World Chess ರೋಚಕ ಫೈನಲ್; ಡಿಂಗ್ ಸೋಲಿಸಿದ ಗುಕೇಶ್: ಅತ್ಯಂತ ಕಿರಿಯ ವಿಶ್ವ ಚಾಂಪಿಯನ್
18 ರ ಹರೆಯದಲ್ಲೇ ಹೊಸ ಇತಿಹಾಸ ಬರೆದ ಭಾರತೀಯ...
Team Udayavani, Dec 12, 2024, 7:00 PM IST
ಸಿಂಗಾಪುರ: ನ. 25ರಿಂದ ಶುರುವಾದ ವಿಶ್ವ ಚಾಂಪಿಯನ್‌ಶಿಪ್ ಡಿ. 12ಕ್ಕೆ ಮುಗಿದಿದೆ. ಭಾರತದ ಡಿ.ಗುಕೇಶ್ 14ನೇ ಮತ್ತು ಅಂತಿಮ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ (32)ವಿರುದ್ಧ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಇತಿಹಾಸದ 18ನೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ 18ನೇ ವರ್ಷದಲ್ಲೇ ಈ ಸಾಧನೆ ಮಾಡುವ ಮೂಲಕ, ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ. ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಮತ್ತು ನಾರ್ವೆಯ ಮ್ಯಾಗ್ನಸ್ ಕಾಲ್ಸìನ್‌ರನ್ನು ಅವರು ಹಿಂದಿಕ್ಕಿ ಇಲ್ಲೂ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಒಟ್ಟು 14 ಪಂದ್ಯಗಳ ಕೂಟದಲ್ಲಿ ಗುಕೇಶ್ 1ನೇ ಪಂದ್ಯವನ್ನೇ ಸೋತಿದ್ದರು. 3ನೇ ಪಂದ್ಯವನ್ನು ಗೆಲ್ಲುವ ಮೂಲಕ ಲಿರೆನ್‌ಗೆ ಸಡ್ಡು ಹೊಡೆದರು. ಅನಂತರ ಇಬ್ಬರ ನಡುವಿನ ಪಂದ್ಯಗಳು ಸತತ ಡ್ರಾಗೊಳ್ಳುತ್ತ ಸಾಗಿದವು. 11ನೇ ಪಂದ್ಯವನ್ನು ಗೆದ್ದ ಗುಕೇಶ್ ವಿಶ್ವ ಚಾಂಪಿಯನ್ ಆಗುವ ಸುಳಿವು ನೀಡಿದರು. 12ನೇ ಪಂದ್ಯದಲ್ಲಿ ಲಿರೆನ್ ಗೆದ್ದು ಮತ್ತೆ ಅಂಕ ಸಮಬಲಗೊಳ್ಳುವುದರೊಂದಿಗೆ ಕೂಟದ ರೋಚಕತೆ ತೀವ್ರಗೊಂಡಿತು. 13ನೇ ಪಂದ್ಯವೂ ಡ್ರಾಗೊಂಡಿದ್ದರಿಂದ ಕೂಟ ಎಲ್ಲಿ ಟೈಬ್ರೇಕರ್‌ಗೆ ಹೋಗುವುದೋ ಎಂಬ ಅನುಮಾನ ಮೂಡಿತ್ತು. ಗುರುವಾರ ನಡೆದ 14ನೇ ಪಂದ್ಯದ ಹೊತ್ತಿಗೆ ಇಬ್ಬರ ಅಂಕಗಳೂ ತಲಾ 6.5 ಅಂಕಗಳೊಂದಿಗೆ ಸಮಗೊಂಡಿದ್ದವು. ಇಲ್ಲಿ ಯಾರು ಗೆಲ್ಲುತ್ತಾರೋ ಅವರು ಚಾಂಪಿಯನ್ ಆಗುತ್ತಿದ್ದರು. ಕೂಟದ ನಿಯಮಗಳ ಪ್ರಕಾರ ಮೊದಲು 7.5 ಅಂಕ ಗಳಿಸಿದವರು ವಿಜೇತರಾಗುತ್ತಾರೆ. ಹಾಗಾಗಿ ಗುರುವಾರದ ಪಂದ್ಯಕ್ಕೆ ರೋಚಕತೆ ಬಂದಿತ್ತು. ಒಂದು ವೇಳೆ ಪಂದ್ಯ ಡ್ರಾಗೊಂಡಿದ್ದರೆ ಇಬ್ಬರ ಅಂಕ ತಲಾ 7 ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಟೈಬ್ರೇಕರ್ ಆಡಿಸಬೇಕಾಗುತ್ತಿತ್ತು. ಅದಕ್ಕೆಲ್ಲ ಗುಕೇಶ್ ಅವಕಾಶವೇ ಕೊಡಲಿಲ್ಲ. ಗುರುವಾರವೇ ಗೆದ್ದು ವಿಶ್ವಪಟ್ಟದ ಮೇಲೆ ಕೈಯನ್ನಿಟ್ಟರು. ಪ್ರಸ್ತುತ ಪಂದ್ಯ 55ನೇ ನಡೆವರೆಗೆ ಪೈಪೋಟಿಯಲ್ಲೇ ನಡೆಯುತ್ತಿತ್ತು. ಈ ಹಂತದಲ್ಲಿ ಒತ್ತಡ ಅನುಭವಿಸಿದ ಲಿರೆನ್ ತಮ್ಮ ಆನೆಯನ್ನು ಬಲಿಕೊಟ್ಟರು. ಅನಂತರ ಅವರ ಕೈಯಿಂದ ಪಂದ್ಯ ತಪ್ಪಿಹೋಯಿತು. 58ನೇ ನಡೆಯಲ್ಲಿ ಆಟ ಮುಗಿದುಹೋಯಿತು. ಅಷ್ಟರಲ್ಲಿ 4 ಗಂಟೆಗಳು ಕಳೆದಿದ್ದವು. ಈ ಕೂಟಕ್ಕೆ ಮೊದಲೇ ಲಿರೆನ್ ಚಾಂಪಿಯನ್ ಆಗುವುದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು. ಹಿಂದಿನ ವಿಶ್ವಚಾಂಪಿಯನ್ ಆಗಿರುವ ಅವರು ಸದ್ಯ ಹೇಳಿಕೊಳ್ಳುವ ಲಯದಲ್ಲಿರಲಿಲ್ಲ. ಅದನ್ನೂ ಚೆಸ್ ಜಗತ್ತು ಹಾಗೆಯೇ ಸ್ವತಃ ಲಿರೆನ್ ಹೇಳಿಕೊಂಡಿದ್ದರು. ಅದಕ್ಕೆ ತಕ್ಕಂತೆ ಗುಕೇಶ್ ವಿಶ್ವಪಟ್ಟಕ್ಕೇರಿದರು.
14ರಲ್ಲಿ 9 ಪಂದ್ಯ ಡ್ರಾ: ಇಬ್ಬರ ನಡುವೆ ನಡೆದ 14 ಪಂದ್ಯಗಳಲ್ಲಿ 9 ಪಂದ್ಯ ಡ್ರಾ ಆದವು. ಫಲಿತಾಂಶ ಬಂದಿದ್ದು 5 ಪಂದ್ಯ ಮಾತ್ರ. ಈ ಪೈಕಿ ಗುಕೇಶ್ 3, ಲಿರೆನ್ 2 ಪಂದ್ಯ ಗೆದ್ದಿದ್ದಾರೆ.
ನಿಜವಾಯ್ತು ದಂತಕಥೆ ಕಾಸ್ಪರೋವ್ ಭವಿಷ್ಯ
ವಿಶ್ವ ಚಾಂಪಿಯನ್‌ಶಿಪ್ ಆರಂಭಕ್ಕೆ ಮುನ್ನವೇ ಈ ಬಾರಿ ಗುಕೇಶ್ ಗೆಲ್ಲಬಹುದೆಂದು ರಷ್ಯಾದ ಚೆಸ್ ದಂತಕಥೆ ಗ್ಯಾರಿ ಕಾಸ್ಪರೋವ್ ಹೇಳಿದ್ದರು. ಲಿರೆನ್ ಹೇಳಿಕೊಳ್ಳುವ ಲಯದಲ್ಲಿಲ್ಲ ಎಂದು ನೇರವಾಗಿ ಹೇಳಿದ್ದರು. ಮಾತ್ರವಲ್ಲ ಈ ಕೂಟದಲ್ಲಿ ಆಡುವುದರಿಂದ ನಾರ್ವೆಯ ದಂತಕಥೆ ಮ್ಯಾಗ್ನಸ್ ಕಾಲ್ಸìನ್ ಹಿಂದೆ ಸರಿದಿದ್ದರಿಂದ ಈ ಫೈನಲ್ ಪಂದ್ಯ ವಿಶ್ವದ ಶ್ರೇಷ್ಠ ಚೆಸ್ ಆಟಗಾರರನ್ನು ನಿರ್ಧರಿಸುವುದಿಲ್ಲ ಎಂದೂ ಹೇಳಿದ್ದರು.
