ಡಕ್‌ವರ್ಥ್-ಲೂಯಿಸ್ ನಿಯಮ ಸುಧಾರಣೆ
Team Udayavani, Sep 30, 2018, 6:25 AM IST
ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಿಕೆಟ್ ಪಂದ್ಯಗಳ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.
ಮಳೆ ಅಥವಾ ಇನ್ನಿತರೆ ಕಾರಣಗಳಿಗಾಗಿ ಪಂದ್ಯವೊಂದು ನಿಂತಾಗ ಅಳವಡಿಸುವ ಡಕ್‌ವರ್ಥ್-ಲೂಯಿಸ್ (ಎಇ-ಎಲ್) ನಿಯಮವನ್ನು ಮತ್ತೆ ಪರಿಷ್ಕರಿಸಲಾಗಿದೆ. ಮೈದಾನದಲ್ಲಿ ನಡೆಯುವ ವಿವಿಧ ತಪ್ಪುಗಳಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನೂ ಹೆಚ್ಚಿಸಲಾಗಿದೆ. ಇದರೊಂದಿಗೆ ಬಹುಕಾಲದಿಂದ ಡಕ್‌ವರ್ಥ್-ಲೂಯಿಸ್ ನಿಯಮದಲ್ಲಿ ಬದಲಾಗಬೇಕು ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿದಂತಾಗಿದೆ.
ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವುದರಿಂದ ಆಟದ ಮೂಲಭೂತ ನಿಯಮಗಳಲ್ಲಿ (ಬ್ಯಾಟಿಂಗ್, ಬೌಲಿಂಗ್, ಓವರ್‌ಗಳಿಗೆ ಸಂಬಂಧಿಸಿದಂತೆ) ಮಾತ್ರ ಬದಲಾವಣೆ ಮಾಡಲು ಹೋಗಿಲ್ಲ. ಐಸಿಸಿಯ ಪರಿಷ್ಕೃತ ಡಕ್‌ವರ್ಥ್-ಲೂಯಿಸ್ ನಿಯಮ ಹಾಗೂ ಹೊಸ ಶಿಕ್ಷೆ ಪ್ರಮಾಣ ರವಿವಾರ ನಡೆಯುವ ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ನಡುವಿನ ಪಂದ್ಯದಿಂದಲೇ ಜಾರಿಗೆ ಬರಲಿವೆ.
ನೂತನ ಬದಲಾವಣೆಗಳು
2014ರಲ್ಲೇ ಡಿ-ಎಲ್‌ನ ಪರಿಷ್ಕೃತ ರೂಪವನ್ನು ಪರಿಚಯಿಸಲಾಗಿತ್ತು. ಆಗ 700 ಏಕದಿನ ಹಾಗೂ 428 ಟಿ20 ಪಂದ್ಯಗಳ 2,40,000 ಎಸೆತಗಳನ್ನು ಪರಿಶೀಲಿಸಿ ಹೊಸ ರೂಪವನ್ನು ನೀಡಲಾಗಿತ್ತು. ಅದರಲ್ಲಿ ಈಗ ಇನ್ನಷ್ಟು ಬದಲಾವಣೆ ಮಾಡಲಾಗಿದೆ. ಒಟ್ಟಾರೆ ಇದು ಡಿ-ಎಲ್‌ಗೆ ಮಾಡಿದ 3ನೇ ಬದಲಾವಣೆ. ಕಳೆದ ನಾಲ್ಕು ವರ್ಷದಲ್ಲಿ ಪ್ರತಿ ಎಸೆತ ಎಸೆತಕ್ಕೂ ದಾಖಲಾದ ರನ್‌ಗಳು, ಈಗ ಅಳವಡಿಕೆಯಲ್ಲಿರುವ ಪವರ್ ಪ್ಲೇ ನಿಯಮ ಎಲ್ಲವನ್ನೂ ಹೊಸ ಪರಿಷ್ಕರಣೆಯಲ್ಲಿ ಪರಿಗಣಿಸಲಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ತಂಡಗಳು ಹೆಚ್ಚಿನ ರನ್ ಗಳಿಸುವ ಸಾಮರ್ಥ್ಯ ಹೊಂದಿವೆ. ಹಾಗೆಯೇ ಸರಾಸರಿ ಮೊತ್ತವೂ ಏರಿಕೆಯಾಗುತ್ತಿದೆ. ಇದನ್ನೆಲ್ಲ ಗಮನಿಸಿದಾಗ ಡಿ-ಎಲ್ ಪರಿಷ್ಕೃತ ನಿಯಮ ತಂಡವೊಂದಕ್ಕೆ ಹೆಚ್ಚಿನ ಗುರಿ ನೀಡುತ್ತವೆ. ಅಂದರೆ ತಂಡವೊಂದು ರನ್ ಬೆನ್ನತ್ತುತ್ತಿದ್ದ ವೇಳೆ ಮಳೆ ಬಂದರೆ ಅದಕ್ಕೆ ಪರಿಷ್ಕೃತ ಗುರಿ ನೀಡುವಾಗ ಹೆಚ್ಚಿನ ಮೊತ್ತವನ್ನೇ ನೀಡುವ ಸಾಧ್ಯತೆಯಿದೆ (ಇದಿನ್ನೂ ಖಚಿತವಾಗಬೇಕು). ಹೊಸ ಮಾದರಿಯನ್ನು ಕ್ರಿಕೆಟ್‌ನ ಎಲ್ಲ ಮಾದರಿಗೂ ಅಳವಡಿಸಲು ಸಾಧ್ಯವಾಗುವಂತೆ ತಯಾರಿಸಲಾಗಿದೆ. ಪುರುಷರ ಏಕದಿನ ಹಾಗೂ ಟಿ20, ಮಹಿಳೆಯರ ಏಕದಿನ ಹಾಗೂ ಟಿ20ಗೂ ಇದೇ ಪರಿಷ್ಕೃತ ನಿಯಮವೇ ಸಾಕು ಎಂದು ಐಸಿಸಿ ಹೇಳಿದೆ.
ವಿವಿಧ ತಪ್ಪಿಗೆ ಶಿಕ್ಷೆಯೂ ಹೆಚ್ಚಳ
ಐಸಿಸಿ ಮೈದಾನದಲ್ಲಿ ಆಟಗಾರರು ನಡೆಸುವ ವಿವಿಧ ರೀತಿಯ ತಪ್ಪುಗಳಿಗೂ ಶಿಕ್ಷೆಯನ್ನು ಪರಿಷ್ಕರಣೆಗೊಳಪಡಿಸಿದೆ. ಆದರೆ ಆಟದ ಮೂಲಭೂತ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡಲು ಹೋಗಿಲ್ಲ. ಮುಂದಿನ ವರ್ಷ ಏಕದಿನ ವಿಶ್ವಕಪ್ ಇರುವುದರಿಂದ ಗೊಂದಲಗಳನ್ನು ನಿವಾರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ವರ್ಷ ಭಾರೀ ಸದ್ದು ಮಾಡಿದ ಚೆಂಡು ವಿರೂಪ ಪ್ರಕರಣಕ್ಕೂ ಗರಿಷ್ಠ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಪಂದ್ಯದ ವೇಳೆ ಮೋಸ ಮಾಡುವುದು, ಅನಗತ್ಯವಾಗಿ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದು, ವೈಯಕ್ತಿಕ ನಿಂದನೆಗಳಿಗೂ ಗರಿಷ್ಠ ಶಿಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ.
ಯಾವ ತಪ್ಪಿಗೆ ಯಾವ ಹಂತದ ಶಿಕ್ಷೆ?
