ಪ್ರಥಮ ಟೆಸ್ಟ್: ಬಾಂಗ್ಲಾ 150ಕ್ಕೆ ಆಲೌಟ್ ; ಮಯಾಂಕ್, ಪೂಜಾರ ತಾಳ್ಮೆಯ ಆಟ
ತ್ರಿವಳಿ ವೇಗಿಗಳ ದಾಳಿಗೆ ಬೆಚ್ಚಿದ ಬಾಂಗ್ಲಾ ಬ್ಯಾಟಿಂಗ್ ಪಡೆ ; 03 ವಿಕೆಟ್ ಕಿತ್ತ ಶಮಿ
Team Udayavani, Nov 14, 2019, 6:28 PM IST
ಇಂದೋರ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲನೇ ದಿನ ಬಾಂಗ್ಲಾ ದೇಶ 150 ರನ್ನಿಗೆ ಆಲೌಟ್ ಆಗಿದೆ. ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ ದಿನದಾಟದ ಅಂತ್ಯದಲ್ಲಿ 01 ವಿಕೆಟ್ ನಷ್ಟಕ್ಕೆ 86 ರನ್ ಗಳನ್ನು ಗಳಿಸಿದೆ.
ಟಾಸ್ ಗೆದ್ದ ಬಾಂಗ್ಲಾ ಕಪ್ತಾನ ಮೊಮಿನುಲ್ ಹಕ್ ಮೊದಲಿಗೆ ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡರು. ಆದರೆ ಭಾರತದ ಅನುಭವಿ ಬೌಲಿಂಗ್ ಪಡೆಯ ಮೊನಚಿನ ದಾಳಿಯ ಮುಂದೆ ಬಾಂಗ್ಲಾ ಬ್ಯಾಟ್ಸ್ ಮನ್ ಗಳ ಆಟ ನಡೆಯಲೇ ಇಲ್ಲ. ಬಾಂಗ್ಲಾ ತಂಡದ ಮೊತ್ತ 12 ರನ್ ಆಗುವಷ್ಟರಲ್ಲಿ ಆರಂಭಿಕ ಜೋಡಿ ಶದ್ಮನ್ ಇಸ್ಲಾಂ (06) ಮತ್ತು ಇಮ್ರುಲ್ ಖಯೇಸ್ (06) ವಿಕೆಟ್ ಗಳು ಉರುಳಿದ್ದವು.
ಉತ್ತಮವಾಗಿ ಆಡುತ್ತಿದ್ದ ಕಪ್ತಾನ ಮೊಮಿನುಲ್ ಹಕ್ (37) ಅವರನ್ನು ಸ್ಪಿನ್ನರ್ ಅಶ್ವಿನ್ ಬೇಟೆಯಾಡಿದರು. 99 ರನ್ ಆಗುವಷ್ಟರಲ್ಲಿ ಬಾಂಗ್ಲಾ ತನ್ನ ಅಮೂಲ್ಯ 04 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ತಾಳ್ಮೆಯ ಆಟವಾಡಿದ ಮುಷ್ಫಿಕರ್ ರಹೀಮ್ (43) ಅವರದ್ದೇ ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಗರಿಷ್ಠ ಗಳಿಕೆಯಾಗಿತ್ತು. ಸುಮಾರು 18 ಓವರುಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡ ರಹೀಮ್ ಅವರು 04 ಬೌಂಡರಿ ಮತ್ತು 01 ಸಿಕ್ಸರ್ ಸಿಡಿಸಿ 105 ಎಸೆತಗಳಲ್ಲಿ 43 ರನ್ ಗಳಿಸಿ ಅರ್ಧಶತಕ ವಂಚಿತರಾದರು.
