ಧೈರ್ಯ ತುಂಬಿದ ಧೋನಿ
Team Udayavani, Sep 25, 2017, 11:38 AM IST
ರೊಹಟಿಕ್: ಇದನ್ನು ಕ್ರಿಕೆಟಿನ ವಿಪರ್ಯಾಸವೆನ್ನಿ ಅಥವಾ ದುರಂತ ಎನ್ನಿ… 2007ರ ಟಿ-20 ವಿಶ್ವಕಪ್ ಫೈನಲ್ ಪಂದ್ಯದ ಅಂತಿಮ ಓವರಿನ ಹೀರೋ ಜೋಗಿಂದರ್ ಶರ್ಮ ಆ ಪಂದ್ಯದ ಬಳಿಕ ಮತ್ತೆಂದೂ ಭಾರತ ತಂಡ ವನ್ನು ಪ್ರತಿನಿಧಿಸಿಲ್ಲ. ಇನ್ನು ಇದು ಸಾಧ್ಯವೂ ಇಲ್ಲ. 33ರ ಹರೆಯದ ಅವರೀಗ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ವಿಶ್ವಕಪ್ ಗೆಲುವಿನ 10ನೇ ವರ್ಷದ ಸಂಭ್ರಮ ವನ್ನು ಹಂಚಿಕೊಂಡಿದ್ದಾರೆ.
“ಆ ಅಂತಿಮ ಓವರ್ ನಾನು ಅಥವಾ ಹರ್ಭಜನ್ ಎಸೆಯ ಬೇಕಿತ್ತು. ಮಹಿ ಚೆಂಡನ್ನು ನನ್ನ ಕೈಗಿತ್ತಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಆದರೆ ನಾನು ಇದೇ ಕ್ಷಣಕ್ಕಾಗಿ ಕಾಯುತ್ತಿದ್ದೆ. ಇದಕ್ಕೂ ಮೊದಲು ನಾನು ಮತ್ತು ಮಹಿ ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ಸಲ ಒಟ್ಟಿಗೆ ಆಡಿದ್ದೆವು. ನನ್ನ ಡೆತ್ ಓವರ್ ಬೌಲಿಂಗ್ ಮೇಲೆ ಅವರಿಗೆ ವಿಶ್ವಾಸವಿತ್ತು. ಭಾರತಕ್ಕಾಗಿ ನಾನು ಈ ಪಂದ್ಯವನ್ನು ಗೆದ್ದುಕೊಡಬಲ್ಲೆ ಎಂಬ ವಿಶ್ವಾಸ ನನ್ನಲ್ಲೂ ಇತ್ತು. ಜತೆಗೆ ಒಂಥರ ಅಳುಕು ಕೂಡ ಇತ್ತು. ಇದನ್ನು ಗಮನಿಸಿದ ಧೋನಿ, ಪಂದ್ಯ ಸೋತರೆ ಅದಕ್ಕೆ ನಾನು ಹೊಣೆ ಎಂದು ಧೈರ್ಯ ತುಂಬಿದರು’ ಎಂದು ಜೋಗಿಂದರ್ ಆ ದಿನವನ್ನು ನೆನಪಿಸಿಕೊಂಡರು.
“ಔಟ್ ಸೈಡ್ ದಿ ಆಫ್ ಸ್ಟಂಪ್ ಎಸೆತ ನನ್ನ ಪ್ಲ್ರಾನ್ ಆಗಿತ್ತು. ಮೊದಲ ಎಸೆತವೇ ಸ್ವಿಂಗ್ ಆದಾಗ ನನಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿತು. ಆ ಗೆಲುವಿನ ಎಸೆತವಿಕ್ಕಲು ಓಡಿ ಬರುತ್ತಿದ್ದಾಗ ಮಿಸ್ಬಾ ಸ್ಕೂಪ್ ಹೊಡೆತಕ್ಕೆ ಸಜ್ಜಾಗಿದ್ದಾರೆ ಎಂಬ ಸಂಗತಿ ಕ್ಷಣಾರ್ಧದಲ್ಲಿ ನನ್ನ ಅರಿವಿಗೆ ಬಂತು. ಚೆಂಡಿನ ಲೈನ್ ಮತ್ತು ಪೇಸ್ ಬದಲಿಸಲು ನನಗೆ ಅಷ್ಟು ಅವಕಾಶ ಸಾಕಿತ್ತು. ನಾನು ನಿಧಾನಗತಿಯ ಎಸೆತವಿಕ್ಕಿದೆ. ಮಿಸ್ಬಾ ಬಾರಿಸಿದರು. ಆಗ ಏನೋ ತಳಮಳ. ಚೆಂಡು ಗಾಳಿಯಲ್ಲಿ ತೇಲುತ್ತಿದ್ದಾಗ ಉಸಿರೇ ನಿಂತು ಹೋಗಿತ್ತು. ಅಲ್ಲಿ ಕ್ಷೇತ್ರರಕ್ಷಕ ರೊಬ್ಬರಿದ್ದರು ಮತ್ತು ಅದು ಶ್ರೀಶಾಂತ್ ಆಗಿದ್ದರು. ಅವರ ಫೀಲ್ಡಿಂಗ್ ಕೌಶಲ ಯಾರಿಗೆ ತಾನೆ ತಿಳಿದಿಲ್ಲ! ಬಾಲ್ ಪಕಡ್‌ಲೇನಾ ಭಾ ಎಂದು ಪ್ರಾರ್ಥಿಸತೊಡಗಿದೆ. ಇದು ಫಲಿಸಿತು. ಭಾರತ ಗೆದ್ದಿತು. ಇದು ನನ್ನ ಬದುಕಿನ ಮಹೋನ್ನತ ಗಳಿಗೆ…’ ಎಂದರು ಜೋಗಿಂದರ್.
ಆದರೆ ಮತ್ತೆಂದೂ ಭಾರತವನ್ನು ಪ್ರತಿನಿಧಿಸುವುದು ತನಗೆ ಸಾಧ್ಯ ವಾಗಲಿಲ್ಲ ಎಂಬ ನೋವು ಜೋಗಿಂದರ್ ಅವರನ್ನು ಈಗಲೂ ಕಾಡುತ್ತಿದೆ. ಜೋಗಿಂದರ್ ಅವರ ಭಾರತದ ಕ್ರಿಕೆಟ್ ನಂಟು 4 ಏಕದಿನ ಹಾಗೂ 4 ಟಿ-20 ಪಂದ್ಯಗಳಿಗಷ್ಟೇ ಸೀಮಿತ ಗೊಂಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.