ಐಸಿಸಿ ಏಕದಿನ ರ್‍ಯಾಂಕಿಂಗ್ : ಅಗ್ರಸ್ಥಾನ ಗಟ್ಟಿಗೊಳಿಸಿದ ಕೊಹ್ಲಿ, ಬುಮ್ರಾ
Team Udayavani, Jan 20, 2020, 11:31 PM IST
ದುಬಾೖ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಕಾರ ರೋಹಿತ್ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನಗಳನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ. ಇದೇ ವೇಳೆ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಭಾರತ-ಆಸ್ಟ್ರೇಲಿಯ ನಡುವಿನ 3 ಪಂದ್ಯಗಳ ಏಕದಿನ ಸರಣಿ ಮುಗಿದ ಬಳಿಕ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಯಿತು.
ಆಸ್ಟ್ರೇಲಿಯ ವಿರುದ್ಧ 183 ರನ್ ಬಾರಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದ ವಿರಾಟ್ ಕೊಹ್ಲಿ 886 ಅಂಕ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಶತಕ ಬಾರಿಸಿ ಪಂದ್ಯಶ್ರೇಷ್ಠರೆನಿಸಿದ ರೋಹಿತ್ ಶರ್ಮ 868 ಅಂಕ ಗಳಿಸಿದ್ದಾರೆ. ಸರಣಿ ಸಾಧನೆಗಾಗಿ ಇವರಿಬ್ಬರು ಕ್ರಮವಾಗಿ 2 ಮತ್ತು 3 ಅಂಕ ಪಡೆದರು.
ರಾಹುಲ್‌ಗೆ 50ನೇ ಸ್ಥಾನ
ಅಂತಿಮ ಪಂದ್ಯದ ವೇಳೆ ಗಾಯಾಳಾಗಿ ಹೊರಗುಳಿದ ಶಿಖರ್ ಧವನ್ 7 ಸ್ಥಾನ ಮೇಲೇರಿದ್ದು, 15ನೇ ಸ್ಥಾನಕ್ಕೆ ಬಂದಿದ್ದಾರೆ. ಧವನ್ 2 ಪಂದ್ಯಗಳಿಂದ 170 ರನ್ ಹೊಡೆದಿದ್ದರು. ಧವನ್ ಗೈರಲ್ಲಿ ಇನ್ನಿಂಗ್ಸ್ ಆರಂಭಿಸಿದ ಕೆ.ಎಲ್. ರಾಹುಲ್ ಅವರದು 21 ಸ್ಥಾನಗಳ ನೆಗೆತ. ಅವರೀಗ 50ನೇ ಸ್ಥಾನ ಅಲಂಕರಿಸಿದ್ದಾರೆ.
ಸರಣಿಯಲ್ಲಿ ಸರ್ವಾಧಿಕ 229 ರನ್ ಬಾರಿಸಿದ ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ 4 ಸ್ಥಾನ ಮೇಲೇರಿದ್ದು, 23ಕ್ಕೆ ಬಂದಿದ್ದಾರೆ. ವಾರ್ನರ್, ಫಿಂಚ್ ತಲಾ ಒಂದೊಂದು ಸ್ಥಾನದ ಪ್ರಗತಿ ಕಂಡಿದ್ದಾರೆ.
ಗಾಯದಿಂದ ಗುಣಮುಖರಾಗಿ ಆಸ್ಟ್ರೇಲಿಯ ವಿರುದ್ಧದ ಸರಣಿಗೆ ಮರಳಿದ ಜಸ್‌ಪ್ರೀತ್ ಬುಮ್ರಾ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ (764 ಅಂಕ). ದ್ವಿತೀಯ ಸ್ಥಾನದಲ್ಲಿರುವ ಟ್ರೆಂಟ್ ಬೌಲ್ಟ್ ಬುಮ್ರಾಗಿಂತ 27 ಅಂಕಗಳ ಹಿನ್ನಡೆಯಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.