ವಿಂಡೀಸನ್ನು ಎತ್ತಿ ನಿಲ್ಲಿಸಿದ ಚೇಸ್, ಹೋಲ್ಡರ್
Team Udayavani, Oct 13, 2018, 11:47 AM IST
ಹೈದರಾಬಾದ್: ಶುಕ್ರವಾರ ಮೊದಲ್ಗೊಂಡ ಹೈದರಾಬಾದ್ ಟೆಸ್ಟ್ ಪಂದ್ಯದಲ್ಲೂ ಹೆದರುತ್ತಲೇ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸಿಗೆ ಕೆಳ ಸರದಿಯ ಬ್ಯಾಟ್ಸ್‌ಮನ್ ರೋಸ್ಟನ್ ಚೇಸ್ ಮತ್ತು ನಾಯಕ ಜಾಸನ್ ಹೋಲ್ಡರ್ ಸೇರಿಕೊಂಡು ಧೈರ್ಯ ತುಂಬಿದ್ದಾರೆ. ಎಂದಿನಂತೆ ಬ್ಯಾಟಿಂಗ್ ಕುಸಿತ ಅನುಭವಿಸಿದ ವಿಂಡೀಸ್, ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 295 ರನ್ನುಗಳ ಸಮಾಧಾನಕರ ಸ್ಕೋರ್ ದಾಖಲಿಸಿದೆ. ಇದು ರಾಜ್‌ಕೋಟ್ ಟೆಸ್ಟ್ ಪಂದ್ಯಕ್ಕಿಂತಲೂ ಉತ್ತಮ ಮಟ್ಟದ ಸಾಧನೆಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದು ಕೊಳ್ಳಲು ಮುಂದಾದ ವೆಸ್ಟ್ ಇಂಡೀಸಿಗೆ ಇದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ಮೊದಲೆರಡು ಅವಧಿಗಳಲ್ಲಿ ತಲಾ ಮೂರರಂತೆ 182 ರನ್ನಿಗೆ 6 ವಿಕೆಟ್ ಉದುರಿಸಿಕೊಂಡು ಮತ್ತೂಮ್ಮೆ ಸಣ್ಣ ಮೊತ್ತಕ್ಕೆ ಕುಸಿಯುವ ಸೂಚನೆ ನೀಡಿತು. ಆದರೆ 7ನೇ ವಿಕೆಟಿಗೆ ಜತೆಗೂಡಿದ ಚೇಸ್-ಹೋಲ್ಡರ್ ಸೇರಿಕೊಂಡು ಭಾರತದ ಮೇಲುಗೈಗೆ ತಡೆಯೊಡ್ಡಿದರಷ್ಟೇ ಅಲ್ಲ, 104 ರನ್ನುಗಳ ಜವಾಬ್ದಾರಿಯುತ ಜತೆಯಾಟದ ಮೂಲಕ ತಂಡವನ್ನು ಎತ್ತಿ ನಿಲ್ಲಿಸುವಲ್ಲಿ ಯಶಸ್ವಿಯಾದರು.
4ನೇ ಶತಕದತ್ತ ಚೇಸ್…
24ನೇ ಟೆಸ್ಟ್ ಆಡುತ್ತಿರುವ ಬಾರ್ಬಡಾಸ್‌ನ ಬಲಗೈ ಬ್ಯಾಟ್ಸ್‌ಮನ್ ರೋಸ್ಟನ್ ಚೇಸ್ 98 ರನ್ ಮಾಡಿ ಭಾರತಕ್ಕೆ ಸವಾಲಾಗಿ ಉಳಿದಿದ್ದಾರೆ. ಶನಿವಾರ ಅವರು ತಮ್ಮ ಟೆಸ್ಟ್ ಬಾಳ್ವೆಯ 4ನೇ ಶತಕ ದಾಖಲಿಸುವುದು ಬಹುತೇಕ ಖಚಿತ. 174 ಎಸೆತಗಳನ್ನು ಎದುರಿಸಿ ನಿಂತ ಚೇಸ್, 7 ಬೌಂಡರಿ ಜತೆಗೆ ಒಂದು ಸಿಕ್ಸರ್ ಬಾರಿಸಿ ಆತಿಥೇಯರ ಬೌಲಿಂಗ್ ದಾಳಿಯ ಮೇಲೆರಗಿದರು. ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೊದಲ ಸರದಿಯಲ್ಲೂ ಚೇಸ್ ಉತ್ತಮ ಪ್ರದರ್ಶನ ನೀಡಿ 53 ರನ್ ಹೊಡೆದಿದ್ದರು.
ಕಳೆದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜಾಸನ್ ಹೋಲ್ಡರ್ ಕಪ್ತಾನನ ಆಟವಾಡಿ 52 ರನ್ನುಗಳ ಕೊಡುಗೆ ಸಲ್ಲಿಸಿದರು. ಇದು ಅವರ 8ನೇ ಅರ್ಧ ಶತಕ. 92 ಎಸೆತಗಳ ಈ ಜವಾಬ್ದಾರಿಯುತ ಆಟದಲ್ಲಿ 6 ಬೌಂಡರಿ ಒಳಗೊಂಡಿತ್ತು. 176 ಎಸೆತಗಳಲ್ಲಿ ಚೇಸ್-ಹೋಲ್ಡರ್ ಅವರಿಂದ ಶತಕದ ಜತೆಯಾಟ ಪೂರ್ತಿಗೊಂಡಿತು.
182ಕ್ಕೆ ಬಿತ್ತು 6 ವಿಕೆಟ್
ಲಂಚ್ ವೇಳೆ ವಿಂಡೀಸ್ 86 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಕೈರನ್ ಪೊವೆಲ್ (22) ಅವರನ್ನು ಜಡೇಜಾಗೆ ಕ್ಯಾಚ್ ಕೊಡಿಸುವ ಮೂಲಕ ಅಶ್ವಿನ್ ವಿಂಡೀಸ್ ಕುಸಿತಕ್ಕೆ ಚಾಲನೆಯಿತ್ತರು. ಆಗ ಸ್ಕೋರ್ 32 ರನ್ ಆಗಿತ್ತು. 20 ರನ್ ಸೇರಿಸುವಷ್ಟರಲ್ಲಿ ಮತ್ತೋರ್ವ ಆರಂಭಕಾರ ಕ್ರೆಗ್ ಬ್ರಾತ್‌ವೇಟ್ (14) ಚೈನಾಮನ್ ಬೌಲರ್ ಕುಲದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು. 36 ರನ್ ಮಾಡಿ ಭರವಸೆ ಮೂಡಿಸಿದ್ದ ಶೈ ಹೋಪ್ ಅವರನ್ನು ಉಮೇಶ್ ಯಾದವ್ ಲೆಗ್ ಬಿಫೋರ್ ಬಲೆಗೆ ಬೀಳಿಸಿದರು.
ದ್ವಿತೀಯ ಅವಧಿಯ ಆಟದಲ್ಲೂ ಭಾರತದ ಬೌಲರ್‌ಗಳು 3 ವಿಕೆಟ್ ಕೀಳುವಲ್ಲಿ ಯಶಸ್ವಿ ಯಾದರು. ಸಿಮ್ರನ್ ಹೆಟ್‌ಮೈರ್ (12) ಮತ್ತು ಸುನೀಲ್ ಆ್ಯಂಬ್ರಿಸ್ (18) ಅವರಿಗೆ ಕುಲದೀಪ್ ಬೌಲಿಂಗ್ ಜಾದೂ ಅರಿಯ ಲಾಗಲಿಲ್ಲ. ಕೀಪರ್ ಶೇನ್ ಡೌರಿಚ್ ಉತ್ತಮ ಹೋರಾಟ ವೊಂದನ್ನು ಪ್ರದರ್ಶಿಸಿ 63 ಎಸೆತಗಳಿಂದ 30 ರನ್ ಹೊಡೆದರು (4 ಬೌಂಡರಿ, 1 ಸಿಕ್ಸರ್). ಚಹಾ ವಿರಾಮದ ವೇಳೆ ಪ್ರವಾಸಿಗರ 6 ವಿಕೆಟ್‌ಗಳನ್ನು 197 ರನ್ನಿಗೆ ಉಡಾಯಿಸಿದ ಭಾರತ ಸ್ಪಷ್ಟ ಮೇಲುಗೈ ಸಾಧಿಸಿತ್ತು.