ಕ್ಯಾಂಡಿಡೇಟ್ಸ್‌ನಲ್ಲಿ ಗೆದ್ದು ವಿಶ್ವ ಚಾಂಪಿಯನ್‌ಶಿಪ್ ಪ್ರವೇಶ
ಕಳೆದ ಏಪ್ರಿಲ್‌ನಲ್ಲಿ ಕೆನಡಾದ ಟೊರೆಂಟೋದಲ್ಲಿ ನಡೆದ ಕ್ಯಾಂಡಿಡೇಟ್ಸ್ ಚೆಸ್ ಪಂದ್ಯಾವಳಿಯಲ್ಲಿ 9 ಅಂಕ ಗಳಿಸುವ ಮೂಲಕ ಗುಕೇಶ್ ವಿಜೇತರಾಗಿ ಹೊರಹೊಮ್ಮಿದ್ದರು. ಇಲ್ಲಿ ಗೆದ್ದ ಗುಕೇಶ್ 2023ರ ವಿಜೇತ ಚೀನಾದ ಡಿಂಗ್ ಲಿರೆನ್ ವಿರುದ್ಧ ಆಡಲು ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದರು. ನ.25ರಂದು ನಡೆದ ಮೊದಲ ಪಂದ್ಯದಲ್ಲಿ ಲಿರೆನ್ ವಿರುದ್ಧ ಸೋಲಿನೊಂದಿಗೆ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಸ್ಪರ್ಧೆ ಆರಂಭಿಸಿದ್ದರು.
ಗುಕೇಶ್‌ಗೆ 11.45 ಕೋಟಿ ರೂ., ಲಿರೆನ್‌ಗೆ 9.75 ಕೋಟಿ ರೂ.
ಚೆಸ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪ್ರತೀ ಗೆಲುವಿಗೆ ಬಹುಮಾನ ನೀಡಲಾಗುವುದು. ಅದರಂತೆ ಡಿ. ಗುಕೇಶ್ 11.45 ಕೋಟಿ ರೂ. (1.35 ಮಿಲಿಯನ್ ಡಾಲರ್) ಮೊತ್ತವನ್ನು ಗಳಿಸಿದರು. ಡಿಂಗ್ ಲಿರೆನ್‌ಗೆ 9.75 ಕೋಟಿ ರೂ. (1.15 ಮಿಲಿಯನ್ ಡಾಲರ್) ಲಭಿಸಿತು. ಇಲ್ಲಿ ಪ್ರತೀ ಗೆಲುವಿಗೆ 2 ಲಕ್ಷ ಡಾಲರ್ ಲಭಿಸುತ್ತದೆ (ಅಂದಾಜು 1.69 ಕೋಟಿ ರೂ.). 3 ಗೇಮ್ ಗೆದ್ದ ಗುಕೇಶ್ ಈ ಮೂಲಕ 6 ಲಕ್ಷ ಡಾಲರ್ ಪಡೆದರು (ಅಂದಾಜು 5.07 ಕೋಟಿ ರೂ.). ಉಳಿದ 1.5 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗುತ್ತದೆ.