99/04 ಸ್ಥಿತಿಯಲ್ಲಿದ್ದ ಬಾಂಗ್ಲಾ ಮತ್ತೆ ಯಾವ ಹಂತದಲ್ಲೂ ಚೇತರಿಸಿಕೊಳ್ಳಲು ಭಾರತದ ಬೌಲರ್ ಗಳು ಅವಕಾಶವನ್ನೇ ನೀಡಲಿಲ್ಲ. ಇಶಾಂತ್ ಶರ್ಮಾ (02 ವಿಕೆಟ್), ಉಮೇಶ್ ಯಾದವ್ (02 ವಿಕೆಟ್) ಮತ್ತು ಮಹಮ್ಮದ್ ಶಮಿ (03 ವಿಕೆಟ್) ಸೇರಿಕೊಂಡು ಬಾಂಗ್ಲಾ ಬ್ಯಾಟ್ಸ್ ಮನ್ ಗಳಿಗೆ ಕ್ರೀಸಿಗೆ ಅಂಟಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಇವರಿಗೆ ಸ್ಪಿನ್ನರ್ ಅಶ್ವಿನ್ (02 ವಿಕೆಟ್) ಅವರೂ ಉತ್ತಮ ಸಾಥ್ ನೀಡಿದರು.
ಭಾರತದ ಶಿಸ್ತಿನ ಬೌಲಿಂಗ್ ಮುಂದೆ ಮಿಸುಕಾಡದ ಬಾಂಗ್ಲಾ ಬ್ಯಾಟಿಂಗ್ ಪಡೆ ಅಂತಿಮವಾಗಿ 58.3 ಓವರುಗಳಲ್ಲಿ 150 ರನ್ನಿಗೆ ಆಲೌಟ್ ಆಯಿತು. ಟೆಸ್ಟ್ ಪಂದ್ಯಾಟವೊಂದರಲ್ಲಿ ಭಾರತ ತಂಡವು ತನ್ನ ಎದುರಾಳಿ ತಂಡವನ್ನು 200 ರನ್ನಿನ ಒಳಗೆ ಆಲೌಟ್ ಮಾಡುತ್ತಿರುವುದು ಇದು 19ನೇ ಸಲವಾಗಿದೆ.
ತನ್ನ ಪ್ರಥಮ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ರೋಹಿತ್ ಶರ್ಮಾ (06) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆದರೆ ಓಪನರ್ ಮಯಾಂಕ್ ಅಗರ್ವಾಲ್ ಮತ್ತು ಒನ್ ಡೌನ್ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ಬಾಂಗ್ಲಾ ಬೌಲರ್ ಗಳಿಗೆ ಮೇಲುಗೈ ಸಾಧಿಸಲು ಅಡ್ಡಿಯಾದರು.
ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ ತನ್ನ 26 ಓವರ್ ಗಳ ಆಟದಲ್ಲಿ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿ 64 ರನ್ ಹಿನ್ನಡೆಯಲ್ಲಿದೆ. ಉತ್ತಮವಾಗಿ ಆಡುತ್ತಿರುವ ಮಯಾಂಕ್ 37 ರನ್ ಗಳಿಸಿದ್ದಾರೆ ಹಾಗೂ ಪೂಜಾರ 43 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಭಾರತದ ಕಡೆ ಬಿದ್ದ ಏಕೈಕ ವಿಕೆಟ್ ವೇಗಿ ಅಬು ಜಾವೇದ್ ಪಾಲಾಯ್ತು.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಭಾರತ 240 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದೆ. 60 ಅಂಕ ಗಳಿಸಿರುವ ನ್ಯೂಝಿಲ್ಯಾಂಡ್ ಮತ್ತು ಇಷ್ಟೇ ಅಂಕಗಳೊಂದಿಗೆ ಶ್ರೀಲಂಕಾ ತಂಡಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳಲ್ಲಿವೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಾರಂಭಗೊಂಡ ಬಳಿಕ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ಥಾನ ಇನ್ನೂ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿ ಮುಗಿಸಿಲ್ಲವಾದ ಕಾರಣ ಈ ತಂಡಗಳು ಅಂಕಪಟ್ಟಿಯಲ್ಲಿ ತಮ್ಮ ಖಾತೆಯನ್ನು ಇನ್ನೂ ತೆರೆದಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.