ಭಾರತ-ಬಾಂಗ್ಲಾ ವನಿತಾ ಏಕದಿನ: ಕ್ಲಿಕ್ ಆಗಬೇಕಿದೆ ಕೌರ್ ಪಡೆಯ ಬ್ಯಾಟಿಂಗ್
ಇಂದು 2ನೇ ಪಂದ್ಯ ಭಾರತದ ಮೇಲೆ ಸರಣಿ ಸಮಬಲದ ಒತ್ತಡ
Team Udayavani, Jul 19, 2023, 6:04 AM IST
ಮಿರ್ಪುರ್: ತನ್ನ ಏಕದಿನ ಚರಿತ್ರೆಯಲ್ಲಿ ಭಾರತದ ವಿರುದ್ಧ ಮೊದಲ ಪಂದ್ಯವನ್ನು ಗೆದ್ದು ಅತ್ಯುತ್ಸಾಹದಲ್ಲಿರುವ ಆತಿಥೇಯ ಬಾಂಗ್ಲಾದೇಶವೀಗ ಸರಣಿ ಗೆಲುವಿಗೆ ಸ್ಕೆಚ್ ಹಾಕಿದೆ. ಬುಧವಾರ ದ್ವಿತೀಯ ಪಂದ್ಯ ನಡೆಯಲಿದ್ದು, ಇದನ್ನೂ ಗೆದ್ದರೆ ಬಾಂಗ್ಲಾ ವನಿತೆಯರು ಮತ್ತೂಂದು ಇತಿಹಾಸ ಬರೆಯಲಿದ್ದಾರೆ. ಟಿ20 ಸರಣಿ ಸೋಲಿಗೆ ಸೇಡನ್ನೂ ತೀರಿಸಿಕೊಳ್ಳಲಿದ್ದಾರೆ.
ಇತ್ತ ಭಾರತದ ಮುಂದೆ ಗಾಢವಾಗಿ ಆವರಿಸಿರುವುದು ಬ್ಯಾಟಿಂಗ್ ವೈಫಲ್ಯ. ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳ ಅನುಭವವುಳ್ಳ ಸ್ಟಾರ್ ಬ್ಯಾಟರ್‌ಗಳನ್ನು ಹೊಂದಿದ್ದರೂ ಎಲ್ಲರ ಬ್ಯಾಟ್‌ಗಳೂ ಮುಷ್ಕರ ಹೂಡಿದಂತಿದೆ. ಆತಿಥೇಯ ಸ್ಪಿನ್ನರ್‌ಗಳು, ಅದರಲ್ಲೂ ಲೆಗ್-ಬ್ರೇಕ್ ಬೌಲರ್ ಭಾರತದ ಆಟಗಾರ್ತಿಯರನ್ನು ಸಂಕಟಕ್ಕೆ ಒಡುತ್ತಲೇ ಇದ್ದಾರೆ. ಪೇಸರ್ ಮರೂಫಾ ಅಖ್ತರ್ ಎಸೆತಗಳೂ ನಮ್ಮವರಿಗೆ ಸವಾಲಾಗಿ ಪರಿಣಮಿಸಿದೆ.
ವಿಶ್ವಕಪ್ ತಯಾರಿ
ಮುಂದಿನ ವರ್ಷ ಬಾಂಗ್ಲಾದೇಶದಲ್ಲೇ ವಿಶ್ವಕಪ್ ಆಡಬೇಕಿರುವುದರಿಂದ, ಬಹುತೇಕ ಈಗಿನ ಆಟಗಾರ್ತಿಯರೇ ತಂಡದಲ್ಲಿ ಉಳಿಯುವುದರಿಂದ ಇವರೆಲ್ಲ ಇಲ್ಲಿನ ಟ್ರ್ಯಾಕ್‌ಗಳನ್ನು ಅರಿಯುವುದು ಮುಖ್ಯ. ಈ ನಿಧಾನ ಗತಿಯ ಪಿಚ್‌ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆನ್ನುವುದನ್ನು ಈ ಸರಣಿಯಲ್ಲೇ ರೂಢಿಸಿಕೊಳ್ಳ ಬೇಕಿದೆ. ಆದರೆ ಈ ಹೊತ್ತಿನಲ್ಲೇ ಭಾರತದ ಬ್ಯಾಟಿಂಗ್ ಸಾಮೂಹಿಕ ವೈಫಲ್ಯ ಕಂಡಿದೆ. ಹೀಗಾಗಿ ದ್ವಿತೀಯ ಪಂದ್ಯವನ್ನು ಭಾರೀ ಒತ್ತಡದಲ್ಲಿ ಆಡಲಿಳಿಯಬೇಕಿದೆ.
