ICC World Cup ಟಿಕೆಟ್ ಗಾಗಿ ಪೈಪೋಟಿ; ಇಂದಿನಿಂದ ಸೂಪರ್-6 ಕದನ
Team Udayavani, Jun 29, 2023, 12:12 PM IST
ಬುಲವಾಯೊ: ವರ್ಷಾಂತ್ಯ ನಡೆಯುವ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಉಳಿದೆರಡು ತಂಡಗಳು ಯಾವುವು? ಯಾರಿಗೆಲ್ಲ ಭಾರತಕ್ಕೆ ಪ್ರಯಾಣಿಸುವ ಲಕ್ಕಿ ಟಿಕೆಟ್ ಲಭಿಸಲಿದೆ ಎಂಬ ಕೌತುಕ ತೀವ್ರಗೊಂಡಿದೆ. ಗುರುವಾರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಸೂಪರ್-6 ಹಣಾಹಣಿ ಆರಂಭವಾಗಲಿದ್ದು, ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಲೀಗ್ ಹಂತದ ಪಂದ್ಯಗಳ ಸಾಧನೆ ಯಂತೆ “ಎ’ ವಿಭಾಗದಿಂದ ಜಿಂಬಾಬ್ವೆ, ನೆದರ್ಲೆಂಡ್ಸ್ ಮತ್ತು ವೆಸ್ಟ್ ಇಂಡೀಸ್; “ಬಿ’ ವಿಭಾಗದಿಂದ ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಒಮಾನ್ ಸೂಪರ್-6 ಹಂತ ಏರುವಲ್ಲಿ ಯಶಸ್ವಿಯಾಗಿವೆ. ನೇಪಾಳ, ಅಮೆರಿಕ, ಐರ್ಲೆಂಡ್ ಮತ್ತು ಯುಎಇ ರೇಸ್‌ನಿಂದ ಹೊರಬಿದ್ದಿವೆ. ಇವುಗಳಲ್ಲಿ ಬಲಿಷ್ಠ ಐರ್ಲೆಂಡ್ ತಂಡದ ನಿರ್ಗಮನ, ಒಮಾನ್‌ನಂಥ ಸಾಮಾನ್ಯ ತಂಡದ ಮುನ್ನಡೆ ಅಚ್ಚರಿ ಎನಿಸಿದೆ.
ಈ ಬಾರಿಯ ವಿಶ್ವಕಪ್ ಕೇವಲ 10 ತಂಡಗಳಿಗೆ ಸೀಮಿತಗೊಂಡಿರುವುದರಿಂದ ಅರ್ಹತಾ ಸುತ್ತಿನಲ್ಲಿ ಪೈಪೋಟಿ ತೀವ್ರಗೊಂಡಿದೆ. ಪ್ರಧಾನ ಸುತ್ತಿನ 8 ತಂಡಗಳನ್ನು ಕೂಡಿಕೊಳ್ಳಲು ಕೇವಲ 2 ತಂಡಗಳ ಆಯ್ಕೆಯಾಗಬೇಕಿದೆ. ಸೂಪರ್-6 ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದು ಫೈನಲ್ ಪ್ರವೇಶಿಸಿದ ತಂಡಗಳಿಗೆ ಅದೃಷ್ಟ ಖುಲಾಯಿಸಲಿದೆ.
ಲಂಕಾ, ಜಿಂಬಾಬ್ವೆ ಫೇವರಿಟ್: ಈಗಿನ ಲೆಕ್ಕಾಚಾರದಂತೆ ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳಿಗೆ ಮುನ್ನಡೆಯ ಅವಕಾಶ ಹೆಚ್ಚು. ಕಾರಣ, ಇವೆರಡೂ ತಂಡಗಳು ಲೀಗ್ ಹಂತದಲ್ಲಿ ಅಜೇಯ ಸಾಧನೆಗೈದಿವೆ. ಜತೆಗೆ 4 ಅಂಕಗಳನ್ನೂ ಸೂಪರ್-6 ಹಂತಕ್ಕೆ ಕೊಂಡೊಯ್ದಿವೆ. ಲೀಗ್ ವಿಭಾಗದಲ್ಲಿ ಜಿಂಬಾಬ್ವೆ, ಶ್ರೀಲಂಕಾ ವಿರುದ್ಧ ಪರಾಭವಗೊಂಡ ತಂಡಗಳೆರಡೂ ಸೂಪರ್-6 ತಲುಪಿರುವ ಕಾರಣ ಈ ಅಂಕ ಲಭಿಸುತ್ತದೆ. ಉಳಿದಂತೆ ಸ್ಕಾಟ್ಲೆಂಡ್ ಮತ್ತು ನೆದರ್ಲೆಂಡ್ಸ್ 2 ಅಂಕಗಳನ್ನು ಹೊಂದಿವೆ. ಯಾವುದೇ ಅಂಕಗಳನ್ನು ಹೊಂದಿಲ್ಲದ ತಂಡಗಳೆಂದರೆ ವೆಸ್ಟ್ ಇಂಡೀಸ್ ಮತ್ತು ಒಮಾನ್. ಈ ತಂಡಗಳಿಗೆ ಮುನ್ನಡೆಯ ಅವಕಾಶ ಕಡಿಮೆ.
