ಮಾಜಿ ಕೀಪರ್ ವಿ.ಬಿ. ಚಂದ್ರಶೇಖರ್ ಆತ್ಮಹತ್ಯೆ
ಫ್ರಾಂಚೈಸಿಯಲ್ಲಿ ನಷ್ಟ, ಖನ್ನತೆಯಿಂದ ನೇಣಿಗೆ ಶರಣು; ಭಾರತ ಪರ 7 ಏಕದಿನ ಆಡಿದ ತಮಿಳುನಾಡು ಕ್ರಿಕೆಟಿಗ
Team Udayavani, Aug 17, 2019, 5:45 AM IST
ಚೆನ್ನೈ: ಭಾರತದ ಮಾಜಿ ವಿಕೆಟ್ ಕೀಪರ್, ಹೊಡಿಬಡಿ ಆರಂಭಕಾರ, ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಸದಸ್ಯ ವಿ.ಬಿ. ಚಂದ್ರಶೇಖರ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆನ್ನೈಯ ಮೈಲಾ ಪುರ್ ನಿವಾಸದಲ್ಲಿ ಗುರುವಾರ ರಾತ್ರಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಕೋಣೆಯ ಬಾಗಿಲು ಮುರಿದು ಮೃತದೇಹವನ್ನು ಕೆಳಗಿಳಿಸಿ ಬಳಿಕ ರೋಯಾಪೇಟ್ ಸರಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಸಲಾಯಿತು ಎಂದು ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮನೆಯ ಇತರ ಸದ್ಯಸರೊಂದಿಗೆ ಚಹಾ ಸೇವಿಸಿದ ಬಳಿಕ ಚಂದ್ರಶೇಖರ್ ಮಹಡಿಯ ಕೋಣೆಗೆ ತೆರಳಿದ್ದರು. ರಾತ್ರಿಯಾದರೂ ಕೆಳಗೆ ಬಂದಿರಲಿಲ್ಲ. ಕೋಣೆಯ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಿಟಕಿಯಿಂದ ನೋಡುವಾಗ ಅವರ ದೇಹ ಫ್ಯಾನಿಗೆ ನೇತಾಡುತ್ತಿತ್ತು ಎಂಬುದು ಕುಟುಂಬದವರ ಹೇಳಿಕೆ. ಆರಂಭದಲ್ಲಿ ತೀವ್ರ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿತ್ತು.
ತನಿಖಾಧಿಕಾರಿಗಳ ಹೇಳಿಕೆ
ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಕಾಂಚಿ ವೀರನ್ಸ್ ಫ್ರಾಂಚೈಸಿ ಹೊಂದಿದ್ದ ಚಂದ್ರಶೇಖರ್, ಇದರಲ್ಲಿ ಭಾರೀ ನಷ್ಟ ಅನುಭವಿಸಿದ್ದರು. ಇದರಿಂದ ಖನ್ನತೆಗೊಳಗಾಗಿ ಈ ದುರಂತ ತಂದುಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ಜತೆ ಆತ್ಮೀಯ ಸ್ನೇಹ ಹೊಂದಿದ್ದ ಚಂದ್ರಶೇಖರ್, ಚೆನ್ನೈಯಲ್ಲಿ ಕ್ರಿಕೆಟ್ ಕೋಚಿಂಗ್ ಸೆಂಟರ್ ಒಂದನ್ನು ನಡೆಸುತ್ತಿದ್ದರು. ದ್ರಾವಿಡ್ ಅವರ ಪುತ್ರರಿಬ್ಬರೂ ಇಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು.
ತಮಿಳುನಾಡು ರಣಜಿ ತಂಡದ ನಾಯಕನೂ ಆಗಿದ್ದ ವಿ.ಬಿ. ಚಂದ್ರಶೇಖರ್ ಅವರ ದುರಂತ ಸಾವಿಗೆ ಬಿಸಿಸಿಐ, ಹಾಲಿ-ಮಾಜಿ ಕ್ರಿಕೆಟಿಗರನೇಕರು ಸಂತಾಪ ಸೂಚಿಸಿದ್ದಾರೆ.
