ICC ಚಾಂಪಿಯನ್ಸ್ ಟ್ರೋಫಿ 2017: ಭಾರತ – ಪಾಕ್ ನಡುವೆ ಫೈನಲ್
Team Udayavani, Jun 16, 2017, 1:52 AM IST
– ರೋಹಿತ್ – ಕೊಹ್ಲಿ ಸ್ಫೋಟಕ ಆಟ: ಸೆಮಿಫೈನಲ್‌ನಲ್ಲಿ ನೆಲಕಚ್ಚಿದ ಬಾಂಗ್ಲಾ
– 9 ವಿಕೆಟ್ ಅಂತರದಿಂದ ಭಾರತ ಜಯಭೇರಿ
– ರೋಹಿತ್ ಶರ್ಮ-ಕೊಹ್ಲಿ 178 ರನ್ನುಗಳ ಜತೆಯಾಟ
– ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ 11ನೇ ಶತಕ
– ಏಳು ವಿಕೆಟಿಗೆ 264 ರನ್ ಪೇರಿಸಿದ ಬಾಂಗ್ಲಾ ದೇಶ
ಬರ್ಮಿಂಗಂ: ರೋಹಿತ್ ಶರ್ಮ ಅವರ ಆಕರ್ಷಕ ಶತಕ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಮೋಘ ಆಟದಿಂದಾಗಿ ಹಾಲಿ ಚಾಂಪಿಯನ್ ಭಾರತ ತಂಡವು ಗುರುವಾರ ನಡೆದ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಅಂತಿಮ ನಾಲ್ಕರ ಸುತ್ತಿಗೇರಿದ್ದ ಬಾಂಗ್ಲಾದೇಶವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಸೋಲಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಹಂತಕ್ಕೇರಿತು. ರವಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಭಾರತವು ತನ್ನ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. ಪಾಕಿಸ್ಥಾನ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು.
ಟಾಸ್ ಗೆದ್ದು ಫೀಲ್ಡಿಂಗ್ ನಡೆಸಿದ್ದ ಭಾರತ ತಂಡವು ಬಾಂಗ್ಲಾ ಮೊತ್ತವನ್ನು 264 ರನ್ನಿಗೆ ನಿಯಂತ್ರಿಸಿತ್ತು. ಗೆಲ್ಲಲು ಕಠಿನ ಗುರಿ ಇದ್ದರೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತವು 40.1 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟದಲ್ಲಿ 265 ರನ್ ಪೇರಿಸಿ ಜಯಭೇರಿ ಬಾರಿಸಿ ಸಂಭ್ರಮಿಸಿತು. ಭಾರತದ ಆರಂಭ ಅಮೋಘವಾಗಿತ್ತು. ರೋಹಿತ್ ಶರ್ಮ ಮತ್ತು ಶಿಖರ್ ಧವನ್ ಅವರು ಬಾಂಗ್ಲಾ ದಾಳಿಯನ್ನು ಸಮರ್ಥವಾಗಿ ಎದುರಿಸಿ 14.4 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 87 ರನ್ ಪೇರಿಸಿದ್ದರು. ಈ ಹಂತದಲ್ಲಿ ಧವನ್ ಔಟಾದರು. 34 ಎಸೆತ ಎದುರಿಸಿದ್ದ ಅವರು 46 ರನ್ ಗಳಿಸಿದ್ದರು. ಆಬಳಿಕ ನಡೆದದ್ದು ರೋಹಿತ್ ಮತ್ತು ಕೊಹ್ಲಿ ಅವರ ಅದ್ಭುತ ಆಟ. ಬಾಂಗ್ಲಾ ದಾಳಿಯನ್ನು ಪುಡಿಗಟ್ಟಿದ ಅವರಿಬ್ಬರು ಮುರಿಯದ ದ್ವಿತೀಯ ವಿಕೆಟಿಗೆ 178 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.
