ಕುಸಿದ ಬಳಿಕ ತಿರುಗಿ ಬಿದ್ದ ಗುಜರಾತ್
Team Udayavani, Jan 3, 2017, 3:45 AM IST
ನಾಗಪುರ: ಭಾರೀ ಮೊತ್ತದ ಸೂಚನೆ ನೀಡಿದ ಗುಜರಾತ್, ರಣಜಿ ಸೆಮಿಫೈನಲ್ ಪಂದ್ಯದ 2ನೇ ದಿನ 390 ರನ್ನಿಗೆ ಆಲೌಟ್ ಆಗಿದೆ. ಬಳಿಕ ಝಾರ್ಖಂಡ್ ಮೇಲೆ ಜಬರ್ದಸ್ತ್ ದಾಳಿಯೊಂದನ್ನು ನಡೆಸಿ ಇನ್ನಿಂಗ್ಸ್ ಮುನ್ನಡೆಯ ಸೂಚನೆ ನೀಡಿದೆ.
ಮೊದಲ ಸಲ ರಣಜಿ ಸೆಮಿಫೈನಲ್ ಕಾಣುತ್ತಿರುವ ಝಾರ್ಖಂಡ್‌ಗೆ ಗುಜರಾತ್ ದಾಳಿಯನ್ನು ಎದುರಿಸಿ ನಿಲ್ಲಲು ಈವರೆಗೆ ಸಾಧ್ಯವಾಗಿಲ್ಲ. ಸೌರಭ್ ತಿವಾರಿ ಪಡೆ 5 ವಿಕೆಟ್ ನಷ್ಟಕ್ಕೆ 214 ರನ್ ಮಾಡಿ ಸೋಮವಾರದ ಆಟ ಮುಗಿಸಿದೆ. ಇನ್ನೂ 176 ರನ್ನುಗಳ ಹಿನ್ನಡೆಯಲ್ಲಿದೆ.
ಕೇವಲ 3 ವಿಕೆಟಿಗೆ 283 ರನ್ ಮಾಡಿ ದೊಡ್ಡ ಮೊತ್ತದತ್ತ ಮುನ್ನುಗ್ಗುತ್ತಿದ್ದ ಗುಜರಾತನ್ನು ಝಾರ್ಖಂಡ್ 390 ರನ್ನಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. 144 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಕಾರ ಪ್ರಿಯಾಂಕ್ ಪಾಂಚಾಲ್ ಈ ಮೊತ್ತಕ್ಕೆ ಕೇವಲ 5 ರನ್ ಸೇರಿಸಿ ಔಟಾಗುವುದರೊಂದಿಗೆ ಗುಜರಾತ್ ಕುಸಿತ ಮೊದಲ್ಗೊಂಡಿತು. ಮೊದಲ ದಿನದ ಮೊತ್ತಕ್ಕೆ 107 ರನ್ ಸೇರಿಸುವಷ್ಟರಲ್ಲಿ ಉಳಿದ ಏಳೂ ವಿಕೆಟ್‌ಗಳು ಹಾರಿಹೋದವು.
420 ನಿಮಿಷಗಳ ತನಕ ಕ್ರೀಸಿನಲ್ಲಿದ್ದ ಪಾಂಚಾಲ್ 267 ಎಸೆತ ನಿಭಾಯಿಸಿ 140 ರನ್ ಬಾರಿಸಿದರು. ಇದರಲ್ಲಿ 21 ಬೌಂಡರಿ ಗಳು ಒಳಗೊಂಡಿªವು. ರಣಜಿ ಋತು ವೊಂದರಲ್ಲಿ ಸರ್ವಾಧಿಕ 1,415 ರನ್ ಪೇರಿಸಿದ ವಿವಿಎಸ್ ಲಕ್ಷ್ಮಣ್ ದಾಖಲೆಯನ್ನು ಸರಿದೂಗಿಸಲು ಪಾಂಚಾಲ್ ಇನ್ನು 146 ರನ್ ಮಾಡಿದರೆ ಸಾಕು. ಅವರಿಗಿನ್ನೂ ಗರಿಷ್ಠ 3 ಇನ್ನಿಂಗ್ಸ್ ಆಡುವ ಅವಕಾಶವಿದೆ.