ಆದರೆ ಕೊನೆಯ ಅವಧಿಯಲ್ಲಿ ಚೇಸ್-ಹೋಲ್ಡರ್ ದಿಟ್ಟ ಪ್ರದರ್ಶನ ನೀಡುವುದರೊಂದಿಗೆ ವೆಸ್ಟ್ ಇಂಡೀಸ್ ಪಂದ್ಯಕ್ಕೆ ಮರಳಿತು. ಇವರಿಬ್ಬರೇ ಅಂತಿಮ ಅವಧಿಯನ್ನು ಪೂರ್ತಿಯಾಗಿ ಆಕ್ರಮಿಸಿಕೊಳ್ಳುವ ಸೂಚನೆ ಲಭಿಸಿತ್ತು. ಆದರೆ ಉಮೇಶ್ ಯಾದವ್ ಎಸೆತದಲ್ಲಿ ಅವಸರದ ಹೊಡೆತವೊಂದಕ್ಕೆ ಮುಂದಾದ ಹೋಲ್ಡರ್, ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಚೇಸ್ ಜತೆಗೆ 2 ರನ್ ಮಾಡಿರುವ ದೇವೇಂದ್ರ ಬಿಶೂ ಕ್ರೀಸ್‌ನಲ್ಲಿದ್ದಾರೆ. ಭಾರತದ ಪರ ಯಾದವದ್ವಯರು ತಲಾ 3 ವಿಕೆಟ್ ಕಿತ್ತರು.
ಅಂಗಳಕ್ಕೆ ಹಾರಿ ಕೊಹ್ಲಿ ಜತೆ ಸೆಲ್ಫಿಗೆ ಯತ್ನಿಸಿದ ಅಭಿಮಾನಿ !
ಹೈದರಾಬಾದ್ ಟೆಸ್ಟ್ ಪಂದ್ಯ ಆರಂಭಗೊಂಡ ಒಂದೇ ಗಂಟೆಯಲ್ಲಿ ಕ್ರಿಕೆಟ್ ಅಭಿಮಾನಿಯೋರ್ವ ಅಂಗಳಕ್ಕೆ ಹಾರಿ ನಾಯಕ ವಿರಾಟ್ ಕೊಹ್ಲಿ ಜತೆ ಸೆಲ್ಫಿ ತೆಗೆಯಲು ಮುಂದಾದ ಘಟನೆಯೊಂದು ಸಂಭವಿಸಿದೆ.
ವೀಕ್ಷಕರ ಗ್ಯಾಲರಿಯಿಂದ ಓಡಿ ಬಂದ ಅಭಿಮಾನಿ ಬ್ಯಾರಿಕೇಡ್ ಹಾರಿ ಅಂಗಳದಲ್ಲಿ ಸುಮಾರು 70 ಮೀ.ಗಳಷ್ಟು ಓಡಿ ವಿರಾಟ್ ಕೊಹ್ಲಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದ ಜಾಗಕ್ಕೆ ತಲುಪಿದ್ದಾನೆ. ಅಷ್ಟೇ ಅಲ್ಲ, ಕೊಹ್ಲಿ ತಡೆಯಲೆತ್ನಿಸಿದರೂ ಅವರನ್ನು ಬಿಗಿಯಾಗಿ ತಬ್ಬಿಕೊಂಡಿದ್ದಾನೆ. ಬಳಿಕ ಮೊಬೈಲ್ ಹಿಡಿದು ಸೆಲ್ಫಿ ತೆಗೆಯಲು ಮುಂದಾಗಿದ್ದಾನೆ. ಅಷ್ಟರಲ್ಲಿ ಮೈದಾನಕ್ಕೆ ಧಾವಿಸಿದ ಭದ್ರತಾ ಸಿಬಂದಿಗಳು ಆತನನ್ನು ಎಳೆದೊಯ್ದಿದ್ದಾರೆ. ಈ ಘಟನೆ ಟೆಸ್ಟ್ ಪಂದ್ಯದ ಭದ್ರತಾ ಲೋಪಕ್ಕೆ ಮತ್ತೂಂದು ಸಾಕ್ಷಿಯಾಗಿದೆ. ರಾಜ್‌ಕೋಟ್ ಟೆಸ್ಟ್ ವೇಳೆಯೂ ಕೊಹ್ಲಿ ಅವರನ್ನು ಸುತ್ತುವರಿದ ಇಬ್ಬರು ವೀಕ್ಷಕರು ಸೆಲ್ಪಿಗೆ ಪ್ರಯತ್ನಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.