ಭರ್ಜರಿ ಆಟವಾಡಿದ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿ ಸಂಭ್ರಮಿಸಿದರೆ ಕೊಹ್ಲಿ 8 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು. 129 ಎಸೆತ ಎದುರಿಸಿದ ರೋಹಿತ್ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 123 ರನ್ ಗಳಿಸಿ ಅಜೇಯರಾಗಿ ಉಳಿದರು. ರೋಹಿತ್‌ಗೆ ಸರಿಸಮಾನ ರೀತಿಯಲ್ಲಿ ಆಡಿದ ಕೊಹ್ಲಿ 78 ಎಸೆತ ಎದುರಿಸಿ 96 ರನ್ ಗಳಿಸಿದರು. ಕೇವಲ 4 ರನ್ನಿನಿಂದ ಶತಕ ವಂಚಿತರಾದರು. 13 ಬೌಂಡರಿ ಬಾರಿಸಿ ಮಿಂಚಿದ್ದರು. ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಅಬ್ಬರಕ್ಕೆ ಬ್ರೇಕ್ ನೀಡಲು ಬಾಂಗ್ಲಾ ಸಕಲ ಪ್ರಯತ್ನ ನಡೆಸಿತ್ತು. ಎಂಟು ಬೌಲರ್‌ಗಳೊಂದಿಗೆ ದಾಳಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಮೊದಲು ಬರ್ಮಿಂಗಂನ ಎಜ್‌ಬಾಸ್ಟನ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬಾಂಗ್ಲಾ ದೇಶವನ್ನು ಬ್ಯಾಟಿಂಗಿಗೆ ಇಳಿಸಿದರು. ಮೋಡ ಕವಿದ ವಾತಾವರಣದಿಂದಾಗಿ ಪಂದ್ಯ 10 ನಿಮಿಷ ವಿಳಂಬವಾಗಿ ಆರಂಭಗೊಂಡಿತ್ತು. ತೇವಗೊಂಡ ಪಿಚ್ಚಿನ ಲಾಭ ಎತ್ತುವ ಉದ್ದೇಶ ಭಾರತದ್ದಾಗಿತ್ತು. ಪೇಸ್ ಬೌಲರ್ ಭುವನೇಶ್ವರ್ ಕುಮಾರ್ ಅವರ ಆರಂಭಿಕ ಯಶಸ್ಸು, ತಮಿಮ್ ಇಕ್ಬಾಲ್-ಮುಶ್ಫಿಕರ್ ರಹೀಂ ಜೋಡಿಯ ಶತಕದ ಜತೆಯಾಟ, ದೊಡ್ಡ ಮೊತ್ತದತ್ತ ಬಾಂಗ್ಲಾ ತಂಡದ ಓಟ, ಪಾರ್ಟ್‌ಟೈಮ್ ಸ್ಪಿನ್ನರ್ ಕೇದಾರ್ ಜಾಧವ್ ಕೈಚಳಕ, ಕೊನೆಯ ಹಂತದಲ್ಲಿ ಬೌಲಿಂಗ್ ಲಯಕ್ಕೆ ಮರಳಿದ ಭಾರತ, ಬಾಂಗ್ಲಾದ ಭಾರೀ ಮೊತ್ತದ ಯೋಜನೆಗೆ ಕಡಿವಾಣ… ಹೀಗೆ ಸಾಗಿತ್ತು ದ್ವಿತೀಯ ಸೆಮಿಫೈನಲಿನ ಮೊದಲಾರ್ಧದ ಆಟ.
ಭುವನೇಶ್ವರ್ ಕುಮಾರ್ ಕಪ್ತಾನನ ನಿರ್ಧಾರವನ್ನು ಚೆನ್ನಾಗಿಯೇ ಸಮರ್ಥಿಸ ತೊಡಗಿದರು. ಮೊದಲ ಓವರಿನಲ್ಲೇ ಆರಂಭಕಾರ ಸೌಮ್ಯ ಸರ್ಕಾರ್ (0) ಅವರನ್ನು ಬೌಲ್ಡ್ ಮಾಡಿದರು; ಬಳಿಕ 7ನೇ ಓವರಿನಲ್ಲಿ ಶಬ್ಬೀರ್ ರೆಹಮಾನ್ (19) ಅವರನ್ನೂ ಪೆವಿಲಿಯನ್ನಿಗೆ ಅಟ್ಟಿದರು. ಆಗ ಬಾಂಗ್ಲಾ ಸ್ಕೋರ್ ಕೇವಲ 31 ರನ್. ಮೊದಲ 10 ಓವರ್‌ಗಳಲ್ಲಿ 46 ರನ್ ಬಂತು. ಇದು ಲೀಗ್ ಪಂದ್ಯಗಳಿಗೆ ಹೋಲಿಸಿದರೆ ಬಾಂಗ್ಲಾ ಗಳಿಸಿದ ಅತ್ಯಧಿಕ ಮೊತ್ತವೇ ಆಗಿತ್ತು. ಅಲ್ಲಿನ ಪಂದ್ಯಗಳ ಮೊದಲ 10 ಓವರ್‌ಗಳಲ್ಲಿ ಬಾಂಗ್ಲಾ ಗಳಿಕೆ ಕ್ರಮವಾಗಿ 36, 37 ಮತ್ತು 24 ರನ್ ಮಾತ್ರ.
