![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 15, 2017, 8:29 AM IST
ಭಾರತ-ಶ್ರೀಲಂಕಾ ನಡುವಿನ ಕೋಲ್ಕತಾದ ಈಡನ್ ಗಾರ್ಡನ್ಸ್ ಪಂದ್ಯ ಎಂದೊಡನೆ ನೆನಪಿಗೆ ಬರುವುದು 1996ರ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್. ಅರ್ಜುನ ರಣತುಂಗ ಪಡೆಯ ವಿರುದ್ಧ ಆತಿಥೇಯ ಭಾರತ ಸೋಲಿನ ಹಾದಿ ಹಿಡಿದಾಗ ರೊಚ್ಚಿಗೆದ್ದ ವೀಕ್ಷಕರು ನಡೆಸಿದ ದುಂಡಾವರ್ತಿ, ಹಚ್ಚಿದ ಕಿಚ್ಚು, ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ ಪಂದ್ಯವನ್ನು ರದ್ದುಗೊಳಿಸಿ ಶ್ರೀಲಂಕಾವನ್ನು ವಿಜಯಿ ಎಂದು ಘೋಷಿಸಿದ್ದು, ವಿನೋದ್ ಕಾಂಬ್ಳಿ ನಡು ಕ್ರೀಸಿನಲ್ಲಿ ನಿಂತು ಅತ್ತದ್ದು… ಹೀಗೆ ಕ್ರಿಕೆಟ್ ಕಹಿ ಕಾಡುತ್ತ ಹೋಗುತ್ತದೆ.
ಇದೇ “ಈಡನ್ ಗಾರ್ಡನ್ಸ್’ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಮತ್ತೆ ಮುಖಾಮುಖೀಯಾಗುತ್ತಿವೆ. ಆದರೆ ಇದು ಏಕದಿನ ಪಂದ್ಯವಲ್ಲ, ಟೆಸ್ಟ್ ಮುಖಾಮುಖೀ. ಗುರುವಾರದಿಂದ ಇಲ್ಲಿ ಸರಣಿಯ ಮೊದಲ ಟೆಸ್ಟ್ ಆರಂಭವಾಗಲಿದೆ. ಈಡನ್ ಅಂಗಳ ಸರ್ವವಿಧದಲ್ಲೂ ಸಜ್ಜಾಗಿದೆ. ಅಂದಹಾಗೆ, ಇದು ಭಾರತ-ಶ್ರೀಲಂಕಾ ನಡುವೆ ಕೋಲ್ಕತಾದಲ್ಲಿ ನಡೆ ಯುವ ಮೊದಲ ಟೆಸ್ಟ್ ಪಂದ್ಯ ಎಂಬುದು ವಿಶೇಷ.
ಭಾರತದ ಅತ್ಯಂತ ಪುರಾತನ ಕ್ರೀಡಾಂಗಣವಾದ “ಈಡನ್ ಗಾರ್ಡನ್ಸ್’ನಲ್ಲಿ 1934ರಿಂದ ಮೊದಲ್ಗೊಂಡು 2016ರ ತನಕ 40 ಟೆಸ್ಟ್ ಪಂದ್ಯಗಳನ್ನು ಆಡಲಾಗಿದೆ. ಬಹು ತೇಕ ಎಲ್ಲ ಪ್ರವಾಸಿ ತಂಡ ಗಳಿಗೂ ಈ ಐತಿಹಾಸಿಕ ಅಂಗಳದಲ್ಲಿ ಟೆಸ್ಟ್ ಆಡುವ ಭಾಗ್ಯ ಲಭಿಸಿದೆ. ಆದರೆ ಶ್ರೀಲಂಕಾ ಈವರೆಗೆ ಇಲ್ಲಿ ಆಡಿಲ್ಲ. 2 ತಿಂಗಳ ಹಿಂದಷ್ಟೇ ಶ್ರೀಲಂಕಾಕ್ಕೆ ತೆರಳಿದ ಭಾರತ ತಂಡ ಅಲ್ಲಿ ಆಡಲಾದ ಎಲ್ಲ 9 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಗೆದ್ದು ಮೆರೆದದ್ದು ಈಗ ಇತಿಹಾಸ. ಇದರಲ್ಲಿ 3 ಟೆಸ್ಟ್ ಗೆಲುವುಗಳೂ ಸೇರಿವೆ. ಇದೇ ಲಯದಲ್ಲಿ ಸಾಗಿದರೆ ಟೀಮ್ ಇಂಡಿಯಾ ಕೋಲ್ಕತಾದಲ್ಲೂ ಗೆಲುವಿನ ಆರಂಭ ಕಂಡುಕೊಳ್ಳಬಹುದು.
ಭಾರತದಲ್ಲಿ ಲಂಕಾ ಇನ್ನೂ ಗೆದ್ದಿಲ್ಲ !
