ಭಾರತ-ಆಸ್ಟ್ರೇಲಿಯ ಫೈನಲ್ ಮುಖಾಮುಖಿ
ಮೊದಲ ಸೆಮಿಫೈನಲ್ ರದ್ದು; ಆಫ್ರಿಕಾಕ್ಕೆ ಆಸೀಸ್ ಗುದ್ದು
Team Udayavani, Mar 6, 2020, 7:00 AM IST
ಸಿಡ್ನಿ: ಭಾರತ ಐಸಿಸಿ ವನಿತಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಸಲ ಸೆಮಿಫೈನಲ್ ಗಡಿ ದಾಟಿ ಪ್ರಶಸ್ತಿ ಸುತ್ತಿಗೆ ನೆಗೆದಿದೆ. ರವಿವಾರ ಮೆಲ್ಬರ್ನ್ನ “ಜಂಕ್ಷನ್ ಓವಲ್’ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಹಾಲಿ ಚಾಂಪಿಯನ್ ಹಾಗೂ ಆತಿಥೇಯ ತಂಡವಾಗಿರುವ ಆಸ್ಟ್ರೇಲಿಯವನ್ನು ಎದುರಿಸಲಿದೆ.
ಗುರುವಾರ “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳೆರಡೂ ಮಳೆಯ ಹೊಡೆತಕ್ಕೆ ತತ್ತರಿಸಿದವು. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಮುಖಾಮುಖಿ ವೇಳೆ ಟಾಸ್ ಕೂಡ ಹಾರಿಸಲಿಕ್ಕೆ ಅವಕಾಶ ಸಿಗಲಿಲ್ಲ. ಈ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಮೀಸಲು ದಿನ ಇಲ್ಲದ ಕಾರಣ, ಐಸಿಸಿ ನಿಯಮದಂತೆ ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ಭಾರತ ಫೈನಲ್ ಪ್ರವೇಶಿಸಿತು. ಇಂಗ್ಲೆಂಡ್ ವನಿತೆಯರು ದುಃಖದಿಂದಲೇ ಕೂಟದಿಂದ ನಿರ್ಗಮಿಸಿದರು.
ಆಫ್ರಿಕಾ ಚೇಸಿಂಗ್‌ಗೆ ಮಳೆ ಅಡ್ಡಿ
ದ್ವಿತೀಯ ಸೆಮಿಫೈನಲ್ ಮುಖಾಮುಖೀಯಲ್ಲಿ ಆಸ್ಟ್ರೇಲಿಯ ಡಿ-ಎಲ್ ನಿಯಮದಂತೆ ದಕ್ಷಿಣ ಆಫ್ರಿಕಾವನ್ನು 5 ರನ್ನುಗಳಿಂದ ಮಣಿಸಿ ಸತತ 6ನೇ ಸಲ ಫೈನಲ್‌ಗೆ ಲಗ್ಗೆ ಇರಿಸಿತು. ಇಲ್ಲಿ ಆಸ್ಟ್ರೇಲಿಯದ ಬ್ಯಾಟಿಂಗಿಗೆ ಏನೂ ಅಡ್ಡಿಯಾಗಲಿಲ್ಲ. ಅದು ಪೂರ್ತಿ 20 ಓವರ್ ಆಡಿ 5 ವಿಕೆಟಿಗೆ 134 ರನ್ ಗಳಿಸಿತು. ಆದರೆ ಇನ್ನಿಂಗ್ಸ್ ಬ್ರೇಕ್ ವೇಳೆ ಮತ್ತೆ ಮಳೆ ಸುರಿಯಿತು. ದಕ್ಷಿಣ ಆಫ್ರಿಕಾಕ್ಕೆ 13 ಓವರ್‌ಗಳಿಂದ 98 ರನ್ ಗಳಿಸುವ ಗುರಿ ಲಭಿಸಿತು. ಅದು 5 ವಿಕೆಟಿಗೆ 92 ರನ್ ಮಾಡಿ ಶರಣಾಯಿತು.
