ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕ್ ವಿರುದ್ಧ ಭಾರತ 4-0 ಜಯಭೇರಿ
Team Udayavani, Jun 24, 2018, 6:00 AM IST
ಬ್ರೆಡಾ (ಹಾಲೆಂಡ್): ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 4-0 ಗೋಲುಗಳ ಭರ್ಜರಿ ಅಂತರದಲ್ಲಿ ಪರಾಭವಗೊಳಿಸಿದೆ.
ಶನಿವಾರ ಇಲ್ಲಿನ ಬಿಎಚ್ ಆ್ಯಂಡ್ ಬಿಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 26ನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಗೋಲು ಗಳಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಅನಂತರ 54ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ದ್ವಿತೀಯ ಗೋಲು ಗಳಿಸಿದರೆ, ಮೂರನೇ ಗೋಲನ್ನು 57ನೇ ನಿಮಿಷದಲ್ಲಿ ಮನ್‌ದೀಪ್ ಸಿಂಗ್ ಹೊಡೆದರು. ನಾಲ್ಕನೇ ಗೋಲನ್ನು ಲಲಿತ್ ಉಪಾಧ್ಯಾಯ್ ಅವರು ಪಂದ್ಯದ 60ನೇ ನಿಮಿಷದಲ್ಲಿ ಸಿಡಿಸಿ ಭಾರತದ ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಈವರೆಗೆ ಒಮ್ಮೆಯೂ ಚಾಂಪಿಯನ್ಸ್ ಟ್ರೋಫಿ ಗೆಲ್ಲದ ಭಾರತಕ್ಕೆ ಈ ಪಂದ್ಯಾವಳಿ ಸವಾಲಿನದ್ದಾಗಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ರವಿವಾರ ಆಡಲಿದೆ.
ಪಾಕ್ ಗೋಲಿ ಹಿಂದಕ್ಕೆ!
ಪಂದ್ಯ ಮುಗಿಯಲು ಇನ್ನೇನು ಐದು ನಿಮಿಷ ಇದ್ದಾಗ ಪಾಕಿಸ್ಥಾನ ತನ್ನ ಗೋಲ್ ಕೀಪರ್‌ನನ್ನೇ ವಾಪಸ್ ಕರೆಸಿಕೊಳ್ಳುವ ವಿಚಿತ್ರ ತೀರ್ಮಾನ ಕೈಗೊಂಡಿತು. ಇದರ ಬದಲು ಅಂಕಣದಲ್ಲಿದ್ದ ಆಟಗಾರರಿಗೆ ಹೆಚ್ಚುವರಿಯಾಗಿ ಮತ್ತೂಬ್ಬ ಆಟಗಾರರನ್ನು ಕೊಡಲಾಯಿತು. ಇದು ಪಾಕ್‌ಗೆ ಮತ್ತಷ್ಟು ದುಬಾರಿಯಾಗಿ ಪರಿಣಮಿಸಿತು ಎಂದು “ಜಿಯೋ ಟಿವಿ’ ವರದಿ ಮಾಡಿದೆ. ಇದರ ಲಾಭ ಪಡೆದ ಭಾರತೀಯ ಆಟಗಾರರು ಈ ಕೊನೆ ಐದು ನಿಮಿಷಗಳಲ್ಲಿ ಮತ್ತೆರಡು ಗೋಲುಗಳನ್ನು ಬಾರಿಸಿ, ಭರ್ಜರಿ ಗೆಲುವು ಸಾಧಸಿದರು.ಆದರೆ ಪಾಕಿಸ್ಥಾನ ತನ್ನ ಗೋಲ್‌ಕೀಪರ್‌ನನ್ನು ಆಚೆ ಕರೆಸಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.