World Cup;ದಕ್ಷಿಣ ಆಫ್ರಿಕಾ ಕನಸು ನುಚ್ಚುನೂರು: ಭಾರತ vsಆಸ್ಟ್ರೇಲಿಯ ಫೈನಲ್
ಅದ್ಬುತ ಹೋರಾಟ ನೀಡಿದ ದಕ್ಷಿಣ ಆಫ್ರಿಕಾ ಬೌಲರ್ ಗಳು..
Team Udayavani, Nov 16, 2023, 10:08 PM IST
ಕೋಲ್ಕತಾ : ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ಗುರುವಾರ ನಡೆದ ವಿಶ್ವಕಪ್ 2ನೇ ಸೆಮಿ ಫೈನಲ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಅಮೋಘ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದು,ಭಾನುವಾರ ಭಾರತದೊಂದಿಗೆ ದೊಡ್ಡ ಹಣಾಹಣಿ ನಡೆಸಲು ಸಿದ್ಧವಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯದ ಬಿಗಿ ದಾಳಿಗೆ ನಲುಗಿ ಭಾರೀ ಆಘಾತಕ್ಕೆ ಸಿಲುಕಿತಾದರೂ ಆಪದ್ಬಾಂಧವನಂತೆ ಡೇವಿಡ್ ಮಿಲ್ಲರ್ ಅವರು ಶತಕದ ನೆರವಿನಿಂದ ಇನ್ನೂರರ ಗಡಿ ದಾಟಲು ಸಾಧ್ಯವಾಯಿತು. 213 ರನ್ ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯ 47.2 ಓವರ್ ಗಳಲ್ಲಿ ಗುರಿ ತಲುಪಿ(215) 3 ವಿಕೆಟ್ ಗಳ ಜಯಭೇರಿ ಬಾರಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.
ಆಸೀಸ್ ಭರ್ಜರಿ ಆರಂಭ ಪಡೆಯಿತು. ಟ್ರಾವಿಸ್ ಹೆಡ್ 62 ರನ್( 48 ಎಸೆತ) ಗಳಿಸಿ ಔಟಾದರು. ಡೇವಿಡ್ ವಾರ್ನರ್ 29(18ಎಸೆತ) ಗಳಿಸಿ ಔಟಾದರು. 6.1 ಓವರ್ ಗಳಲ್ಲೇ 60 ರನ್ ಕಲೆ ಹಾಕಿ ಗೆಲುವಿನ ಸೂಚನೆ ನೀಡಿತು. ಆಬಳಿಕ ದಕ್ಷಿಣ ಆಫ್ರಿಕಾ ಬೌಲರ್ ಗಳು ಮೇಲುಗೈ ಸಾಧಿಸಿದರೂ ಗೆಲುವು ತನ್ನದಾಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೆಡ್ ಅವರನ್ನು ಮಹಾರಾಜ್, ವಾರ್ನರ್ ಅವರನ್ನು ಮಾರ್ಕ್ರಾಮ್ ಬೌಲ್ಡ್ ಮಾಡಿ ಸಂಭ್ರಮಿಸಿದರು. ಆ ಬಳಿಕ ಮಿಚೆಲ್ ಮಾರ್ಷ್ ಶೂನ್ಯಕ್ಕೆ ನಿರ್ಗಮಿಸಿದರು. 18 ರನ್ ಗಳಿಸಿದ್ದ ಮಾರ್ನಸ್ ಲಬುಶೆನ್ ಅವರನ್ನು ಶಮ್ಸಿ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಶಮ್ಸಿ ಕ್ಲೀನ್ ಬೌಲ್ಡ್ ಮಾಡಿ ಸಂಭ್ರಮದಲ್ಲಿ ತೇಲಾಡಿದರು.
ತಾಳ್ಮೆಯ ಆಟವಾಡಿದ ಸ್ಟೀವನ್ ಸ್ಮಿತ್ ಅವರು ದೊಡ್ಡ ಹೊಡೆತಕ್ಕೆ ಮುಂದಾಗಿ ಜೆರಾಲ್ಡ್ ಕೋಟ್ಜೀ ಎಸೆದ ಚೆಂಡನ್ನು ವಿಕೆಟ್ ಕೀಪರ್ ಡಿ ಕಾಕ್ ಕೈಗಿತ್ತು ನಿರ್ಗಮಿಸಿದರು. 62 ಎಸೆತಗಳಲ್ಲಿ 30 ರನ್ ಗಳಿಸಿ ನಿರ್ಗಮಿಸಿದರು.
5 ನೇ ಬಾರಿ ಸೆಮಿ ಫೈನಲ್ ನಲ್ಲಿ ಎಡವಿದ ದಕ್ಷಿಣ ಆಫ್ರಿಕಾದ ವಿಶ್ವಕಪ್ ಕನಸು ನುಚ್ಚುನೂರಾಯಿತು. 1992 ರಲ್ಲಿ ಇಂಗ್ಲೆಂಡ್ ವಿರುದ್ಧ ಸಿಡ್ನಿ 19 ರನ್ ಸೋಲು,1999 ರಲ್ಲಿ ಆಸ್ಟ್ರೇಲಿಯ ವಿರುದ್ಧ ಬರ್ಮಿಂಗ್‌ಹ್ಯಾಮ್ ನಲ್ಲಿ ಪಂದ್ಯ ಟೈ, 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್ ಐಲೆಟ್ 7 ವಿಕೆಟ್ ಸೋಲು, 2015ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಕ್ಲೆಂಡ್ ನಲ್ಲಿ 4 ವಿಕೆಟ್ ಸೋಲು ದಕ್ಷಿಣ ಆಫ್ರಿಕಾ ಅನುಭವಿಸಿದೆ.
1975 ಮತ್ತು 1996 ರಲ್ಲಿ ಫೈನಲ್ ನಲ್ಲಿ ಆಸ್ಟ್ರೇಲಿಯ ಸೋತು ರನ್ನರ್ ಅಪ್ ಆಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.