ಲೀಡ್ಸ್ ಕೂಡ ಒಲಿಯಲಿ; ಲೀಡ್ ಹೆಚ್ಚಲಿ
Team Udayavani, Aug 25, 2021, 6:45 AM IST
ಲೀಡ್ಸ್: ಒಂದೆಡೆ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಅನಿರೀಕ್ಷಿತ ಹಾಗೂ ಅಷ್ಟೇ ಅಮೋಘ ರೀತಿಯಲ್ಲಿ ಟೆಸ್ಟ್ ಗೆದ್ದ ಸಂತಸ, ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಗೆಲುವಿನ ಸುವರ್ಣ ಮಹೋತ್ಸವ ಸಂಭ್ರಮ. ಹೀಗೆ ಅವಳಿ ಖುಷಿಯೊಂದಿಗೆ ಟೀಮ್ ಇಂಡಿಯಾ ಬುಧವಾರದಿಂದ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದೆ. ಲೀಡ್ಸ್ ಕೂಡ ಭಾರತಕ್ಕೆ ಒಲಿದು, ಲೀಡ್ ಹೆಚ್ಚಲಿ ಎಂಬ ಹಾರೈಕೆ ಅಭಿಮಾನಿಗಳದ್ದು.
ಹಾಗೆ ನೋಡಹೋದರೆ ಈ ವೇಳೆಗೆ ಭಾರತ 2-0 ಮುನ್ನಡೆ ಯೊಂದಿಗೆ ಮುನ್ನುಗ್ಗಬೇಕಿತ್ತು. ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಅಂತಿಮ ದಿನ ಮಳೆ ಸುರಿದು ಟೀಮ್ ಇಂಡಿಯಾದ ಗೆಲುವನ್ನು ಕಸಿದುಕೊಂಡಿತು. ಹೀಗಾಗಿ ಪ್ರವಾಸಿಗರಿಗೆ ಲಕ್ ಇಲ್ಲವೇನೋ ಎಂದೆನಿಸಿದ್ದು ನಿಜ.
ಆದರೆ ಲಾರ್ಡ್ಸ್‌ನದ್ದು ಡಿಫರೆಂಟ್ ಸ್ಟೋರಿ. ಇಲ್ಲಿ ಗೆಲ್ಲುವ ಅವಕಾಶವಿದ್ದದ್ದು ಇಂಗ್ಲೆಂಡಿಗೆ; ಆದರೆ ಗೆದ್ದದ್ದು ಭಾರತ! ಅಲ್ಲಿ ಕೈಕೊಟ್ಟ ಲಕ್ ಇಲ್ಲಿ ಟೀಮ್ ಇಂಡಿಯಾದ ಕೈ ಹಿಡಿದಿತ್ತು!
ಟೆಸ್ಟ್ ಕ್ರಿಕೆಟ್‌ನಲ್ಲೂ ಏಕದಿನ, ಟಿ20 ಪಂದ್ಯಕ್ಕೂ ಮಿಗಿಲಾದ ಕುತೂ ಹಲ, ರೋಮಾಂಚನವಿದೆ ಎಂಬುದನ್ನು ತೋರಿಸಿಕೊಟ್ಟ ಪಂದ್ಯವಿದು. ಅಲ್ಲದೇ ಐತಿಹಾಸಿಕ ಲಾರ್ಡ್ಸ್‌ನಲ್ಲಿ ಒಲಿದ ಗೆಲುವಾದ್ದರಿಂದ ಇದಕ್ಕೆ ಒಂದು ತೂಕ ಜಾಸ್ತಿ. ಭಾರತೀಯರಿಗೆ ಮುಂದಿನ ಮೂರೂ ಪಂದ್ಯ ಗಳಿಗಾಗುವಷ್ಟು ಸ್ಫೂರ್ತಿಯನ್ನು ಮೊಗೆದು ಕೊಟ್ಟ ಪಂದ್ಯವಿದು. ಹೀಗಾಗಿ ಹಿನ್ನಡೆಗೆ ಅವಕಾಶವೇ ಇರಬಾರದು, ಆಂಗ್ಲರಿಗೆ ತಿರುಗಿ ಬೀಳಲು ಯಾವ ಕಾರಣಕ್ಕೂ ಬಿಡಬಾರದು ಎಂಬ ದೃಢ ಸಂಕಲ್ಪದಿಂದ ಮುನ್ನಡೆದರೆ ಭಾರತಕ್ಕೆ ಮೇಲುಗೈ ಖಂಡಿತ.
