45th Chess Olympiad: ಗುಕೇಶ್, ಪ್ರಜ್ಞಾನಂದ ಆಕರ್ಷಣೆ
Team Udayavani, Jul 13, 2024, 10:52 PM IST
ಚೆನ್ನೈ: ಭಾರತದ ಡಿ. ಗುಕೇಶ್ ಮತ್ತು ಆರ್. ಪ್ರಜ್ಞಾನಂದ ಅವರು ಮುಂದಿನ ಸಪ್ಟೆಂಬರ್‌ನಲ್ಲಿ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತೀಯ ತಂಡದ ಪರ ಆಡಲಿರುವ ಪ್ರಮುಖ ಆಟಗಾರರಾಗಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್ ಚೀನದ ಡಿಂಗ್ ಲಿರೆನ್ ವಿರುದ್ಧ ಆಡಲಿರುವ ಗುಕೇಶ್ ಅವರಿಗೆ ಈ ಕೂಟ ಅಭ್ಯಾಸ ಕೂಟವಾಗಿ ಪರಿಣಮಿಸಲಿದೆ. 18ರ ಹರೆಯದ ಗುಕೇಶ್ ಈ ವರ್ಷ ಅಮೋಘ ನಿರ್ವಹಣೆ ನೀಡುತ್ತ ಬಂದಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಟೊರೊಂಟೊದಲ್ಲಿ ನಡೆದಿದ್ದ ಪ್ರತಿಷ್ಠಿತ ಕ್ಯಾಂಡಿಡೇಟ್ಸ್ ಚೆಸ್ ಕೂಟದ ಪ್ರಶಸ್ತಿ ಗೆದ್ದಿರುವ ಗುಕೇಶ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲಿರುವ ಅತೀ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಚೆಸ್ ಒಲಿಂಪಿಯಾಡ್ ತಂಡದಲ್ಲಿ ಗುಕೇಶ್, ಪ್ರಜ್ಞಾನಂದ ಅವರಲ್ಲದೇ ಅರ್ಜುನ್ ಎರಿಗೈಸಿ, ವಿದಿತ್ ಗುಜ್ರಾತಿ, ಹರಿಕೃಷ್ಣ ಪೆಂಟಾಲ, ವನಿತೆಯರ ತಂಡದಲ್ಲಿ ಹರಿಕಾ ದ್ರೋಣವಲ್ಲಿ, ವೈಶಾಲಿ ರಮೇಶ್‌ಬಾಬು, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್‌ವಾಲ್ ಮತ್ತು ತನಿಯಾ ಸಚ್‌ದೇವ್ ಇದ್ದಾರೆ ಎಂದು ಅಖೀಲ ಭಾರತ ಚೆಸ್ ಫೆಡರೇಶನ್‌ನ ಅಧ್ಯಕ್ಷ ನಿತಿನ್ ನಾರಂಗ್ ತಿಳಿಸಿದ್ದಾರೆ. ಕೊನೆರು ಹಂಪಿ ತಂಡದಲ್ಲಿ ಇಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. 2022ರಲ್ಲಿ ಕಂಚು ಜಯಿಸಿದ್ದ ಅವರನ್ನು ಯಾವ ಕಾರಣಕ್ಕೆ ಕೈಬಿಟ್ಟಿದ್ದಾರೆ ಎಂಬುದು ಗೊತ್ತಾಗಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.