ತಮಿಮ್ – ರಹೀಂ ಅಮೋಘ ಆಟ
3ನೇ ವಿಕೆಟಿಗೆ ಜತೆಗೂಡಿದ ಆರಂಭಕಾರ ತಮಿಮ್ ಇಕ್ಬಾಲ್ ಮತ್ತು ಕೀಪರ್ ಮುಶ್ಫಿಕರ್ ರಹೀಂ ಭಾರತದ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಲೇ ಸಾಗಿದರು; ಬಾಂಗ್ಲಾ ಸರದಿಯನ್ನು ಬಹಳ ವೇಗವಾಗಿ ಬೆಳೆಸತೊಡಗಿದರು. ಇವರಿಂದ 21.1 ಓವರ್‌ಗಳಲ್ಲಿ 123 ರನ್ ಒಟ್ಟುಗೂಡಿತು. ಈ ಹಂತದಲ್ಲಿ ಭಾರತದ ಯಾವುದೇ ಬೌಲರ್‌ಗಳ ಮ್ಯಾಜಿಕ್ ನಡೆಯಲಿಲ್ಲ. ಬಾಂಗ್ಲಾ ಮೊತ್ತ ಮುನ್ನೂರರಾಚೆ ಬೆಳೆಯುವ ಎಲ್ಲ ಸೂಚನೆ ಲಭಿಸಿತು.
ಕೊನೆಯ ಪ್ರಯತ್ನವೆಂಬಂತೆ ಕೊಹ್ಲಿ ಪಾರ್ಟ್‌ಟೈಮ್ ಬೌಲರ್ ಕೇದಾರ್ ಜಾಧವ್ ಕೈಗೆ ಚೆಂಡಿತ್ತರು. ಇದು ಫಲ ಕೊಟ್ಟಿತು. ಬೇರೂರಿ ನಿಂತಿದ್ದ ತಮಿಮ್ ಮತ್ತು ರಹೀಂ ಅವರನ್ನು ಜಾಧವ್ ಪೆವಿಲಿಯನ್ನಿಗೆ ಅಟ್ಟಿದರು. ಇವರಿಬ್ಬರ ನಡುವೆ ಅಪಾಯಕಾರಿ ಶಕಿಬ್ ಅಲ್ ಹಸನ್ (15) ವಿಕೆಟನ್ನು ಜಡೇಜ ಹಾರಿಸಿದರು. 2ಕ್ಕೆ 154 ರನ್ ಬಾರಿಸಿ ದೌಡಾಯಿಸುತ್ತಿದ್ದ ಬಾಂಗ್ಲಾ 5ಕ್ಕೆ 179 ಎಂಬ ಸ್ಥಿತಿಗೆ ಮುಟ್ಟಿತು. ಕೊನೆಯ 2 ವಿಕೆಟ್ ಬುಮ್ರಾ ಬುಟ್ಟಿಗೆ ಬಿತ್ತು. ಇದರಲ್ಲಿ ಮತ್ತೂಬ್ಬ ಡೇಂಜರಸ್ ಬ್ಯಾಟ್ಸ್‌ಮನ್ ಮಹಮದುಲ್ಲ (21) ಕೂಡ ಸೇರಿದ್ದರು. ಹೀಗಾಗಿ 3ನೇ ಪವರ್-ಪ್ಲೇ ಅವಧಿಯಲ್ಲಿ (41-50ನೇ ಓವರ್) ಬಾಂಗ್ಲಾಕ್ಕೆ ಪೇರಿಸಲು ಸಾಧ್ಯವಾದದ್ದು 62 ರನ್ ಮಾತ್ರ. ಇದರಲ್ಲಿ 30 ರನ್ ಮಾಜಿ ನಾಯಕ ಮೊರ್ತಜ ಅವರೊಬ್ಬರಿಂದಲೇ ಬಂದಿತ್ತು. ಭಾರತದ ಪರ ಜಾಧವ್ 22ಕ್ಕೆ 2, ಬುಮ್ರಾ 39ಕ್ಕೆ 2, ಭುವನೇಶ್ವರ್ 53ಕ್ಕೆ 2 ವಿಕೆಟ್ ಹಾರಿಸಿದರು.
