ಮತ್ತೊಂದು ವಿಶ್ವಕಪ್ ಗೆಲ್ಲುವ ಕನಸು
ಇಂಗ್ಲೆಂಡ್‌ನಲ್ಲಿ ಭಾರತೀಯರು ಇನ್ನೊಮ್ಮೆ ಕಪ್ ಗೆಲ್ಲಲಾರರೇ?
Team Udayavani, Apr 27, 2019, 6:30 AM IST
ಭಾರತ ವಿಶ್ವಕಪ್ ತಯಾರಿಯಲ್ಲಿ ಆಸ್ಟ್ರೇಲಿಯವನ್ನು ಅದರ ನೆಲದಲ್ಲಿ, ನ್ಯೂಜಿಲೆಂಡನ್ನು ಅವರ ಗುಹೆಯಲ್ಲಿ ಸೋಲಿಸಿತ್ತಾದರೂ ಭಾರತಕ್ಕೆ ಬಂದ ಆಸ್ಟ್ರೇಲಿಯದ ವಿರುದ್ಧ ಕೊನೆಯ 3 ಏಕದಿನಗಳಲ್ಲಿ ಸೋಲುವ ಮೂಲಕ ತನ್ನ ಮೆಚ್ಚಿನ ಪಟ್ಟಕ್ಕೆ ಧಕ್ಕೆ ತಂದು ಕೊಂಡಿತು. ಈ ಸೋಲುಗಳಿಂದ ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವುದಾದರೆ ಆತಂಕಕಾರಿ. ಮುಖ್ಯವಾಗಿ, ಭಾರತದ ಗೆಲುವಿನ ತಂತ್ರಗಾರಿಕೆ ಮಾಡುವಾಗ ಈ ಸಮಸ್ಯೆಗಳನ್ನು ಕೂಡ ಪರಿಗಣಿಸಬೇಕಾಗಿದೆ.
2011, ಭಾರತ ಎರಡನೇ ಬಾರಿ ಸೀಮಿತ ಓವರ್‌ಗಳ ಏಕದಿನ ಕ್ರಿಕೆಟ್‌ನ ಅತ್ಯುನ್ನತ ಪ್ರಶಸ್ತಿಯಾದ ವಿಶ್ವಕಪ್ ಅನ್ನು ಗೆದ್ದಿತ್ತು. ಅದಕ್ಕಿಂತ ಮೊದಲು, 1983ರಲ್ಲಿ ಕಪಿಲ್‌ದೇವ್ ನೇತೃತ್ವದ ತಂಡ ಗೆದ್ದಾಗ ಇಡೀ ಭಾರತ ಯುದ್ಧವೊಂದನ್ನು ಗೆದ್ದ ಸಂಭ್ರಮವನ್ನು ಆಚರಿಸಿತ್ತು. ತಿಂಗಳುಗಟ್ಟಲೆ ಅದರ ನೆನಪು ಪ್ರತಿಫಲಿಸುವಂತಹ ಸಮಾರಂಭಗಳು ನಡೆದಿದ್ದವು. 2011ರಲ್ಲಿ ಮಹೇಂದ್ರಸಿಂಗ್ ಧೋನಿ ಪಡೆ ನಿಜ ಅರ್ಥದಲ್ಲಿ ವಿಶ್ವಕಪ್ ವಿಜಯದ ಸಂಭ್ರಮಾಚರಣೆಯನ್ನು ನಡೆಸಲೇ ಇಲ್ಲ. ಈ ವಿಶ್ವಕಪ್ ಮುಗಿಯುತ್ತಿದ್ದಂತೆ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಜ್ವರ ಶುರುವಾಗಿತ್ತು. ಜನ, ವಿಶ್ವಕಪ್ ಗೆದ್ದ ತಂಡದ ಆಟಗಾರರನ್ನೇ ಎದುರಾಳಿಗಳಾಗಿ ಕಂಡು, ಟೀಕಿಸಿ ಕೃತಾರ್ಥರಾದರು!