ತಪ್ಪು ಪ್ರಮಾಣ
ತಪ್ಪು ಮಾರ್ಗದಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಯತ್ನ ಹಂತ-1
ವೈಯಕ್ತಿಕ ನಿಂದನೆ ಹಂತ-2,3
ಎದ್ದುಕಾಣುವಂತೆ ಅಶ್ಲೀಲ ವರ್ತನೆ ಹಂತ-1
ಅಂಪೈರ್ ತೀರ್ಮಾನಕ್ಕೆ ಅವಿಧೇಯತೆ ಹಂತ-1
ಚೆಂಡಿನ ಸ್ಥಿತಿಯನ್ನು ವಿರೂಪಗೊಳಿಸುವುದು ಹಂತ-2,3
ಚೆಂಡು ವಿರೂಪಕ್ಕೆ 6 ಟೆಸ್ಟ್ ಅಥವಾ 12 ಏಕದಿನ ನಿಷೇಧ
ಕೆಲವು ತಿಂಗಳ ಹಿಂದೆ ಆತಿಥೇಯ ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯ ವಿರುದ್ಧ ನಡೆದ 3ನೇ ಟೆಸ್ಟ್ ವೇಳೆ ಆಸ್ಟ್ರೇಲಿಯ ತಂಡದ ಅಂದಿನ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್, ಬ್ಯಾಟ್ಸ್‌ಮನ್ ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಚೆಂಡು ವಿರೂಪ ಮಾಡಿದ್ದರು. ಇದು ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿತ್ತು. ವಿಶ್ವಾದ್ಯಂತ ವಿವಾದ ಸೃಷ್ಟಿಸಿದ ಈ ಪ್ರಕರಣದಲ್ಲಿ, ಸ್ಟೀವ್ ಸ್ಮಿತ್ ಮತ್ತು ವಾರ್ನರ್ ತಲಾ 1 ವರ್ಷ, ಬ್ಯಾನ್‌ಕ್ರಾಫ್ಟ್ 9 ತಿಂಗಳು ಕ್ರಿಕೆಟ್ ಆಸ್ಟ್ರೇಲಿಯಾದಿಂದ ನಿಷೇಧಕ್ಕೊಳಗಾದರು. ಮುಂದೆ ವೆಸ್ಟ್ ಇಂಡೀಸ್ ಪ್ರವಾಸ ವೇಳೆ ಶ್ರೀಲಂಕಾ ನಾಯಕರಾಗಿದ್ದಾಗ ದಿನೇಶ್ ಚಂಡಿಮಲ್ ಅವರೂ ಚೆಂಡು ವಿರೂಪ ಮಾಡಿದ್ದರು. ಇದನ್ನೆಲ್ಲ ಪರಿಗಣಿಸಿ ಚೆಂಡು ವಿರೂಪ ಪ್ರಕರಣಕ್ಕೆ ಗರಿಷ್ಠ ಶಿಕ್ಷೆಯನ್ನು ಪ್ರಕಟಿಸಿದೆ. ಪ್ರಕರಣದ ತೀವ್ರತೆಗೆ ತಕ್ಕಂತೆ ಶಿಕ್ಷೆ ಪ್ರಕಟವಾಗಲಿದೆ.
ಈ ಹಿಂದೆ ಚೆಂಡು ವಿರೂಪದ ವೇಳೆ ಹಂತ-1,2ರ ಶಿಕ್ಷೆ ಆಗುತ್ತಿತ್ತು. ಸಣ್ಣ ಪ್ರಮಾಣದ ವಿರೂಪಕ್ಕೆ 1 ಟೆಸ್ಟ್, 2 ಏಕದಿನ, ಇನ್ನೂ ಹೆಚ್ಚಿನ ವಿರೂಪಕ್ಕೆ ಹಂತ-2ರ ನಿಯಮ ಅನ್ವಯವಾಗುತ್ತಿತ್ತು. ಇದರ ಪ್ರಕಾರ 4 ಟೆಸ್ಟ್ ಅಥವಾ 8 ಏಕದಿನ ನಿಷೇಧವಾಗುತ್ತಿತ್ತು. ಈಗ ಚೆಂಡು ವಿರೂಪ ಪ್ರಕರಣವನ್ನು ಹಂತ-2,3ರ ಶಿಕ್ಷೆಗೆ ಸೀಮಿತಗೊಳಿಸಲಾಗಿದೆ. ಹಂತ-3ರಡಿ ಗರಿಷ್ಠ 6 ಟೆಸ್ಟ್ ಹಾಗೂ 12 ಏಕದಿನ ಪಂದ್ಯದ ನಿಷೇಧ ವಿಧಿಸಲಾಗುತ್ತದೆ.