12 ರನ್ ಮಾಡಿ ಆಡುತ್ತಿದ್ದ ಮನ್‌ಪ್ರೀತ್ ಜುನೇಜ ಅವರಿಗೂ ಇನ್ನಿಂಗ್ಸ್ ಬೆಳೆಸಲಾಗಲಿಲ್ಲ. ಅವರು 22 ರನ್ ಮಾಡಿ ನಿರ್ಗಮಿಸಿದರು. ರುಜುಲ್ ಭಟ್ 23, ಚಿರಾಗ್ ಗಾಂಧಿ 20 ರನ್ ಗಳಿಸಿ ವಾಪಸಾದರು. ಕೊನೆಯಲ್ಲಿ ಒಂದಿಷ್ಟು ಬ್ಯಾಟಿಂಗ್ ಹೋರಾಟ ತೋರ್ಪಡಿಸಿದವರು ರುದ್ರಪ್ರತಾಪ್ ಸಿಂಗ್ ಮಾತ್ರ(40).
ಜಾರತೊಡಗಿದ ಝಾರ್ಖಂಡ್
ಜವಾಬು ನೀಡತೊಡಗಿದ ಝಾರ್ಖಂಡ್ ಮೊದಲ ಓವರಿನಿಂದಲೇ ಜಾರತೊಡಗಿತು. ಆರಂಭಕಾರ ಸುಮಿತ್ ಕುಮಾರ್ (2) ಅವರನ್ನು ಆರ್‌ಪಿ ಸಿಂಗ್ ವಾಪಸ್ ಕಳುಹಿಸಿದರು. ಬಳಿಕ ಪ್ರತ್ಯೂಷ್ ಸಿಂಗ್ (27) ಮತ್ತು ವಿರಾಟ್ ಸಿಂಗ್ (34) ಸಣ್ಣ ಮಟ್ಟದ ಹೋರಾಟ ಸಂಘಟಿಸಿ 45 ರನ್ ಒಟ್ಟುಗೂಡಿಸಿದರು. ಆದರೆ ಹಂತ ಹಂತವಾಗಿ ವಿಕೆಟ್ ಕೀಳುತ್ತಲೇ ಹೋದ ಗುಜರಾತ್ ಮೇಲುಗೈ ಸೂಚನೆ ನೀಡಿತು. ಸ್ಕೋರ್ 121 ರನ್ ಆಗುವಷ್ಟರಲ್ಲಿ ನಾಯಕ ಸೌರಭ್ ತಿವಾರಿ ಸಹಿತ 4 ವಿಕೆಟ್ ಉದುರಿಸಿಕೊಂಡ ಝಾರ್ಖಂಡ್ ತೀವ್ರ ಒತ್ತಡಕ್ಕೆ ಸಿಲುಕಿತು.
ಈ ಹಂತದಲ್ಲಿ ಜತೆಗೂಡಿದ ಇಶಾಂಕ್ ಜಗ್ಗಿ ಮತ್ತು ಇಶಾನ್ ಕಿಶನ್ 5ನೇ ವಿಕೆಟಿಗೆ 92 ರನ್ ಪೇರಿಸಿ ತಂಡಕ್ಕೆ ಆಸರೆಯಾದರು. ಕಿಶನ್ ಆಟವಂತೂ ಅತ್ಯಂತ ಆಕ್ರಮಣಕಾರಿ ಯಾಗಿತ್ತು. 59 ಎಸೆತಗಳಿಂದ, 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 61 ರನ್ ಸಿಡಿಸಿದರು. ದಿನದಾಟದ ಮುಕ್ತಾಯಕ್ಕೆ ಕೇವಲ ಒಂದು ಓವರ್ ಇರುವಾಗ ಕಿಶನ್ ವಿಕೆಟ್ ಹಾರಿಸಿದ ಆರ್‌ಪಿ ಸಿಂಗ್ ಗುಜರಾತ್‌ಗೆ
ಮೇಲುಗೈ ಒದಗಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಗುಜರಾತ್-390 (ಪಾಂಚಾಲ್ 149, ಪಾರ್ಥಿವ್ 62, ಆರ್‌ಪಿ ಸಿಂಗ್ 40, ಯಾದವ್ 67ಕ್ಕೆ 3, ಶುಕ್ಲಾ 71ಕ್ಕೆ 3, ವಿಕಾಶ್ 59ಕ್ಕೆ 2). ಝಾರ್ಖಂಡ್-5 ವಿಕೆಟಿಗೆ 214 (ಕಿಶನ್ 61, ಜಗ್ಗಿ ಬ್ಯಾಟಿಂಗ್ 40, ತಿವಾರಿ 39, ಆರ್‌ಪಿ ಸಿಂಗ್ 48ಕ್ಕೆ 3).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.