2019, ತಿಂಗಳೊಪ್ಪತ್ತಿನಲ್ಲಿ ಮತ್ತೂಂದು ವಿಶ್ವಕಪ್ ಬರಲಿದೆ. ಆದರೆ ಭಾರತದಲ್ಲಿ ಮತ್ತದೇ ಐಪಿಎಲ್ ಜಾತ್ರೆ ನಡೆಯುತ್ತಿದೆ. ನಮ್ಮ ಜನ ವಿಶ್ವಕಪ್ ಬಗ್ಗೆ ಮಾತೇ ಆಡುತ್ತಿಲ್ಲ. ಹಿಂದೆಲ್ಲ ಈ ಹಬ್ಬದ ಮುನ್ನ ನಡೆಯುತ್ತಿದ್ದ ಮಾಧ್ಯಮ ತಯಾರಿ ಈ ಬಾರಿ ಕಾಣುತ್ತಿಲ್ಲ. ನಾಳೆಗೇ ಮರೆತುಹೋಗುವ ಇವತ್ತಿನ ಪಂದ್ಯದಲ್ಲಿ ಧೋನಿ, ಬ್ರಾವೊಗೆ ನಾಲ್ಕು ಸಿಂಗಲ್ಸ್ ತಿರಸ್ಕರಿಸಿದ್ದು, ಮಂಕಡ್ ಔಟ್ ಮಾಡಿದ ಅಶ್ವಿನ್ ಮೊದಲಾದವು ಚರ್ಚೆಗೊಳಗಾಗುತ್ತಿವೆ. ಐಪಿಎಲ್ ನಡೆಯಲಿ, ಅತ್ತ ವಿಶ್ವಕಪ್‌ನ ಭಾರತದ ಭವಿಷ್ಯವೂ ಬಗ್ಗೆಯೂ ಒಂದು ಕಣ್ಣಿರಲಿ!
1983ರ ಹಾದಿಯಲ್ಲಿ….
ಫೇವರಿಟ್‌ಗಳ ಪಟ್ಟಿಯಲ್ಲಿಯೇ ಇರದ ಕಪಿಲ್ ಪಡೆಯಲ್ಲಿ ಕೆಲವು ಪ್ಲಸ್‌ಗಳಿದ್ದವು. ಆ ತಂಡ ಯುವ ಆಟಗಾರರ ಒಕ್ಕೂಟ ಆದ್ದರಿಂದ ಕ್ಷೇತ್ರರಕ್ಷಣೆ ಅತ್ಯುತ್ತಮ ಮಟ್ಟದಲ್ಲಿತ್ತು. ಮದನ್‌ಲಾಲ್ ಎಸೆತದ ವೇಗದ ಲೆಕ್ಕದಲ್ಲಿ ವಿವ್ ರಿಚರ್ಡ್ಸ್ ಕೈಲಿ ಎರಡು ಹೊಡೆತದ ಸಮಯವಿರುತ್ತದೆ ಎಂಬುದು ಅವತ್ತು ಪ್ರಚಲಿತದಲ್ಲಿದ್ದ ಜೋಕ್. ಪೆವಿಲಿಯನ್‌ನಲ್ಲಿ ಚೆಂಡನ್ನು ಠೇವಣಿ ಮಾಡುವ ಉತ್ಸಾಹದಿಂದ ರಿಚರ್ಡ್ಸ್ ಬಾರಿಸಿದ ಹೊಡೆತ ಟಾಪ್ ಎಡ್ಜ್ ಆಗಬೇಕೆ? ಮಿಡ್‌ಆನ್‌ನಲ್ಲಿದ್ದ ಕಪಿಲ್ ಕ್ಯಾಚ್ ಪಡೆಯುತ್ತಾರೆ ಎಂಬ ಬಗ್ಗೆ ಯಾರಲ್ಲೂ ನಂಬಿಕೆ ಇರಲಿಲ್ಲ.
ಕಪಿಲ್ ಹಿಂದಕ್ಕೆ ಓಡಿ ಆಕಾಶದೆತ್ತರಕ್ಕೆ ಹಾರಿದ್ದ ಚೆಂಡನ್ನು ಹಿಡಿದಿದ್ದನ್ನು, ನೀವು ಇವತ್ತೂ ಯೂಟ್ಯೂಬ್‌ನಲ್ಲಿ ನೋಡಬಹುದು. ಆ ರೀತಿಯ ಫೀಲ್ಡಿಂಗ್ ಈ ಬಾರಿ ಭಾರತೀಯ ತಂಡದಲ್ಲಿರುವುದು ಸಂಶಯ. ಕೊಹ್ಲಿ, ಜಡೇಜ, ರಾಹುಲ್ ಹಾಗೂ ಹಾರ್ದಿಕ್ ಅಗ್ರ ಕ್ಷೇತ್ರರಕ್ಷಕರು. ವಿಜಯಶಂಕರ್ ಕೂಡ ಗಮನಾರ್ಹ. ಆದರೆ ಉಳಿದವರು ಸುರಕ್ಷಿತ ಎಂಬ ಪಟ್ಟಿಯಲ್ಲಿರಬಹುದಷ್ಟೇ. ಆಡುವ 11ರಲ್ಲಿ ಟಾಪ್ 5 ಫೀಲ್ಡರ್‌ಗಳಲ್ಲಿ ಇಬ್ಬರು ಆಡುವುದಷ್ಟೇ ಖಚಿತ!