ಸ್ಕೋರ್‌ಪಟ್ಟಿ
ಬಾಂಗ್ಲಾದೇಶ
ತಮಿಮ್ ಇಕ್ಬಾಲ್ ಬಿ ಜಾಧವ್ 70
ಸೌಮ್ಯ ಸರ್ಕಾರ್ ಬಿ ಭುವನೇಶ್ವರ್ 0
ಶಬ್ಬೀರ್ ರೆಹಮಾನ್ ಸಿ ಜಾಧವ್ ಬಿ ಭುವನೇಶ್ವರ್ 19
ಮುಷ್ಫಿಕರ್ ರಹೀಂ ಸಿ ಕೊಹ್ಲಿ ಬಿ ಜಾಧವ್ 61
ಶಕಿಬ್ ಅಲ್ ಹಸನ್ ಸಿ ಧೋನಿ ಬಿ ಜಡೇಜ 15
ಮಹಮದುಲ್ಲ ಬಿ ಬುಮ್ರಾ 21
ಮೊಸದೆಕ್ ಹೊಸೇನ್ ಸಿ ಮತ್ತು ಬಿ ಬುಮ್ರಾ 15
ಮಶ್ರಫೆ ಮೊರ್ತಜ ಔಟಾಗದೆ 30
ತಸ್ಕಿನ್ ಅಹ್ಮದ್ ಔಟಾಗದೆ 10
ಇತರ 23
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 264
ವಿಕೆಟ್ ಪತನ: 1-1, 2-31, 3-154, 4-177, 5-179, 6-218, 7-229.
ಬೌಲಿಂಗ್:
ಭುವನೇಶ್ವರ್ ಕುಮಾರ್ 10-1-53-2
ಜಸ್‌ಪ್ರೀತ್ ಬುಮ್ರಾ 10-1-39-2
ಆರ್. ಅಶ್ವಿನ್ 10-0-54-0
ಹಾರ್ದಿಕ್ ಪಾಂಡ್ಯ 4-0-34-0
ರವೀಂದ್ರ ಜಡೇಜ 10-0-48-1
ಕೇದಾರ್ ಜಾಧವ್ 6-0-22-2
ಭಾರತ
ರೋಹಿತ್ ಶರ್ಮ ಔಟಾಗದೆ 123
ಶಿಖರ್ ಧವನ್ ಸಿ ಮೊಸಡೆಕ್ ಬಿ ಮೊರ್ತಜ 46
ವಿರಾಟ್ ಕೊಹ್ಲಿ ಔಟಾಗದೆ 96
ಇತರ: 0
ಒಟ್ಟು (40.1 ಓವರ್‌ಗಳಲ್ಲಿ 1 ವಿಕೆಟಿಗೆ) 265
ವಿಕೆಟ್ ಪತನ: 1-87
ಬೌಲಿಂಗ್:
ಮುಶ್ರಫೆ ಮೊರ್ತಜ 8-0-29-1
ಮುಸ್ತಾಫಿಜುರ್ ರೆಹಮಾನ್ 6-0-53-0
ತಸ್ಕಿನ್ ಅಹ್ಮದ್ 7-0-49-0
ರುಬೆಲ್ ಹೊಸೇನ್ 6-0-46-0
ಶಕಿಬ್ ಅಲ್ ಹಸನ್ 9-0-54-0
ಮೊಸಡೆಕ್ ಹೊಸೇನ್ 2-0-13-0
ಮಹಮುದುಲ್ಲ 1-0-10-0
ಶಬ್ಬೀರ್ ರೆಹಮಾನ್ 1.1-0-11-0
ಪಂದ್ಯಶ್ರೇಷ್ಠ: ರೋಹಿತ್ ಶರ್ಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ
Syed Modi International: ಫೇವರಿಟ್ ಸಿಂಧು, ಲಕ್ಷ್ಯ ಸೆಮಿಫೈನಲ್‌ಗೆ
Pro Kabaddi;ಹರಿಯಾಣದ ಅಗ್ರಸ್ಥಾನ ಇನ್ನಷ್ಟು ಗಟ್ಟಿ
ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.