ಗೋಲ್ಡ್‌ಕೋಸ್ಟ್: ಭಾರತಕ್ಕೆ ಬೆಸ್ಟ್ ಆಫ್ ಲಕ್!
Team Udayavani, Apr 5, 2018, 6:15 AM IST
ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯ): ಕಾಂಗರೂ ನಾಡಿನ ಗೋಲ್ಡ್‌ಕೋಸ್ಟ್‌ನಲ್ಲಿ ಗುರುವಾರದಿಂದ ಎಲ್ಲರದೂ ಒಂದೇ ಮಂತ್ರ… ಅದು “ಗೋ ಫಾರ್ ಗೋಲ್ಡ್’. ಇದಕ್ಕೆ ಭಾರತವೂ ಹೊರತಾಗಿಲ್ಲ. 21ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ದೇಶದ ಪ್ರತಿಯೊಬ್ಬ ಕ್ರೀಡಾಪಟುಗಳ ಮೇಲೂ ಕೋಟ್ಯಂತರ ಕಣ್ಣುಗಳು ನಿರೀಕ್ಷೆಯ ದೃಷ್ಟಿಯನ್ನು ನೆಟ್ಟು ಕೂತಿವೆ. ಕ್ರೀಡಾಭಿಮಾನಿಗಳು ಪದಕ ಬೇಟೆಯ ನಾನಾ ಲೆಕ್ಕಾಚಾರದೊಂದಿಗೆ ದೇಶದ ಸ್ಪರ್ಧಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಅಗೋ, ದೂರದ ಕಾಂಗರೂ ನಾಡಿನಲ್ಲಿ ಗೇಮ್ಸ್ ಸೂರ್ಯ ಉದಯಿಸಿದ್ದಾನೆ, ಸ್ಪರ್ಧೆಯ ಕ್ಷಣಗಣನೆಗೆ ಆರಂಭಗೊಂಡೇ ಬಿಟ್ಟಿದೆ…
ಮಿಂಚು ಹರಿಸುವರೇ ಮೀರಾಬಾಯಿ?
ಭಾರತದ ಮೊದಲ ದಿನದ ಪದಕ ಭರವಸೆಯಾಗಿ ಮೂಡಿಬಂದಿರುವವರು ವನಿತಾ ವೇಟ್‌ಲಿಫ್ಟರ್ ಮೀರಾಬಾಯಿ ಚಾನು. 48 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಮೀರಾಬಾಯಿ, ಕಳೆದ ಗ್ಲಾಸೊYà ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವೈಯಕ್ತಿಕ ಶ್ರೇಷ್ಠ ನಿರ್ವಹಣೆ 194 ಕೆಜಿಯಾಗಿದ್ದು, ಕೂಟದ ಸಮೀಪದ ಸ್ಪರ್ಧಿ ಮೀರಾಬಾಯಿಗಿಂತ ಕೇವಲ 10 ಕೆಜಿ ಹೆಚ್ಚುವರಿ ಭಾರ ಎತ್ತಿದ ದಾಖಲೆ ಹೊಂದಿದ್ದಾರೆ. ಉಳಿದವರ್ಯಾರೂ 180 ಕೆಜಿಗಿಂತ ಹೆಚ್ಚಿನ ಭಾರವೆತ್ತಿಲ್ಲ. ಮೀರಾಬಾಯಿ ಅವರ ಕಟ್ಟಾ ಎದುರಾಳಿ ಎಂದೇ ಗುರುತಿಸಲ್ಪಡುವ ಕೆನಡಾದ ಅಮಂಡಾ ಬ್ರಡ್ಡಾಕ್ ಅವರದು ಕೇವಲ 173 ಕೆಜಿ ವೈಯಕ್ತಿಕ ದಾಖಲೆ ಎಂಬುದು ಉಲ್ಲೇಖನೀಯ. ಹೀಗಾಗಿ ಮೀರಾಬಾಯಿ ಪದಕವೊಂದರಿಂದ ಸಿಂಗಾರಗೊಳ್ಳುವುದು ಬಹುತೇಕ ಖಚಿತ. ಆದರೆ ಇದು ಯಾವ “ಬಣ್ಣ’ದ್ದೆಂಬುದೊಂದು ಕುತೂಹಲ!