ಬದಲಾವಣೆ ಅನುಮಾನ:
ಈ ಪಂದ್ಯಕ್ಕಾಗಿ ಭಾರತದ ಆಡುವ ಬಳಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ. ವಿನ್ನಿಂಗ್ ಟೀಮ್ ಕಾಂಬಿನೇಶನ್ ಮುಂದು ವರಿಯುವುದು ಬಹುತೇಕ ಖಚಿತ. ಶಾರ್ದೂಲ್ ಠಾಕೂರ್ ಸಂಪೂರ್ಣ ಫಿಟ್‌ನೆಸ್ ಹೊಂದಿದ್ದರೂ ಅವಕಾಶ ಪಡೆಯುವುದು ಕಷ್ಟ. ಅನುಭವಿ ಇಶಾಂತ್ ಶರ್ಮ ಲಾರ್ಡ್ಸ್‌ನಲ್ಲಿ ಘಾತಕವಾಗಿ ಪರಿಣಮಿಸಿದ್ದಾರೆ.
ಇನ್ನಿಂಗ್ಸಿಗೆ ಹೇಗೆ ಅಡಿಪಾಯ ನಿರ್ಮಿಸಬೇಕೆಂಬುದನ್ನು ರಾಹುಲ್ ತೋರಿಸಿ ಕೊಟ್ಟಿದ್ದಾರೆ. ಅವರ ಲಾರ್ಡ್ಸ್ ಸೆಂಚುರಿಗೆ ಪಂದ್ಯಶ್ರೇಷ್ಠ ಗೌರವ ಒಲಿದುದನ್ನು ಮರೆಯುವಂತಿಲ್ಲ. ರೋಹಿತ್ ಶರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ಆದರೆ ಪೂಜಾರ, ಕೊಹ್ಲಿ ಪ್ರಯತ್ನ ಸಾಲದು. ಇವರು ಮಧ್ಯಮ ಸರದಿಯ ಮೇಲಿನ ಒತ್ತಡವನ್ನು ದೂರ ಮಾಡಬೇಕಿದೆ.
ಲಾರ್ಡ್ಸ್‌ನಲ್ಲಿ ಭಾರತದ ಸೋಲು ತಪ್ಪಲು ಮುಖ್ಯ ಕಾರಣ, ಶಮಿ-ಬುಮ್ರಾ ಜೋಡಿಯ ದಿಟ್ಟ ಜತೆಯಾಟ. ಭಾರತದ ಬಾಲಂಗೋಚಿಗಳಲ್ಲೂ ಬ್ಯಾಟಿಂಗ್ ಬಲ ಇದೆ ಎಂಬುದನ್ನು ಸಾಬೀತುಪಡಿಸಿದ ಇನ್ನಿಂಗ್ಸ್ ಇದು.
ಬೌಲಿಂಗ್‌ನಲ್ಲೂ ಪೇಸ್ ಡಿಪಾರ್ಟ್‌ಮೆಂಟ್ ಸಾಧನೆ ಅಸಾಮಾನ್ಯ. ಭಾರತದ ಸತತ ಎರಡು ಟೆಸ್ಟ್‌ಗಳಲ್ಲಿ ವೇಗಿಗಳೇ ಸೇರಿಕೊಂಡು 40 ವಿಕೆಟ್ ಉರುಳಿಸಿದ ಅಪರೂಪದ ನಿದರ್ಶನ ಕಂಡುಬಂದಿದೆ. ಹೀಗಾಗಿ ಭಾರತದ ಸಾಂಪ್ರದಾಯಿಕ ಸ್ಪಿನ್ ಅಸ್ತ್ರವನ್ನು ಬದಿಗಿಡುವುದು ಅನಿವಾರ್ಯ. ಹೇಡಿಂಗ್ಲೆ ಪಿಚ್ ಕೂಡ ಭಿನ್ನವೇನಲ್ಲ.
ಒತ್ತಡದಲ್ಲಿ ರೂಟ್ ಪಡೆ :
ಸುನೀಲ್ ಗಾವಸ್ಕರ್ ಹೇಳಿದಂತೆ, ಇಂಗ್ಲೆಂಡ್ ತಂಡ ಕೇವಲ “ಟು ಮ್ಯಾನ್ ಆರ್ಮಿ’. ನಾಯಕ ಜೋ ರೂಟ್ ಮತ್ತು ವೇಗಿ ಜೇಮ್ಸ್ ಆ್ಯಂಡರ್ಸನ್ ಹೊರತುಪಡಿಸಿದರೆ ಅವರಲ್ಲಿ ಹೋರಾಟ ತೋರಬಲ್ಲ ಆಟಗಾರರೇ ಇಲ್ಲ!