ಅಕಸ್ಮಾತ್ ಈ ಪಂದ್ಯವೂ ಮಳೆಯಿಂದ ನಡೆಯದೇ ಹೋಗಿದ್ದರೆ “ಬಿ’ ವಿಭಾಗದ ಅಗ್ರಸ್ಥಾನಿಯಾಗಿದ್ದ ದ.ಆಫ್ರಿಕಾ ಮೊದಲ ಸಲ ಫೈನಲ್ ಪ್ರವೇಶಿಸುತ್ತಿತ್ತು. ಆದರೆ ಐಸಿಸಿ ಕೂಟಗಳಲ್ಲಿ ಹರಿಣಗಳ “ಬ್ಯಾಡ್ ಲಕ್’ ಇಲ್ಲಿಯೂ ಮುಂದುವರಿಯಿತು.
ಮೊದಲ ಪಂದ್ಯದ ಪುನರಾವರ್ತನೆ
ರವಿವಾರದ ಫೈನಲ್ ಎನ್ನುವುದು ಈ ಕೂಟದ ಉದ್ಘಾಟನಾ ಪಂದ್ಯದ ಪುನರಾವರ್ತನೆಯಾಗಲಿದೆ. ಫೆ. 21ರಂದು ಸಿಡ್ನಿಯಲ್ಲಿ ನಡೆದ ಈ ಮುಖಾ ಮುಖೀಯಲ್ಲಿ ಭಾರತ 17 ರನ್ನುಗಳಿಂದ ಕಾಂಗರೂಗಳನ್ನು ಬೇಟೆಯಾಡಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳಲು ಮೆಗ್ ಲ್ಯಾನಿಂಗ್ ಪಡೆ ಹೊಂಚು ಹಾಕಿ ಕುಳಿತಿರುವುದರಲ್ಲಿ ಅನುಮಾನವಿಲ್ಲ.
ಫೈನಲ್‌ನಲ್ಲಿ ಆಸ್ಟ್ರೇಲಿಯದ ದಾಖಲೆ ಅಮೋಘ. ಕಳೆದ 5 ಪ್ರಶಸ್ತಿ ಸಮರಗಳಲ್ಲಿ ಆಸೀಸ್ ಒಮ್ಮೆಯಷ್ಟೇ ಪರಾಭವಗೊಂಡಿದೆ. ಅತೀ ಹೆಚ್ಚು 4 ಸಲ ಚಾಂಪಿಯನ್ ಆದ ಹೆಗ್ಗಳಿಕೆ ಹೊಂದಿದೆ. ಮೊದಲ ಸಲ ಫೈನಲ್ ತಲುಪಿರುವ ಭಾರತ ಆತಿಥೇಯರ ಸವಾಲನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದೊಂದು ಕುತೂಹಲ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-20 ಓವರ್‌ಗಳಲ್ಲಿ 5 ವಿಕೆಟಿಗೆ 134 (ಲ್ಯಾನಿಂಗ್ ಔಟಾಗದೆ 49, ಮೂನಿ 28, ಹೀಲಿ 18, ಹೇನ್ಸ್ 17, ಡಿ ಕ್ಲರ್ಕ್ 19ಕ್ಕೆ 3). ದಕ್ಷಿಣ ಆಫ್ರಿಕಾ-13 ಓವರ್‌ಗಳಲ್ಲಿ 5 ವಿಕೆಟಿಗೆ 92 (ವೋಲ್ವಾರ್ಟ್ ಔಟಾಗದೆ 41, ಲುಸ್ 21, ಶಟ್ 17ಕ್ಕೆ 2). ಪಂದ್ಯಶ್ರೇಷ್ಠ: ಮೆಗ್ ಲ್ಯಾನಿಂಗ್.
