ಮಾರ್ಟಿನಾ ಹಿಂಗಿಸ್-ಚಾನ್ ಯಂಗ್ ಜಾನ್ ವನಿತಾ ಡಬಲ್ಸ್ ಚಾಂಪಿಯನ್ಸ್
Team Udayavani, Sep 12, 2017, 6:15 AM IST
ನ್ಯೂಯಾರ್ಕ್: ಸ್ವಿಟ್ಸರ್‌ಲ್ಯಾಂಡಿನ ಟೆನಿಸ್ ತಾರೆ ಮಾರ್ಟಿನಾ ಹಿಂಗಿಸ್ ಸತತ 2 ದಿನವೂ ಯುಎಸ್ ಓಪನ್ ಪ್ರಶಸ್ತಿ ಎತ್ತುವ ಮೂಲಕ ತಮ್ಮ ತಾಕತ್ತನ್ನು ಟೆನಿಸ್ ಲೋಕದಲ್ಲಿ ಹೊಸತೊಂದು ಸಂಚಲನ ಮೂಡಿಸಿದ್ದಾರೆ. ವರ್ಷಾಂತ್ಯದ ಗ್ರ್ಯಾನ್‌ಸ್ಲಾಮ್ ಟೂರ್ನಿಯ ಅಂತಿಮ ದಿನವಾದ ರವಿವಾರ ಅವರು ತೈವಾನ್‌ನ ಚಾನ್ ಯಂಗ್ ಜಾನ್ ಜತೆ ಸೇರಿಕೊಂಡು ವನಿತಾ ಡಬಲ್ಸ್ ಟ್ರೋಫಿಯನ್ನೆತ್ತಿದರು. ಇದು ಹಿಂಗಿಸ್ ಅವರ ಟೆನಿಸ್ ಬಾಳ್ವೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಎಂಬುದು ವಿಶೇಷ.
ಹಿಂದಿನ ದಿನವಷ್ಟೇ ಮಾರ್ಟಿನಾ ಹಿಂಗಿಸ್ ಬ್ರಿಟನ್ನಿನ ಜೆಮಿ ಮರ್ರೆ ಜತೆ ಸೇರಿಕೊಂಡು ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದರು.ವನಿತಾ ಡಬಲ್ಸ್ ಫೈನಲ್‌ನಲ್ಲಿ ಮಾರ್ಟಿನಾ ಹಿಂಗಿಸ್-ಚಾನ್ ಯಂಗ್ ಜಾನ್ ಜೋಡಿ ಜೆಕ್ ಗಣರಾಜ್ಯದ ಲೂಸಿ ಸಫರೋವಾ-ಕ್ಯಾಥರಿನಾ ಸಿನಿಯಕೋವಾ ವಿರುದ್ಧ 6-3, 6-2 ಅಂತರದ ಸುಲಭ ಗೆಲುವು ಸಾಧಿಸಿತು.
ಹಿಂಗಿಸ್ 25ನೇ ಗ್ರ್ಯಾನ್‌ಸ್ಲಾಮ್
ಈ ಸಾಧನೆಯೊಂದಿಗೆ ಮಾರ್ಟಿನಾ ಹಿಂಗಿಸ್ ತಮ್ಮ ಟೆನಿಸ್ ಬಾಳ್ವೆಯಲ್ಲಿ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆಗೈದರು. ಇದರಲ್ಲಿ ಒಟ್ಟು 5 ಸಿಂಗಲ್ಸ್, 13 ಡಬಲ್ಸ್ ಹಾಗೂ 7 ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಗಳು ಸೇರಿವೆ. ಇನ್ನೊಂದೆಡೆ ತೈವಾನ್‌ನ ಚಾನ್ ಯಂಗ್ ಜಾನ್‌ಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಸಂಭ್ರಮ.
“ಎರಡು ದಿನಗಳಲ್ಲಿ ಎರಡು ಪ್ರಶಸ್ತಿ! ಈ ಪಂದ್ಯಾವಳಿಯನ್ನು ಆರಂಭಿಸುವಾಗ ನಾನು ಮೈಕಲ್ ಜೋರ್ಡಾನ್ ಅವರ 23ನೇ ನಂಬರ್‌ನಲ್ಲಿದ್ದೆ. ಈಗ 25ನೇ ಪ್ರಶಸ್ತಿ ಸದ್ದು ಮಾಡಿದೆ. ಇದೊಂದು ಸಿಹಿ ಸಿಹಿ ಸಂಭ್ರಮ…’ ಎಂದಿದ್ದಾರೆ ಮಾರ್ಟಿನಾ ಹಿಂಗಿಸ್.
20 ವರ್ಷಗಳ ಹಿಂದೆ (1997) ಇದೇ “ಆರ್ಥರ್ ಆ್ಯಶ್ ಸ್ಟೇಡಿಯಂ’ನಲ್ಲಿ ವನಿತಾ ಸಿಂಗಲ್ಸ್ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ ಹಿಂಗಿಸ್ ಮೊದಲ ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದರು. ಅಷ್ಟೇ ಅಲ್ಲ, ಆ ವರ್ಷದಲ್ಲೇ ಎಲ್ಲ 4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಮೊದಲ ಸಲ ಗೆಲ್ಲುವ ಮೂಲಕ ಟೆನಿಸ್ ಲೋಕದಲ್ಲಿ ಮಿಂಚು ಹರಿಸಿದ್ದರು.
“ಅಂದು ವೀನಸ್ ಜತೆ ಫೈನಲ್ ಆಡಿದ್ದೊಂದು ಸ್ಮರಣೀಯ ಅನುಭವ. ಆಗ ನಾವಿಬ್ಬರೂ ಯುವ ಆಟಗಾರ್ತಿಯರಾಗಿದ್ದೆವು. ನನ್ನ ಪಾಲಿನ ಈ 2 ದಶಕಗಳ ಟೆನಿಸ್ ಪಯಣ ನಿಜಕ್ಕೂ ಅದ್ಭುತ, ರೋಮಾಂಚನ…’ ಎಂಬುದಾಗಿ ಹಿಂಗಿಸ್ ಹೇಳಿದರು.
ಇದು ಹಿಂಗಿಸ್ ಗೆದ್ದ 3ನೇ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ. ಇದಕ್ಕೂ ಹಿಂದೆ 1998 ಮತ್ತು 2015ರಲ್ಲಿ ಹಿಂಗಿಸ್ ಚಾಂಪಿಯನ್ ಆಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.