ಹೌದು, ಭಾರತದಲ್ಲಿ ಈವರೆಗೆ ಲಂಕಾ 17 ಟೆಸ್ಟ್ ಪಂದ್ಯಗಳನ್ನಾಡಿದರೂ ಈವರೆಗೆ ಒಂದನ್ನೂ ಗೆದ್ದಿಲ್ಲ ! ಈ 17 ಪಂದ್ಯಗಳಲ್ಲಿ ಭಾರತ ಹತ್ತರಲ್ಲಿ ಜಯ ಸಾಧಿಸಿದರೆ, ಉಳಿದ 7 ಪಂದ್ಯಗಳು ಡ್ರಾಗೊಂಡಿವೆ. 1997-98ರ 3 ಪಂದ್ಯ ಗಳ ಸರಣಿಯನ್ನು ಡ್ರಾ ಮಾಡಿಕೊಂಡದ್ದು ಲಂಕೆಯ ಅತ್ಯುತ್ತಮ ಸಾಧನೆ. ಹಾಗೆ ನೋಡಿದರೆ, ಶ್ರೀಲಂಕಾ ತನ್ನ ಟೆಸ್ಟ್ ಚರಿತ್ರೆಯ ಮೊದಲ ಪಂದ್ಯ ವನ್ನೇ ಗೆಲುವಿನೊಂದಿಗೆ ಆರಂಭಿಸಬೇಕಿತ್ತು. 1982ರ ಸೆಪ್ಟಂಬರ್‌ನಲ್ಲಿ ಭಾರತದ ವಿರುದ್ಧ ಚೆನ್ನೈಯಲ್ಲಿ ಪ್ರಪ್ರಥಮ ಟೆಸ್ಟ್ ಆಡಿದ ಶ್ರೀಲಂಕಾ ಗೆಲುವಿನ ಬಾಗಿಲ ತನಕ ಬಂದಿತ್ತು. ಆದರೆ ಭಾರತದ ನಸೀಬು ಗಟ್ಟಿ ಇತ್ತು. ಅದು “ಕ್ರಿಕೆಟ್ ಶಿಶು’ಗಳೆದುರು ದೊಡ್ಡ ಅವಮಾನವೊಂದರಿಂದ ಪಾರಾಯಿತು. ಲಂಕೆಗೆ ಅಲ್ಲಿ ಒಲಿಯಬೇಕಿದ್ದ ಗೆಲುವು ಇಂದಿನ ವರೆಗೂ ಕೈಹಿಡಿದಿಲ್ಲ.
ಮೊದಲ ಪಂದ್ಯದಲ್ಲಿ ಮೆರೆದ ಲಂಕಾ
ಶ್ರೀಲಂಕಾ ತಂಡ ಚೊಚ್ಚಲ ಟೆಸ್ಟ್ ಆಡಿದ್ದು ಚೆನ್ನೈನ ” ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ. ಪ್ರವಾಸಿ ತಂಡದ ನಾಯಕರಾಗಿದ್ದವರು ದುಲೀಪ್ ಮೆಂಡಿಸ್. ಮೊದಲು ಬ್ಯಾಟ್ ಮಾಡಿದ ಲಂಕಾ ಮೆಂಡಿಸ್ ಶತಕದ ನೆರವಿನಿಂದ (105) 346 ರನ್ ಪೇರಿಸಿತು. ಸ್ಪಿನ್ನರ್ ದಿಲೀಪ್ ದೋಶಿ 5, ಕಪಿಲ್ 3 ಹಾಗೂ ಮದನ್‌ಲಾಲ್ 2 ವಿಕೆಟ್ ಕಿತ್ತರು.
ಜವಾಬಿತ್ತ ಭಾರತ ಛಾತಿಗೆ ತಕ್ಕ ಪ್ರದರ್ಶನ ನೀಡಿ 6ಕ್ಕೆ 566 ರನ್ ಪೇರಿಸಿ ಡಿಕ್ಲೇರ್ ಮಾಡಿತು. ನಾಯಕ ಗಾವಸ್ಕರ್ 155, ಸಂದೀಪ್ ಪಾಟೀಲ್ 114 ರನ್ ಬಾರಿಸಿದರು. ದ್ವಿತೀಯ ಸರದಿಯಲ್ಲಿ ಮೆಂಡಿಸ್ ಮತ್ತೆ 105 ರನ್ ಹೊಡೆದರು; ರಾಯ್ ಡಾಯಸ್ ಬ್ಯಾಟಿನಿಂದ 97 ರನ್ ಸಿಡಿಯಿತು. ಲಂಕಾ 394 ರನ್ ಮಾಡಿತು. ಕಪಿಲ್ 5, ದೋಷಿ 3, ರಾಕೇಶ್ ಶುಕ್ಲಾ 2 ವಿಕೆಟ್ ಕಿತ್ತರು.
175 ರನ್ನುಗಳ ಸಾಮಾನ್ಯ ಮೊತ್ತದ ಗೆಲುವಿನ ಗುರಿ ಪಡೆದ ಭಾರತಕ್ಕೆ ದೊಡ್ಡ ಗಂಡಾಂತರವೊಂದು ಕಾದಿತ್ತು. ಗೆಲುವಿರಲಿ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ಹರಸಾಹಸವಾಗಿ ಪರಿಣಮಿಸಿತ್ತು. ಅಸಂತ ಡಿ ಮೆಲ್ (68ಕ್ಕೆ 5) ದಾಳಿಗೆ ಸಿಲುಕಿದ ಭಾರತ ಕುಸಿಯುತ್ತಲೇ ಹೋಯಿತು. ಸೋಲಿನ ಭೀತಿಯೂ ಎದುರಾಯಿತು. ಆದರೆ ಯಶ್ಪಾಲ್ ಶರ್ಮ ಒಂದೆಡೆ ಕ್ರೀಸ್ ಆಕ್ರಮಿಸಿಕೊಂಡು ತಂಡಕ್ಕೆ ರಕ್ಷಣೆ ಒದಗಿಸಿದರು. ಪಂದ್ಯ ಡ್ರಾದಲ್ಲಿ ಕೊನೆಗೊಳ್ಳುವಾಗ ಭಾರತದ ಸ್ಕೋರ್ 7ಕ್ಕೆ 135 ರನ್!
ಎಚ್. ಪ್ರೇಮಾನಂದ ಕಾಮತ್
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.