5 ಬಾರಿ ವಿಶ್ವವಿಜೇತರಾಗಿದ್ದ ಆನಂದ್ ಬಳಿಕ ಗೆದ್ದ ಮೊದಲಿಗ
ಭಾರತದ ಪರವಾಗಿ ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. 2013ರಲ್ಲಿ ಕಾಲ್ಸìನ್ ವಿರುದ್ಧ ಆನಂದ್ ಸೋಲುವುದರೊಂದಿಗೆ ಅವರ ಒಡೆತನ ಅಂತ್ಯಗೊಂಡಿತ್ತು. ಅದಾದ ನಂತರ ಗುಕೇಶ್ ಗೆಲ್ಲುವ ಮೂಲಕ ಮತ್ತೆ ಭಾರತೀಯರೊಬ್ಬರು ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು. ಆನಂದ್ 2 ಬಾರಿ ವಿಶ್ವಕಪ್ ಕೂಡ ಗೆದ್ದಿದ್ದಾರೆ. 2000ರಲ್ಲಿ ಅಲೆಕ್ಸಿ ಶಿರೋವ್‌ರನ್ನು, 2007, 2008ರಲ್ಲಿ ವ್ಲಾಡಿಮಿರ್ ಕ್ರಾಮ್ನಿಕ್‌ರನ್ನು, 2010ರಲ್ಲಿ ವ್ಯಾಸೆಲಿನ್ ಟೊಪಲೋವ್‌ರನ್ನು, 2012ರಲ್ಲಿ ಬೋರಿಸ್ ಗೆಲ್ಫಾಂಡ್‌ರನ್ನು ಆನಂದ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋಲಿಸಿದ್ದರು.
ಗ್ಯಾರಿ, ಕಾರ್ಲ್ಸನ್ ಗಿಂತ ಕಿರಿ ವಯಸ್ಸಲ್ಲಿ ವಿಶ್ವ ಪಟ್ಟ
18 ವರ್ಷ, 8 ತಿಂಗಳು 14 ದಿನ ವಯಸ್ಸಿನ ಗುಕೇಶ್, ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಅತೀ ಕಿರಿಯನಾಗಿ ರಷ್ಯನ್ ದಿಗ್ಗಜ ಗ್ಯಾರಿ ಕಾಸ್ಪರೋವ್ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ದಾಖಲೆಯನ್ನು ಮೀರಿದ್ದಾರೆ. 1985ರಲ್ಲಿ 22 ವರ್ಷ, 6 ತಿಂಗಳು, 27 ದಿನ ವಯಸ್ಸಿನವರಾಗಿದ್ದ ಕಾಸ್ಪರೋವ್, ಕಾರ್ಪೋವ್ ವಿರುದ್ಧ ಗೆದ್ದಿದ್ದರು. 2013ರಲ್ಲಿ 22 ವರ್ಷ, 11 ತಿಂಗಳು 24 ನೇ ದಿನ ವಯಸ್ಸಿನ ಕಾಲ್ಸìನ್, ವಿ.ಆನಂದ್ ವಿರುದ್ಧ ಜಯಿಸಿದ್ದರು.
31ನೇ ವಯಸ್ಸಲ್ಲಿ ಚಾಂಪಿಯನ್ ಆಗಿದ್ದ ವಿಶ್ವನಾಥನ್ ಆನಂದ್
ಭಾರತೀಯರಲ್ಲಿ ಹಿಂದಿನ ಅತಿ ಕಿರಿಯ ವಿಶ್ವ ಚಾಂಪಿಯನ್ ಆಗಿ ವಿಶ್ವನಾಥನ್ ಆನಂದ್ ಗುರುತಿಸಿಕೊಂಡಿದ್ದರು. 2000ನೇ ಇಸವಿಯಲ್ಲಿ ಆನಂದ್ ತನ್ನ ಮೊದಲ ಪ್ರಶಸ್ತಿ ಗೆದ್ದಾಗ ಅವರಿಗೆ 31 ವರ್ಷವಾಗಿತ್ತು. ಅಂದು ಅವರು ಸ್ಪೇನ್‌ನ ಅಲೆಕ್ಸಿ ಶಿರೋವ್ ಅವರನ್ನು ಸೋಲಿಸಿದ್ದರು. ಅದಾದ ನಂತರ ಆನಂದ್ 5 ಬಾರಿ ವಿಶ್ವಚಾಂಪಿಯನ್‌ಶಿಪ್, 2 ಬಾ ವಿಶ್ವಕಪ್ ಗೆದ್ದಿದ್ದರು. ಅಲ್ಲಿಂದ ನಂತರ ಭಾರತೀಯನೊಬ್ಬ ವಿಶ್ವಪ್ರಶಸ್ತಿ ಗೆದ್ದಿರಲಿಲ್ಲ. ಗುಕೇಶ್ 18ನೇ ವಯಸ್ಸಿಗೆ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
