Visakhapatnam Test ಪಂದ್ಯಕ್ಕೆ ತಂಡ ಪ್ರಕಟಿಸಿದ ಇಂಗ್ಲೆಂಡ್; ಎರಡು ಬದಲಾವಣೆ
Team Udayavani, Feb 1, 2024, 4:38 PM IST
ವಿಶಾಖಪಟ್ಟಣ: ಭಾರತ ಮತ್ತು ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯವು ವಿಶಾಖಪಟ್ಟಣದಲ್ಲಿ ಫೆ.2ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್ ತಂಡವು ಎರಡನೇ ಪಂದ್ಯದಲ್ಲಿಯೂ ಗೆಲುವಿನ ಓಟ ಮುಂದುವರಿಸುವ ತವಕವಿದೆ.
ವಿಶಾಖಪಟ್ಟಣ ಪಂದ್ಯಕ್ಕೆ ಒಂದು ದಿನ ಮೊದಲೇ ಇಂಗ್ಲೆಂಡ್ ತನ್ನ ಆಡುವ ಬಳಗವನ್ನು ಪ್ರಕಟಿಸಿದೆ. ಹೈದರಾಬಾದ್ ಪಂದ್ಯದಲ್ಲಿ ಗೆದ್ದಿದ್ದರೂ ಎರಡನೇ ಪಂದ್ಯಕ್ಕೆ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ ಮತ್ತು ಯುವ ಆಟಗಾರ ಶೋಯೆಬ್ ಬಶೀರ್ ಅವರು ಎರಡನೇ ಪಂದ್ಯದಲ್ಲಿ ಆಡಲಿದ್ದಾರೆ.
ಹೈದರಾಬಾದ್ ಪಂದ್ಯದಲ್ಲಿ ಗಾಯಗೊಂಡಿದ್ದ ಜ್ಯಾಕ್ ಲೀಚ್ ಅವರು ಎರಡನೇ ಪಂದ್ಯದಲ್ಲಿ ಆಡುತ್ತಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಏಕೈಕ ವೇಗಿ ಮಾರ್ಕ್ ವುಡ್ ಅವರ ಬದಲಿಗೆ ಜೇಮ್ಸ್ ಆ್ಯಂಡರ್ಸನ್ ಅವರು ವಿಶಾಖಪಟ್ಟಣದಲ್ಲಿ ಆಡಲಿದ್ದಾರೆ.
ಭಾರತ ಇನ್ನೂ ಆಡುವ ಬಳಗವನ್ನು ಪ್ರಕಟಿಸಿಲ್ಲ. ಭಾರತ ಹೆಚ್ಚಾಗಿ ಟಾಸ್ ಸಮಯದಲ್ಲಿಯೇ ಆಡುವ ಬಳಗ ಪ್ರಕಟಿಸುವ ಪರಿಪಾಠ ಹೊಂದಿದೆ. ಹೈದರಾಬಾದ್ ಪಂದ್ಯದಲ್ಲಿ ಆಡಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಗಾಯಗೊಂಡಿದ್ದ ಕಾರಣ ಮುಂದಿನ ಪಂದ್ಯಕ್ಕೆ ಅನಿವಾರ್ಯ ಬದಲಾವಣೆ ಮಾಡಲಿದೆ.
ಆತಿಥೇಯ ತಂಡಕ್ಕೆ ಆಘಾತ ನೀಡುವ ಮೂಲಕ ಹೈದರಾಬಾದ್ ನಲ್ಲಿ ಅದ್ಭುತ ಗೆಲುವನ್ನು ದಾಖಲಿಸಿದ ಇಂಗ್ಲೆಂಡ್ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೇವಲ 20 ವರ್ಷದ ಬಶೀರ್ ಕೇವಲ ಆರು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆದರೂ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಬಯಸಿದ್ದರಿಂದ ಅವನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರು. ವಿಶಾಖಪಟ್ಟಣದಲ್ಲಿ ಅವರು ಪದಾರ್ಪಣೆ ಮಾಡಲಿದ್ದಾರೆ.
ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಜಾನಿ ಬೇರಿಸ್ಟೋ, ಬೆನ್ ಸ್ಟೋಕ್ಸ್, ಬೆನ್ ಫೋಕ್ಸ್, ರೆಹಾನ್ ಅಹಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.