ಮತ್ತೂಬ್ಬ ಶ್ರೀಕಾಂತ್…
ವಕ್ಕಡೈ ಭಿಕ್ಷೇಶ್ವರನ್ ಚಂದ್ರಶೇಖರ್ ಮೂಲತಃ ವಿಕೆಟ್ ಕೀಪರ್ ಆಗಿದ್ದರೂ ಶ್ರೀಕಾಂತ್ ಅವರಂತೆ ಹೊಡಿಬಡಿ ಬ್ಯಾಟಿಂಗಿಗೆ ಹೆಸರುವಾಸಿಯಾಗಿದ್ದರು. ಭಾರತದ ಮತ್ತೂಬ್ಬ ಶ್ರೀಕಾಂತ್ ಎಂದೇ ಸುದ್ದಿಯಲ್ಲಿದ್ದರು. 1988ರಲ್ಲಿ ಮೊದಲ ಸಲ ಭಾರತದ ಪರ ಏಕದಿನ ಪಂದ್ಯವಾಡಿದರು. ಅದು ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ವಿಶಾಖಪಟ್ಟಣ ಪಂದ್ಯವಾಗಿತ್ತು. ತನ್ನದೇ ಊರಿನ ಶ್ರೀಕಾಂತ್ ಜತೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಸಿಕ್ಕಿತ್ತು.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಂದ್ರಶೇಖರ್‌ಗೆ ದೊಡ್ಡ ಸಾಧನೆ ಮಾಡಲಾಗಲಿಲ್ಲ. ಭಾರತದ ಪರ ಅವರ ಆಟ ಏಳೇ ಏಕದಿನ ಪಂದ್ಯಗಳಿಗೆ ಸೀಮಿತಗೊಂಡಿತು. ಗಳಿಸಿದ್ದು ಕೇವಲ 88 ರನ್.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 81 ಪಂದ್ಯಗಳನ್ನಾಡಿದ ವಿ.ಬಿ., 4,999 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ, 23 ಅರ್ಧ ಶತಕ ಸೇರಿದೆ. 54 ಕ್ಯಾಚ್, 2 ಸ್ಟಂಪಿಂಗ್ ಕೀಪಿಂಗ್ ಸಾಧನೆ. ಅಜೇಯ 237 ರನ್ ಅತ್ಯುತ್ತಮ ನಿರ್ವಹಣೆ. ಇದು ಗೋವಾ ಪರ ಆಡುತ್ತಿದ್ದಾಗ ದಾಖಲಾಗಿತ್ತು. ಪ್ರಥಮ ದರ್ಜೆ ಕ್ರಿಕೆಟಿನ ಅಂತಿಮ ಅವಧಿಯಲ್ಲಿ ಅವರು ತಮಿಳುನಾಡು ಬಿಟ್ಟು ಗೋವಾ ರಣಜಿ ತಂಡ ಸೇರಿಕೊಂಡಿದ್ದರು.
ಧೋನಿ ಸೇರ್ಪಡೆಯಲ್ಲಿ
ಪ್ರಮುಖ ಪಾತ್ರ
ಮಹೇಂದ್ರ ಸಿಂಗ್ ಧೋನಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಗೆ ಸೇರಿಸಿಕೊಳ್ಳುವಲ್ಲಿ ವಿ.ಬಿ. ಪಾತ್ರ ಮಹತ್ವದ್ದಾಗಿತ್ತು. 2008ರಲ್ಲಿ ಅವರು ಚೆನ್ನೈ ತಂಡದ ಆಪರೇಶನ್ ಡೈರೆಕ್ಟರ್ ಆಗಿದ್ದರು. ಆಗ ವೀರೇಂದ್ರ ಸೆಹವಾಗ್ ಬದಲು ಧೋನಿ ಅವರನ್ನೇ ತಂಡಕ್ಕೆ ಸೇರಿಸಿಕೊಳ್ಳುವಂತೆ ಎನ್. ಶ್ರೀನಿವಾಸನ್‌ಗೆ ಮನವರಿಕೆ ಮಾಡಿಕೊಟ್ಟದ್ದೇ ಚಂದ್ರಶೇಖರ್. ಮುಂದಿನದು ಇತಿಹಾಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.