ಇಂಗ್ಲೆಂಡ್‌ನಲ್ಲಿನ ವಾತಾವರಣ ಶುದ್ಧ ಚಂಚಲ. ಪಿಚ್‌ಗಳು ಹವಾಮಾನದ ಜೊತೆ ಸಯಾಮಿ ಸಂಬಂಧ ಇರಿಸಿಕೊಂಡಿವೆ. ನಿನ್ನೆ ನಿರ್ಮಲವಾಗಿದ್ದ ಆಕಾಶ ಬೆಳಗ್ಗೆ ಏಳುವಾಗ ಮೋಡ ಕವಿದಿರಬಹುದು. ಆಡುವುದೇ ಕಷ್ಟ ಎಂಬ ಪಿಚ್‌ನಲ್ಲಿ ಘಂಟೆಯ ನಂತರ ಬಿಸಿಲು ಆ ನಂಬಿಕೆಯನ್ನು ತಪ್ಪು ಎಂದು ಸಾರಬಹುದು! ವೆಸ್ಟ್‌ಇಂಡೀಸ್‌ನ ದಿಗ್ಗಜ ಬ್ರಿಯಾನ್ ಲಾರಾ ಹೇಳುವಂತೆ, ತಾಂತ್ರಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಬಲ್ಲ ಆಟಗಾರ ಮಾತ್ರ ಇಂಗ್ಲೆಂಡ್‌ನಲ್ಲಿ ಫಲಿತಾಂಶ ತರಬಲ್ಲ! ಭಾರತದ ತಂಡದಲ್ಲಿ ಏಳು ಜನ ಇಂಗ್ಲೆಂಡ್‌ಗೇ ಹೊಸಬರು!
ಧನಾತ್ಮಕ ಅಂಶಗಳು!
ರೋಹಿತ್ ಶರ್ಮ ಹಾಗೂ ಶಿಖರ್ ಧವನ್‌ರ ಆರಂಭಿಕ ಜೋಡಿ ಪರೀಕ್ಷೆಗಳನ್ನು ದಾಟಿ ತಂಡದಲ್ಲಿ ಖಾಯಂಗೊಂಡಿದೆ. ಈ ಇಬ್ಬರು ಈಗಾಗಲೇ 90 ಬಾರಿ ಸರದಿ ಆರಂಭಿಸಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ರನ್ ಕೂಡಿಸಿದ್ದಾರೆ. ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ಕನಿಷ್ಠ 45 ಪ್ಲಸ್ ರನ್‌ಗಳ ಆರಂಭವನ್ನು ಭಾರತಕ್ಕೆ ಒದಗಿಸಿದ್ದಾರೆ.
ಏಕದಿನ ಶ್ರೇಯಾಂಕದಲ್ಲಿ ರೋಹಿತ್ ಶರ್ಮ ಎರಡನೇ ಸ್ಥಾನದಲ್ಲಿದ್ದರೆ ಅಗ್ರ ಪಟ್ಟ ವಿರಾಟ್ ಕೊಹ್ಲಿಯವರದ್ದು. ಭಾರತದ ನಿರಂತರ ದೋಷವೆನಿಸಿದ್ದ ರನ್ ಚೇಸ್ ಸಿಂಡ್ರೋಮ್‌ಗೆ ಪರಿಹಾರ ಸಿಕ್ಕಿದ್ದು ಕೊಹ್ಲಿ ಬಂದ ಮೇಲೆ. ಪಿಚ್ ಕೂಡ ತನ್ನ ಆಟ ಆಡುವ ಇಂಗ್ಲೆಂಡ್‌ನಲ್ಲಿ ಗಾಳಿಯಲ್ಲಿ ಬೌಂಡರಿ ಗೆರೆ ದಾಟಿಸುವ ತಾಕತ್ತಿಗಿಂತ ಸಿಂಗಲ್ಸ್, ಬೌಂಡರಿಗಳನ್ನು ನೆಚ್ಚಿಕೊಳ್ಳುವುದು ಕ್ಷೇಮ.