ಮೊದಲ ದಿನದ ನಿರೀಕ್ಷೆಗಳು…
ವೇಟ್‌ಲಿಫ್ಟಿಂಗ್ ಹೊರತುಪಡಿಸಿದರೆ ಭಾರತದ ಶಟ್ಲರ್, ಬಾಕ್ಸರ್, ವನಿತಾ ಹಾಕಿ, ಟೇಬಲ್ ಟೆನಿಸ್ ಸ್ಪರ್ಧೆಗಳೆಲ್ಲ ಭಾರತದ ಮೊದಲ ದಿನದ ನಿರೀಕ್ಷೆಗಳಾಗಿವೆ. ಕಳೆದ ಸಲ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದ ವನಿತಾ ಹಾಕಿ ತಂಡ, ವೇಲ್ಸ್ ವಿರುದ್ಧ ಮೊದಲ ಪಂದ್ಯವಾಡಲಿದೆ. ದಕ್ಷಿಣ ಕೊರಿಯಾ ವಿರುದ್ಧ ಅವರದೇ ನೆಲದಲ್ಲಿ ಸರಣಿ ಗೆದ್ದದ್ದು ಭಾರತದ ನಾರೀಮಣಿಗಳಿಗೆ ಹೊಸ ಸ್ಫೂರ್ತಿ ತುಂಬಬೇಕಿದೆ.”ಗೇಮ್ಸ್‌ಗಾಗಿ ನಾವು ಕಠಿನ ಅಭ್ಯಾಸ ನಡೆಸಿದ್ದೇವೆ. ಇದು ಸಕಾರಾತ್ಮಕ ಫಲಿತಾಂಶದ ಮೂಲಕ ಪ್ರತಿಫಲಿಸಲಿದೆ’ ಎಂದಿದ್ದಾರೆ ಕೋಚ್ ಹರೇಂದ್ರ ಸಿಂಗ್.
ಷಟ್ಲರ್‌ಗಳಿಗೆ ಬಿಡುವಿಲ್ಲ
ಮೊದಲ ದಿನದ ಸ್ಪರ್ಧೆಯಲ್ಲಿ ಅತ್ಯಂತ “ಬ್ಯುಸಿ’ಯಾಗಿರುವ ಭಾರತೀಯರೆಂದರೆ ಬ್ಯಾಡ್ಮಿಂಟನ್ ಪಟುಗಳು. ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್‌ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ಥಾನ ವಿರುದ್ಧ ಭಾರತ ಸ್ಪರ್ಧೆಗೆ ಇಳಿಯಲಿದೆ. ಬೆಳಗ್ಗೆ ಶ್ರೀಲಂಕಾವನ್ನು ಎದುರಿಸಿದರೆ, ಮಧ್ಯಾಹ್ನದ ಬಳಿಕ ಪಾಕಿಸ್ಥಾನ ವಿರುದ್ಧ ಸೆಣಸಲಿದೆ. ಬಹುಶಃ ಎರಡೂ ತಂಡಗಳು ಭಾರತಕ್ಕೆ ಸುಲಭ ತುತ್ತಾಗುವ ಸಾಧ್ಯತೆ ಇದೆ. ಆದರೆ ಸಿಂಗಲ್ಸ್ ಸ್ಪರ್ಧೆಗಳತ್ತ ಹೆಚ್ಚಿನ ಗಮನ ಹರಿಸಿರುವ ಕಾರಣ ಸಿಂಧು, ಶ್ರೀಕಾಂತ್, ಸೈನಾ ಅವರೆಲ್ಲ ಮಿಕ್ಸೆಡ್ ವಿಭಾಗವನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಕಡಿಮೆ.