ಸರಣಿಯ ಮೊದಲ ಮೂರೂ ಇನ್ನಿಂಗ್ಸ್‌ಗಳಲ್ಲಿ ರೂಟ್ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿಯ ಟಾನಿಕ್ ಕೊಟ್ಟಿದ್ದರು. ಲಾರ್ಡ್ಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ತ್ವರಿತ ಪತನವೇ ಇಂಗ್ಲೆಂಡ್ ಸೋಲಿಗೆ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಸೋಲಿನ ಸುಳಿಗೆ ಸಿಲುಕಿರುವ ಇಂಗ್ಲೆಂಡ್ ತಂಡದಲ್ಲಿ ಎರಡು ಬದಲಾವಣೆ ಅನಿವಾರ್ಯ. ಆರಂಭಕಾರ ಸಿಬ್ಲಿ ಹಾಗೂ ವೇಗಿ ವುಡ್ ಬದಲು ಡೇವಿಡ್ ಮಲಾನ್ ಮತ್ತು ಶಕೀಬ್ ಮಹಮೂದ್ ಆಡುವ ಸಾಧ್ಯತೆ ಇದೆ.
ಸಣ್ಣ ಮೊತ್ತ, ದೊಡ್ಡ ಗೆಲುವು :
ಭಾರತ ಇಲ್ಲಿ ಗೆಲುವಿನ ಖಾತೆ ತೆರೆದದ್ದು 1986ರಲ್ಲಿ. ಗೆಲುವಿನ ಅಂತರದ ಬರೋಬ್ಬರಿ 279 ರನ್. ನಾಯಕರಾಗಿದ್ದವರು ಕಪಿಲ್‌ದೇವ್ ಮತ್ತು ಮೈಕ್ ಗ್ಯಾಟಿಂಗ್.
ಗೆಲುವಿನ ಅಂತರ ದೊಡ್ಡದಿದ್ದರೂ ಇದು ಸಣ್ಣ ಮೊತ್ತದ ಸೆಣಸಾಟವಾಗಿತ್ತು. ಭಾರತ 272 ರನ್ ಗಳಿಸಿದರೆ, ರೋಜರ್ ಬಿನ್ನಿ (40ಕ್ಕೆ 5) ಮತ್ತು ಮದನ್‌ಲಾಲ್ (18ಕ್ಕೆ 3) ದಾಳಿಗೆ ಕುಸಿದ ಇಂಗ್ಲೆಂಡ್ ಗಳಿಸಿದ್ದು 102 ರನ್ ಮಾತ್ರ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ 237 ರನ್ ಪೇರಿಸಿತು. ಬ್ಯಾಟಿಂಗಿಗೆ ಕಠಿನವಾದ ಟ್ರಾÂಕ್ ಮೇಲೂ ದಿಲೀಪ್ ವೆಂಗ್‌ಸರ್ಕಾರ್ ಅಜೇಯ 102 ರನ್ ಬಾರಿಸಿದ್ದನ್ನು ಮರೆಯುವಂತಿಲ್ಲ. ಮೊದಲ ಸರದಿಯಲ್ಲೂ ಭಾರತವನ್ನು ಆಧರಿಸಿದ ವೆಂಗ್‌ಸರ್ಕಾರ್ 61 ರನ್ ಕೊಡುಗೆ ಸಲ್ಲಿಸಿದ್ದರು. ಈ ಪಂದ್ಯದ ಏಕೈಕ ಶತಕ ಹಾಗೂ ಅರ್ಧ ಶತಕಕ್ಕೆ ಸಾಕ್ಷಿಯಾದ “ಕರ್ನಲ್’ ಅರ್ಹವಾಗಿಯೇ ಪಂದ್ಯಶ್ರೇಷ್ಠರೆನಿಸಿಕೊಂಡರು.
408 ರನ್ ಗುರಿ ಪಡೆದ ಇಂಗ್ಲೆಂಡ್ 128ಕ್ಕೆ ಆಲೌಟ್ ಆಗಿ ಭಾರೀ ಸೋಲೊಂದನ್ನು ಹೊತ್ತುಕೊಂಡಿತು. ಮಣಿಂದರ್ ಸಿಂಗ್ 4, ಬಿನ್ನಿ ಮತ್ತು ಕಪಿಲ್ ತಲಾ 2 ವಿಕೆಟ್ ಕಿತ್ತರು. ಟೀಮ್ ಇಂಡಿಯಾದ ಇಂದಿನ ಕೋಚ್ ರವಿಶಾಸ್ತ್ರಿ ಕೂಡ ಈ ತಂಡದ ಸದಸ್ಯರಾಗಿದ್ದರು.
