರರು ಬಾಯಿಯಿಂದ ಎಂಜಲು ತೆಗೆದು ಚೆಂಡಿನ ಮೇಲ್ಮೆ„ಗೆ ಸವರುವುದು ಸಾಮಾನ್ಯ. ಆದರೆ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮೊದಲ ಏಕದಿನ ಪಂದ್ಯದ ವೇಳೆ ಭಾರತೀಯ ಆಟಗಾರರು ಚೆಂಡಿಗೆ ಎಂಜಲು ಹಾಕಿ ಉಜ್ಜುವುದನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆ. ಭುವನೇಶ್ವರ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.
“ಕೊರೊನಾ ಭೀತಿ ಇರುವುದರಿಂದ ಚೆಂಡಿಗೆ ಎಂಜಲು ಹಾಕಿ ಉಜ್ಜುವುದನ್ನು ಕಡಿಮೆ ಮಾಡಲು ತಂಡದ ವೈದ್ಯರು ನಮಗೆ ಸಲಹೆ ಮಾಡಿದ್ದಾರೆ. ಆದರೆ ಸಂಪೂರ್ಣವಾಗಿ ಇದನ್ನು ಅಳವಡಿಸುವುದು ನಮಗೆ ಕಷ್ಟವಾಗಬಹುದು. ಗರಿಷ್ಠ ಪ್ರಯತ್ನ ನಡೆಸಲಿದ್ದೇವೆ’ ಎಂದು ಭುವನೇಶ್ವರ್ ಕುಮಾರ್ ತಿಳಿಸಿದ್ದಾರೆ.
ಸಂಭಾವ್ಯ ತಂಡಗಳು
ಭಾರತ
ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಯಜುವೇಂದ್ರ ಚಹಲ್, ಬುಮ್ರಾ.
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬ ಬವುಮ/ಜೆ.ಜೆ. ಸ್ಮಟ್ಸ್, ರಸ್ಸಿ ವಾನ್‌ಡರ್ ಡುಸೆನ್, ಫಾ ಡು ಪ್ಲೆಸಿಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಆ್ಯಂಡಿಲ್ ಫೆಲುಕ್ವಾವೊ, ಕೇಶವ್ ಮಹಾರಾಜ್, ಬ್ಯೂರನ್ ಹೆಂಡ್ರಿಕ್ಸ್/ಜಾರ್ಜ್ ಲಿಂಡೆ, ಅನ್ರಿಚ್ ನೋರ್ಜೆ, ಲುಂಗಿ ಎನ್‌ಗಿಡಿ.
ಧರ್ಮಶಾಲಾದಲ್ಲಿ ಭಾರತದ ಸಾಧನೆ 2-2
ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಧರ್ಮಶಾಲಾದಲ್ಲಿ ಈವರೆಗೆ ನಡೆದದ್ದು 4 ಏಕದಿನ ಪಂದ್ಯ ಮಾತ್ರ. ಭಾರತ-ದಕ್ಷಿಣ ಆಫ್ರಿಕಾ ಇಲ್ಲಿ ಇನ್ನೂ ಮುಖಾಮುಖೀಯಾಗಿಲ್ಲ.
4 ಪಂದ್ಯಗಳಲ್ಲಿ ಭಾರತ ಎರಡನ್ನು ಗೆದ್ದಿದೆ, ಉಳಿದೆರಡರಲ್ಲಿ ಸೋತಿದೆ. ಇಲ್ಲಿ ಮೊದಲ ಏಕದಿನ ನಡೆದದ್ದು 2013ರಲ್ಲಿ. ಇಂಗ್ಲೆಂಡ್ ವಿರುದ್ಧ. ಧೋನಿ ಪಡೆ ಇದನ್ನು 7 ವಿಕೆಟ್‌ಗಳಿಂದ ಸೋತಿತ್ತು. 2014ರಲ್ಲಿ ಭಾರತ-ವಿಂಡೀಸ್ ಇಲ್ಲಿ ಎದುರಾಗಿದ್ದವು. ಬೃಹತ್ ಮೊತ್ತದ ಈ ಪಂದ್ಯವನ್ನು ಭಾರತ 59 ರನ್ನುಗಳಿಂದ ಗೆದ್ದಿತ್ತು. 2016ರಲ್ಲಿ ನಡೆದ ನ್ಯೂಜಿಲ್ಯಾಂಡ್ ಎದುರಿನ ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಜಯಿಸಿತ್ತು. 29 ರನ್ನಿಗೆ ಬಿತ್ತು 7 ವಿಕೆಟ್‌ಇಲ್ಲಿ ಕೊನೆಯ ಪಂದ್ಯ ನಡೆದದ್ದು 2017ರ ಡಿಸೆಂಬರ್‌ನಲ್ಲಿ. ಎದುರಾಳಿ ಶ್ರೀಲಂಕಾ. 112 ರನ್ನಿಗೆ ಕುಸಿದ ರೋಹಿತ್ ಪಡೆ 7 ವಿಕೆಟ್ ಸೋಲಿಗೆ ತುತ್ತಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.