ಆ ತರಹದ ಆಟದಲ್ಲಿ ಕೊಹ್ಲಿ ಗಮನ ಸೆಳೆಯುತ್ತಾರೆ. ಬೌಲಿಂಗ್ ವಿಭಾಗ ಈ ಹಿಂದಿಗಿಂತಲೂ ಹೆಚ್ಚು ಸಮರ್ಥ, ಭುವನೇಶ್ವರ್ ಕುಮಾರ್, ಬುಮ್ರಾರ ಸ್ವಿಂಗ್, ಯಾರ್ಕರ್, ವೇಗ, ಕುಲ್‌ದೀಪ್ ಯಾದವ್, ಚಹಲ್ ಅವರ ಸ್ಪಿನ್ ವೈವಿಧ್ಯ ಎದುರಿಸುವುದು ಸುಲಭವಲ್ಲ. ಇಂಗ್ಲೆಂಡ್ ಪಿಚ್‌ಗಳಲ್ಲಂತೂ ಇವರು ಇನ್ನಷ್ಟು ತೀಕ್ಷ್ಣವಾಗುತ್ತಾರೆ.
ಧೋನಿ ಇದ್ದರೆ ದೋಣಿ ಸಾಗುತ್ತದೆ!
ಕೇವಲ ಒಂದು ವರ್ಷದ ಹಿಂದೆ ಧೋನಿಯವರ ಬ್ಯಾಟಿಂಗ್ ಫಾರಂ ಕುಸಿಯುತ್ತಿದ್ದಂತೆ ಅವರ ತಲೆದಂಡಕ್ಕಾಗಿ ಎದ್ದ ಕೂಗು ಅಸಹನೀಯವಾಗಿತ್ತು. ಧೋನಿ ಮಾತನಾಡಲಿಲ್ಲ. ಆದರೆ ಆಸ್ಟ್ರೇಲಿಯ, ನ್ಯೂಜಿಲೆಂಡ್ ಹಾಗೂ ಮೊನ್ನೆ ಕಾಂಗರೂ ಎದುರಿನ ಸ್ವದೇಶದ ಏಕದಿನ ಸರಣಿ ನೋಡಿದವರಿಗೆ ಧೋನಿ ಅವರ ಅನುಭವ, ಜಾಣ್ಮೆ ಮತ್ತು ಬ್ಯಾಟಿಂಗ್ ಕೌಶಲ ಮನದಟ್ಟಾಗಿದೆ. ಈಗ ಐಪಿಎಲ್‌ನಲ್ಲೂ. ಧೋನಿ ಅವರ ವಿಕೆಟ್ ಕೀಪಿಂಗ್‌ನ ಸಾಮರ್ಥ್ಯ ಪ್ರಶ್ನಾತೀತ. ವಿಶ್ವಕಪ್‌ಗೆ ಧೋನಿ ಬೇಡ ಎಂದವರು ಈಗ ಅವರ ನಂತರದ ಸ್ಟಾಂಡ್‌ಬೈಗಳ ವಿಚಾರದಲ್ಲಿ ಮಾತ್ರ ಚರ್ಚೆ ನಡೆಸಿದ್ದಾರೆ. ಕೊಹ್ಲಿ ನಾಯಕತ್ವದ ಸಣ್ಣ ಅರೆಕೊರೆಗಳನ್ನು ಸಂಭಾಳಿಸಲು ಧೋನಿ ಅವರ ಅನುಭವ ತಂಡಕ್ಕೆ ಅನಿವಾರ್ಯವಾಗಿದೆ.