ಇನ್ನಿಂಗ್ಸ್ ಜಯಭೇರಿ :
2002ರ ಇನ್ನಿಂಗ್ಸ್ ಜಯಭೇರಿಯ ವೇಳೆ ಸೌರವ್ ಗಂಗೂಲಿ ಸಾರಥಿಯಾಗಿದ್ದರು. ಮೊದಲ ಸರದಿಯಲ್ಲಿ ದಾಖಲಾದ 3 ಶತಕಗಳಲ್ಲಿ ಗಂಗೂಲಿಯದೂ ಒಂದಿತ್ತು (128). ಉಳಿದಂತೆ ತೆಂಡುಲ್ಕರ್ 193 ಮತ್ತು ದ್ರಾವಿಡ್ 148 ರನ್ ಬಾರಿಸಿದರು. 8ಕ್ಕೆ 628 ರನ್ ಪೇರಿಸಿದ ಭಾರತ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು.
273ಕ್ಕೆ ಕುಸಿದ ಇಂಗ್ಲೆಂಡಿಗೆ ಫಾಲೋಆನ್ ಹೇರಲಾಯಿತು. ನಾಸಿರ್ ಹುಸೇನ್ ಪಡೆ ದ್ವಿತೀಯ ಇನ್ನಿಂಗ್ಸ್ ನಲ್ಲಿ 309ರ ತನಕ ಬಂದು ಶರಣಾಯಿತು. ಈ ಪಂದ್ಯದಲ್ಲಿ ಅನಿಲ್ ಕುಂಬ್ಳೆ 7, ಹರ್ಭಜನ್ ಸಿಂಗ್ 4 ವಿಕೆಟ್ ಕಿತ್ತರು. ದ್ರಾವಿಡ್‌ಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.
ಗೆದ್ದರೆ ಹ್ಯಾಟ್ರಿಕ್ ಸಾಧನೆ :
ಭಾರತ ಎರಡು ದಶಕಗಳ ಬಳಿಕ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಇಂಗ್ಲೆಂಡನ್ನು ಎದುರಿಸಲಿದೆ. ಇಲ್ಲಿ ಕೊನೆಯ ಸಲ ಇತ್ತಂಡಗಳ ಮುಖಾಮುಖಿ ಸಂಭವಿಸಿದ್ದು 2002ರಲ್ಲಿ. ಅಂದು ಭಾರತ ಇನ್ನಿಂಗ್ಸ್ ಜಯ ಸಾಧಿಸಿತ್ತು. ಇದಕ್ಕೂ ಮುನ್ನ 1986ರಲ್ಲಿ ನಡೆದ ಟೆಸ್ಟ್‌ನಲ್ಲಿ 279 ರನ್ನುಗಳ ಬೃಹತ್ ಗೆಲುವು ಒಲಿದಿತ್ತು. ಹೀಗಾಗಿ ಈ ಬಾರಿ ಲೀಡ್ಸ್‌ನಲ್ಲಿ ಟೀಮ್ ಇಂಡಿಯಾಕ್ಕೆ ಹ್ಯಾಟ್ರಿಕ್ ಜಯಭೇರಿಯ ಅವಕಾಶವೊಂದು ತೆರೆದಿದೆ.
1952ರಲ್ಲಿ ಲೀಡ್ಸ್ ಅಂಗಳದಲ್ಲಿ ಆಡತೊಡಗಿದ ಭಾರತ ಹ್ಯಾಟ್ರಿಕ್ ಸೋಲಿನ ಆಘಾತಕ್ಕೆ ಸಿಲುಕಿತ್ತು. 1979ರಿಂದ ಅದೃಷ್ಟ ಖುಲಾಯಿಸತೊಡಗಿತು. ಅಂದಿನ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡ ಬಳಿಕ, ಸತತ ಎರಡು ಗೆಲುವನ್ನು ತನ್ನದಾಗಿಸಿಕೊಂಡಿದೆ.
ಸಂಭಾವ್ಯ ತಂಡಗಳು :
ಭಾರತ: ಕೆ.ಎಲ್. ರಾಹುಲ್, ರೋಹಿತ್ ಶರ್ಮ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲಾನ್, ಜೋ ರೂಟ್ (ನಾಯಕ), ಜಾನಿ ಬೇರ್‌ಸ್ಟೊ, ಜಾಸ್ ಬಟ್ಲರ್, ಮೊಯಿನ್ ಅಲಿ, ಸ್ಯಾಮ್ ಕರನ್, ಓಲೀ ರಾಬಿನ್ಸನ್, ಶಕೀಬ್ ಮಹಮೂದ್, ಜೇಮ್ಸ್ ಆ್ಯಂಡರ್ಸನ್.
ಆರಂಭ: ಅಪರಾಹ್ನ 3.30 ಪ್ರಸಾರ: ಸೋನಿ ನ್ಪೋರ್ಟ್ಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.