ಆಂಗ್ಲರ ವಿರುದ್ಧದ ಮೊದಲ ಏಕದಿನದಲ್ಲಿ ಭಾರತಕ್ಕೆ 8 ವಿಕೆಟ್ ಜಯ
Team Udayavani, Jul 13, 2018, 9:32 AM IST
ನಾಟಿಂಗ್‌ಹ್ಯಾಮ್: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಭರ್ಜರಿ ಬೌಲಿಂಗ್ (25 ರನ್‌ಗೆ 6 ವಿಕೆಟ್) ಹಾಗೂ
ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾರ ಅಜೇಯ ಶತಕದಿಂದಾಗಿ (137* ರನ್, 114 ಎಸೆತ, 15 ಬೌಂಡರಿ, 4
ಸಿಕ್ಸರ್) ಪ್ರವಾಸಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಗಳಿಸಿದೆ. ಇದು, ರೋಹಿತ್ ಅವರ 18ನೇ ಏಕದಿನ ಶತಕ.
ಟ್ರೆಂಟ್‌ಬ್ರಿಜ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್, 49.5
ಓವರ್‌ಗಳಲ್ಲಿ 268 ರನ್‌ಗಳಿಗೆ ಆಲೌಟ್ ಆಯಿತು. ಆನಂತರ ಬ್ಯಾಟಿಂಗ್‌ಗೆ ಇಳಿದ ಭಾರತ, 40.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 269 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಇಂಗ್ಲೆಂಡ್ ನೀಡಿದ್ದ ಸವಾಲನ್ನು ದಿಟ್ಟತನದಿಂದ ಎದುರಿಸಿದ ಭಾರತದ ಆರಂಭಿಕರಾದ ರೋಹಿತ್ ಹಾಗೂ ಶಿಖರ್ ಮೊದಲ ವಿಕೆಟ್‌ಗೆ 59 ರನ್ ಪೇರಿಸಿದರು. ಶಿಖರ್ ಔಟಾದ ನಂತರ, ರೋಹಿತ್-ಕೊಹ್ಲಿ ಜೋಡಿ, 2ನೇ ವಿಕೆಟ್‌ಗೆ ಬರೋಬ್ಬರಿ 167 ರನ್ ಜೊತೆಯಾಟ ನೀಡಿ, ತಂಡದ ಗೆಲುವಿಗೆ ನಾಂದಿ ಹಾಡಿದರು. 33ನೇ ಓವರ್‌ನಲ್ಲಿ ಕೊಹ್ಲಿ (75 ರನ್, 82 ಎಸೆತ, 7 ಬೌಂಡರಿ) ವಿಕೆಟ್ ಉರುಳಿದರೂ, ಆನಂತರದ ಬಂದ ಕೆ.ಎಲ್. ರಾಹುಲ್ ಜತೆಗೂಡಿದ ರೋಹಿತ್, ಇನಿಂಗ್ಸ್ ಮುಕ್ತಾಯಕ್ಕೆ ಸುಮಾರು 10 ಓವರ್ ಬಾಕಿಯಿರುವಂತೆಯೇ ತಂಡಕ್ಕೆ ಜಯ ತಂದರು.
ಕಾಡಿದ ಕುಲದೀಪ್
ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ, ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡವನ್ನು ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ ಬಿಡದೇ ಕಾಡಿದರು. ಇತ್ತೀಚೆಗೆ, ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದ ಯಾದವ್, ಇಲ್ಲೂ ತಮ್ಮ ಕೈಚಳಕ ಮೆರೆದರು. ಮೊದಲ 10 ಓವರ್‌ಗಳಲ್ಲಿ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದ್ದ ಆರಂಭಿಕರಾದ ಜೇಸನ್ ರಾಯ್ ಹಾಗೂ ಜಾನಿ ಬೇರ್‌ಸ್ಟೋ ಇಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿ, ಆನಂತರ ಜೊ ರೂಟ್, ಬೆನ್ ಸ್ಟೋಕ್ಸ್,ಜಾಸ್ ಬಟ್ಲರ್, ಡೇವಿಡ್ ವಿಲ್ಲೆ ವಿಕೆಟ್ ಉರುಳಿಸಿದರು. ಉಮೇಶ್ ಯಾದವ್ 2 ವಿಕೆಟ್ (ಮೊಯೀನ್ ಅಲಿ, ಆದಿಲ್ ರಶೀದ್) ಗಳಿಸಿದರೆ, ಯಜುವೇಂದ್ರ ಚಾಹಲ್ ಒಂದು ವಿಕೆಟ್ (ಇಯಾನ್ ಮೊರ್ಗನ್) ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್
49.5 ಓವರ್‌ಗೆ 268ಕ್ಕೆ ಆಲೌಟ್ (ಬಟ್ಲರ್ 53, ಬೆನ್ ಸ್ಟೋಕ್ಸ್ 50, ಕುಲದೀಪ್ 25ಕ್ಕೆ 6),
ಭಾರತ
40.1 ಓವರ್‌ಗೆ 269/2 (ರೋಹಿತ್ 137*, ಕೊಹ್ಲಿ75, ಆದಿಲ್ ರಶೀದ್ 62ಕ್ಕೆ 1).
ಪಂದ್ಯಶ್ರೇಷ್ಠ: ಕುಲದೀಪ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.