ಮನೋಜ್ ಬಾಕ್ಸಿಂಗ್ ಪಂಚ್
ಸಿರಿಂಜ್ ಬಳಕೆಯಿಂದ ಸುದ್ದಿಯಾದ ಬಾಕ್ಸಿಂಗ್ ತಂಡದ ವೈದ್ಯ ಅಮೋಲ್ ಪಾಟೀಲ್ ಶಿಕ್ಷೆಯಿಂದ ಪಾರಾದ ಬಳಿಕ ಭಾರತದ ಬಾಕ್ಸಿಂಗ್ ತಂಡದಲ್ಲಿ ಹೊಸ ಲವಲವಿಕೆ ಮೂಡಿದೆ. ಇದೇ ಖುಷಿಯಲ್ಲಿ ಮನೋಜ್ ಕುಮಾರ್ ಬಾಕ್ಸಿಂಗ್ ರಿಂಗ್‌ಗೆ ಧುಮುಕಲಿದ್ದಾರೆ (69 ಕೆಜಿ). 2010ರ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಹಿರಿಮೆಯುಳ್ಳ ಮನೋಜ್ ಮೊದಲ ಸುತ್ತಿನಲ್ಲಿ ನೈಜೀರಿಯಾದ ಒಸಿಟ ಉಮೇಹ್ ವಿರುದ್ಧ ಸ್ಪರ್ಧಿಸುವರು.
ಸ್ಕ್ವಾಷ್: ಖುಷಿ ಖುಷಿಯಲಿ…
ಸ್ಕ್ವಾಷ್ ಕೋರ್ಟ್‌ನಲ್ಲೂ ಗುರುವಾರದಿಂದ ಭಾರತದ ಆಧಿಪತ್ಯ ಆರಂಭವಾಗಲಿದೆ. ದೀಪಿಕಾ ಪಳ್ಳಿಕಲ್, ಜೋಶ್ನಾ ಚಿನ್ನಪ್ಪ, ಸೌರವ್ ಘೋಷಾಲ್ ಮತ್ತು ಹರೀಂದರ್ ಪಾಲ್ ಸಂಧು ಮೊದಲ ಸುತ್ತಿನ ಸಿಂಗಲ್ಸ್ ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಕಳೆದ ಸಲ ಚಿನ್ನಕ್ಕೆ ಮುತ್ತಿಟ್ಟ ದೀಪಿಕಾ-ಜೋಶ್ನಾ ಇದನ್ನು ಉಳಿಸಿಕೊಳ್ಳಲಿ ಎಂಬುದೊಂದು ಹಾರೈಕೆ. “ಭಾರತ ಈವರೆಗೆ ವೈಯಕ್ತಿಕ ವಿಭಾಗದಲ್ಲಿ ಯಾವುದೇ ಪದಕ ಗೆದ್ದಿಲ್ಲ. ಈ ಸಲ ಇದನ್ನು ಸಾಧಿಸುವ ಗುರಿ ನಮ್ಮದು’ ಎಂಬುದಾಗಿ ಕೋಚ್ ಸೈರಸ್ ಪೋಂಚ ಹೇಳಿದ್ದಾರೆ.
ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಜಿಮ್ನಾಸ್ಟಿಕ್, ಸ್ವಿಮ್ಮಿಂಗ್‌ನಲ್ಲೂ ಭಾರತ ಗುರುವಾರವೇ ಸ್ಪರ್ಧೆ ಆರಂಭಿಸಲಿದೆ.
ಇಂದು ಭಾರತದ ಗೇಮ್ಸ್… (ಗುರುವಾರ, ಎ. 5)
ಪುರುಷರ ಬಾಸ್ಕೆಟ್‌ಬಾಲ್: ಭಾರತ-ಕ್ಯಾಮರೂನ್
ಆರಂಭ: ಮ. 3.30
ವನಿತಾ ಬಾಸ್ಕೆಟ್‌ಬಾಲ್: ಭಾರತ-ಜಮೈಕಾ
ಆರಂಭ: ಮ. 2.03
ವನಿತಾ ಹಾಕಿ : ಭಾರತ-ವೇಲ್ಸ್
ಆರಂಭ: ಬೆ. 5.02
ಸೈಕ್ಲಿಂಗ್: 4,000 ಮೀ. ಟೀಮ್ ಪರ್ಸುಯಿಟ್
ಅರ್ಹತಾ ಸುತ್ತು: ಬೆ. 10.12 ಫೈನಲ್: ಮ. 3.00
ಸೈಕ್ಲಿಂಗ್: ಟೀಮ್ ಸ್ಪ್ರಿಂಟ್