ಭಾರತ ವಿಶ್ವಕಪ್ ತಯಾರಿಯಲ್ಲಿ ಆಸ್ಟ್ರೇಲಿಯವನ್ನು ಅದರ ನೆಲದಲ್ಲಿ, ನ್ಯೂಜಿಲೆಂಡನ್ನು ಅವರ ಗುಹೆಯಲ್ಲಿ ಸೋಲಿಸಿತ್ತಾದರೂ ಭಾರತಕ್ಕೆ ಬಂದ ಆಸ್ಟ್ರೇಲಿಯದ ವಿರುದ್ಧ ಕೊನೆಯ ಮೂರು ಏಕದಿನಗಳಲ್ಲಿ ಸೋಲುವ ಮೂಲಕ ತನ್ನ ಮೆಚ್ಚಿನ ಪಟ್ಟಕ್ಕೆ ಧಕ್ಕೆ ತಂದುಕೊಂಡಿತು. ಈ ಸೋಲುಗಳು ಆತ್ಮವಿಶ್ವಾಸಕ್ಕೆ ಧಕ್ಕೆಯಾಗುವುದಾದರೆ ಆತಂಕಕಾರಿ. ಮುಖ್ಯವಾಗಿ, ಭಾರತದ ಗೆಲುವಿನ ತಂತ್ರಗಾರಿಕೆ ಮಾಡುವಾಗ ಈ ಸಮಸ್ಯೆಗಳನ್ನು ಕೂಡ ಪರಿಗಣಿಸಬೇಕಾಗಿದೆ.
ಹಳೆಯ ದಾಖಲೆಗಳನ್ನು ಮರೆತು ಬಿಡಿ!
ತಂಡದ 15 ಆಟಗಾರರ ಹೆಸರು ಮತ್ತು ಅವರ ಈ ಹಿಂದಿನ ಸಾಧನೆಗಳನ್ನು ನೋಡಿದರೆ ಭಾರತದ ಫೈನಲ್ ರಹದಾರಿ ಸುಲಭ. ಅಂಕಣದಲ್ಲಿ ಆಡುವಾಗ ಹಳೆ ದಾಖಲೆಗಳು ಸಹಾಯಕ್ಕೆ ಬರುವುದಿಲ್ಲ. ಸ್ವಲ್ಪ ಯಾಮಾರಿದರೆ ಕ್ರಿಕೆಟ್‌ನ ಚಿಲ್ಟಾಪುಲ್ಟಾ ಆಫ್ಘಾನಿಸ್ತಾನ, ಬಾಂಗ್ಲಾ ಮೈಮೇಲೆ ಎಗರುತ್ತವೆ. ಕೆಲವು ಕ್ರಿಕೆಟ್ ವಿಶ್ಲೇಷಕರು ಮೂರು ಮಾತುಗಳನ್ನು ದೃಢವಾಗಿ ಹೇಳುತ್ತಾರೆ. ಭಾರತದ ಮೇಲಿನ ಕ್ರಮಾಂಕ ಬಲಿಷ್ಠವಾಗಿರುವುದೇ ಮಧ್ಯಮ ಕ್ರಮಾಂಕ ಸವಾಲು ಎದುರಾದಾಗ ವಿಫಲವಾಗಲು ಕಾರಣವಾಗಬಹುದು.
ವಿರಾಟ್ ಕೊಹ್ಲಿ ಅವರ ವಿಕೆಟ್ ನಡುವಿನ ಸಂವಹನದ ಕೊರತೆಯಿಂದ ಅವರು ರೋಹಿತ್ ಶರ್ಮ ಜೊತೆ ಆಡುವಾಗ ರನ್ ಔಟ್ ಆಗದಿರುವಂತೆ ಗಮನ ಹರಿಸಬೇಕು. ಈ ಅಂಶ ಗಮನಿಸಿ ಸರಿಯಾದ ಚಿಕಿತ್ಸೆ ಕೊಡಬೇಕು. ಕಾಯಿಲೆ ಮರುಕಳಿಸಬಾರದು! ಸದ್ಯ ಐಪಿಎಲ್‌ನಲ್ಲಿ ಬೌಲ್ ಮಾಡುತ್ತಿರುವ ಭುವನೇಶ್ವರ್ ಕುಮಾರ್ ಲಯ ಗಾಬರಿ ಮೂಡಿಸುವಂತಿದೆ. ಭುವಿಗೆ ಇಂಗ್ಲೆಂಡ್ ಪಿಚ್ ಪೂರಕ ಇರಬಹುದು, ಆದರೆ ಎದುರಾಳಿ ಬ್ಯಾಟ್ಸ್‌ಮನ್ ಮೊದಲು ಧಕ್ಕೆ ಕೊಡುವುದು ಆತ್ಮವಿಶ್ವಾಸಕ್ಕೆ. ಅಂದರೆ ಚೆಂಡು ಎಸೆಯುವ ಮುನ್ನ ಭುವಿಯಿಂದ ಆತ್ಮವಿಶ್ವಾಸವನ್ನು ಓಡದಂತೆ ತಂಡದ ನಾಯಕ ನೋಡಿಕೊಳ್ಳಬೇಕು. ಆಗ ದೇವರು ಒಳ್ಳೆಯದು ಮಾಡುತ್ತಾನೆ!