ಮೀಸಲು ದಿನ ಬೇಕಿತ್ತು: ಹರ್ಮನ್‌ಪ್ರೀತ್ ಕೌರ್
“ಮೊದಲ ಸಲ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿರುವುದು ಸಂತಸ ತಂದಿದೆ. ಆದರೆ ಸೆಮಿಫೈನಲ್ ಸಹಿತ ನಾಕೌಟ್ ಪಂದ್ಯಗಳಿಗೆ ಮೀಸಲು ದಿನ ಬೇಕಿತ್ತು’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
“ಇಂದು ಪಂದ್ಯವನ್ನು ಆಡಲು ಸಾಧ್ಯವಾಗದೇ ಇರುವುದು ನಮ್ಮ ಪಾಲಿಗೆ ದುರದೃಷ್ಟವೇ ಸರಿ. ಆದರೆ ಇದೇ ನಿಯಮ. ನಮ್ಮಿಂದೇನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನಾವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರದಿದ್ದರೆ ಇಂದು ಫೈನಲ್‌ಗೆ ತೇರ್ಗಡೆಯಾಗುತ್ತಿರಲಿಲ್ಲ. ಇಂಗ್ಲೆಂಡ್ ಕೂಡ ಬಲಿಷ್ಠವಾಗಿತ್ತು. ಆದರೆ ಈ ನಿಯಮದಿಂದ ಅವರಿಗೆ ಭಾರೀ ನಷ್ಟವಾಗಿದೆ’ ಎಂದು ಹರ್ಮನ್‌ಪ್ರೀತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮಳೆ ನಿಯಮ ಬದಲಾಗಬೇಕು: ನೈಟ್
ಇಂಗ್ಲೆಂಡ್ ನಾಯಕಿ ಹೀತರ್ ನೈಟ್ ಕೂಡ ಇಂಥ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಮಳೆ ನಿಯಮ ಬದಲಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಿಜಕ್ಕೂ ನಿರಾಸೆಯಾಗಿದೆ. 4 ಬಲಿಷ್ಠ ತಂಡಗಳು ಇಲ್ಲಿ ಸೆಣಸುತ್ತಿದ್ದವು. ಉತ್ತಮ ಸ್ಪರ್ಧೆ ಏರ್ಪಡುವ ಎಲ್ಲ ಸಾಧ್ಯತೆ ಇತ್ತು. ಆದರೆ ಆಡದೇ ಹೊರಬಿದ್ದಿರುವುದು ನೋವುಂಟು ಮಾಡಿದೆ. ನಿಯಮಗಳಿಗೆ ಎಲ್ಲರೂ ಮೊದಲೇ ಸಹಿ ಹಾಕಿ ಸಮ್ಮತಿಸಿರುತ್ತಾರೆ ನಿಜ, ಆದರೆ ಇಲ್ಲಿ ಬದಲಾವಣೆಯ ಅಗತ್ಯವಿದೆ. ಬೇರೆ ತಂಡಕ್ಕೆ ಇಂಥ ಅನುಭವ ಆಗಬಾರದು. ಯಾವ ತಂಡವೂ ಮಳೆಯಿಂದಾಗಿ ವಿಶ್ವಕಪ್‌ನಿಂದ ಹೊರಬೀಳಲು ಬಯಸುವುದಿಲ್ಲ. ಫೈನಲ್ ಪಂದ್ಯಕ್ಕೆ ಇಂಥ ವಿಘ್ನ ಎದುರಾಗದಿರಲಿ…’ ಎಂದು ಹೀತರ್ ನೈಟ್ ಹೇಳಿದರು.
ನಿಮ್ಮ ಸಾಧನೆ, ನಮಗೆ ಹೆಮ್ಮೆ: ವಿರಾಟ್ ಕೊಹ್ಲಿ
ಮೊದಲ ಸಲ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪ್ರವೇಶಿಸಿರುವ ಭಾರತೀಯ ವನಿತೆಯರ ಸಾಧನೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ಕ್ರಿಕೆಟಿಗರನೇಕರು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವಕಪ್ ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.
“ಫೈನಲ್ ತಲುಪಿದ ವನಿತಾ ತಂಡಕ್ಕೆ ಅಭಿನಂದನೆಗಳು. ನಿಮ್ಮ ಸಾಧನೆ, ನಮಗೆ ಹೆಮ್ಮೆ. ಫೈನಲ್ ಅದೃಷ್ಟ ನಿಮ್ಮದಾಗಲಿ’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಮಾಜಿ ಆರಂಭಕಾರ ವೀರೇಂದ್ರ ಸೆಹವಾಗ್, “ಈ ರವಿವಾರದ ವೈಭವ ನಿಮ್ಮದಾಗಲಿ’ ಎಂದು ಹಾರೈಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.