ಅರ್ಹತಾ ಸುತ್ತು: ಮ. 12.04 ಫೈನಲ್: ಸಂ. 4.28
ಸೈಕ್ಲಿಂಗ್: ವನಿತಾ ಟೀಮ್ ಸ್ಪ್ರಿಂಟ್
ಅರ್ಹತಾ ಸುತ್ತು: ಬೆ. 11.54 ಫೈನಲ್: ಸಂ. 4.21
ಜಿಮ್ನಾಸ್ಟಿಕ್ಸ್: ವೈಯಕ್ತಿಕ ಆಲ್‌ರೌಂಡ್
ಸ್ಪರ್ಧಿ: ರಾಕೇಶ್ ಪಾತ್ರಾ, ಯೋಗೇಶ್ವರ್ ಸಿಂಗ್, ಆಶಿಷ್ ಕುಮಾರ್
ಅರ್ಹತಾ ಸುತ್ತು: ಬೆ. 4.38
ಸ್ವಿಮ್ಮಿಂಗ್: ಪುರುಷರ 50 ಮೀ. ಬಟರ್‌ಫ್ಲೈ
ಸ್ಪರ್ಧಿ: ಸಾಜನ್ ಪ್ರಕಾಶ್
ಫಸ್ಟ್ ಹೀಟ್: ಬೆ. 6.57 ಫಸ್ಟ್ ಸೆಮಿಫೈನಲ್: ಸಂ. 4.22
ಸ್ವಿಮ್ಮಿಂಗ್: ಪುರುಷರ 50 ಮೀ. ಬಟರ್‌ಫ್ಲೈ
ಸ್ಪರ್ಧಿ: ವೀರಧವಳ್ ಖಾಡೆ
ಫಸ್ಟ್ ಹೀಟ್: ಬೆ. 6.57 ಫಸ್ಟ್ ಸೆಮಿಫೈನಲ್: ಸಂ. 4.22
ಸ್ವಿಮ್ಮಿಂಗ್: ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್
ಸ್ಪರ್ಧಿ: ಶ್ರೀಹರಿ ನಟರಾಜ್
ಫಸ್ಟ್ ಹೀಟ್: ಬೆ. 7.24 ಫಸ್ಟ್ ಸೆಮಿಫೈನಲ್: ಸಂ. 4.52
ವೇಟ್‌ಲಿಫ್ಟಿಂಗ್: ಪುರುಷರ 56 ಕೆಜಿ ವಿಭಾಗ
ಸ್ಪರ್ಧಿ: ಗುರುರಾಜ್ ಸಮಯ: ಬೆ. 5.12
ವೇಟ್‌ಲಿಫ್ಟಿಂಗ್: ವನಿತೆಯರ 48 ಕೆಜಿ ವಿಭಾಗ
ಸ್ಪರ್ಧಿ: ಮೀರಾಬಾಯಿ ಚಾನು ಸಮಯ: ಬೆ. 9.42
ವೇಟ್‌ಲಿಫ್ಟಿಂಗ್: ಪುರುಷರ 62 ಕೆಜಿ ವಿಭಾಗ
ಸ್ಪರ್ಧಿ: ಮುತ್ತುಪಾಂಡಿ ರಾಜ ಸಮಯ: ಮ. 2.12
ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್
ಭಾರತ-ಶ್ರೀಲಂಕಾ ಸಮಯ: ಸಂ. 4.30-8.00
ಭಾರತ-ಪಾಕಿಸ್ಥಾನ ಸಮಯ: ಮ. 2.30-6.00
ಬಾಕ್ಸಿಂಗ್ : ಪುರುಷರ, ವನಿತೆಯರ ಆರಂಭಿಕ ಸುತ್ತು
ಸಮಯ: ಬೆ. 7.30-11.00, ಮ. 2.00-5.30
ಟೇಬಲ್ ಟೆನಿಸ್
ಟೀಮ್ ಗ್ರೂಪ್, ನಾಕೌಟ್ ಸ್ಟೇಜ್
ಸಮಯ: ಬೆ. 4.00-10.00,ಬೆ. 11.30-4.30
ಸ್ಕ್ವಾಷ್ ಸಿಂಗಲ್ಸ್ ಆರಂಭಿಕ ಸುತ್ತು
ಸಮಯ: ಬೆ. 8.00-12.00, ಮ. 1.30-5.00
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.