ಪ್ರಜ್ಞಾನಂದ, ಗುಕೇಶ್ ವಿಶ್ವವೇದಿಕೆಯಲ್ಲಿ ಭಾರತದ ಭವಿಷ್ಯದ ತಾರೆಯರು
2023ರಲ್ಲಿ ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿ ಆರ್.ಪ್ರಜ್ಞಾನಂದ ಅದ್ಭುತ ಸಾಧನೆ ಮಾಡಿದ್ದರು. ಅವರು ಫೈನಲ್‌ನಲ್ಲಿ ಮ್ಯಾಗ್ನಸ್ ಕಾಲ್ಸìನ್ ವಿರುದ್ಧ ಸೋತಿದ್ದರೂ, ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡಿದ್ದರು. 2024ರಲ್ಲಿ ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಜೈಸಿದ್ದಾರೆ. ಅಲ್ಲಿಗೆ ವಿಶ್ವನಾಥನ್ ಆನಂದ್ ನಂತರ ಭಾರತೀಯ ಚೆಸ್ ದೀವಿಗೆಯನ್ನು ಮುಂದಕ್ಕೆ ಒಯ್ಯುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಬ್ಬರೂ ಭಾರತದ ಭವಿಷ್ಯದ ತಾರೆಗಳಾಗಿ ಮೂಡಿಬಂದಿದ್ದಾರೆ. ಮಹಿಳೆಯರ ಪೈಕಿ ಆರ್.ವೈಶಾಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಭರವಸೆ ಮೂಡಿಸಿದ್ದಾರೆ.
1886ರಲ್ಲಿ ಮೊದಲ ಕೂಟ, 1946ರಿಂದ ಫಿಡೆಯಿಂದ ಕೂಟ ಆಯೋಜನೆ
1886ರಲ್ಲಿ ಮೊದಲ ಬಾರಿಗೆ ಚೆಸ್ ವಿಶ್ವ ಚಾಂಪಿಯನ್‌ಶಿಪ್ ನಡೆದು, ಜೊಹಾನ್ಸ್ ಜುಕೆರ್‌ಟಾರ್ಟ್ ವಿರುದ್ಧ ವಿಲ್‌ಹೆಮ್ ಸ್ಟೀನಿಜ್ ಗೆದ್ದರು. ಇಲ್ಲಿಂದ 1946ರವರೆಗೂ ಈ ಕೂಟ ಯಾವುದೇ ಸಂಸ್ಥೆಯಡಿ ನಡೆಯುತ್ತಿರಲಿಲ್ಲ. 1946ರಲ್ಲಿ ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಅಲೆಖೀನ್ ನಿಧನರಾದಾಗ ಅಂತಾರಾಷ್ಟ್ರೀಯ ಚೆಸ್ ಸಂಸ್ಥೆ ಫಿಡೆ ಹುಟ್ಟಿಕೊಂಡಿತು. ಫಿಡೆ 1948ರಲ್ಲಿ ಮೊದಲ ಬಾರಿ ವಿಶ್ವ ಚಾಂಪಿಯನ್‌ಶಿಪ್ ನಡೆಸಿತು. 1993ರವರೆಗೆ ಫಿಡೆ ಪ್ರತಿ 3 ವರ್ಷಕ್ಕೊಮ್ಮೆ ಕೂಟ ನಡೆಸುತ್ತಿತ್ತು. 93ರಲ್ಲಿ ಚೆಸ್ ದಂತಕಥೆ ಕಾಸ್ಪರೋವ್ ಮತ್ತು ನೈಜೆಲ್ ಶಾರ್ಟ್ ಫಿಡೆ ವಿರುದ್ಧ ಮುನಿಸಿಕೊಂಡು ಇನ್ನೊಂದು ಸಂಸ್ಥೆ ಸ್ಥಾಪಿಸಿಕೊಂಡು ಅದರಡಿ ಕೂಟ ನಡೆಸಲಾರಂಭಿಸಿದರು. 