10 ರಾಷ್ಟ್ರಗಳು ಪಾಲ್ಗೊಳ್ಳುವ, ಏಳು ವಾರಗಳ ಕಾಲ ನಡೆಯುವ ವಿಶ್ವಕಪ್‌ನ ಮಾದರಿ ಮೆಚ್ಚಿನ ತಂಡಗಳಿಗೆ ಪೂರಕ. ರೌಂಡ್ ರಾಬಿನ್ ಮಾದರಿಯಲ್ಲಿ ಎಲ್ಲ ತಂಡಗಳ ವಿರುದ್ಧ ಆಡುವ ತಂಡಗಳಲ್ಲಿ ಅಗ್ರ 4 ಉಪಾಂತ್ಯ ಪ್ರವೇಶಿಸುತ್ತವೆ. ಈ ಹಾದಿಯಲ್ಲಿ ಭಾರತಕ್ಕೆ ಕೆಲವು ಸವಾಲುಗಳಿವೆ. ಭಾರತ ಆರಂಭಿಕ ಪಂದ್ಯಗಳಲ್ಲಿಯೇ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪಾಕಿಸ್ತಾನಗಳನ್ನು ಎದುರಿಸಲಿದೆ. ದುರ್ಬಲ ತಂಡಗಳ ವಿರುದ್ಧ ಆಡಿ ಕುದುರಿಕೊಂಡ ನಂತರ ಅಗ್ರ ತಂಡಗಳನ್ನು ಎದುರಿಸುವ ವೇಳಾಪಟ್ಟಿಯಿದ್ದಿದ್ದರೇ ಹೆಚ್ಚು ಭೇಷಿತ್ತು.
ಅಂಕಣದ ಹೊರಗೂ ಇಂಗ್ಲೆಂಡ್‌ಗೆ ಸವಾಲು!
ಇಂಗ್ಲೆಂಡ್ ದ್ವಂದ್ವದಲ್ಲಿದೆ. ಆ ದೇಶ ಈವರೆಗೆ ಏಕದಿನ ವಿಶ್ವಕಪ್ ಗೆಲ್ಲದಿದ್ದರೂ ಈ ಬಾರಿ ಮೆಚ್ಚಿನ ತಂಡ. ವಿಶ್ವಕಪ್‌ನಲ್ಲಿ ಆತಿಥೇಯ ದೇಶ ಕಪ್ ಗೆಲ್ಲುವುದಿಲ್ಲ ಎಂಬ ನಂಬಿಕೆಯನ್ನು 2011ರಲ್ಲಿ ಆತಿಥೇಯ ಭಾರತ ಪ್ರಶಸ್ತಿ ಗೆದ್ದು ಸುಳ್ಳು ಮಾಡಿದೆ. ಪ್ರಶಸ್ತಿಯ ಕಥೆ ಬಿಡಿ, ತಲಾ 50 ಓವರ್‌ಗಳ ಮಾದರಿಯ ಕ್ರಿಕೆಟ್ ಈಗ ಆ ದೇಶದಲ್ಲಿ ಆಸಕ್ತಿ ಉಳಿಸಿಕೊಂಡಿಲ್ಲ! ಅಲ್ಲಿ ಕೂಡ ಟಿ20 ಹಾಗೂ ಅಲ್ಲಿನ ವಿಶೇಷ 100 ಬಾಲ್ ಕ್ರಿಕೆಟ್ ಹೆಚ್ಚು ಜನಪ್ರಿಯವಾಗುತ್ತಿದೆ. ಏಕದಿನ ಕ್ರಿಕೆಟ್‌ನ ಜನಾಕರ್ಷಣೆ ಕುಸಿಯುವುದನ್ನು ತಡೆಯಲು ಈ ಬಾರಿಯ ವಿಶ್ವಕಪ್ ಅವರಿಗೆ ಆಮ್ಲಜನಕದ ರೀತಿ ಕೆಲಸ ಮಾಡಬೇಕಾಗಿದೆ.
— ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.