ಎರಡನೇ ಟಿ20 ಪಂದ್ಯದಲ್ಲಿ 95 ರನ್ ಮಾಡಿಯೂ ಪಂದ್ಯ ವನ್ನು ಉಳಿಸಿಕೊಂಡಾಗ ಭಾರತದ ಬ್ಯಾಟಿಂಗ್ ಸಮಸ್ಯೆಯನ್ನು ಯಾರೂ ಅಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೌರ್ ಪಡೆ ಗೆದ್ದು ಬಂದ ಸಂತಸದ ನಡುವೆ ಬ್ಯಾಟಿಂಗ್ ವೈಫಲ್ಯ ಮರೆತು ಹೋಗಿತ್ತು. ಆದರೆ ಕೊನೆಯ ಟಿ20 ಪಂದ್ಯದಲ್ಲೂ ಬ್ಯಾಟಿಂಗ್ ಸುಧಾರಣೆ ಕಾಣಲಿಲ್ಲ. ಭಾರತ 9 ವಿಕೆಟಿಗೆ ಬರೀ 102 ರನ್ ಮಾಡಿತು. ಬಾಂಗ್ಲಾ ಯಶಸ್ವಿಯಾಗಿ ಚೇಸ್ ಮಾಡಿತು.
ಸಾಮೂಹಿಕ ವೈಫಲ್ಯ
ಮೊದಲ ಏಕದಿನ ಪಂದ್ಯದಲ್ಲಿ 113ಕ್ಕೆ ಕುಸಿದಾಗ ನಮ್ಮವರಿಗೆ ನಿಂತು ಆಡುವುದು ಕೂಡ ಸಮಸ್ಯೆ ಎಂಬುದು ಸ್ಪಷ್ಟಗೊಂಡಿತು. ಸ್ಟಾರ್ ಬ್ಯಾಟರ್ ಸ್ಮತಿ ಮಂಧನಾ ಅವರದು ನಿರಾಶಾದಾಯಕ ಪ್ರದರ್ಶನ. ಶಫಾಲಿ ವರ್ಮ ಬದಲು ಇನ್ನಿಂಗ್ಸ್ ಆರಂಭಿಸಿದ ಪ್ರಿಯಾ ಪೂನಿಯ ನಿರೀಕ್ಷಿತ ಪುನರಾಗಮನ ಸಾರಿಲ್ಲ. ಯಾಸ್ತಿಕಾ ಭಾಟಿಯಾ, ಜೆಮಿಮಾ ರೋಡ್ರಿಗಸ್ ಸ್ಟ್ರೈಕ್ ರೊಟೇಟ್ ಮಾಡಲು ವಿಫಲರಾಗುತ್ತಿದ್ದಾರೆ. ರಿಚಾ ಘೋಷ್ ಅನುಪಸ್ಥಿತಿಯಲ್ಲಿ ಫಿನಿಶರ್ ಪಾತ್ರ ನಿಭಾಯಿಸುವವರೇ ಇಲ್ಲವಾಗಿದ್ದಾರೆ.
ಆದರೆ ಬೌಲಿಂಗ್ ಕೋಚ್ ರಾಜಿಬ್ ದತ್ತ ಧೈರ್ಯ ತುಂಬುವ ಮಾತಾಡಿದ್ದಾರೆ. “ಯಾರೂ ನಿರಾಶರಾಗಬೇಕಿಲ್ಲ. ತಂಡದ ಕಾರ್ಯತಂತ್ರವೇಕೋ ಯಶಸ್ಸು ಕಾಣುತ್ತಿಲ್ಲ. ಅಲ್ಲದೇ ತಂಡವೀಗ ಪರಿವರ್ತನೆಯ ಕಾಲಘಟ್ಟದಲ್ಲಿದೆ. ಮುಂದಿನ ವರ್ಷದ ವಿಶ್ವಕಪ್‌ಗೆ ಸೂಕ್ತವಾದ ಕಾಂಬಿನೇಶನ್ ಒಂದರ ಅಗತ್ಯವಿದೆ’ ಎಂದಿದ್ದಾರೆ.
ಭಾರತದ ಬೌಲಿಂಗ್ ಪರವಾಗಿಲ್ಲ ಎನ್ನಬಹುದು. ಬಾಂಗ್ಲಾ ಟ್ರ್ಯಾಕ್‌ಗಳಲ್ಲಿ ಉತ್ತಮ ಪ್ರದರ್ಶನವನ್ನೇ ಕಾಯ್ದುಕೊಂಡು ಬಂದಿದ್ದಾರೆ. ಆದರೆ ಮೊದಲ ಏಕದಿನ ಪಂದ್ಯದಲ್ಲಿ 19 ವೈಡ್ ಎಸೆದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಪಂದ್ಯ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.