2006ರವರೆಗೂ ಎರಡೂ ಬಣಗಳು ತಂತಮ್ಮ ಕೂಟಗಳನ್ನು ಪ್ರತ್ಯೇಕವಾಗಿ ನಡೆಸುತ್ತಿದ್ದವು. 2006ರಲ್ಲಿ ಎರಡೂ ಬಣಗಳು ಒಂದಾಗಿ ಮತ್ತೆ ವಿಶ್ವ ಚಾಂಪಿಯನ್‌ಶಿಪ್ ಸಂಘಟಿಸಿದವು. ಅಲ್ಲಿಂದ ನಂತರ ಕೂಟ ಫಿಡೆಯಡಿಯೇ ನಡೆಯುತ್ತಿದೆ. ವಿಶ್ವನಾಥನ್ 2000ರಲ್ಲಿ ಚಾಂಪಿಯನ್ ಆದಾಗ ವಿಶ್ವ ಚೆಸ್ ಬಣಗಳು ಒಂದಾಗಿರಲಿಲ್ಲ. 2007ರಲ್ಲಿ ಅವರು ಗೆದ್ದಾಗ ಬಣಗಳು ಒಂದಾಗಿದ್ದವು.
ಅಂದಿನ ಚಾಂಪಿಯನ್ ಆನಂದ್ ಇಂದಿನ ಗುರು
ಭಾರತೀಯ ಚೆಸ್ ತಂಡಕ್ಕೆ ಗುರುವಾಗಿ ಜವಾಬ್ದಾರಿ ಹೊತ್ತುಕೊಂಡಿರುವುದು ವಿಶ್ವನಾಥನ್ ಆನಂದ್. ಹಿಂದೆ ಚಾಂಪಿಯನ್ ಆಗಿದ್ದ ಅವರೇ ಇಂದಿನ ನೂತನ ಚೆಸ್ ದೊರೆ ಗುಕೇಶ್‌ರನ್ನು ರೂಪಿಸಲು ಶ್ರಮಿಸಿದ್ದಾರೆ. ಅವರ ಗರಡಿಯಲ್ಲೇ ಪ್ರಜ್ಞಾನಂದ ಕೂಡ ಪಳಗಿರುವುದು. ತಮಿಳುನಾಡಿನವರೇ ಆದ ವಿಶ್ವನಾಥನ್ ಆನಂದ್, ತಮಿಳುನಾಡಿನ ಮೂಲಕ ಹಲವು ಪ್ರತಿಭೆಗಳನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ.
ವಿಶ್ವಕಪ್ಪಲ್ಲಿ 128, ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಇಬ್ಬರ ಆಟ
ಚೆಸ್ ವಿಶ್ವಕಪ್ ಪ್ರತಿ 2 ವರ್ಷಕ್ಕೊಮ್ಮೆ ನಡೆಯುತ್ತದೆ. ವಿಶ್ವಚಾಂಪಿಯನ್‌ಶಿಪ್ ಕೂಡ 2 ವರ್ಷಕೊಮ್ಮೆ ನಡೆಯುತ್ತದೆ. ವಿಶ್ವಕಪ್‌ನಲ್ಲಿ ಆಡಿದವರು ತಮ್ಮ ಸಾಧನೆಯ ಆಧಾರದ ಮೇಲೆ ಕ್ಯಾಂಡಿಡೇಟ್ಸ್ ಚೆಸ್‌ನಲ್ಲಿ ಆಡಲು ಅರ್ಹತೆ ಪಡೆಯುತ್ತಾರೆ. ಕ್ಯಾಂಡಿಡೇಟ್ಸ್ ಚೆಸ್‌ನಲ್ಲಿ ಗೆದ್ದವರು ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಅರ್ಹತೆ ಪಡೆಯುತ್ತಾರೆ. ಕಳೆದ ವರ್ಷ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದ ವ್ಯಕ್ತಿ ಮತ್ತು ಪ್ರಸ್ತುತ ಕ್ಯಾಂಡಿಡೇಟ್ಸ್‌ನಲ್ಲಿ ಗೆದ್ದವರ ನಡುವೆ ವಿಶ್ವ ಚಾಂಪಿಯನ್‌ಶಿಪ್ ಫೈನಲ್ ನಡೆಯುತ್ತದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 14 ಪಂದ್ಯಗಳು ನಡೆಯುತ್ತವೆ, ಕೇವಲ ಇಬ್ಬರು ಆಡುತ್ತಾರೆ. ವಿಶ್ವಕಪ್‌ನಲ್ಲಿ 128 ಆಟಗಾರರು ಪಾಲ್ಗೊಳ್ಳುತ್ತಾರೆ.