ವಿಂಡೀಸ್ ಇಲ್ಲದ ವಿಶ್ವಕಪ್?!: ಆದರೆ ವೆಸ್ಟ್ ಇಂಡೀಸ್ ಇಲ್ಲದ ವಿಶ್ವಕಪ್ ಪಂದ್ಯಾವಳಿಯನ್ನು ಊಹಿಸಲೂ ಸಾಧ್ಯವಿಲ್ಲ. 70ರ ದಶಕದ ಮೊದಲೆರಡು ವಿಶ್ವಕಪ್‌ಗ್ಳಲ್ಲಿ ಅಜೇಯ ಸಾಧನೆಯೊಂದಿಗೆ ಚಾಂಪಿಯನ್ ಆಗಿ ಮೂಡಿಬಂದ ದೈತ್ಯ ತಂಡ ಈ ವೆಸ್ಟ್ ಇಂಡೀಸ್. ಆದರೆ ಯಾವಾಗ 1983ರಲ್ಲಿ ಭಾರತದಿಂದ ಅವಳಿ ಏಟು ತಿಂದು ನೆಲಕಚ್ಚಿತೋ, 40 ವರ್ಷಗಳಾದರೂ ಎದ್ದು ನಿಂತಿಲ್ಲ. ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಆಡುವಂಥ ದುಃಸ್ಥಿತಿ ಕೆರಿಬಿಯನ್ನರಿಗೆ ಎದುರಾಗಿರುವುದು ಅವರದ್ದಲ್ಲ, ಕ್ರಿಕೆಟಿನ ದುರ್ದೈವ. ಈ ಬಾರಿ ವಿಶ್ವಕಪ್ ಆಡಬೇಕಾದರೆ ಅದು ಸೂಪರ್-6 ಪಂದ್ಯಗಳನ್ನೆಲ್ಲ ಗೆಲ್ಲಬೇಕಿದೆ.
ಇದನ್ನೂ ಓದಿ:ಕುರಾನ್ ಬಗ್ಗೆ ಡಾಕ್ಯುಮೆಂಟರಿ ಮಾಡಿ ಏನಾಗುತ್ತದೆ ನೋಡಿ..: ‘ಆದಿಪುರುಷ್’ ತಂಡಕ್ಕೆ ಕೋರ್ಟ್
ಅದೇ ರೀತಿ 1996ರ ಚಾಂಪಿಯನ್ ತಂಡವಾದ ಶ್ರೀಲಂಕಾ ಕೂಡ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಸಂಕಟಕ್ಕೆ ಸಿಲುಕಿತು. ಆದರೆ ಅದು ವೆಸ್ಟ್ ಇಂಡೀಸ್ ನಷ್ಟು ಹೀನಾಯ ಸ್ಥಿತಿ ತಲುಪಿಲ್ಲ. 2007 ಮತ್ತು 2011ರ ವಿಶ್ವಕಪ್ ಫೈನಲ್‌ನಲ್ಲಿ ಆಡಿದೆ. ಆದರೆ 2ನೇ ಪ್ರಶಸ್ತಿ ಮಾತ್ರ ಮರೀಚಿಕೆಯೇ ಆಗುಳಿದಿದೆ.
ಜಿಂಬಾಬ್ವೆಯದ್ದು ಇನ್ನೊಂದು ಅವತಾರ. 1983ರಲ್ಲಿ ಚೊಚ್ಚಲ ವಿಶ್ವಕಪ್ ಆಡಲಿಳಿಯುವಾಗ ಜಿಂಬಾಬ್ವೆ ದೈತ್ಯ ತಂಡಗಳನ್ನೇ ಬೆಚ್ಚಿಬೀಳಿಸಿತ್ತು. ಮೊದಲ ಪಂದ್ಯದಲ್ಲೇ ನೆಚ್ಚಿನ ಆಸ್ಟ್ರೇಲಿಯನ್ನು ಕೆಡವಿ, ಬಳಿಕ ಭಾರತದ 5 ವಿಕೆಟ್‌ಗಳನ್ನು 17 ರನ್ನಿಗೆ ಕೆಡವಿ ಭಾರೀ ಸುದ್ದಿಯಾಗಿತ್ತು. ಆದರೆ ಮತ್ತೆಂದೂ ಈ ಆಫ್ರಿಕನ್ ಕಂಟ್ರಿ ಟಾಪ್ ಕ್ಲಾಸ್ ಪ್ರದರ್ಶನ ನೀಡಲಿಲ್ಲ. ಇದೀಗ ತವರಿನ ಅರ್ಹತಾ ಪಂದ್ಯಾವಳಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಸ್ಕಾಟ್ಲೆಂಡ್, ನೆದರ್ಲೆಂಡ್ಸ್ ತಂಡಗಳನ್ನೂ ಕಡೆಗಣಿಸುವಂತಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.