1997ರಿಂದ ಜಾರಿಯಾಗಿತ್ತು ಡಕ್‌ವರ್ಥ್ ಲೂಯಿಸ್
ಡಕ್‌ವರ್ಥ್ ಲೂಯಿಸ್ ನಿಯಮಕ್ಕೆ ವಿಶೇಷ ಇತಿಹಾಸವಿದೆ. ಇದು ಮೊದಲನೇ ಬಾರಿ ಜಾರಿಯಾಗಿದ್ದು 1997ರಲ್ಲಿ ಇಂಗ್ಲೆಂಡ್-ಜಿಂಬಾಬ್ವೆ ನಡುವಿನ ಏಕದಿನ ಸರಣಿಯಲ್ಲಿ ನಡೆದ 2ನೇ ಪಂದ್ಯದಲ್ಲಿ. ಈ ನಿಯಮ ಜಾರಿಯಾಗಲು ಕಾರಣ 1992ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ. ಆಗ ಇಂಗ್ಲೆಂಡ್ ಹಾಗೂ ದ.ಆಫ್ರಿಕಾ ಮುಖಾಮುಖೀಯಾಗಿದ್ದವು. ಮಳೆ ಬಂದು ಪಂದ್ಯ ನಿಂತಾಗ ದ.ಆಫ್ರಿಕಾ 13 ಎಸೆತಗಳಲ್ಲಿ 22 ರನ್‌ಗಳಿಸಬೇಕಿತ್ತು. ಆಗ ಮೋಸ್ಟ್ ಪ್ರೊಡಕ್ಟಿವ್ ಓವರ್ಸ್ ಎಂಬ ನಿಯಮ ಬಳಸುತ್ತಿದ್ದರು. ಅದರ ಪ್ರಕಾರ ಪಂದ್ಯ ಆರಂಭವಾದಾಗ ದ.ಆಫ್ರಿಕಾ ಕೇವಲ 1 ಎಸೆತದಲ್ಲಿ 22 ರನ್ ಗಳಿಸಬೇಕಾಗಿತ್ತು. ಯಾವ ರೀತಿಯಲ್ಲಿ ನೋಡಿದರೂ ಇದು ಅಸಂಭವ.
ಇದನ್ನು ಗಮನಿಸಿ ಇಂಗ್ಲೆಂಡ್‌ನ ಇಬ್ಬರು ಅಂಕಿಸಂಖ್ಯೆ ತಜ್ಞರಾದ ಫ್ರಾಂಕ್ ಡಕ್‌ವರ್ಥ್-ಟೋನಿ ಲೂಯಿಸ್ ಸೇರಿಕೊಂಡು ನಿಯಮವೊಂದನ್ನು ಸಿದ್ಧಪಡಿಸಿದರು. ಪಂದ್ಯವೊಂದು ಯಾವುದೇ ರೀತಿಯ ಅಡಚಣೆಗಳಿಂದ ನಿಂತು ಪುನರಾರಂಭಗೊಂಡರೆ ಅದರ ಮುಂದಿನ ಸ್ಥಿತಿಗತಿಗಳನ್ನು ನಿರ್ಧರಿಸುವುದು ಇದರ ಉದ್ದೇಶ. ಅಂದರೆ ತಂಡವೊಂದು ರನ್ ಬೆನ್ನತ್ತುತ್ತಿದ್ದ ವೇಳೆ ಪಂದ್ಯ ನಿಂತರೆ ಪರಿಷ್ಕೃತ ಗುರಿಯನ್ನು ಪ್ರಕಟಿಸಲಾಗುತ್ತದೆ. ಈ ವೇಳೆ ಪಂದ್ಯ ನಿಂತ ಹಂತ, ಬ್ಯಾಟಿಂಗ್ ತಂಡ ರನ್ ಗಳಿಸುತ್ತಿದ್ದ ವೇಗ ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಉಳಿಯುವ ಎಸೆತದಲ್ಲಿ ಎಷ್ಟು ರನ್ ಗಳಿಸಲು ತಂಡವೊಂದಕ್ಕೆ ಸಾಧ್ಯ ಎಂದು ಲೆಕ್ಕ ಹಾಕಿ ಪರಿಷ್ಕೃತ ಗುರಿ ನೀಡಲಾಗುತ್ತದೆ. ಇದು ಶುದ್ಧ ಗಣಿತದ ಲೆಕ್ಕಾಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.