ಗುಕೇಶ್ ಸಾಧನೆ ಚಾರಿತ್ರಿಕ
ಇದೊಂದು ಚಾರಿತ್ರಿಕ ಹಾಗೂ ಅನುಕರಣೀಯ ಸಾಧನೆ. ಇದು ಅವರ ಅಪ್ರತಿಮ ಪ್ರತಿಭೆ, ಕಠಿಣ ಪರಿಶ್ರಮ ಮತ್ತು ಅಚಲ ನಿರ್ಧಾರಕ್ಕೆ ಲಭಿಸಿದ ಫಲಿತಾಂಶವಾಗಿದೆ. ನೂತನ ವಿಶ್ವ ಚಾಂಪಿಯನ್ ಡಿ.ಗುಕೇಶ್‌ಗೆ ಅಭಿನಂದನೆಗಳು.
ನರೇಂದ್ರ ಮೋದಿ, ಭಾರತದ ಪ್ರಧಾನಿ
ಪರಂಪರೆ ಮುಂದುವರಿಸಿದ್ದಾರೆ
ಅತೀ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಮೂಡಿಬಂದ ಗುಕೇಶ್‌ಗೆ ಅಭಿನಂದನೆ. ಈ ಸಾಧನೆಯು ಭಾರತದ ಚೆಸ್ ಪರಂಪರೆಯನ್ನು ಮುಂದುವರಿಸಿದೆ. ಚೆನ್ನೈ ಮತ್ತೋರ್ವ ಚೆಸ್‌ಪಟುವನ್ನು ರೂಪಿಸುವ ಮೂಲಕ ಜಾಗತಿಕ ಚೆಸ್ ರಾಜಧಾನಿಯಾಗಿದೆ.
ಎಂ.ಕೆ. ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ವಿ.ಆನಂದ್‌ರಿಂದ ಜಯದ ಸ್ಫೂರ್ತಿ
ನಾನು ಮೊದಲ ಪಂದ್ಯ ಸೋತಾಗ ಆತ್ಮವಿಶ್ವಾಸ ಕಳೆದುಕೊಂಡಿದ್ದೆ. ಆಗ ವಿ.ಆನಂದ್ ನಿನಗಿನ್ನೂ 13 ಪಂದ್ಯ ಬಾಕಿಯಿದೆ. ಹೆದರಬೇಡ ಎಂದು ಸ್ಫೂರ್ತಿ ತುಂಬಿದರು. ಅದೇ ನನ್ನನ್ನು ನಡೆಸಿತು.
– ಡಿ. ಗುಕೇಶ್, ನೂತನ ವಿಶ್ವ ಚೆಸ್ ಚಾಂಪಿಯನ್
ನನಗೆ ಪಶ್ಚಾತ್ತಾಪವಿಲ್ಲ
ಈ ವರ್ಷದಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಿದ ಕೂಟವಿದು. ಇದಕ್ಕಿಂತ ಉನ್ನತ ಪ್ರದರ್ಶನ ನೀಡಬಹುದಿತ್ತು. ಆದರೆ ಹಿಂದಿನ ಪಂದ್ಯದ ಫಲಿತಾಂಶಕ್ಕೆ ಹೋಲಿಸಿದರೆ ಇದು ಸರಿಯಾದ ಫಲಿತಾಂಶ ಎಂದೇ ಅನಿಸುತ್ತದೆ. – ಡಿಂಗ್ ಲಿರೆನ್, ರನ್ನರ್ ಅಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.